ಖ್ಯಾತ ತೆಲುಗು ನಟ ನಾಗಾರ್ಜುನ ಅವರ ಒಡೆತನದ ಕನ್ವೆನ್ಷನ್ ಹಾಲ್ ಅನ್ನು ಬುಲ್ಡೋಜರ್ ಹರಿಸಿ ನೆಲಸಮಗೊಳಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಸುಮಾರು 10 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದ ಕನ್ವೆನ್ಷನ್ ಹಾಲ್ ಹಲವು ವರ್ಷಗಳಿಂದ ಸರ್ಕಾರದ ನಿಗಾದಲ್ಲಿದ್ದು, ತೆರವುಗೊಳಿಸಲು ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಶನಿವಾರ ಏಕಾಏಕಿ ಹೈದರಾಬಾದ್ ಪ್ರಕೃತಿ ವಿಕೋಪ ನಿಯಂತ್ರಣ ಮತ್ತು ಆಸ್ತಿ ನಿರ್ವಹಣಾ ಮತ್ತು ಸಂರಕ್ಷಿತ ಪ್ರಾಧಿಕಾರ ಬುಲ್ಡೋಜರ್ ಮೂಲಕ ಕಟ್ಟಡವನ್ನು ನೆಲಸಮಗೊಳಿಸಿದೆ.
ಹೈದರಾಬಾದ್ ನಗರದ ಮಂದಾಪುರ ಪ್ರದೇಶದಲ್ಲಿರುವ ತಮ್ಮಿಡಿಕುಂಟ ಕೆರೆಯ ಪೂರ್ಣ ಸಾಮರ್ಥ್ಯದ ಜಾಗವನ್ನು ಒತ್ತುವರಿ ಮಾಡಿ ಕನ್ವೆನ್ಷನ್ ಹಾಲ್ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಕೆರೆಯ ಒಟ್ಟು ವಿಸ್ತೀರ್ಣ 29.24 ಎಕರೆ ವಿಸ್ತೀರ್ಣ ಹೊಂದಿದೆ. ಅಲ್ಲದೇ ಕೆರೆ ಹೆಚ್ಚುವರಿ 2 ಎಕರೆ ಭರ್ತಿಯಾಗುವ ಸಾಮರ್ಥ್ಯ ಹೊಂದಿದ್ದು, ಬಫರ್ ಝೋನ್ ಎಂದು ಪರಿಗಣಿಸಲಾಗಿದೆ. ಆದರೆ ನಾಗಾರ್ಜುನ ಒಡೆತನದ ಕನ್ವೆನ್ಷನ್ ಹಾಲ್ 1.29 ಎಕರೆ ವಿಸ್ತೀರ್ಣ ಜಾಗವನ್ನು ಒತ್ತುವರಿ ಮಾಡಿದೆ ಎಂದು ಎಂದು ಇಲಾಖೆಯ ವರದಿ ಹೇಳುತ್ತದೆ.
ಆದರೆ ನಾಗಾರ್ಜುನ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಸರ್ಕಾರಕ್ಕೆ ಸೇರಿದ ಕೆರೆಯ ಒಂದು ಇಂಚು ಜಾಗವನ್ನು ನಾವು ಒತ್ತುವರಿ ಮಾಡದೇ ಕನ್ವೆನ್ಷನ್ ಹಾಲ್ ನಿರ್ಮಿಸಿದ್ದೇವೆ. ಈ ಹಿಂದೆ ಪ್ರಾಧಿಕಾರದಿಂದ ನೋಟಿಸ್ ಬಂದಿದ್ದರಿಂದ ನಾವು ನ್ಯಾಯಾಲಯದ ಮೆಟ್ಟಿಲೇರಿದ್ದು, ತಡೆಯಾಜ್ಞೆ ತಂದಿದ್ದೆವು. ಆದರೂ ತಡೆಯಾಜ್ಞೆ ಮೀರಿ ನೆಲಸಮ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.