ನವ ಉದಾರ ವಿತ್ತೀಯ ಆಳ್ವಿಕೆಯ ವಿಕೃತಿ-1

ರಾಜ್ಯಗಳಿಗೆ ಜಿಎಸ್‍ಟಿ ಪರಿಹಾರ ನಿಲ್ಲಿಸಿರುವ ಮೋದಿ ಸರಕಾರ
ದೇಶದ ಅದೃಷ್ಟಹೀನ ಅಲ್ಪ ಸಂಖ್ಯಾತರ ಮೇಲೆ ಆರ್ಭಟಿಸುವ, ಜಬರ್ದಸ್ತು ಮಾಡುವ, ಆಡಂಬರದ ಗಂಡಸುತನ ತೋರಿಸುವ ಮೋದಿ ಸರ್ಕಾರವು ಹಣಕಾಸು ಬಂಡವಾಳದ ವಿರುದ್ಧ ನಿಲ್ಲುವ ಎದೆಗಾರಿಕೆ ಹೊಂದಿಲ್ಲ. ಬದಲಿಗೆ ರಾಜ್ಯಗಳನ್ನು ಆರ್ಥಿಕವಾಗಿ ಹಿಂಡಲು ಮುಂದಾಗುತ್ತದೆ, ರಾಜ್ಯಗಳಿಗೆ ಜಿಎಸ್‍ಟಿ ನಷ್ಟ ಪರಿಹಾರದ ಹಣ ಕೊಡುವುದನ್ನು ನಿಲ್ಲಿಸುತ್ತದೆ, ಬಡವರ ಕಲ್ಯಾಣ ಕಾರ್ಯಕ್ರಮಗಳ ವೆಚ್ಚದ ಕಡಿತವನ್ನು ಮಾಡುತ್ತದೆ. ಅದು, ಹಣಕಾಸು ಬಂಡವಾಳವು ಅರ್ಥವ್ಯವಸ್ಥೆಗೆ ಆಘಾತ ತಲುಪಿಸುವಂತಹ ಆಜ್ಞೆಗಳನ್ನು ಕೊಂಡೊಯ್ಯುವ ಕೊಳವೆಯ ಪಾತ್ರ ವಹಿಸಿದೆ. ಇಲ್ಲಿ ನವ ಉದಾರ ಆಳ್ವಿಕೆಯ ವಿಕೃತಿಯ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ.

ಒಂದು ಅರ್ಥವ್ಯವಸ್ಥೆಯಲ್ಲಿ ವರಮಾನಗಳ ವೃದ್ಧಿ ನಿಧಾನಗೊಳ್ಳುತ್ತಿರುವಾಗ, ಸರ್ಕಾರದ ತೆರಿಗೆ ಆದಾಯದ ಬೆಳವಣಿಗೆಯೂ ನಿಧಾನಗೊಳ್ಳುತ್ತದೆ. ಆದಾಗ್ಯೂ, ಸರ್ಕಾರಕ್ಕೆ ಕೆಲವು ನಿರ್ದಿಷ್ಟ ವೆಚ್ಚಗಳನ್ನು ಕೈಗೊಳ್ಳಲೇಬೇಕಾದ ಅನಿವಾರ್ಯತೆ ಇರುತ್ತದೆ. ಅಂತಹ ಅನಿವಾರ್ಯ ವೆಚ್ಚಗಳನ್ನು ಹೊಂದಿಸಿಕೊಳ್ಳುವ ಸಲುವಾಗಿ, ಸರ್ಕಾರವು ಅಧಿಕ ತೆರಿಗೆಗಳನ್ನು ಹೇರಬೇಕಾಗುತ್ತದೆ; ಇಲ್ಲವೇ ಸಾಲಮಾಡಬೇಕಾಗುತ್ತದೆ (ಅಂದರೆ, ವಿತ್ತೀಯ ಕೊರತೆಯ ಗಾತ್ರ ದೊಡ್ಡದಾಗುತ್ತದೆ). ಮಹಾ ಯದ್ಧಾನಂತರದ ಕಾಲದಲ್ಲಿ ಎಲ್ಲ ಬಂಡವಾಳಶಾಹಿ ದೇಶಗಳೂ (ಆಗ, ಈ ದೇಶಗಳು ತಮ್ಮ ಅರ್ಥವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದಿದ್ದವು) ತಮ್ಮ ಅರ್ಥವ್ಯವಸ್ಥೆಯು ಮಂದಗತಿಗೆ ಇಳಿದಾಗ ತಮ್ಮ ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದವು, ಅಂದರೆ ಸಾಲ ಮಾಡುತ್ತಿದ್ದವು. ಸಾಲ ಮಾಡಿದ ಹಣವನ್ನು ಸರ್ಕಾರಗಳು ಧಾರಾಳವಾಗಿ ಖರ್ಚು ಮಾಡುತ್ತಿದ್ದ ಕಾರಣದಿಂದಾಗಿ, ಬೇಡಿಕೆ ಕುದುರುತ್ತಿತ್ತು ಮತ್ತು ಅರ್ಥವ್ಯವಸ್ಥೆಯು ಚೇತರಿಸಿಕೊಳ್ಳುತ್ತಿತ್ತು. ಇಂತಹ ವಿದ್ಯಮಾನವನ್ನು ಒಂದು “ಸ್ವಯಂ ಸ್ಥಿರಕಾರಿ” (automatic stabiliser) ಎಂಬುದಾಗಿ ಅರ್ಥಶಾಸ್ತ್ರದ ಪಠ್ಯ ಪುಸ್ತಕಗಳು ತಿಳಿಸುತ್ತವೆ.

ಸರ್ಕಾರಗಳು ಸಂದರ್ಭಾನುಸಾರವಾಗಿ ಸಾಲ ಮಾಡಿ ಅದನ್ನು ಖರ್ಚು ಮಾಡುತ್ತಿದ್ದ ಸಂಗತಿಯು, ತಮ್ಮ ಸಾಮಾಜಿಕ ಮತ್ತು ಆರ್ಥಿಕ ನೀತಿಗಳ ಮೇಲೆ ಎಲ್ಲ ದೇಶಗಳೂ ನಿಯಂತ್ರಣ ಹೊಂದಿದ್ದ ಕಾಲದಲ್ಲಿ ಸಂಗತವಾಗಿತ್ತು. ಆದರೆ, ನವ ಉದಾರವಾದದ ಆಳ್ವಿಕೆಯಲ್ಲಿ ಈ ಸಂಗತಿಯು ಅಸಂಗತವಾಗಿದೆ. ನವ ಉದಾರವಾದದ ಆಳ್ವಿಕೆಯಲ್ಲಿ, ಅರ್ಥವ್ಯವಸ್ಥೆಯ ಮಂದಗತಿಯಿಂದಾಗಿ ತೆರಿಗೆ ಸಂಗ್ರಹ ಇಳಿದಾಗ, ಸರ್ಕಾರವು ಬಂಡವಾಳಗಾರರ ಮೇಲೆ ಅಧಿಕ ತೆರಿಗೆ ವಿಧಿಸಲೂ ಆಗದ ಅಥವಾ ಹೆಚ್ಚು ಸಾಲ ಮಾಡಲೂ ಆಗದ ಪರಿಸ್ಥಿತಿಯಲ್ಲಿದೆ. ಏಕೆಂದರೆ, ಈ ಎರಡೂ ಕ್ರಮಗಳನ್ನು ಅಂತಾರಾಷ್ಟ್ರೀಯ ಹಣ ಕಾಸು ಬಂಡವಾಳವು ವಿರೋಧಿಸುತ್ತದೆ. ಅದರ ಈ ನಿಲುವಿಗೆ ಸರ್ಕಾರ ಒಪ್ಪಿಕೊಳ್ಳದಿದ್ದರೆ ಬಂಡವಾಳವು ದೇಶದಿಂದ ಪಲಾಯನ ಮಾಡಿ ಒಂದು ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ಒಂದು ವೇಳೆ, ದುಡಿಯುವ ಜನತೆಯ ಮೇಲೆ ಅಧಿಕ ತೆರಿಗೆಗಳ ಭಾರ ಹೊರಿಸಿದರೆ, ಆಗಲೂ, ಒಟ್ಟಾರೆ ಬೇಡಿಕೆ ವೃದ್ಧಿಸುವುದಿಲ್ಲ. ಹಾಗಾಗಿ, ಅರ್ಥವ್ಯವಸ್ಥೆಯ ಮಂದಗತಿ ನಿಲ್ಲದು.

ಒಂದು ವಾಸ್ತವಾಂಶವಾಗಿ ಹೇಳುವುದಾದರೆ, ಅಮೇರಿಕಾ ದೇಶವನ್ನು ಹೊರತುಪಡಿಸಿದರೆ, ಎಲ್ಲಾ ದೇಶಗಳೂ ತಮ್ಮ ವಿತ್ತೀಯ ಕೊರತೆಯು ತಮ್ಮ ದೇಶದ ಜಿಡಿಪಿಯ 3% ಮೀರದಂತೆ ಕಾನೂನು ಮಾಡಿಕೊಂಡಿವೆ. ಭಾರತದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ವಿತ್ತೀಯ ಕೊರತೆಯು ತಮ್ಮ ತಮ್ಮ ಜಿಡಿಪಿಯ 3% ಮೀರದಂತೆ ಕಾನೂನು ಮಾಡಿಕೊಂಡಿವೆ. ಅರ್ಥವ್ಯವಸ್ಥೆಯು ಮಂದಗತಿಗೆ ಇಳಿದಾಗ ತೆರಿಗೆ ಸಂಗ್ರಹವೂ ಇಳಿಯಲೇಬೇಕಾಗುತ್ತದೆ. ಹಾಗಾಗಿ ಸರ್ಕಾರವು ಸಾರ್ವಜನಿಕರಿಗಾಗಿ ಕೈಗೊಳ್ಳುವ ಖರ್ಚುಗಳೂ ಇಳಿಯುತ್ತವೆ.

ಆದ್ದರಿಂದ, ಒಂದು ನವ ಉದಾರ ಆಳ್ವಿಕೆಯಲ್ಲಿ, ಸರ್ಕಾರವು ಕೈಗೊಳ್ಳುವ ಖರ್ಚು ವೆಚ್ಚಗಳು, ಬೇಡಿಕೆ ಕುದುರಿಸುವ ಮತ್ತು ಅರ್ಥವ್ಯವಸ್ಥೆ ಚೇತರಿಸಿಕೊಳ್ಳುವ ‘ಸ್ವಯಂ ಸ್ಥಿರಕಾರಿ’ ಪರಿಣಾಮವನ್ನು ನವ ಉದಾರ ಆಳ್ವಿಕೆ ಬರುವ ಮೊದಲಿನ ರೀತಿಯಲ್ಲಿ ಬೀರುವುದಿಲ್ಲ. ಮೇಲಾಗಿ, ಅರ್ಥವ್ಯವಸ್ಥೆಯು ಮಂದಗತಿಗೆ ಇಳಿದಾಗ ತೆರಿಗೆ ಸಂಗ್ರಹವೂ ಇಳಿಯುತ್ತದೆ ಮತ್ತು ಸರ್ಕಾರವು ಸಾರ್ವಜನಿಕರಿಗಾಗಿ ಕೈಗೊಳ್ಳುವ ಖರ್ಚುಗಳೂ ಇಳಿಯುತ್ತವೆ. ಅದರ ಪರಿಣಾಮವಾಗಿ ಅರ್ಥವ್ಯವಸ್ಥೆಯು ಇನ್ನೂ ಹೆಚ್ಚಿನ ಮಂದಗತಿಗೆ ಇಳಿಯುತ್ತದೆ. ಸರ್ಕಾರದ ಕಡಿಮೆ ಖರ್ಚುಗಳು ಆವರ್ತಗಳಲ್ಲಿ ಉಂಟಾಗುವ ಬಿಕ್ಕಟ್ಟಿಗೆ ಇಂಬು ಕೊಡುತ್ತವೆ ಎಂದು ಹೇಳುವುದುಂಟು. ಬಿಕ್ಕಟ್ಟು ಯಾವಾಗಲೂ ಆವರ್ತನಗೊಳ್ಳುತ್ತದೆ ಎಂದು ಸೂಚಿಸುವ ಕಾರಣದಿಂದ ಈ ಹೇಳಿಕೆಯು ನಮ್ಮನ್ನು ತಪ್ಪುದಾರಿಗೆ ಎಳೆಯುತ್ತದೆ.

ಅನಿವಾರ್ಯ ವೆಚ್ಚಗಳನ್ನು ಹೊಂದಿಸಿಕೊಳ್ಳುವ ಸಲುವಾಗಿ ಸರ್ಕಾರಗಳು ಹೆಚ್ಚಿನ ಮಟ್ಟದ ಸಾಲ ಮಾಡುವ ಕ್ರಮವನ್ನು ವಿತ್ತೀಯ ಹೊಣೆಗಾರಿಕೆಯ ಹೆಸರಿನಲ್ಲಿ ಕೈಬಿಡಲಾಗಿದೆ ಮತ್ತು ಎಲ್ಲ ಸರ್ಕಾರಗಳು ವಿತ್ತೀಯ ಶಿಸ್ತು ಪಾಲಿಸುವಂತೆ ಆಜ್ಞಾಪಿಸಲಾಗಿದೆ. ಹಿಂದೆ, ಸರ್ಕಾರಗಳು ಸಂದರ್ಭಕ್ಕನುಸಾರವಾಗಿ ಹೆಚ್ಚಿನ ಮಟ್ಟದ ಸಾಲ ಮಾಡುತ್ತಿದ್ದ ಕ್ರಮವು ಅರ್ಥವ್ಯವಸ್ಥೆಯು ಮಂದಗತಿಗೆ ಇಳಿಯದಂತೆ ರಕ್ಷಿಸುವ ಒಂದು ತಡೆ ಗೋಡೆಯಂತೆ ಕೆಲಸ ಮಾಡುತ್ತಿತ್ತು. ಅಂತಹ ಕ್ರಮವನ್ನು ವಿರೋಧಿಸುವ ನವ ಉದಾರ ಆಳ್ವಿಕೆಯ ಹಠಮಾರಿತನದ ನಿಲುವು ಅರ್ಥವ್ಯವಸ್ಥೆಯ ಮಂದಗತಿಯನ್ನು ಅಧಿಕಗೊಳಿಸುತ್ತದೆ.

ಈ ಅಂಶವೇ ನವ ಉದಾರ ವಿತ್ತೀಯ ಆಳ್ವಿಕೆಯ ವಿಕೃತಿಯ ತಿರುಳು.
ಈ ಹಿನ್ನೆಲೆಯಲ್ಲಿ, ತಾನು ಸಿಲುಕಿರುವ ಇಕ್ಕಟ್ಟಿನಿಂದ ನುಣಿಚಿಕೊಳ್ಳಲು ಸರ್ಕಾರವು ಎಲ್ಲ ರೀತಿಯ ಕುಯುಕ್ತಿಗಳನ್ನೂ ಬಳಸುತ್ತಿದೆ. ಭಾರತದಲ್ಲಿ ಈಗ ಎರಡು ಇಂತಹ ಕುಯುಕ್ತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಒಂದು, ಕೇಂದ್ರ ಸರ್ಕಾರವು ತಾನು ಹೊರಬೇಕಾಗಿರುವ ವಿತ್ತೀಯ ಭಾರವನ್ನು, ಬಲವಂತವಾಗಿ ಮತ್ತು ಸಾಂವಿಧಾನಿಕ ಹೊಣೆಗಾರಿಕೆಯನ್ನು ಉಲ್ಲಂಘಿಸಿ, ರಾಜ್ಯ ಸರ್ಕಾರಗಳ ಹೆಗಲಿಗೆ ಹೊರಿಸುತ್ತಿದೆ. ಇಂತಹ ಇನ್ನೊಂದು ಪ್ರಯತ್ನವೆಂದರೆ, ಸಾರ್ವಜನಿಕ ವಲಯವನ್ನು ಖಾಸಗಿಯವರಿಗೆ ಮಾರಲು ಸರ್ಕಾರ ಹುಚ್ಚು ಅವಸರದಲ್ಲಿದೆ. ಹೇಗಾದರೂ ಸರಿ ಒಂದಿಷ್ಟು ಹಣ ಕೈಗೆ ಸಿಕ್ಕಿದರೆ ಸಾಕು ಎನ್ನುವ ಅದರ ಮಂದದೃಷ್ಠಿಯ ಮನೋಭಾವ ಖಂಡನೀಯ. ಈ ಎರಡೂ ಪ್ರಯತ್ನಗಳನ್ನು ಒಂದೊಂದಾಗಿ ಪರಿಶೀಲಿಸೋಣ.

ಕೇಂದ್ರ ಸರ್ಕಾರವು ತಾನು ಹೊರಬೇಕಾಗಿರುವ ರಕ್ಷಣಾ ವೆಚ್ಚದ ಭಾರವನ್ನು, ಬಲವಂತವಾಗಿ ಮತ್ತು ಸಾಂವಿಧಾನಿಕ ಹೊಣೆಗಾರಿಕೆಯನ್ನು ಉಲ್ಲಂಘಿಸಿ, ಹೇಗೆ ರಾಜ್ಯ ಸರ್ಕಾರಗಳ ಹೆಗಲಿಗೆ ಹೊರಿಸಲು ಪ್ರಯತ್ನಿಸುತ್ತಿದೆ ಎಂಬ ಅಂಶವನ್ನು ಈಗಾಗಲೇ ಚರ್ಚಿಸಲಾಗಿದೆ (ಜನಶಕ್ತಿ- ಸಂಚಿಕೆ 37, ಸೆಪ್ಟೆಂಬರ್ 9-15, 2019). ದೇಶದ ರಕ್ಷಣೆ ಸಂಬಂಧಿತ ಖರ್ಚು ವೆಚ್ಚಗಳನ್ನು ಮತ್ತು ರಕ್ಷಣೆಗೆ ಸಂಬಂಧಿಸಿದ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಪ್ರತ್ಯೇಕವಾಗಿ ಮತ್ತು ಏಕಮಾತ್ರವಾಗಿ ಕೇಂದ್ರ ಸರ್ಕಾರಕ್ಕೆ ವಹಿಸಲಾಗಿದೆ. ಇದನ್ನು ಸಂವಿಧಾನದ ಏಳನೆಯ ಷೆಡ್ಯೂಲಿನಲ್ಲಿ ನಿರ್ದಿಷ್ಟವಾಗಿ ನಮೂದಿಸಲಾಗಿದೆ. ಈ ಸಂವಿಧಾನಿಕ ಏರ್ಪಾಟಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದಾಗ್ಯೂ, ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ಉಲ್ಲಂಘಿಸಿ, ಕೇಂದ್ರ ಸರ್ಕಾರವು ತನ್ನ ಪಾಲಿಗೆ ವಹಿಸಿರುವ ರಕ್ಷಣಾ ಖರ್ಚು ವೆಚ್ಚಗಳನ್ನು, ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗುವ ಹಣದಿಂದ ಮುರಿದುಕೊಳ್ಳಲು ಆದೇಶಿಸುವಂತೆ ಹದಿನೈದನೆಯ ಹಣ ಕಾಸು ಆಯೋಗವನ್ನು ಕೋರಿದೆ. ಅಂದರೆ, ಕೇಂದ್ರ ಸರ್ಕಾರವೇ ಹೊರಬೇಕಾದ ರಕ್ಷಣಾ ವೆಚ್ಚದ ಹೊರೆಯನ್ನು ಬಲವಂತವಾಗಿ ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಲಾಗುತ್ತಿದೆ.

ಇಲ್ಲಿಯವರೆಗೆ, ಈ ವಿಷಯವು, ರಾಜ್ಯಗಳಿಗೆ ಒಡ್ಡಿದ ಒಂದು ಬೆದರಿಕೆಯಾಗಿ ಉಳಿದಿದೆ. ಆದರೆ, ಇನ್ನೊಂದು ವಿಷಯದಲ್ಲಿ-ಜಿಎಸ್‍ಟಿಯ ನಷ್ಟ ತುಂಬಿಕೊಡುವ ವಿಷಯದಲ್ಲಿ – ಕೇಂದ್ರ ಸರ್ಕಾರವು ಈಗಾಗಲೇ ರಾಜ್ಯಗಳನ್ನು ಹಿಂಡಿ ಹಿಪ್ಪೆ ಮಾಡಿದೆ. ಜಿಎಸ್‍ಟಿ ಜಾರಿ ಮಾಡುವ ಸಂದರ್ಭದಲ್ಲಿ, ರಾಜ್ಯಗಳು ಜಿಎಸ್‍ಟಿ ಪದ್ಧತಿಯನ್ನು ಒಪ್ಪಿಕೊಳ್ಳುವಂತೆ ಅವುಗಳ ಮನ ಒಲಿಸುವ ಸಲುವಾಗಿ, ಜಿಎಸ್‍ಟಿಯ ಜಾರಿಯಿಂದ ರಾಜ್ಯಗಳಿಗೆ ಉಂಟಾಗುವ ತೆರಿಗೆ ಆದಾಯದ ನಷ್ಟವನ್ನು ಐದು ವರ್ಷಗಳ ಅವಧಿಯವರೆಗೆ ತುಂಬಿಕೊಡುತ್ತೇವೆ ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಭರವಸೆ ಕೊಟ್ಟಿತ್ತು. ಈ ಉದ್ದೇಶಕ್ಕಾಗಿ ಒಂದು ಪರಿಹಾರ ನಿಧಿಯನ್ನೂ ಸ್ಥಾಪಿಸಲಾಗಿತ್ತು ಮತ್ತು ಕೆಲವು ನಿರ್ದಿಷ್ಟ ತೆರಿಗೆಗಳಿಂದ ಬರುವ ಹಣವನ್ನು ಈ ನಿಧಿಗೆ ತುಂಬುವ ಏರ್ಪಾಟನ್ನೂ ಮಾಡಲಾಗಿತ್ತು. ತೆರಿಗೆ ಆದಾಯದ ನಷ್ಟವನ್ನು ಲೆಕ್ಕ ಹಾಕುವ ಸಲುವಾಗಿ, ಒಂದು ಮೂಲ ವರ್ಷದ ತೆರಿಗೆ ಆದಾಯದ ಮೇಲೆ ಪ್ರತಿ ವರ್ಷವೂ 14% ತೆರಿಗೆ ಅದಾಯ ಹೆಚ್ಚುವ ಒಂದು ವಾಸ್ತವಿಕ ಅಂದಾಜಿನ ಮೇಲೆ, ರಾಜ್ಯಗಳಿಗೆ ಉಂಟಾಗುವ ತೆರಿಗೆ ಆದಾಯದ ನಷ್ಟವನ್ನು ಲೆಕ್ಕ ಹಾಕುವ ವಿಧಾನವನ್ನೂ ಒಪ್ಪಿಕೊಳ್ಳಲಾಗಿತ್ತು.

ಆದರೆ, ಕೇಂದ್ರ ಸರ್ಕಾರವು ಆಗಸ್ಟ್ ತಿಂಗಳಿನಿಂದೀಚೆಗೆ ರಾಜ್ಯಗಳಿಗೆ ಜಿಎಸ್‍ಟಿ ನಷ್ಟ ಪರಿಹಾರದ ಹಣ ಕೊಡುವುದನ್ನು ನಿಲ್ಲಿಸಿದೆ. ನಷ್ಟ ಪರಿಹಾರ ನಿಧಿಯಲ್ಲಿ ಸಾಕಷ್ಟು ಹಣವಿಲ್ಲ ಎಂದು ಹೇಳುತ್ತಿದೆ. ಆದರೆ, ರಾಜ್ಯಗಳಿಗೆ ತೆರಿಗೆ ಆದಾಯ ನಷ್ಟ ತುಂಬಿಕೊಡುವುದಾಗಿ ಕೇಂದ್ರ ಕೊಟ್ಟ ಭರವಸೆಗೂ ಮತ್ತು ನಿಧಿಯಲ್ಲಿ ಎಷ್ಟು ಹಣ ಇದೆ ಎಂಬುದಕ್ಕೂ ಸಂಬಂಧವಿಲ್ಲ; ನಷ್ಟ ತುಂಬಿಕೊಡುವ ಅಂಶವನ್ನು ಸಂವಿಧಾನ ತಿದ್ದುಪಡಿಯಲ್ಲಿ ನಮೂದಿಸಲಾಗಿತ್ತು; ನಷ್ಟ ಪರಿಹಾರ ನಿಧಿಯಲ್ಲಿ ಸಾಕಷ್ಟು ಹಣವಿಲ್ಲದಿದ್ದರೆ ಕೇಂದ್ರ ಸರ್ಕಾರವು ತನ್ನ ಪಾಲಿನ ಜಿಎಸ್‍ಟಿ ಆದಾಯದಿಂದಲೇ ಕೊಡಲಿ ಎಂದು ರಾಜ್ಯಗಳು ಹೇಳುತ್ತಿರುವುದು ಸರಿಯಾಗಿಯೇ ಇದೆ.

ಜಿಎಸ್‍ಟಿ ಜಾರಿಯಿಂದಾಗಿ ಪ್ರಸಕ್ತ ಹಣ ಕಾಸು ವರ್ಷದ ಹೆಚ್ಚಿನ ತಿಂಗಳುಗಳಲ್ಲಿ ಮಾಸಿಕ ತೆರಿಗೆ ಸಂಗ್ರಹವು ಒಂದು ಲಕ್ಷ ಕೋಟಿ ರೂ. ದಾಟುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಜಿಎಸ್‍ಟಿಯಲ್ಲಿರುವ ನ್ಯೂನತೆಗಳ ಕಾರಣದಿಂದಾಗಿ ಮತ್ತು ಮಂದಗತಿಗೆ ಇಳಿದಿರುವ ಅರ್ಥವ್ಯವಸ್ಥೆಯ ಕಾರಣದಿಂದಾಗಿ ತೆರಿಗೆ ಸಂಗ್ರಹದಲ್ಲಿ ಕೊರತೆಯುಂಟಾಗುತ್ತಿದೆ. ಹಬ್ಬಗಳ ಕಾರಣದಿಂದಾಗಿ ವಹಿವಾಟು ಹೆಚ್ಚಿಗೆ ಇದ್ದ ನವೆಂಬರ್ ತಿಂಗಳಿನಲ್ಲಿ ಮಾತ್ರ ಒಂದು ಲಕ್ಷ ಕೋಟಿಗಿಂತಲೂ ಜಾಸ್ತಿ ತೆರಿಗೆ ಸಂಗ್ರಹವಾಗಿತ್ತು.

ಆದಾಯದ ಕೊರತೆಯನ್ನು ಎದುರಿಸುತ್ತಿರುವ ಕೇಂದ್ರ ಸರ್ಕಾರವು, ನಷ್ಟ ತುಂಬಿಕೊಡುವ ಸಂವಿಧಾನಿಕ ಭರವಸೆಯನ್ನು ಮುರಿದು, ತಲೆಯ ಮೇಲೆ ಮರಿಗಳನ್ನು ಹೊತ್ತಿದ್ದ ಕೋತಿಯೊಂದು ನೀರಿನ ಮಟ್ಟ ಮೂಗಿನವರೆಗೆ ಏರಿದಾಗ ಆ ಮರಿಗಳನ್ನೇ ನಿಂತ ಕಾಲ ಕೆಳಗೆ ಹಾಕಿಕೊಂಡು ಜೀವ ಉಳಿಸಿಕೊಳ್ಳುವ ಕೋತಿಯ ರೀತಿಯಲ್ಲಿ ರಾಜ್ಯಗಳನ್ನು ತುಳಿಯುತ್ತಿದೆ. ಅದರ ಜೊತೆಯಲ್ಲಿ, ಹಂಚಿಕೆಯಾಗಬೇಕಾದ ಸಂಯೋಜಿತ ಜಿಎಸ್‍ಟಿ(ಐಜಿಎಸ್‍ಟಿ) ಸಂಗ್ರಹದ ಸಿಂಹ ಪಾಲನ್ನು ಕೇಂದ್ರವೇ ಇಟ್ಟುಕೊಳ್ಳುತ್ತಿದೆ.
ಕೇಂದ್ರ ಸರ್ಕಾರದ ಇಂತಹ ಇಬ್ಬಗೆಯ ಹಿಂಡುವಿಕೆಯಿಂದಾಗಿ ರಾಜ್ಯಗಳ ಹಣಕಾಸಿನ ಪರಿಸ್ಥಿತಿ ಕಳವಳಕಾರಿಯಾಗಿದೆ. ಬಡವರ ಅರೋಗ್ಯ ರಕ್ಷಣೆ, ಶಿಕ್ಷಣ ಮುಂತಾದ ಕಲ್ಯಾಣ ಕಾರ್ಯಕ್ರಮಗಳ ವೆಚ್ಚದ ಹೆಚ್ಚಿನ ಭಾಗವನ್ನು ರಾಜ್ಯಗಳು ಭರಿಸುವ ಕಾರಣದಿಂದಾಗಿ, ರಾಜ್ಯಗಳ ಆದಾಯ ಇಳಿದಾಗ ಇಂತಹ ಕಲ್ಯಾಣ ಕಾರ್ಯಕ್ರಮಗಳ ವೆಚ್ಚಗಳ ಇಳಿಕೆಯು ಬಡವರನ್ನು ಇನ್ನೂ ಹೆಚ್ಚಿನ ಬಡತನಕ್ಕೆ ತಳ್ಳುತ್ತದೆ.

ಕೇಂದ್ರ ಸರ್ಕಾರವು ಸಾಲ ಮಾಡುವ ಮೂಲಕ (ಅಂದರೆ, ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ) ರಾಜ್ಯಗಳಿಗೆ ನಷ್ಟ ತುಂಬಿಕೊಡುವ ಭರವಸೆಯನ್ನು ಈಡೇರಿಸಿದ್ದರೆ, ಈ ರೀತಿಯಲ್ಲಿ ರಾಜ್ಯಗಳ ಹಿಂಡುವಿಕೆಯನ್ನು ತಪ್ಪಿಸಬಹುದಿತ್ತು. (ಬಂಡವಾಳಿಗರ ಮೇಲೆ ತೆರಿಗೆ ಹಾಕುವ ಕೆಚ್ಚೆದೆ ಕೇಂದ್ರ ಸರ್ಕಾರಕ್ಕೆ ಇಲ್ಲವೆಂಬ ಅಂಶವನ್ನು ಇತ್ತೀಚೆಗೆ ಅದು ಬಂಡವಾಳಿಗರಿಗೆ ಕೊಟ್ಟಿರುವ ತೆರಿಗೆ ವಿನಾಯ್ತಿಯ ಕ್ರಮವೇ ಸಾಬೀತು ಮಾಡುತ್ತದೆ). ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಂಡು ಒಟ್ಟಾರೆ ಬೇಡಿಕೆಯನ್ನು ಉತ್ತೇಜಿಸಿ ಉದ್ಯೋಗ ಸೃಷ್ಠಿಸಬಹುದಿತ್ತು, ಅದೂ ಕೂಡ ಹಣದುಬ್ಬರಕ್ಕೆ ಎಡೆ ಇಲ್ಲದಂತೆ. ಇತ್ತೀಚೆಗೆ ಹಣದುಬ್ಬರ ನುಸುಳುತ್ತಿರುವುದು ನಿಜವಾದರೂ, ಅದು ನಿರ್ದಿಷ್ಟ ವಲಯಕ್ಕೆ (ಅದಕ್ಕೆ ಈರುಳ್ಳಿ ಒಂದು ಉದಾಹರಣೆ) ಸಂಬಂಧಿಸುತ್ತದೆ. ಸರಬರಾಜಿಗೆ ಸಂಬಂಧಿಸಿದ ಇಂತಹ ಸಮಸ್ಯೆಗಳನ್ನು ಪಡಿತರ ವ್ಯವಸ್ಥೆಯ ಮೂಲಕ ನಿವಾರಿಸಿಕೊಂಡು, ಹಣದುಬ್ಬರಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ, ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳಬಹುದಿತ್ತು.

ಆದರೆ, ವಿತ್ತೀಯ ಕೊರತೆಯನ್ನು ಈ ರೀತಿಯಲ್ಲಿ ಹೆಚ್ಚಿಸಿಕೊಳ್ಳುವುದನ್ನು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಒಪ್ಪುವುದಿಲ್ಲ. ದೇಶದ ಅದೃಷ್ಟಹೀನ ಅಲ್ಪ ಸಂಖ್ಯಾತರ ಮೇಲೆ ಆರ್ಭಟಿಸುವ, ಜಬರ್ದಸ್ತು ಮಾಡುವ, ಆಡಂಬರದ ಗಂಡಸುತನ ತೋರಿಸುವ ಮೋದಿ ಸರ್ಕಾರವು ಹಣಕಾಸು ಬಂಡವಾಳದ ವಿರುದ್ಧ ನಿಲ್ಲುವ ಎದೆಗಾರಿಕೆ ಹೊಂದಿಲ್ಲ. ಹಣಕಾಸು ಬಂಡವಾಳವು ಮುಖ ಸಿಂಡರಿಕೊಳ್ಳುವಂತಹ ಯಾವ ಕ್ರಮವನ್ನೂ ಅದು ಕೈಗೊಳ್ಳುವುದಕ್ಕಿಂತ ರಾಜ್ಯಗಳ ಹಿಂಡುವಿಕೆಯನ್ನು ಇಷ್ಟಪಡುತ್ತದೆ; ಬಡವರ ಕಲ್ಯಾಣ ಕಾರ್ಯಕ್ರಮಗಳ ವೆಚ್ಚದ ಕಡಿತವನ್ನು ಇಷ್ಟಪಡುತ್ತದೆ. ಅದು, ಹಣಕಾಸು ಬಂಡವಾಳವು ಅರ್ಥವ್ಯವಸ್ಥೆಗೆ ಆಘಾತ ತಲುಪಿಸುವಂತಹ ಆಜ್ಞೆಗಳನ್ನು ಕೊಂಡೊಯ್ಯುವ ಕೊಳವೆಯ ಪಾತ್ರ ವಹಿಸಿದೆ ಮತ್ತು ನವ ಉದಾರ ಆಳ್ವಿಕೆಯ ವಿಕೃತಿಯ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *