ಪ್ರಧಾನ ಮಂತ್ರಿಗಳಿಗೆಸೀತಾರಾಮ್ ಯೆಚುರಿಯವರ ಇನ್ನೊಂದು ಪತ್ರ
ಪ್ರಧಾನ ಮಂತ್ರಿ ಮೋದಿಯವರು ತನ್ನ ಧೋರಣೆಗಳಿಂದ ಜನರು ಪಡುತ್ತಿರುವ ಪಾಡುಗಳ ಬಗ್ಗೆ ಸ್ವಲ್ಪವೂ ಪರಿವೆಯಿಲ್ಲದೆ ಕೇವಲ ಪ್ರಚಾರ ಗಿಟ್ಟಿಸುವ ತನ್ನ ಆಭಿಯಾನವನ್ನು ಮುಂದುವರೆಸಿದ್ದಾರೆ. ಅವರು ಮತ್ತು ಅವರ ಸರಕಾರ ಲಾಕ್‌ಡೌನಿನ ಐದನೇ ವಾರದಲ್ಲಿ ೧೨ ಪ್ರಶ್ನೆಗಳನ್ನು ಉತ್ತರಿಸಬೇಕಾಗಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಎಪ್ರಿಲ್ ೨೬ರಂದು ಪ್ರಧಾನ ಮಂತ್ರಿಗಳಿಗೆ ಇನ್ನೊಂದು ಪತ್ರ ಬರೆದಿದ್ದಾರೆ.
ಕೊವಿಡ್-೧೯ ಮಹಾಮಾರಿಯ ವಿರುದ್ಧ ದೇಶದ ಐಕ್ಯ ಸಮರವನ್ನು ನಡೆಸಬೇಕಾಗಿರುವ ಸಂದರ್ಭದಲ್ಲಿ ಒಂದು ಸರ್ವಪಕ್ಷ ಸಭೆಯನ್ನೂ ಕರೆಯದ್ದರಿಂದ ಯೆಚುರಿಯವರು ಮಾರ್ಚ್ ೨೩ ರಂದು ಪ್ರಧಾನಿಗಳಿಗೆ, ಲಾಕ್‌ಡೌನ್ ಪ್ರಕಟಿಸಿದ ೩೬ ಗಂಟೆಗಳ ನಂತರವೇ ಕೇವಲ ದೇಶದ ಜಿಡಿಪಿಯ ೧ ಶೇ.ಕ್ಕಿಂತಲೂ ಕಡಿಮೆ ಮೊತ್ತದ ನೆರವು ಪ್ಯಾಕೇಜ್ ಎಂಬುದನ್ನು ಹಣಕಾಸು ಮಂತ್ರಿಗಳು ಪ್ರಕಟಿಸಿದ ನಂತರ ಮತ್ತು ಎಪ್ರಿಲ್ ೭ರಂದು ರಾಷ್ಟ್ರಪತಿಗಳಿಗೆ ಪತ್ರ ಬರೆದು ಪರಿಸ್ತಿತಿಯ ಗಂಭೀರತೆಯನ್ನು ಎತ್ತಿ ತೋರಬೇಕಾಗಿ ಬಂದಿತ್ತು. ಈಗಲೂ ವಿಸ್ತರಿತ ೪೦ ದಿನಗಳ ಲಾಕ್‌ಡೌನಿನ ಕೊನೆಯ ವಾರವನ್ನು ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಪರಿಸ್ಥಿತಿ ಹಾಗೆಯೇ ಮುಂದುವರೆದಿರುವುದರಿಂದ ಮತ್ತೊಮ್ಮೆ ಪ್ರಧಾನಿಗಳ ಗಮನವನ್ನು ದೇಶ ಮತ್ತು ನಮ್ಮ ಬಹುಪಾಲು ಜನಗಳು ಎದುರಿಸುತ್ತಿರುವ ಬಹು ಜರೂರಿನ ಪ್ರಶ್ನೆಗಳತ್ತ ಸೆಳೆಯಲು ಯೆಚುರಿಯವರು ಈ ಪತ್ರವನ್ನು ಬರೆದಿದ್ದಾರೆ. ಪೂರ್ಣಪಾಟವನ್ನು ಈ ಮುಂದೆ ಕೊಡಲಾಗಿದೆ:
ಪ್ರಿಯ ಪ್ರಧಾನ ಮಂತ್ರಿಗಳೇ,
ದುರದೃಷ್ಟವಶಾತ್, ಈ ಲಾಕ್‌ಡೌನಿನಲ್ಲಿ ನಿಮಗೆ ಮತ್ತೊಮ್ಮೆ ಬರೆಯಲೇ ಬೇಕಾಗಿ ಬಂದಿದೆ. ಲಾಕ್‌ಡೌನಿನ ಅವಧಿಯಲ್ಲಿ ನಮ್ಮ ಜನಗಳ ಬಹುದೊಡ್ಡ ವಿಭಾಗದ ಸಂಕಷ್ಟಗಳ್ನು ಶಮನಗೊಳಿಸಲು ಕೇಂದ್ರ ಸರಕಾರ ಕೈಗೊಳ್ಳಬೇಕಾದ ವಿವಿಧ ಕ್ರಮಗಳನ್ನು ಪಟ್ಟಿ ಮಾಡಿ ತಮಗೆ ಈ ಮೊದಲು ಬರೆದ ಪತ್ರಗಳಿಗೆ ಉತ್ತರ ಸಿಗದೇ ಹೋಗಿದೆ. ನಿಜ ಹೇಳಬೇಕೆಂದರೆ, ಅದು ತಲುಪಿದೆ ಎಂದೂ ತಿಳಿಸಿಲ್ಲ. ಇದು ಅಸಾಮಾನ್ಯ ಸಂಗತಿ.
ನಾನು ಮತ್ತೊಮ್ಮೆ ನಿಮ್ಮ ಗಮನವನ್ನು ದೇಶ ಮತ್ತು ನಮ್ಮ ಬಹುಪಾಲು ಜನಗಳು ಎದುರಿಸುತ್ತಿರುವ ಬಹು ಜರೂರಿನ ಪ್ರಶ್ನೆಗಳತ್ತ ಸೆಳೆಯಲು ಪ್ರಯತ್ನಿಸುತ್ತಿದ್ದೇನೆ.
೪೦ ದಿನಗಳ ಲಾಕ್‌ಡೌನಿನ ಕೊನೆಯ ವಾರವನ್ನು ಪ್ರವೇಶಿಸುತ್ತಿದ್ದೇವೆ. ನೀವು ಇದನ್ನು ಕೇವಲ ನಾಲ್ಕು ಗಂಟೆಗಳ ನೋಟಿಸಿನಲ್ಲೇ ಇದ್ದಕ್ಕಿದ್ದಂತೆ, ಹಠಾತ್ತಾಗಿ ಪ್ರಕಟಿಸಿದಿರಿ. ಇದರಿಂದಾಗಿ ಜನಗಳು ಮತ್ತು ರಾಜ್ಯಸರಕಾರಗಳು ಏನೇನೂ ಸಿದ್ಧತೆಯಿಲ್ಲದ್ದರಿಂದ ಗಂಭೀರ ಪರಿಣಾಮಗಳನ್ನು ಎದುರಿಸುವಂತಾಗಿದೆ.
೧. ವಲಸೆ ಕಾರ್ಮಿಕರು: ಲಾಕ್‌ಡೌನಿನ ನಂತರ ತಮ್ಮ ಮನೆಗಳಿಗೆ ಹಿಂದಿರುಗ ಬೇಕೆಂಬ ವಲಸೆ ಕಾರ್ಮಿಕರ ಆಕಾಂಕ್ಷೆಯಿಂದಾಗಿ ಅಪಾರ ಸಂಖ್ಯೆಯ ಜನಸಂದಣಿ ಮನೆಯ ಕಡೆಗೆ ಹೊರಟದ್ದು ಕಂಡು ಬಂತು. ಜೀವನೋಪಾಯದ ಮತ್ತು ಆಶ್ರಯದ ಎಲ್ಲ ಸಾಧನಗಳನ್ನು ಕಳಕೊಂಡು ಅವರು ತಮ್ಮ ಮನೆಗಳಿಗೆ ಹೋಗುವ ಪ್ರಯತ್ನದಲ್ಲಿದ್ದವರು. ಇದೇ ಲಾಕ್‌ಡೌನಿನ ಒಂದು ಗುರಿಗೆ, ಅಂದರೆ, ಮಹಾಮಾರಿಯಯ ಸಮುದಾಯ ಪ್ರಸರಣವನ್ನು ತಡೆಯಲು ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂಬ ಗುರಿಗೇ ನಕಾರ ಹಾಕಿದಂತಾಯಿತು. ಹಸಿವು, ಅಪೌಷ್ಟಿಕತೆ ಮತ್ತು ವಸತಿಹೀನತೆ ನಮ್ಮ ಕೋಟ್ಯಂತರ ಜನಗಳನ್ನು ಈಗಲೂ ಬಾಧಿಸುತ್ತಿವೆ. ಲಾಕ್‌ಡೌನ್ ಪ್ರಕಟಣೆಯಾದಂದಿನಿಂದ ನಾವು, ತಕ್ಷಣವೇ, ಅಗತ್ಯವಿರುವ ಎಲ್ಲರಿಗೂ ಉಚಿತ ಆಹಾರ ಒದಗಿಸಬೇಕು ಎಂದು ನಾವು ಸೂಚಿಸಿದ್ದೆವು. ನಮ್ಮ ಕೇಂದ್ರೀಯ ಗೋದಾಮುಗಳಲ್ಲಿ ಆಹಾರಧಾನ್ಯಗಳ ಅಗಾಧ ದಾಸ್ತಾನುಗಳು ಕೊಳೆಯುತ್ತಿವೆ. ಇವನ್ನು ರಾಜ್ಯಗಳಿಗೆ ಉಚಿತ ವಿತರಣೆಗೆ ಕಳಿಸಬೇಕು. ನೀವು ಪ್ರಧಾನ ಮಂತ್ರಿಯಾಗಿರುವ ಸರಕಾರ ಈ ಯಾವ ಬೇಡಿಕೆಗಳನ್ನೂ ಗಮನಕ್ಕೂ ತಗೊಂಡಿಲ್ಲ.
೨. ನಿರುದ್ಯೋಗ: ಫೆಬ್ರುವರಿ ಮತ್ತು ಎಪ್ರಿಲ್ ನಡುವೆ ನಿರುದ್ಯೋಗಿಗಳ ಸಂಖ್ಯೆ ೩೪೦ ಲಕ್ಷದಿಂದ ೮೮೦ ಲಕ್ಷಕ್ಕೆ ಏರಿದೆ ಎಂದು ಅಂದಾಜು ಮಾಡಲಾಗಿದೆ. ಅಂದರೆ ಇನ್ನೂ ೫೪೦ ಲಕ್ಷ ಜನಗಳು ತಮ್ಮ ಜೀವನೋಪಾಯಗಳನ್ನು ಕಳಕೊಂಡಿದ್ದಾರೆ. ಅಲ್ಲದೆ, ಇನ್ನೂ ೬೮೦ ಲಕ್ಷ ಜನಗಳು ಶ್ರಮ ಶಕ್ತಿಯಿಂದ ಹೊರಗೆ ಹೋಗಿದ್ದಾರೆ. ಮಹಾಮಾರಿ ಎರಗಿದ ನಂತರ ೧೨.೨ ಕೋಟಿಯಷ್ಟು ಭಾರಿ ಸಂಖ್ಯೆಯಲ್ಲಿ ಜನಗಳು ಉದ್ಯೋಗಗಳನ್ನು ಮತ್ತು ಜೀವನೋಪಾಯಗಳನ್ನು ಕಳಕೊಂಡಿದ್ದಾರೆ. ಮಾರ್ಚ್ ಆರಂಭದಿಂದ ಎಪ್ರಿಲ್ ೨೦ರ ವರೆಗಿನ, ಲಾಕ್‌ಡೌನ್ ಅವಧಿಯನ್ನು ಒಳಗೊಂಡಿರುವ ಆರು ವಾರಗಳಲ್ಲಿ ನಿರುದ್ಯೋಗ ದರ ೭.೫ ದಿಂದ ೨೩.೬ಶೇ. ಕ್ಕೆ ನೆಗೆದಿದೆ. ಕೇಂದ್ರ ಸರಕಾರ ತಕ್ಷಣವೇ ತಿಂಗಳಿಗೆ ರೂ.೭೫೦೦ ರಂತೆ ಮುಂದಿನ ಮೂರು ತಿಂಗಳು ಜೀವನೋಪಾಯ ಕಳಕೊಂಡಿರುವ ಎಲ್ಲರಿಗೂ ವರ್ಗಾಯಿಸುವುದು ಅನಿವಾರ್ಯವಾಗಿದೆ. ಖಂಡಿತವಾಗಿಯೂ, ಕಳೆದ ಐದು ವರ್ಷಗಳಲ್ಲಿ ಅತಿ ಶ್ರೀಮಂತರು ಮತ್ತು ಕಾರ್ಪೊರೇಟ್‌ಗಳು ತೆಗೆದು ಕೊಂಡಿರುವ ರೂ.೭.೭೬ ಕ್ಷ ಕೋಟಿ ರೂ.ಗಳ ಭಾರೀ ಸಾಲ ಮೊತ್ತವನ್ನು ಮನ್ನಾ ಮಾಡಲು ನಿಮ್ಮ ಸರಕಾರಕ್ಕೆ ಸಾಧ್ಯವಾದರೆ, ನಮ್ಮ ಬಹುಪಾಲು ಜನಗಳಿಗೆ ಆಹಾರವುಣ್ಣಿಸಲು ಮತ್ತು ಬೆಂಬಲಿಸಲು ಹಣದ ಕೊರತೆಯೇನೂ ಇರಬಾರದು.
ರಾಜ್ಯಗಳೊಂದಿಗೆ ಸಮಾಲೋಚನೆ-
ಲಾಕ್‌ಡೌನ್ ಮೊದಲಿಲ್ಲ-ನಂತರವೂ ಆಯ್ದ ರಾಜ್ಯಗಳೊಂದಿಗೆ!
೩. ಸಹಕಾರಿ ಒಕ್ಕೂಟತತ್ವ?: ರಾಜ್ಯಗಳು ಮಹಾಮಾರಿಯನ್ನು ಎದುರಿಸುವ ರಣರಂಗದಲ್ಲಿವೆ. ಅವರಿಗೆ ಸಾಕಷ್ಟು ಹಣಕಾಸು ಮತ್ತು ಆಹಾರಧಾನ್ಯಗಳು ಹಾಗೂ ಇತರ ಆವಶ್ಯಕ ಸರಕುಗಳ ಪೂರೈಕೆಗಳು ಬೇಕಾಗಿವೆ. ಇಂತಹ ಯಾವ ಬೆಂಬಲವೂ ಇದುವರೆಗೂ ಕೇಂದ್ರ ಸರಕಾರದಿಂದ ಅರ್ಥಪೂರ್ಣ ರೀತಿಯಲ್ಲಿ ಬಂದಿಲ್ಲ. ಇದ್ದಕ್ಕಿದಂತೆ ರಾಷ್ಟ್ರವ್ಯಾಪಿ ಲಾಕ್‌ಡೌನಿನ ಪ್ರಕಟಣೆಯಿಂದಾಗಿ ವಲಸೆ ಕಾರ್ಮಿಕರಿಗೆ ಒಂದು ಬಿಕ್ಕಟ್ಟನ್ನು ಸೃಷ್ಟಿಸಲಾಯಿತು. ನೀವೀಗ ರಾಜ್ಯಸರಕಾರಗಳು ಆಶ್ರಯ, ಆಹಾರ ಒದಗಿಸಬೇಕು, ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಇತರ ನಿರ್ಬಂಧಗಳನ್ನು ಪಾಲಿಸಬೇಕು ಎಂದು ಹೇಳುತ್ತಿದ್ದೀರಿ. ಇದು ಖಂಡಿತವಾಗಿಯೂ ನ್ಯಾಯವಲ್ಲ. ಜಿಎಸ್‌ಟಿ ಸಂಗ್ರಹಗಳಿಂದ ರಾಜ್ಯಗಳಿಗೆ ಕೊಡಬೇಕಾದ ಹಣ ಇನ್ನೂ ಬಾಕಿಯಿದೆ. ಅದನ್ನೂ ಇನ್ನೂ ಕೊಟ್ಟಿಲ್ಲ. ನಿಜವಾಗಿ, ತಕ್ಷಣದಿಂದಲೇ ರಾಜ್ಯಗಳಿಗೆ ಉದಾರವಾಗಿ ನಿಧಿಗಳನ್ನು ವರ್ಗಾಯಿಸಬೇಕಾಗಿದೆ.
೪. ಹಣಕಾಸುಗಳು: ನಿಮ್ಮ ಹೆಸರು ಹೊತ್ತಿರುವ ಒಂದು ಖಾಸಗಿ ಟ್ರಸ್ಟ್‌ನಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಸಂಗ್ರಹಿಸಲಾಗುತ್ತಿದ. ಈ ನಿಧಿಯನ್ನು ಸಿಎಜಿಯಾಗಲೀ, ಸರಕಾರ ನೇಮಿಸಿದ ಬೇರೆ ಯಾರೇ ಲೆಕ್ಕ ಪರಿಶೋಧಕರಾಗಲೀ ಪರಿಶೋಧಿಸುವುದಿಲ್ಲ ಎಂದು ಅಧಿಕೃತವಾಗಿಯೇ ಹೇಳಲಾಗಿದೆ. ಸರಕಾರೀ ನೌಕರರು ಮತ್ತು ಇತರರ ಸಂಬಳದಿಂದ ಕಡಿತಗೊಳಿಸುವ ಹಣವನ್ನು, ಪ್ರಧಾನ ಮಂತ್ರಿಗಳ ಅನಾಹುತ ಪರಿಹಾರ ನಿಧಿಗೆ ಕೊಟ್ಟರೂ, ಅವನ್ನೆಲ್ಲ ಬಲವಂತವಾಗಿ ಈ ನಿಧಿಗೆ ವರ್ಗಾಯಿಸಲಾಗುತ್ತಿದೆ. ಈ ನಿಧಿಯನ್ನು ಕೂಡಲೇ ಮಹಾಮಾರಿಯ ವಿರುದ್ಧ ಹೋರಾಟವನ್ನು ಬಲಪಡಿಸಲು ಅಗತ್ಯವಾದವುಗಳನ್ನು ಪಡೆಯಲು ಒದಗಿಸಬೇಕು.
ಪ್ರತಿಮೆಗಳಿಗೆ, ಪ್ರಚಾರಗಳಿಗೆ ಮಾಡಿದ ಖರ್ಚುಗಳನ್ನು
ಆರೋಗ್ಯ ಪಾಲನೆಗೆ ಮಾಡಿದ್ದರೆ..!
೫. ದುಂದು ವೆಚ್ಚಗಳನ್ನು ನಿಲ್ಲಿಸಬೇಕು: ಈ ಗಂಭೀರ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಎದುರಿಸುವಲ್ಲಿ ಹಣಕಾಸು ಸಂಕಟ ಇರುವ ಸಮಯದಲ್ಲಿ ಕೇಂದ್ರ ಸರಕಾರ ಪ್ರಧಾನ ಮಂತ್ರಿಗಳಿಗೆ ಹೊಸದೊಂದು ನಿವಾಸವೂ ಸೇರಿರುವ ಸೆಂಟ್ರಲ್ ವಿಸ್ತಾದಂತಹ ಅನಗತ್ಯ ವೆಚ್ಚಗಳನ್ನು, ಮತ್ತು ಇತರ ಸಾರ್ವಜನಿಕ ಪ್ರಚಾರದ ಕೆಲಸಗಳಿಗೆ ದುಂದು ವೆಚ್ಚಗಳನ್ನು ಮುಂದುವರೆಸುತ್ತಿರುವುದು ವಿಸ್ಮಯಕಾರಿಯಾಗಿದೆ, ಕ್ರಿಮಿನಲ್ ದುಂದುಗಾರಿಕೆಯೆಂದೇ ಹೇಳಬಹುದು. ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕ ಆರೋಗ್ಯ ಪಾಲನೆ, ಶಿಕ್ಷಣ ಇತ್ಯಾದಿಗಳ ಬದಲು, ಪ್ರತಿಮೆಗಳು, ಬುಲೆಟ್ ರೈಲುಗಳು, ಪ್ರಚಾರ ಅಭಿಯಾನಗಳು ಮುಂತಾದವಕ್ಕೇ ಹಣ ಖರ್ಚು ಮಾಡುವ ಈ ಸರಕಾರದ ಪರಂಪರೆಯನ್ನು ತಕ್ಷಣವೇ ನಿಲ್ಲಿಸಬೇಕು. ಮಹಾಮಾರಿಯ ವಿರುದ್ಧ ಸಮರದ ಅಗತ್ಯಗಳಿಗೆ ಆದ್ಯತೆ ಕೊಡಬೇಕು.
೬. ಪಿ.ಪಿ.ಇ.ಗಳ ಗಂಭೀರ ಅಭಾವ : ಲಾಕ್‌ಡೌನ್‌ಗಳನ್ನು ಮಹಾಮಾರಿಯನ್ನು ತಡೆಗಟ್ಟಲು ಮತ್ತು ಸೋಲಿಸಲು ಅತ್ಯಗತ್ಯವಾದ ಜನಗಳ ವ್ಯಾಪಕವಾದ ತಪಾಸಣೆ ಮತ್ತು ನಮ್ಮ ಡಾಕ್ಟರುಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ವೈಯಕ್ತಿಕ ಸುರಕ್ಷಾ ಸಾಧನ(ಪಿ.ಪಿ.ಇ.)ಗಳನ್ನು ಒದಗಿಸಲು ಬಳಸಬೇಕು ಎಂಬುದು ಸಾರ್ವತ್ರಿಕವಾಗಿ ಒಪ್ಪಿಕೊಂಡಿರುವ ಸಂಗತಿ. ದುರದೃಷ್ಟವಶಾತ್, ಭಾರತಕ್ಕೆ ಬೇರೆ ಹಲವು ದೇಶಗಳಿಗೆ ಹೋಲಿಸಿದರೆ ಸಿದ್ಧತೆ ಮಾಡಿಕೊಳ್ಳಲು ದೀರ್ಘ ಸಮಯ ಸಿಕ್ಕಿದ್ದರೂ, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಿಲ್ಲ. ಈಗಲೂ, ಲಾಕ್‌ಡೌನಿನ ಒಂದು ತಿಂಗಳ ನಂತರವೂ ನಮ್ಮ ತಪಾಸಣಾ ದರ ಜಗತ್ತಿನಲ್ಲೇ ಅತಿ ಕಡಿಮೆ ಮಟ್ಟದಲ್ಲಿಯೇ ಇದೆ, ಪಾಕಿಸ್ತಾನಕ್ಕಿಂತಲೂ ಕಡಿಮೆ ಎಂಬುದು ನಾಚಿಕೆಗೇಡು. ಆರೋಗ್ಯ ಕಾರ್ಯಕರ್ತರಿಗೆ ಅಗತ್ಯ ಪಿ.ಪಿ.ಇ.ಗಳು ಇಲ್ಲ. ದುರಂತವೆಂದರೆ ಕೆಲವರು ಈ ವೈರಸ್‌ಗೆ ಬಲಿಯಾಗಿದ್ದಾರೆ. ಈ ಹಂತದಲ್ಲಿಯೂ ತಪಾಸಣೆಯ ಸಾಧನಗಳು ಮತ್ತು ಪಿ.ಪಿ.ಇ.ಗಳನ್ನು ಸಮರೋಪಾದಿಯಲ್ಲಿ ಒದಗಿಸುವುದು ಅನಿವಾರ್ಯವಾಗಿದೆ.
೭. ಸಾರ್ವತ್ರಿಕ ಆರೋಗ್ಯಪಾಲನೆ: ಕೊವಿಡ್ ಮಹಾಮಾರಿಯ ವಿರುದ್ಧ ಸಮರಕ್ಕೆ ಗಮನವನ್ನು ಕೇಂದ್ರೀಕರಿಸ ಬೇಕಾಗಿದ್ದರೂ, ಭಾರತ ಸಾಂಸರ್ಗಿಕವಲ್ಲದ ರೋಗಗಳಿಂದ ನರಳುತ್ತಿರುವ ರೋಗಿಗಳಿಗೆ ವೈದ್ಯಕೀಯ ಗಮನದ ಅಭಾವದಿಂದ ದೊಡ್ಡ ಸಂಖ್ಯೆಯಲ್ಲಿ ಕೊವಿಡೇತರ ಸಾವುಗಳನ್ನು ಕಾಣುವಂತಾಗ ಬಾರದು. ಲಾಕ್‌ಡೌನ್ ಅವಧಿಯಲ್ಲಿ ೩ಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ಕ್ಷಾಂತರ ಗರ್ಭಿಣಿಯರು ಅತ್ಯಗತ್ಯ ಜೀವವುಳಿಸುವ ಚುಚ್ಚು ಮದ್ದುಗಳಿಂದ ವಂಚಿತರಾಗಿದ್ದಾರೆ ಎಂದು ವರದಿಗಳು ಅಂದಾಜು ಮಾಡಿವೆ. ಒಂದು ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳು ಮತ್ತು ೩.೫ ಲಕ್ಷ ಮಧುಮೇಹ ರೋಗಿಗಳಿಗೆ ಅಗತ್ಯ ಶುಶ್ರೂಷೆ ದೊರೆಯಲಿಲ್ಲ. ಮಲೇರಿಯ ಮತ್ತು ಕ್ಷಯ ನಿರ್ಮೂಲನ ಕಾರ್ಯಕ್ರಮಗಳೂ ಕಳೆದ ಐದು ವಾರಗಳಲ್ಲಿ ಅಪಾರ ಇಳಿಕೆಯನ್ನು ತೋರಿಸಿವೆ. ರಕ್ತ ಬ್ಯಾಂಕುಲ್ಲಿ ರಕ್ತ ಪೂರೈಕೆಯ ಅಗಾಧ ಕೊರತೆಯಿದೆ ಎಂಬ ವರದಿಗಳಿವೆ. ಥಲಸ್ಸೇಮಿಯ, ಹೆಮೊಫೀಲಿಯ ಮತ್ತು ಸಿಕ್‌ಲ್ ಸೆಲ್ ರೋಗ ಮುಂತಾದ ಸಮಸ್ಯೆಗಳಿರುವವರಿಗೆ ಇದು ಅತ್ಯಗತ್ಯ. ಇಂತಹ ಒಂದು ಸನ್ನಿವೇಶವನ್ನು ಸ್ವೀಕರಿಸಲು ಸಾಧ್ಯವಿಲ್ಲ, ಇದನ್ನು ತಕ್ಷಣವೇ ಸರಿಪಡಿಸಬೇಕು.
೮. ಆಳ್ವಿಕೆಯಲ್ಲಿ ಆದ್ಯತೆಗಳನ್ನು ಹಾಕಿಕೊಳ್ಳಿ: ಅಗಾಧ ಸೌಕರ್ಯಗಳಿರುವ ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ತ್ವರಿತವಾಗಿ ಹೆಚ್ಚುತ್ತಿರುವುದು, ಮತ್ತು ಸಾವಿನ ಸಂಖ್ಯೆ ದೊಡ್ಡ ಪ್ರಮಾಣದಲ್ಲಿರುವುದಕ್ಕೂ, ಸಾರ್ವಜನಿಕ ಆರೋಗ್ಯ ತುರ್ತಿನ ಗಂಭೀರ ಸಮಯದಲ್ಲೂ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ ಬಿಜೆಪಿಯ ನಗ್ನ ರಾಜಕೀಯ ಅಧಿಕಾರ ದಾಹಕ್ಕೂ ನೇರ ಸಂಬಂಧವಿದೆ. ಒಂದು ಚುನಾಯಿತ ಸರಕಾರವನ್ನು ಉರುಳಿಸಿ, ಒಂದು ಬಿಜೆಪಿ ಸರಕಾರದ ಪ್ರತಿಜ್ಞಾ ಸ್ವೀಕಾರ ನಡೆಸಿರುವುದು ಆ ರಾಜ್ಯದಲ್ಲಿ ಯಾವುದೇ ರಾಜಕೀಯ ಮುಖಂಡತ್ವ ಇಲ್ಲದಂತೆ ಮಾಡಿತ್ತು. ಈ ಮಹಾಮಾರಿ ಅಲ್ಲಿ ಕಳವಳಕಾರೀ ರೀತಿಯಲ್ಲಿ ಹರಡುತ್ತಿರುವುದಕ್ಕೆ ಸಾಮಾನ್ಯ ಜನರು ಬೆಲೆ ತೆರುತ್ತಿದ್ದಾರೆ.
ಸಾಮಾಜಿಕ ಅಂತರದ ಈ ಪರಿ-ಮಾರ್ಚ್ 2ರಂದು ರಾಜಕೀಯ ಅಧಿಕಾರದಾಹ ತೀರಿಸಿಕೊಂಡ ಮೇಲೆ ಭೋಪಾಲದಲ್ಲಿ!
೯. ಮಬ್ಬಾಗಿರುವ ಆಳ್ವಿಕೆ: ಅರ್ಥ ಮಾಡಿಕೊಳ್ಳಲು ಆಗದ ಆದೇಶಗಳನ್ನು ಹೊರಡಿಸುವುದು, ಅದರ ಬೆನ್ನಿಗೆ ಹಲವಾರು ಸ್ಪಷ್ಟೀಕರಣಗಳನ್ನು ಕಳಿಸುವುದು ಮತ್ತು ಆ ಆದೇಶಗಳನ್ನು ಹಿಂತೆಗೆದುಕೊಳ್ಳುವುದು ಕೂಡ ಈ ವೇಳೆಗೆ ಒಂದು ಹವ್ಯಾಸವೇ ಆಗಿಬಿಟ್ಟಿದೆ. ಇಂತಹದೊಂದು ಮಬ್ಬು ಆಳ್ವಿಕೆಯ ಮಾದರಿಯ ಹೆಜ್ಜೆ ಗುರುತಗಳನ್ನು ನೋಟುರದ್ಧತಿ ಕೈಗೊಂಡಾಗ ನೋಡಿದ್ದೆವು. ಸ್ಪಷ್ಟವಾಗಿ, ದೇಶದ ರಾಜಕೀಯ ಕಾರ್ಯಾಂಗ ತನ್ನ ಯೋಚನೆಯಿಲ್ಲದ ಪ್ರತಿಕ್ರಿಯೆಗಳ ಮೂಲಕ ತನ್ನ ಅಸಾಮರ್ಥ್ಯವನ್ನು ಸಾಬೀತು ಪಡಿಸುತ್ತಿದೆ.
೧೦. ಕೋಮುವಾದಿ ಧ್ರುವೀಕರಣ: ಮಹಾಮಾರಿಯ ವಿರುದ್ಧ ಸಮರ ದೇಶ ಮತ್ತು ಎಲ್ಲ ಭಾರತೀಯರು ಒಂದಾಗಿದ್ದಾಗ ಮಾತ್ರ ಸಾಧ್ಯ. ತಬ್ಲಿಘಿ ಜಮಾತ್‌ನ ಸಂಘಟಕರ ಬೇಜವಾಬ್ದಾರಿತನ ಇಡೀ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಮೆಲೆ ಗುರಿಯಿಡುವುದಕ್ಕೆ ಮತ್ತು ಸಾಮಾಜಿಕ ವಿಭಜನೆಗಳನ್ನು ಹಾಗು ಕೋಮುವಾದಿ ಧ್ರುವೀಕರಣವನ್ನು ಆಳಗೊಳಿಸಲಿಕ್ಕೆ ಒಂದು ನೆಪವಾಗಲು ಸಾಧ್ಯವಿಲ್ಲ. ಇದು ಕೋಮುವಾದಿ ದ್ವೇಷವನ್ನು ಹರಡಿಸುತ್ತ ಭಾರತದ ಶಕ್ತಿಯನ್ನು ಶಿಥಿಲಗೊಳಿಸುತ್ತದಷ್ಟೇ. ಇಂತಹ ಒಂದು ಕೋಮುವಾದಿ ಪ್ರಚಾರದ ಪರಿಣಾಮ ಭಾರತಿಯ ಮೂಲದ ಜನಗಳು ದೊಡ್ಡ ಸಂಖ್ಯೆಯಲ್ಲಿ ಕೆಲಸ ಮಾಡುವ ಮತ್ತು ವಾಸಿಸುವ ಜಗತ್ತಿನ ಹಲವು ದೇಶಗಳಲ್ಲಿ ಈಗ ಅನುಭವಕ್ಕೆ ಬರುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸುವುದು ರಾಜಕೀಯ ಮುಖಂಡತ್ವದ, ಅಂದರೆ ಕೇಂದ್ರ ಸರಕಾರದ ಕೈಯಲ್ಲಿದೆ. ಇಲ್ಲವಾದರೆ, ಇದು ಮಹಾಮಾರಿಯ ವಿರುದ್ಧ ಹೋರಾಟಕ್ಕೆ ಮತ್ತು ನಮ್ಮ ದೇಶದ ಜನತೆಗೆ ಮಾಡುವ ಅತಿ ದೊಡ್ಡ ಅಪಕಾರವಾಗುತ್ತದೆ.
೧೧. ವಲಸೆ ಕಾರ್ಮಿಕರು ಮನೆಗೆ ಮರಳುವಂತಾಗಬೇಕು: ಕೇಂದ್ರ ಸರಕಾರ ಮಹಾಮಾರಿ ಎರಗಿದಾಗ ವಿದೇಶಗಳಲ್ಲಿ ಸಿಲುಕಿಕೊಂಡಿದ್ದ ದೊಡ್ಡ ಸಂಖ್ಯೆಯಲ್ಲಿದ್ದ ಭಾರತೀಯರನ್ನು ಭಾರತಕ್ಕೆ ಕರೆತರಲು ವ್ಯವಸ್ಥೆ ಮಾಡಿದ್ದು ಸರಿಯಾದ ಕ್ರಮ. ಅದಕ್ಕೆ ವಿಶೇಷ ವಿಮಾನಗಳನ್ನು ಏರ್ಪಡಿಸಲಾಯಿತು. ಆದರೆ, ಕೇಂದ್ರ ಸರಕಾರ ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ತಲುಪಿಸಲು, ವಿಮಾನಗಳಲ್ಲವಾದರೂ, ಲಾಕ್‌ಡೌನಿನ ನಿರ್ಬಂಧಗಳನ್ನು ಕಾಯ್ದುಕೊಂಡೇ ವಿಶೇಷ ರೈಲುಗಳು ಮತ್ತು ಬಸ್ಸುಗಳನ್ನು ವ್ಯವಸ್ಥೆ ಮಾಡದಿರುವುದು ಒಪ್ಪತಕ್ಕದ್ದಲ್ಲ. ಈಗಲಾದರೂ ಅದನ್ನು ಕೈಗೆತ್ತಿಕೊಳ್ಳಬೇಕು.
ಅಲ್ಲದೆ ಬಹಳಷ್ಟು ಭಾರತೀಯರು ಈಗಲೂ ವಿದೇಶಗಳಲ್ಲಿ ಉಳಿದುಕೊಂಡಿದ್ದಾರೆ. ಕೇಂದ್ರ ಸರಕಾರ, ಜಗತ್ತಿನ ಬೇರೆ ಹಲವು ದೇಶಗಳು ಮಾಡುವಂತೆ, ನಮ್ಮ ದೇಶದಿಂದಲೂ ಅವರ ನಾಗರಿಕರಿಗೆ ವಿಮಾನ ಕಳಿಸುವಂತೆ ವ್ಯವಸ್ಥೆ ಮಾಡಬೇಕು.
೧೨. ಅಂತಿಮವಾಗಿ, ಶ್ರೀಯುತ ಪ್ರಧಾನ ಮಂತ್ರಿಗಳೇ, ಜಗತ್ತಿನ ಇತರ ಹಲವು ದೇಶಗಳ ನಿಮ್ಮಂತಹ ಮುಖ್ಯಸ್ಥರುಗಳು ಮಾಧ್ಯಮಗಳನ್ನು ಎದುರಿಸುವ ಬಗ್ಗೆ ಮತ್ತು ಜನಗಳ ಕಾಳಜಿಗಳಿಗೆ ಉತ್ತರ ಕೊಡುವಲ್ಲಿ ನೀವು ತೋರಿಸುವಂತಹ ಅಸಡ್ಡೆಯನ್ನು ತೋರಿಸಿಲ್ಲ. ಹೆಚ್ಚಿನ ದೇಶಗಳಲ್ಲಿ ಸರಕಾರದ ಮುಖಂಡರುಗಳು ನಿಯಮಿತವಾಗಿ ಪತ್ರಿಕಾಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ, ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ಇದು ಜವಾಬುದಾರಿಕೆಯಿಂದಿರುವ ಮತ್ತು ಸರಕಾರ ಸಶಕ್ತವಾಗಿದೆ ಹಾಗೂ ಸನ್ನಿವೇಶದ ಮೇಲೆ ಹತೋಟಿ ಹೊಂದಿದೆ ಎಂಬ ವಿಶ್ವಾಸವನ್ನು ಜನಗಳಿಗೆ ನೀಡುವ ಏಕೈಕ ಮಾರ್ಗ, ನಿಜ ಹೇಳಬೇಕೆಂದರೆ, ಭಾರತದಲ್ಲಿ ಹಲವು ರಾಜ್ಯ ಸರಕಾರಗಳು ಇದನ್ನು ಮಾಡುತ್ತವೆ. ಕೇರಳದ ಎಲ್‌ಡಿಎಫ್ ಸರಕಾರದ ಮುಖ್ಯಮಂತ್ರಿ ಈ ಸವಾಲನ್ನು ಎದುರಿಸಲು ಜನಗಳಿಗೆ ಬೇಕಾಗುವ ವಿಶ್ವಾಸವನ್ನು ಉಂಟುಮಾಡಲು ಪ್ರತಿದಿನ ಪತ್ರಿಕಾಗೋಷ್ಠಿ ನಡೆಸುತ್ತಾರೆ, ಮತ್ತು ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ರೂಪುರೇಷೆಯನ್ನು ಕೊಡುತ್ತಾರೆ. ನಿಮ್ಮ ಆಳ್ವಿಕೆಯ ವಿಧಾನದಲ್ಲಿ ಪ್ರಜಾಸತ್ತಾತ್ಮಕ ಜವಾಬುದಾರಿಕೆ ಸಂಪೂರ್ಣವಾಗಿ ಕಾಣೆಯಾಗಿದೆ.
ನಿಮ್ಮ ವಿಶ್ವಾಸಿ
ಸೀತಾರಾಮ್ ಯೆಚುರಿ