ನ.2ರಿಂದ ಶಿಕ್ಷಕ, ಸಿಬ್ಬಂದಿಗಳಿಗೆ ಶಾಲೆ ಆರಂಭ, ಡಿಸೆಂಬರ್ ಎರಡನೇ ವಾರದಲ್ಲಿ ಮಕ್ಕಳಿಗೆ ಶಾಲೆ?

  • ಯಾವುದೇ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸದಂತೆ  ಶಿಕ್ಷಣ ಇಲಾಖೆ ಸೂಚನೆ
  • ಆನ್‍ಲೈನ್‍ ಕಲಿಕೆಗೆ ಒತ್ತು ನೀಡಲು ಸಲಹೆ

ಬೆಂಗಳೂರು: ಬಹು ಚರ್ಚೆಗೆ ಕಾರಣವಾಗಿದ್ದ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರ, ನ.2 ರಿಂದ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಿಬ್ಬಂದಿ ಮತ್ತು ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಈ ಅವಧಿಯಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಬಾರದು ಎಂದೂ ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟ ನಿರ್ದೇಶನ ನೀಡಿದೆ. ವಿದ್ಯಾಗಮ ಯೋಜನೆಯಡಿ ಈವರೆಗೆ ವಿದ್ಯಾರ್ಥಿಗಳಲ್ಲಾದ ಪ್ರಗತಿಯನ್ನು ವಿಶ್ಲೇಷಿಸಿ, ಮುಂದಿನ ಕಲಿಕೆಗೆ ಅವಶ್ಯ ಬೋಧನಾ–ಕಲಿಕಾ ಯೋಜನೆ ರೂಪಿಸಲು ಸೂಚಿಸಲಾಗಿದ್ದು, ಶಿಕ್ಷಕರು ನೀಡುವ ವರದಿ ಆಧಾರದ ಮೇಲೆ ವಿದ್ಯಾಗಮ ಕಾರ್ಯಕ್ರಮವನ್ನು ಮತ್ತೆ ಮುಂದುವರಿಸಬೇಕೆ, ಬೇಡವೇ ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು  ತಿಳಿಸಿದರು.

‘ವಿದ್ಯಾಗಮ ಯೋಜನೆ ಕುರಿತು ಈ ಹಿಂದೆಯೂ ಶಿಕ್ಷಕರಿಂದ ವರದಿ ತರಿಸಿಕೊಳ್ಳಲಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ ಎಂಬ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು’ ಎಂದು ಅವರು ಹೇಳಿದರು.

ಆನ್‌ಲೈನ್ ಕಲಿಕೆಗೆ ಒತ್ತು: ಸದ್ಯ ಡಿಎಸ್‌ಇಆರ್‌ಟಿಯ ಯೂಟ್ಯೂಬ್ ಚಾನೆಲ್‌ ‘ಜ್ಞಾನದೀಪ’ದಲ್ಲಿ ಅಳವಡಿಸಿರುವ ವಿಡಿಯೊಗಳನ್ನು ಹಾಗೂ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಠಗಳನ್ನು ನೋಡಲು ಮತ್ತು ಕಲಿಯಲು ಮಕ್ಕಳಿಗೆ ತಿಳಿಸಬೇಕು. ದೀಕ್ಷಾ ಪೋರ್ಟಲ್‌ನಲ್ಲಿ ಅಳವಡಿಸಿರುವ ಕಲಿಕಾ ಸಾಮಗ್ರಿಗಳನ್ನು ಬಳಸಲು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದೂ ಶಿಕ್ಷಣ ಇಲಾಖೆ ಸೂಚಿಸಿದೆ.

‘ಮುಂದಿನ ದಿನಗಳಲ್ಲಿ ದೂರದರ್ಶನ ಮತ್ತು ಆಕಾಶವಾಣಿ ಮೂಲಕ ಇನ್ನೂ ಹೆಚ್ಚಿನ ಕಲಿಕಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಉದ್ದೇಶಿಸಲಾಗಿದೆ’ ಎಂದು ಇಲಾಖೆಯ ಆಯುಕ್ತ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.

ಡಿಸೆಂಬರ್ ಎರಡನೇ ವಾರದಲ್ಲಿ ಮಕ್ಕಳಿಗೆ ಶಾಲೆ?

ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳನ್ನು ಪುನರಾರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಸಿದ್ಧತೆ ಆರಂಭಿಸಿದೆ. ಶಾಲೆ ಪುನರಾರಂಭದ ಸಾಧಕ–ಬಾಧಕಗಳ ಕುರಿತು ಚರ್ಚಿಸಲು ಇಲಾಖೆಯ ಆಯುಕ್ತರು ನ.2ರಂದು ಎಲ್ಲ ಜಿಲ್ಲೆಗಳ ಉಪನಿರ್ದೇಶಕರ ಜೊತೆ ವಿಡಿಯೊ ಸಂವಾದ ನಡೆಸಲಿದ್ದಾರೆ.

‘ಡಿಸೆಂಬರ್‌ ಎರಡನೇ ವಾರದ ವೇಳೆಗೆ ಶಾಲೆ ಪ್ರಾರಂಭಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಜಲ ಮಿಷನ್‌ ಅನ್ವಯ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ, ಹೆಚ್ಚುವರಿ ಶೌಚಾಲಯಗಳ ಅಗತ್ಯವಿದ್ದರೆ ಅದರ ಬಗ್ಗೆ ವರದಿ, ಶಾಲಾ ಕಟ್ಟಡ ದುರಸ್ತಿಯ ಕುರಿತು ಪ್ರಗತಿಯ ವರದಿ ನೀಡುವಂತೆ ಸೂಚಿಸುವ ಸಾಧ್ಯತೆ ಇದೆ.

‘ಮುಖ್ಯಮಂತ್ರಿಯವರೊಂದಿಗೆ ಇತ್ತೀಚೆಗೆ ನಡೆದ ಸಭೆಯಲ್ಲಿಯೂ ಈ ಬಗ್ಗೆ ಚರ್ಚಿಸಲಾಗಿದೆ. ದಿನ ಬಿಟ್ಟು ದಿನ ಅಥವಾ ಹಂತ–ಹಂತವಾಗಿ ಶಾಲೆಗಳನ್ನು ಪುನರಾರಂಭಿಸಲು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ಅದಕ್ಕೂ ಮುನ್ನ, ಪದವಿ–ಸ್ನಾತಕೋತ್ತರ ಪದವಿ ಕಾಲೇಜುಗಳು ಪುನರಾರಂಭದ ನಂತರ ನಡೆಯುವ ಬೆಳವಣಿಗೆಗಳನ್ನು ಗಮನಿಸಿ ನಿರ್ಧಾರ ಕೈಗೊಳ್ಳುವಂತೆಯೂ ಹೇಳಿದ್ದಾರೆ’ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದರು.

 

Donate Janashakthi Media

Leave a Reply

Your email address will not be published. Required fields are marked *