ನಮ್ಮ ಮತಗಳು ಮಾರಾಟಕ್ಕಿಲ್ಲ

ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಕೊಳಕು ರಾಜಕಾರಣದಿಂದ ಮತದಾರ ತನ್ನ ಮತಗಳನ್ನು ಹಣಕ್ಕಾಗಿ  ಮಾರಿಕೊಳ್ಳುವ ಮೂಲಕ ತನ್ನ ಹಕ್ಕನ್ನು ಬೆತ್ತಲೆ ಮಾಡುತ್ತಿರುವುದು ನೋವಿನ ಸಂಗತಿ.

ಇಂತಹ ಭ್ರಷ್ಟ ವ್ಯವಸ್ಥೆಯ ದಾಸನಾಗದೆ ಇದನ್ನು ತಡೆಯುವ ಜವಾಬ್ದಾರಿ ಮತ್ತೇ  ನಮ್ಮೆಲ್ಲರ ಕೈಯಲ್ಲಿದೆ. ದೇಶದ ರಾಜಕಾರಣದಲ್ಲಿ ಸ್ವಾರ್ಥರಹಿತ, ಸಮಾಜಮುಖಿ ಚಿಂತಕರು, ಸಮಗ್ರ ಪ್ರಗತಿಗೆ ಹೊಸ ಯೋಜನೆ ರೂಪಿಸುವ ವ್ಯಕ್ತಿಗಳ ಪ್ರವೇಶ, ಉನ್ನತ ಆಲೋಚನೆ ಹೊಂದಿದ ವ್ಯಕ್ತಿಗಳನ್ನು ಚುನಾವಣೆಗಳಲ್ಲಿ ಅಮಿಷ ರಹಿತರಾಗಿ ಆಯ್ಕೆ ಮಾಡುವ ಪ್ರವೃತ್ತಿಯನ್ನು ಮತದಾರ ಆಯ್ಕೆ ಮಾಡಿಕೊಂಡ್ರೆ ಮಾತ್ರ ಗ್ರಾಮದ  ಪ್ರಗತಿ ಸಾಧ್ಯ.

ಹೌದು ಗ್ರಾಮ ಪಂಚಾಯತಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇದೀಗ ಎಲ್ಲಡೆ ಟಿಕೆಟ್ ಆಕಾಂಕ್ಷಿಗಳು ನಾಯಕರ ಮನೆ ಬಾಗಿಲನ್ನು ತಟ್ಟುತ್ತಿದ್ದಾರೆ. ಕಳೆದ ಬಾರಿ ಮಾಡಿದ ತಪ್ಪನ್ನು ಮತದಾರ ಈ ಬಾರಿಯೂ ಮಾಡದೇ ಅಭಿವೃದ್ಧಿಗೆ ಕೈ ಜೋಡಿಸೋ ಉತ್ತಮ ವ್ಯಕ್ತಿಯನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ.

ಸ್ವಾರ್ಥಸಾಧನೆಯ ರಾಜಕಾರಣಿಗಳು ತಮ್ಮ ಮನೋಭಿಲಾಷೆ ಈಡೇರಿಕೆಗಾಗಿ ಮತದಾರರ ಕಾಲು ಹಿಡಿಯುತ್ತಾರೆ. ಪೊಳ್ಳು ಭರವಸೆ ನಾಟಕವಾಡುತ್ತಾರೆ. ಸೀರೆ, ಎಣ್ಣೆ, ಹಣದ ಆಮಿಷ ಒಡ್ಡಿ ತಮ್ಮ ಬಯಕೆ ಈಡೇರಿಸಿಕೊಳ್ಳುತ್ತಾರೆ ಇಂತಹ ನಾಟಕಗಳಿಗೆ ಜನತೆ ಮೋಸ ಹೋಗದೆ ಉತ್ತಮರನ್ನು ಚುನಾವಣೆಯಲ್ಲು ಆಯ್ಕೆ ಮಾಡಲು ಪ್ರಯತ್ನಿಸಬೇಕು.

ನೂರೋ ಇನ್ನೋರಕ್ಕೆ ಮಾರಿಕೊಳ್ಳುವ ಬದಲಿಗೆ ಮತವನ್ನು ಊರಿನ ಅಭಿವೃದ್ಧಿಗಾಗಿ ದಾನ ಮಾಡುವ ಮೂಲಕ ಈ ಬಾರಿ ಗ್ರಾಮದ ಉದ್ದಾರಕ್ಕೆ ಕೈ ಜೋಡಿಸೋ ವ್ಯಕ್ತಿಯನ್ನು ಮೆಂಬರ್ ಆಗಿ ಆಯ್ಕೆ ಮಾಡೋ ಇಂತಹ ಅವಕಾಶ ಕೇವಲ ಐದು ವರ್ಷಗಳಿಗೊಮ್ಮೆ ಮಾತ್ರ ನಮಗೆ ಸಿಗಲಿದೆ.

ವಿಚಾರವಂತರಿಗೆ ಚುನಾವಣೆ ಅಭ್ಯರ್ಥಿಗಳಾಗಲು ಮನವೊಲಿಸಿ ಸಹಕಾರ ನೀಡಬೇಕು. ಸ್ವಾರ್ಥರಹಿತ ಸ್ವಾಭಿಮಾನಿಗಳನ್ನು ಜನಾಭಿಮಾನಿಯಾಗಿ ಪರಿವರ್ತಿಸುವ ಜವಾಬ್ದಾರಿ ಮತದರರ ಹೊಣೆ. ಪಕ್ಷಾತೀತವಾಗಿ ಯೋಗ್ಯ ವ್ಯಕ್ತಿಗಳಿಗೆ ಮತ ನೀಡುವ ಪ್ರವೃತ್ತಿ ಮತದಾರರಲ್ಲಿ ಜಾಗೃತಗೊಂಡರೆ ಮಾತ್ರ ಇಡೀ ಗ್ರಾಮದ ಅಭಿವೃದ್ಧಿ ತನ್ನಿಂದ ತಾನೇ ಶುರುವಾಗುತ್ತದೆ ಇಂತಹ ಒಂದು ಶಕ್ತಿ ಮತದಾರನ ಕೈಯಿಲ್ಲಿರುವಾಗ ಅದನ್ನು ಮಾರಿಕೊಳ್ಳುವುದು ಸೂಕ್ತವಲ್ಲ.

ಪಕ್ಷಾಧಾರಿತವಾಗಿ ಮತದಾನ ಮಾಡುವ ಪ್ರವೃತ್ತಿ ಕ್ಷೀಣಿಸಿ, ಜನಪರ, ಸಮಾಜಮುಖಿ ಗುಣವಂತರನ್ನು ಆಯ್ಕೆ ಮಾಡುವ ಜಾಗೃತಿ ನಮ್ಮಲ್ಲಿ ಮೂಡಬೇಕು. ಪಕ್ಷಗಳು ಸೋತರೂ ಚಿಂತೆಯಿಲ್ಲ ಉತ್ತಮ ವ್ಯಕ್ತಿಗಳು ಆಯ್ಕೆಯಾದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಭದ್ರಗೊಳ್ಳುತ್ತದೆ. ಅಭಿವೃದ್ಧಿ ಮಂತ್ರಕ್ಕೆ ಶಕ್ತಿ ದೊರೆಯುತ್ತದೆ. ಮತದಾರರ ಪ್ರಜ್ಞೆ ಪ್ರಜಾಪ್ರಭುತ್ವದ ಭದ್ರ ಅಡಿಪಾಯವಾಗಿದೆ ಎನ್ನುವುದುನ್ನು ಮಾರಿಯಬಾರದು.

ಜನಸೇವಕನಾಗಿ ಗ್ರಾಮದ ಅಭಿವೃದ್ಧಿಗೆ ಪಣತೊಟ್ಟು ದುಡಿಯವ ಒರ್ವ ಪ್ರಾಮಾಣಿಕ ವ್ಯಕ್ತಿ ಆಯ್ಕೆ ನಿಮ್ಮದಾಗಿರಲಿ ಈ ಬಾರಿ ಚುನಾವಣೆಯಲ್ಲಿ ಮತದಾರ ಜಾಗೃತಿಯಿಂದ ಮತದಾನದ ಜೊತೆಗೆ ಅಭಿವೃದ್ಧಿ ಪರ ಕೆಲಸ ಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡಲಿ ನಮ್ಮ ಮತಗಳು ಮಾರಟಕ್ಕಿಲ್ಲ ಗ್ರಾಮದ ಸಮಸ್ಯೆಗಳನ್ನು ಪರಿಹರಿಸಿ ಮತ ಪಡೆಯಿರಿ ಎನ್ನುವ ಮೂಲಕ ಮತದಾರ ಅಭಿವೃದ್ಧಿಗೆ ನಾಂದಿ ಹಾಡಲಿ ಎನ್ನುವುದು ನಮ್ಮ ಆಶಯವಾಗಿದೆ.

– ದಾವಲಸಾಬ ತಾಳಿಕೋಟಿ
ಪತ್ರಕರ್ತರು ಗಜೇಂದ್ರಗಡ ಜಿಲ್ಲಾ ಗದಗ

Donate Janashakthi Media

Leave a Reply

Your email address will not be published. Required fields are marked *