ನಾಳೆಯೂ ಮುಂದುವರೆಯಲಿದೆ ಸಾರಿಗೆ ನೌಕರರ ಮುಷ್ಕರ 

ಬೆಂಗಳೂರು : ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ಸಾರಿಗೆ ನೌಕರರು ಮುಷ್ಕರವನ್ನು ಹಮ್ಮಿಕೊಂಡಿದ್ದರು.   ಬೆಳಗ್ಗೆ 6 ಗಂಟೆಯಿಂದಲೆ  ಬಸ್ ಗಳನ್ನು ಡಿಪೋ ದಲ್ಲಿ ನಿಲ್ಲಿಸಿ ಕೆಲಸಕ್ಕೆ ಹಾಜರಾಗದೆ ಮುಷ್ಕರ ನಡೆಸಿದ್ದರಿಂದ  ಬಸ್ ಸಂಚಾರ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿತ್ತು.

ಎರಡು ದಿನಗಳಿಂದ  ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಸಲು ಒತ್ತಾಯಿಸಿ ಮುಷ್ಕರದಲ್ಲಿ ಭಾಗವಹಿಸಿದ ನೌಕರರನ್ನು ಬಂಧಿಸಿದ್ದರು. ಆಕ್ರೋಶಗೊಂಡ ನೌಕರರು ಏಕಾಏಕಿ ಸಾರಿಗೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದರು.  ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗಬಾರದೆಂದು ಡಿಪೋ ವ್ಯವಸ್ತಾಪಕರು ಸಾರಿಗೆ ನೌಕರರನ್ನು ಮನ ಒಲಿಸಲು ಪ್ರಯತ್ನ ನಡೆಸಿದರೂ ನೌಕರರು ಕಿವಿಗೊಡಲಿಲ್ಲ.

ಕೆಎಸ್​ಆರ್​ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ನಿಗಮಗಳ ನೌಕರರು ಪ್ರತಿಭಟನೆಗೆ ಇಳಿದಿದ್ದು, ಮೆಜೆಸ್ಟಿಕ್, ಶಾಂತಿನಗರ ಸೇರಿದಂತೆ ವಿವಿಧ ಬಸ್ ನಿಲ್ದಾಣಗಳಿಂದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಸಾರ್ವಜನಿಕರ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕೆಲಸಕ್ಕೆ ತೆರಳಬೇಕಿದ್ದ  ನೌಕರರು, ವ್ಯಾಪಾರಿಗಳು, ಕೂಲಕೆಲಸಗಾರರು, ಸೇರಿದಂತೆ ಜನಸಾಮನ್ಯರಿಗೆ ಬಸ್ ಗಳಿಲ್ಲದೆ ಆಟೋ, ಟ್ಯಾಕ್ಸಿ,  ಒಲಾ, ಉಬರ್ ಅವಲಂಬಿಸಬೇಕಾದ ಅನಿರ್ವಾಯತೆ ಉಂಟಾಗಿತ್ತು.  ಆಟೋ,  ಖಾಸಗಿ  ವಾಹನಗಳು ಎರಡು ಪಟ್ಟು ಹೆಚ್ಚಿನ ಬೇಡಿಕೆ ಇಟ್ಟು ಪ್ರಯಾಣಿಕರಿಂದ ಹಣ ಕಿತ್ತುಕೊಳ್ಳುತ್ತಿದ್ದರು.

ನಮ್ಮ ಬೇಡಿಗೆಗೆ ಸರ್ಕಾರ ಸ್ಪಂದಿಸುವ ತನಕ ಈ ಹೋರಾಟ ಮುಂದುವರಿಯಲಿದೆ. ಅಲ್ಲಿಯ ತನಕ ಬಸ್ ಸಂಚಾರ ಆರಂಭ ಆಗುವುದಿಲ್ಲ ಎಂದು ಸಾರಿಗೆ ನೌಕರರ ಮುಖಂಡರು ತಿಳಿಸಿದ್ದಾರೆ.

ಈ ಮುಷ್ಕರ ಕುರಿತು ಮಾತನಾಡಿದ್ದ ಹಸಿರು ಸೇನೆ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ದುಡಿಯುವ ಜನರನ್ನ ಸರ್ಕಾರ ಅವಮಾನಿಸುತ್ತಿದೆ. ಚಾಲಕರು, ನಿರ್ವಾಹಕರು, ಮೆಕ್ಯಾನಿಕ್ಸ್ ಎಲ್ಲರೂ ಶ್ರಮಜೀವಿಗಳು. ಎಲ್ಲರೂ ಶಿಸ್ತು ಬದ್ಧವಾಗಿ ಸರ್ಕಾರಕ್ಕೆ ತಮ್ಮ ಮನವಿ ಸಲ್ಲಿಸಲು ನಿಂತಿದ್ದರು. ಸರ್ಕಾರ ಪೊಲೀಸರನ್ನು ಬಿಟ್ಟು ಪ್ರತಿಭಟನಾಕಾರರ ಬಂಧಿಸಿ ರಾತ್ರಿ 10 ಗಂಟೆಗೆ ಬಿಡುಗಡೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

ನೌಕರರ ಬೇಡಿಕೆ ಈಡಿರಿಸಿ ಸಿಪಿಐಎಂ ಆಗ್ರಹ :   ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರು ನಡೆಸಿರುವ ಮುಷ್ಕರದ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮವಹಿಸಲು ರಾಜ್ಯ ಬಿಜೆಪಿ ಸರ್ಕಾರವು ಮುಂದಾಗಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್೯ವಾದಿ), ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ಒತ್ತಾಯಿಸಿವೆ. ಸಾರಿಗೆ ನೌಕರರು ನಿರಂತರವಾಗಿ ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸುತ್ತಾ ಬರುತ್ತಿದ್ದಾರೆ. ಆದರೆ ಸರ್ಕಾರಗಳು ಮಾತ್ರ ಅವರ ಬೇಡಿಕೆಗಳ ಪರಿಹಾರಕ್ಕೆ ಅಗತ್ಯ ಕ್ರಮವಹಿಸದೆ ಇರುವುದೇ ಸದ್ಯದ ದಿಢೀರ್ ಮುಷ್ಕರಕ್ಕೆ ಕಾರಣವಾಗಿದೆ. ಸಿಪಿಐಎಂ ಬೆಂ.ದ ಜಿಲ್ಲಾ ಕಾರ್ಯದರ್ಶಿ ಕೆ.ಎನ್. ಉಮೇಶ್ ತಿಳಿಸಿದ್ದಾರೆ.

ಸಚಿವರ ಜೊತೆ ಮಾತುಕತೆ : ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರ ಜತೆ ಸಭೆ ನಡೆಸಿದರು. ಆದರೆ ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರ ಜತೆ ಮಾತುಕತೆ ನಡೆಸದೇ, ಎ.ಐ.ಟಿ.ಯು.ಸಿ ಮುಖಂಡ ಅನಂತ ಸುಬ್ಬರಾವ್, ಸಿ.ಐ.ಟಿ.ಯು. ಮುಖಂಡ ಪ್ರಕಾಶ್, ಮಹಾಮಂಡಲದ ಪ್ರತಿನಿಧಿಗಳು, ಭಾರತೀಯ ಮಜ್ದೂರ್ ಸಂಘದ ಶ್ರೀ ಪೂಂಜಾ ಅವರ ಜತೆ ಸಮಾಲೋಚಿಸಿದರು. ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷ ಚಂದ್ರಪ್ಪ, ಬಿ.ಎಂ.ಟಿ.ಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಸಾರಿಗೆ ಇಲಾಖೆಯ ಉನ್ನತ ಅಧಿಕಾರಗಳ ಜತೆ ಚರ್ಚೆ ನಡೆಸಿದರು.

ಆದರೆ ಮಾತುಕತೆ  ತಿರಸ್ಕತರಸಿದ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರ ಮುಷ್ಕರವನ್ನು ವಿಫಲಗೊಳಿಸಲು ಜಾಣತನ ತೋರಿಸಿದೆ. ನಾವು ನಾಳೆಯ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ಇಂದಿನ ಸಭೆಯಲ್ಲಿ ಕೈಗೊಂಡಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೋಡಿಹಳ್ಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್​ ಮಾತನಾಡಿ ಎಸ್ಮಾ ಹೇಳಿಕೆ‌ ಸರಿಯಲ್ಲ. ನಾವೆಲ್ಲಾ ಸ್ವಯಂಪ್ರೇರಿತರಾಗಿ‌ ಬಸ್​ ನಿಲ್ಲಿಸಿದ್ದೇವೆ, ಕೋಡಿಹಳ್ಳಿ‌ ಚಂದ್ರಶೇಖರ್​ ನಿಲುವಿಗೆ ನಾವೆಲ್ಲಾ‌ ಬದ್ಧರಾಗಿದ್ದೇವೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *