- ಕಳೆದ ಆರು ವರ್ಷಗಳಲ್ಲಿ ‘ಭಾರತದ ಪ್ರಜಾಪ್ರಭುತ್ವದ ನಾಶ’ದಲ್ಲಿ ಸುಪ್ರೀಂ ಕೋರ್ಟ್ ಪಾತ್ರ ವಹಿಸಿದೆ ಎಂದು ಟ್ವೀಟ್ ಮಾಡಿದ್ದ ಪ್ರಶಾಂತ್ ಭೂಷಣ್
ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹಾಗೂ ಹಿಂದಿನ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ತಪ್ಪಿತಸ್ಥರು ಎಂದು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಹೇಳಿದೆ. ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಎರಡು ಟ್ವೀಟ್ಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ವಿಚಾರಣೆ ನಡೆಸಲಾಗಿತ್ತು.
ನ್ಯಾಯಮೂರ್ತಿ ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠವು ‘ನ್ಯಾಯಾಂಗ ನಿಂದನೆ ಕಾಯ್ದೆ’ ಅನ್ವಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣದ ಕುರಿತ ವಿಚಾರಣೆಯನ್ನು ಆಗಸ್ಟ್ 20ಕ್ಕೆ ನಿಗದಿಪಡಿಸಿದೆ.
‘ನ್ಯಾಯಾಂಗ ನಿಂದನೆ ಕಾಯ್ದೆ’ ಅನ್ವಯ ಗರಿಷ್ಠ 6 ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಜೂನ್ 27 ಹಾಗೂ 29ರಂದು ಭೂಷಣ್ ಟ್ವೀಟ್ಗಳನ್ನು ಮಾಡಿದ್ದರು. ಕಳೆದ ಆರು ವರ್ಷಗಳಲ್ಲಿ ‘ಭಾರತದ ಪ್ರಜಾಪ್ರಭುತ್ವದ ನಾಶ’ದಲ್ಲಿ ಸುಪ್ರೀಂ ಕೋರ್ಟ್ ಪಾತ್ರ ವಹಿಸಿದೆ ಎಂದು ಜೂನ್ 27ರಂದು ಭೂಷಣ್ ಮಾಡಿದ್ದ ಟ್ವೀಟ್ನಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಗ್ವಾಲಿಯರ್ ಮೂಲದ ವಕೀಲರೊಬ್ಬರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ಬಳಿಕ ಈ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತು. ಅರುಣ್ ಮಿಶ್ರಾ ಅವರಿದ್ದ ನ್ಯಾಯಪೀಠವು ಜುಲೈ 22ರಂದು ಭೂಷಣ್ಗೆ ನೋಟಿಸ್ ನೀಡಿತ್ತು. ಈ ಮಧ್ಯೆ, ಭೂಷಣ್ ಮಾಡಿದ್ದ ಟ್ವೀಟ್ಗಳನ್ನು ಟ್ವಿಟರ್ ಅಳಿಸಿಹಾಕಿತ್ತು.
ತುರ್ತುಪರಿಸ್ಥಿತಿ ವೇಳೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಂಗದ ಹಕ್ಕಿಗಾಗಿ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯ ಪರಂಪರೆಯ ರಕ್ಷಣೆಗಾಗಿ ಹೋರಾಟ ನಡೆಸಿದ್ದರು.