ನೀಟ್, ಜೆಇಇ ಪರೀಕ್ಷೆ ನಡೆಸಲು ಸರಕಾರದ ಹಠ : ಪರೀಕ್ಷೆ ಮುಂದೂಡುವಂತೆ ಹಲವರ ಆಗ್ರಹ

ಬೆಂಗಳೂರು:ಕೊರೊನಾ ಸಂಕಷ್ಟದ ಸಮಯದಲ್ಲಿ  ಪ್ರಸಕ್ತ  ಸಾಲಿನ ನೀಟ್ ಮತ್ತು ಜೆಇಇ  ಮುಖ್ಯ ಪರೀಕ್ಷೆಯನ್ನು ಮುಂದೂಡಬೇಕೆಂದು ವಿದ್ಯಾರ್ಥಿಗಳು, ಪೋಷಕರು, ಸೆಲೆಬ್ರಿಟಿಗಳು, ಹೋರಾಟಗಾರರು ಮತ್ತು ರಾಜಕೀಯ ಮುಖಂಡರುಗಳು ಒತ್ತಾಯಿಸುತ್ತಿದ್ದಾರೆ. ಆದಾಗ್ಯೂ, ನಿಗದಿತ ವೇಳೆಯಲ್ಲಿಯೇ ಪರೀಕ್ಷೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಸ್ಪಷ್ಟಪಡಿಸಿದೆ. ನೀಟ್ ಮತ್ತು ಜೆಇಇ ಪರೀಕ್ಷೆ ಮುಂದೂಡಿಕೆ ಮಾಡಬೇಕಾ, ಮಾಡಬಾರದು ಎಂಬುದು ರಾಜಕೀಯ ತಿರುವನ್ನು ಪಡೆದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿದೆ.

ಪರೀಕ್ಷೆಗಳನ್ನು ಮುಂದೂಡಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷವನ್ನು ವ್ಯರ್ಥ ಮಾಡಲು ಸಾದ್ಯವಿಲ್ಲ, ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಪ್ರತಿಪಕ್ಷಗಳು ಆಟವಾಡುತ್ತಿವೆ. ಯುವಜನತೆಯ ಭವಿಷ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪರೀಕ್ಷೆ ನಡೆಸಿಯೇ ನಡೆಸುತ್ತವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇಷ್ಟೊಂದು ಚರ್ಚೆ, ಪ್ರತಿಭಟನೆಗಳು, ರಾಜಕೀಯ ಕೆಸರೆರಚಾಟದ ಮಧ್ಯೆಯೇ NTA ಬಿಡುಗಡೆ ಮಾಡಿರುವ NEET ಮತ್ತು JEE ಪರೀಕ್ಷೆಯ ಪ್ರವೇಶ ಪತ್ರಗಳನ್ನು ಈಗಾಗಲೇ 14 ಲಕ್ಷಕ್ಕೂ ಅಧಿಕ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸೆಪ್ಟೆಂಬರ್ 1 ರಿಂದ 6ರವರೆಗೆ JEE ಪರೀಕ್ಷೆಗಳು, ಸೆಪ್ಟೆಂಬರ್ 13ಕ್ಕೆ NEET ಪರೀಕ್ಷೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ರಾಜ್ಯದಲ್ಲಿಯೂ ಪರೀಕ್ಷೆಗಳ ಸಿದ್ಧತೆ ಮಾಡಿಕೊಂಡಿದ್ದು, ನಿಗದಿತ ಸಮಯಕ್ಕೆ ಪರೀಕ್ಷೆಗಳು ನಡೆಯಲಿವೆ ಎಂದು ಉಪ ಮುಖ್ಯಮಂತ್ರಿ ಅಶ್ವ್ವಥ್ ನಾರಾಯಣ್ ತಿಳಿಸಿದ್ದಾರೆ. ವಿರೋಧಪಕ್ಷಗಳು ರಾಜಕೀಯ ಲಾಭಕ್ಕಾಗಿ ಪರೀಕ್ಷೆ ಮುಂದೂಡುವಂತೆ ಹೇಳುತ್ತಿದ್ದಾರೆ ಎಂದು ಅಶ್ವಥ್ ಆರೋಪಿಸಿದ್ದಾರೆ.

ಕೋವಿಡ್-19 ಪರಿಸ್ಥಿತಿಯಲ್ಲಿ ದೇಶದಲ್ಲಿನ ಅನೇಕ ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆ ಇನ್ನೂ ಸರಿಯಾಗಿ ಪುನರ್ ಆರಂಭವಾಗಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಗೆ ಖಾಸಗಿ ಸಾರಿಗೆ ವ್ಯವಸ್ಥೆ ಮಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್, ವಿದ್ಯಾರ್ಥಿಗಳ ನೆರವಿಗೆ ಧಾವಿಸುವುದಾಗಿ ಟ್ವೀಟ್ ಮಾಡಿದ್ದಾರೆ. ”ಒಂದು ವೇಳೆ ಜೆಇಇ ಮತ್ತು ನೀಟ್ ಪರೀಕ್ಷೆಗಳು ಮೂಂದೂಡಿಕೆ ಆಗದಿದ್ದಲ್ಲಿ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ನೆರವು ನೀಡುವುದಾಗಿ ಅವರು ಹೇಳಿದ್ದಾರೆ. ನಾನು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ. ಒಂದು ವೇಳೆ ನೀವು ಏಲ್ಲಿಯಾದರೂ ಸಿಕ್ಕಿ ಹಾಕಿಕೊಂಡಲ್ಲಿ  ನಿಮ್ಮ ಪ್ರಯಾಣದ ಪ್ರದೇಶಗಳನ್ನು ನನಗೆ ತಿಳಿಸಿ, ಪರೀಕ್ಷಾ ಕೇಂದ್ರಗಳನ್ನು ತಲುಪಲು ನಾನು ನಿಮಗೆ ಸಹಾಯ ಮಾಡುತ್ತೇನೆ’ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

ಇನ್ನೂ ವಿದ್ಯಾರ್ಥಿ ಸಂಘಟನೆಗಳು ಸರಕಾರದ ನಡೆಗೆ ವಿರೋಧ ವ್ಯಕ್ತ ಪಡಿಸಿದ್ದು ಎನ್.ಎಸ್.ಯುಐ ಪ್ರತಿಭಟನೆ ನಡೆಸಿದೆ. ಎಸ್.ಎಫ್.ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ್ ಪ್ರತಿಕ್ರೀಯೆ ನಿಡಿದ್ದು, ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಮುಂದೂಡಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಎಐಡಿಎಸ್ಒ ಕೂಡಾ ಪರೀಕ್ಷೆಗಳನ್ನು ಮುಂದುಡಬೇಕು ಎಂದು ಆಗ್ರಹಿಸಿದೆ.

ವಿದ್ಯಾರ್ಥಿಗಳ ಅಭಿಪ್ರಾಯವನ್ನು ಬೆಂಬಲಿಸಿ ವಿಪಕ್ಷಗಳು ಕೂಡ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿವೆ. ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಮುಂದಾಗಿದೆ. ಶುಕ್ರವಾರದಿಂದ ಅಭಿಯಾನ ಆರಂಭಿಸಿದೆ. ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಜನರು ದನಿಯೆತ್ತಬೇಕು ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಸಮಜವಾದಿ ಪಕ್ಷವೂ ಕೂಡಾ ಪರೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದೆ.

ಸರಕಾರದ ನಡೆಗೆ ಸಿಪಿಐಎಂ ಪ್ರತಿಕ್ರೀಯೆಯನ್ನು ನೀಡಿದ್ದು, ಕೊರೊನಾ ಸಾಂಕ್ರಾಮಿಕದಿಂದ ಸೋಂಕಿತರ ಸಂಖ್ಯೆ ವೇಗವಾಗಿ ಏರುತ್ತಿದೆ. ಮತ್ತು ಸಾವುಗಳ ಸಂಖ್ಯೆಯೂ ಏರುತ್ತಿದೆ. ಇಂತಹ ಸಮಯದಲ್ಲಿ ದೇಶಾದ್ಯಂತ ಭೌತಿಕವಾಗಿ ಈ ಪರೀಕ್ಷೆಗಳನ್ನು ನಡೆಸಬೇಕು ಎಂಬ ಸರಕಾರದ ಹಠ ಸರಿಯಾದ್ದು ಅಲ್ಲ. ವಿದ್ಯಾರ್ಥಿಗಳು ಮತ್ತು ಈ ಕೋರ್ಸ್‍ಗಳ ಭವಿಷ್ಯದ ದೃಷ್ಟಿಯಿಂದ ಈ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಅವಧಿಯನ್ನು ಆರಂಭಿಸಬೇಕೆನ್ನುವ ಹಠದ ಹಿಂದಿನ ಕಾರಣವೇನು ಎಂದು ಸಿಪಿಎಂ ಪ್ರಶ್ನೆಯನ್ನು ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಒಂದು ಸಾಹಸಕ್ಕೆ ಕೈಹಾಕುವುದು ಆತುರದ ಕೃತ್ಯವಾಗುತ್ತದೆ. ಇದು ನಮ್ಮ ಸುಮಾರು ಒಂದು ದಶಲಕ್ಷ ಪ್ರತಿಭಾವಂತ ಯುವ ಜನರ ಆರೋಗ್ಯ ಕಾಳಜಿಯನ್ನು ಸಂಪೂರ್ಣವಾಗಿ ಶಿಥಿಲಗೊಳಿಸುತ್ತದೆ.

ಸೋಂಕಿನ ಹರಡುವಿಕೆಯು ಸ್ವಲ್ಪ ಹತೋಟಿ ಹೊಂದಲು ಸಾಧ್ಯವಾಗುವ ವರೆಗೆ ಪರೀಕ್ಷೆಗಳನ್ನು ಮುಂದೂಡಬೇಕು. ಒಂದು ಬೋಧನಾ ವರ್ಷವನ್ನು ಕಳೆದುಕೊಳ್ಳದಂತೆ, ವಿದ್ಯಾರ್ಥಿಗಳನ್ನು ರಕ್ಷಿಸುವ ರೀತಿಯಲ್ಲಿ ಪ್ರವೇಶ ಪರೀಕ್ಷೆಗಳ ವೇಳಾಪಟ್ಟಿಯನ್ನು ಮರುಪರಿಶೀಲಿಸಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.

ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಛತ್ತೀಸ್ ಘಡ್, ಜಾರ್ಖಾಂಡ್, ಪಂಜಾಬ್, ರಾಜಸ್ಥಾನ್ ಸೇರಿದಂತೆ ಆರು ರಾಜ್ಯಗಳು ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಆಗ್ರಹಿಸಿವೆ. ಕೇಂದ್ರ ಸರಕಾರದ ಆದೇಶವನ್ನು ಮರುಪರಿಶೀಲನೆ ಮಾಡುವಂತೆ ಸುಪ್ರೀಕೋರ್ಟ್ ನಲ್ಲಿ ಮನವಿ ಸಲ್ಲಿಸಿವೆ. ಸುಪ್ರೀಕೋರ್ಟ್ ಇದನ್ನು ಪುರಸ್ಕರಿಸುತ್ತಾ ಇಲ್ಲವಾ ಗೊತ್ತಿಲ್ಲ. ಯಾಕೆ ಅಂತಾ ಹೇಳಿದ್ರೆ ಈ ಮೊದಲು 11 ರಾಜ್ಯಗಳ 11 ವಿದ್ಯಾರ್ಥಿಗಳು ಪರೀಕ್ಷೆ ಮುಂದುಡುವಂತೆ ಸುಪ್ರಿಂ ಕೋರ್ಡ್ ನಲ್ಲಿ ಅರ್ಜಿ ಸಲ್ಲಿಸಿದ್ದವು, ಅದು ತಿರಸ್ಕೃತ ಗೊಂಡತ್ತು, ಅಶೋಕ್ ಶ್ರಿವಾಸ್ತವ್ ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದರು ಅದು ಕೋಡಾ ತಿರಸ್ಕೃತವಾಗಿತ್ತು.

2019 ರಲ್ಲಿ ರೈಲು ವಿಳಂಬದಿಂದಾಗಿ ಬಹಳಷ್ಟು ವಿದ್ಯಾರ್ತಿಗಳು ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ. ಪರೀಕ್ಷೆಗಳನ್ನು ಮುಂದೂಡಿ ಎಂದು ಅನೇಕರು ಆಗ್ರಹ ಮಾಡುತ್ತಿದ್ದಾರೆ.

Donate Janashakthi Media

One thought on “ನೀಟ್, ಜೆಇಇ ಪರೀಕ್ಷೆ ನಡೆಸಲು ಸರಕಾರದ ಹಠ : ಪರೀಕ್ಷೆ ಮುಂದೂಡುವಂತೆ ಹಲವರ ಆಗ್ರಹ

Leave a Reply

Your email address will not be published. Required fields are marked *