ಆರ್. ರಾಮಕೃಷ್ಣ
ಸಂಪುಟ – 07, ಸಂಚಿಕೆ 15, ಎಪ್ರೀಲ್ 14, 2013
..ಜಾಗತೀಕರಣ ನೀತಿಗಳು ಜನರ ಬದುಕಿನಲ್ಲೂ ಸಾಂಸ್ಕೃತಿಕ ಬದುಕಿನಲ್ಲೂ ಹತ್ತೆಂಟು ತಲ್ಲಣಗಳನ್ನು ಹುಟ್ಟು ಹಾಕಿವೆ….ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬದುಕು ಅರಸಿ ಬಡ ಜನ ಗುಳೆ ಏಳುತ್ತಿದ್ದಾರೆ. ಮನುಷ್ಯ ಸಂಬಂಧಗಳು, ಕುಟುಂಬ ಸಂಬಂಧಗಳು ಪುನರ್ ವ್ಯಾಖ್ಯಾನಕ್ಕೆ ಒಳಗಾಗುತ್ತಿವೆ….. ಮಾರುಕಟ್ಟೆ ಮನೋಧರ್ಮ ವಿಸ್ತರಿಸುತ್ತಿದೆ…ಅಂತರ ರಾಷ್ಟ್ರೀಯ ಬಂಡವಾಳ, ಮಾರುಕಟ್ಟೆ ಸಂಸ್ಕೃತಿ ಎಲ್ಲದರ ಮೇಲೂ ದಾಳಿ ಮಾಡುತ್ತಿವೆ. ಆಳುವ ಸಕರ್ಾರಗಳು ಕಾಪರ್ೋರೇಟ್ ಜಗತ್ತಿನ ಕೈ ಚೀಲಗಳಾಗುತ್ತಿವೆ. ಕಾಪೋರೇಟ್ ಲೂಟಿಗೆ ಸಮುದಾಯದ ಒಪ್ಪಿಗೆಯನ್ನು ಉತ್ಪಾದಿಸುವುದಕ್ಕೆ ಸಾಹಿತ್ಯ-ಸಾಹಿತಿಗಳನ್ನು ಬಳಸಿಕೊಳ್ಳುವ ಹುನ್ನಾರ ನಡೆಯುತ್ತಿದೆ. ದೇಶ ಕೋಶಗಳನ್ನು ಹರಾಜು ಹಾಕಲು ಸಾರ್ವಜನಿಕ ಒಪ್ಪಿಗೆ ಪಡೆಯಲು ಯತ್ನಿಸಲಾಗುತ್ತಿದೆ….ವೈಚಾರಿಕತೆಯ ಕತ್ತನ್ನೆ ಕತ್ತರಿಸಲಾಗುತ್ತಿದೆ….
ಹೀಗೆ ಮುಂದುವರೆದಿತ್ತು ಮಾತು.
…..70-80 ರ ದಶಕದಲ್ಲಿ ಪುರೋಹಿತಶಾಹಿ, ಅರಸೊತ್ತಿಗೆ, ಪಾಳೇಗಾರಿ ಮೌಲ್ಯಗಳ ವಿರುದ್ದ ಸಿಡಿದು ಬಂದ ಬಂಡಾಯ, ದಲಿತ, ಮಹಿಳಾ ಚಳುವಳಿಗಳು ಜನಪರ ಮೌಲ್ಯಗಳನ್ನು ಪ್ರತಿನಿಧಿಸಿ ಅಂದಿನ ಸಂದರ್ಭದ ಅಗತ್ಯಗಳಿಗೆ ಸ್ಪಂದಿಸಿ ತಮ್ಮ ಕರ್ತವ್ಯ ನಿಭಾಯಿಸಲು ಶ್ರಮಿಸಿದವು. ಆದರೆ ಇಂದಿನ ಸಂದರ್ಭದ ಅಗತ್ಯಗಳಿಗೆ ಅವು ಸ್ಪಂದಿಸುತ್ತಿಲ್ಲ. ಈ ವೇದಿಕೆಗಳೀಗ ಬಹುತೇಕ ಕ್ರಿಯಾಶೀಲತೆ ಇಲ್ಲದೇ ಸ್ಥಗಿತವಾಗಿವೆ.
ಹಿಂದೆ `ಕಲೆಗಾಗಿ ಕಲೆ’ ಎಂಬ ವಾದವನ್ನು ವಿರೋಧಿಸಿ `ಜನತೆಗಾಗಿ ಕಲೆ’ ಎಂಬ ನೆಲೆಯಲ್ಲಿ ಪ್ರಗತಿಪರ ಸಾಹಿತ್ಯ ಚಳುವಳಿ ಬೆಳೆದು ಬಂತು. ಈ ಹಿನ್ನೆಲೆಯಲ್ಲಿ ಸೃಷ್ಟಿಯಾದ ಸಾಹಿತ್ಯವನ್ನು “ ಘೋಷಣೆಗಳು, ಕಲಾತ್ಮಕತೆ ಇಲ್ಲದ ಸವಕಲು ಸಾಹಿತ್ಯ” ಎಂದು ಟೀಕಿಸಲಾಯಿತು. ಈಗ `ಸಾಹಿತಿಗಳು ಯಾವುದೇ ಚಳುವಳಿಗಳೊಂದಿಗೆ ಗುರುತಿಸಿಕೊಳ್ಳಬಾರದು. ಅದು ಸಾಹಿತಿಯ ಸೃಜನ ಶೀಲತೆಗೆ ಮಾರಕ’ ಎಂಬ ವಾದವನ್ನು ಹರಿಯ ಬಿಡಲಾಗುತ್ತಿದೆ. ಸಾಹಿತಿ ಮುಕ್ತವಾಗಿ, ಸ್ವತಂತ್ರವಾಗಿ ಯೋಚಿಸಬೇಕು, ಸಾಹಿತ್ಯಕ್ಕೆ ಯಾವುದೇ ಸಿದ್ದಾಂತದ ಹೊರೆ-ಬಾರ, ಚೌಕಟ್ಟು-ನೆಲೆಗಟ್ಟು ಅಗತ್ಯವಿಲ್ಲ..” ಎಂದು ಪ್ರತಿಪಾದಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಾಪರ್ೋರೇಟ್ ವಲಯ ಪ್ರಾಯೋಜಿಸುವಂತಹ ಪ್ರವೃತ್ತಿಗಳು ಹೆಚ್ಚುತ್ತಿವೆ. ಇಂತಹ ಅಪಾಯಕಾರಿ ಜನವಿರೋಧಿ ಪ್ರವೃತ್ತಿಗಳ ವಿರುದ್ದ ಇಂದಿನ ಸಂದರ್ಭದ ಸವಾಲುಗಳನ್ನು ಎದುರಿಸುವ ಶಕ್ತಿಶಾಲಿ ಸಾಹಿತ್ಯಿಕ, ಸಾಂಸ್ಕೃತಿಕ ಚಳುವಳಿಯನ್ನು ಹುಟ್ಟು ಹಾಕಬೇಕು…..
ಇದು ಮಾಚರ್್ 23 ಮತ್ತು 24, 2013 ರಂದು ಎರಡು ದಿನಗಳ ಕಾಲ ಧಾರವಾಡದಲ್ಲಿ ನಡೆದ `ಜನ ಸಾಹಿತ್ಯ ಸಮಾವೇಶ’ದಲ್ಲಿ ವಿಭಿನ್ನ ಗೋಷ್ಠಿಗಳಲ್ಲಿ, ಸಂದರ್ಭಗಳಲ್ಲಿ ಕೇಳಿ ಬಂದ ಮಾತುಗಳು ಮತ್ತು ಮಾತಿನ ಸಾರ.
`ವರ್ತಮಾನದ ತವಕ-ತಲ್ಲಣಗಳು’
ವರ್ತಮಾನದ ತವಕ ತಲ್ಲಣಗಳು ಎಂಬ ಗೋಷ್ಠಿಯಲ್ಲಿ ನಾನಾ ಸಾಹಿತಿಗಳು ಚಿಂತಕರು ಮಾತನಾಡಿದರು. ಕೋಮುವಾದ, ಅಸ್ಪೃಶ್ಯತೆ, ಜಾತೀಯತೆ, ಮಹಿಳೆಯರ ಮೇಲಿನ ಕ್ರೌರ್ಯ, ದೌರ್ಜನ್ಯಗಳು…ಜಾಗತೀಕರಣದ ಹುನ್ನಾರಗಳು, ಬಹುರಾಷ್ಟ್ರೀಯ ಕಂಪನಿಗಳಿಗೆ, ಬಂಡವಾಳಗಾರರಿಗೆ ರೈತರ ಭೂಮಿ ಕಿತ್ತುಕೊಳ್ಳುವ ಸಂಚುಗಳು, ಪರಿಸರದ ಮೇಲೆ ನಡೆಯುತ್ತಿರುವ ಆಕ್ರಮಣಗಳು…ಮುಂತಾದ ನಾನಾ ಅಂಶಗಳನ್ನು ಗುರುತಿಸಲಾಯಿತು. “ ಪ್ರಭುತ್ವ ಮತ್ತು ಪ್ರಭುತ್ವದ ಶಕ್ತಿಗಳಿಂದ ಶೋಷಣೆಗೆ ಒಳಗಾದ ಜೀವಗಳ ಪರವಾಗಿ ಈ ಸಮಾವೇಶದ ಲೇಖಕರು ನಿಲ್ಲುತ್ತಾರೆ ಮತ್ತು ಪ್ರಭುತ್ವ ಹಾಗೂ ಪ್ರಭುತ್ವ ಶಕ್ತಿಗಳ ಶೋಷಣೆಯನ್ನು ಸಮಾವೇಶದ ಲೇಖಕರು ಖಂಡಿಸುತ್ತಾರೆ” ಎಂಬ ಎರಡು ವಾಕ್ಯಗಳ ನಿರ್ಣಯವನ್ನು ಸಮಾವೇಶ ಕೊನೆಯಲ್ಲಿ ಅಂಗೀಕರಿಸಿತು. ಸಾಹಿತಿ, ಲೇಖಕರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರತಿಭಟನೆಗೆ ಇಳಿಯುವುದು, ಬರೆಯುವಷ್ಟೇ ಮುಖ್ಯ. ಅಥವಾ ಅದಕ್ಕಿಂತಲೂ ಮುಖ್ಯ ಎಂಬ ಅಭಿಪ್ರಾಯದ ಪ್ರತಿಪಾದನೆಗಳೂ ನಡೆದವು. ಇಂತಹ ಕ್ರಿಯಾಶೀಲತೆಗಳ ನಡುವೆ ಬಿಡುವಾದರೆ ಮಾತ್ರ ಬರೆಯುವೆ ಎಂದು ಕೆಲವರು ಘೋಷಿಸಿದರು. ಶೋಷಿತ ಜನಸಮುದಾಯಗಳ ಒಗ್ಗಟ್ಟನ್ನು ಮುರಿಯುವ-ಒಡಕು ತರುವ ಪ್ರಯತ್ನಗಳ ವಿರುದ್ದ ಎಚ್ಚರಿಕೆಯ ಮಾತುಗಳು ಕೇಳಿ ಬಂದವು. ಪ್ರಶಸ್ತಿ, ಸ್ಥಾನ ಮಾನ, ಸವಲತ್ತುಗಳ ಆಕರ್ಷಣೆಗೆ ಬಲಿಬಿದ್ದ ಸಾಹಿತಿಗಳು ಜನಪರ ಚಳುವಳಿಯ ಆಶಯಗಳ ವಿರುದ್ದವಾಗಿ ಪ್ರಭುತ್ವದ ಸೇವೆಗೆ ನಿಂತರು. ದಮನಕಾರಿ ಪ್ರಭುತ್ವಗಳಿಗಿಂತ `ಮೃದು ಧೋರಣೆ’ಯ ಪ್ರಭುತ್ವಗಳು ಜನಪರ ಸಾಹಿತಿಗಳನ್ನು ಭ್ರಷ್ಟಗೊಳಿಸಿ ಜನಪರ ಸಾಹಿತ್ಯಿಕ-ಸಾಂಸ್ಕೃತಿಕ ಚಳುವಳಿಗಳನ್ನು ದುರ್ಬಲಗೊಳಿಸಿದವು. ಸಾಹಿತಿಗಳು ವೈಯುಕ್ತಿಕ ಹಿತಾಸಕ್ತಿಗಳನ್ನು ಮೀರಿ ಜನಹಿತಕ್ಕೆ ಬದ್ದವಾಗಬೇಕು. ಸಾಹಿತ್ಯ-ಚಳುವಳಿ ಬೇರೆ ಬೇರೆ ಅಲ್ಲ. ಸಾಹಿತ್ಯ ಚಳುವಳಿ ಜನ ಚಳುವಳಿಗಳ ಭಾಗವಾಗಬೇಕು. ಬಂಡಾಯ, ದಲಿತ ಚಳುವಳಿಯ ಅರಂಭಿಕ ಹಂತದಲ್ಲಿ ಸೃಷ್ಟಿಯಾದ ಸಾಹಿತ್ಯಕ್ಕಿಂತ ಇಂದು ಹೆಚ್ಚು ಸತ್ವಶಾಲಿಯಾದ ಜನಪರ ಸೃಜನಶೀಲ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಹೊಸ ತಲೆಮಾರು ಜನಪರವಾದ ಹೊಸ ಸಾಹಿತ್ಯ ಚಳುವಳಿಯನ್ನು ಆರಂಭಿಸಬೇಕು. ಇದಕ್ಕೆ ಹಿರಿಯರು, ಅವರ ಅನುಭವ ಗೊಬ್ಬರದಂತೆ ಒದಗಬೇಕು ಎಂಬ ಆಶಯಗಳು ಸಮಾವೇಶದಲ್ಲಿ ವ್ಯಕ್ತವಾದವು. ಈ ಜನಪರ ಸಾಹಿತ್ಯ ಚಳುವಳಿ ಬಲಪಂಥೀಯತೆಯನ್ನು ತಿರಸ್ಕರಿಸುತ್ತದೆ.ಇದಕ್ಕೆ ಪ್ರಗತಿಪರ, ಎಡಪಂಥೀಯ ನೆಲೆಗಟ್ಟು ಇರುತ್ತದೆ. ಇಂತಹ ಸೈದ್ದಾಂತಿಕ ನೆಲೆಗಟ್ಟು ಸಾಹಿತಿಯ ಜನಪರತೆಗೆ, ಬದ್ದತೆಗೆ ಆಧಾರವಾಗುತ್ತದೆ. ಸಾಹಿತ್ಯಿಕ- ರಾಜಕೀಯ ಪ್ರಗ್ನೆಯನ್ನು ವಿಸ್ತರಿಸುತ್ತದೆ. ಕಲಾತ್ಮಕತೆಗೆ ಇದರಿಂದ ಯಾವ ಧಕ್ಕೆ ಇಲ್ಲ ಎಂದೂ ಸ್ಪಷ್ಟ ಪಡಿಸಲಾಯಿತು.
ಸಾಹಿತ್ಯ ಚಳುವಳಿಯನ್ನು ಮುಂದೊಯ್ಯುವ ಉದ್ದೇಶಕ್ಕೆಂದು ರಾಜ್ಯ ಮಟ್ಟದ ಸಂಘಟನೆಯ ಅಗತ್ಯವೆಂದು ಅದನ್ನು `ಕನರ್ಾಟಕ ಜನ ಸಾಹಿತ್ಯ ವೇದಿಕೆ’ ಎಂದು ಹೆಸರಿಸಿ ಅದಕ್ಕೆ ಹತ್ತು ಜನ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.ಮಹಾರಾಷ್ಟ್ರದ ಖ್ಯಾತ ದಲಿತ ಸಾಹಿತಿ ಲಕ್ಷ್ಮಣ ಗಾಯಕ್ವಾಡ್ ಅವರು ಸಮಾವೇಶವನ್ನು ಉದ್ಘಾಟಿಸಿದರು. ಡಾ. ಜಿ. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಭಾನು ಮುಷ್ತಾಕ್, ಎಂ.ಡಿ. ಒಕ್ಕುಂದ ಮುಂತಾದವರು ಪಾಲ್ಗೊಂಡಿದ್ದರು. ಡಾ. ರಹಮತ್ ತರಿಕೆರೆ, ಬಿ.ಎಂ. ಪುಟ್ಟಯ್ಯ, ಡಾ. ಸಿದ್ದನಗೌಡ ಪಾಟೀಲ, ಎಚ್.ಎಸ್. ಅನುಪಮ, ದು. ಸರಸ್ವತಿ. ಡಾ. ವಿನಯ, ಬಸವರಾಜ ಸೂಳಿಬಾವಿ, ಬಂಜಗೆರೆ ಜಯಪ್ರಕಾಶ್, ಹೀಗೆ ಸಾಹಿತ್ಯ ಚಳುವಳಿ, ಜನ ಚಳುವಳಿಗಳಲ್ಲಿ ಕ್ರಿಯಾಶೀಲರಾದ ಹಲವರು ಹಾಗೂ ಸಾಹಿತಿಗಳೂ ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು.
ಇತ್ತೀಚೆಗೆ ಇದೇ ಧಾರವಾಡದಲ್ಲಿ ನಡೆದ `ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವು ನಾಡಿನ ಸಾಹಿತ್ಯಿಕ -ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ ಎಂಬುದು ಹಲವರು ಗಮನಿಸಿರಬಹುದು. ಜನರ ಸಂಕಟಗಳಿಗೆ ದನಿಯಾಗಬೇಕಾದ ತುತರ್ು ಅಗತ್ಯ ಹೆಚ್ಚುತ್ತಿರುವ ಹೊತ್ತಲ್ಲಿ ಸಾಹಿತ್ಯ ಸಮಾರಂಭ ಸಂಘಟಿಸಿ `ಸಂಭ್ರಮಿಸು’ವಂಥದ್ದೇನಿದೆ ? ಇಂತಹ ಸಂದರ್ಭಕ್ಕೆ ಎಲ್ಲರಿಗೂ ಮುಕ್ತ ಪ್ರವೇಶಕ್ಕೆ ಅವಕಾಶ ನೀಡದೇ ನಿರ್ಬಂದಿಸುವುದೇಕೇ ? ಜನಮುಖಿಯಾಗಿರ ಬೇಕಾದ, ಜನರಿಗೆ ಉತ್ತರದಾಯಿ ಆಗಿರಬೇಕಾದ ಸಾಹಿತ್ಯ ಕ್ಷೇತ್ರ ಮತ್ತು ಸಾಹಿತಿಗಳು ಕಾಪರ್ೋರೇಟ್ ಕಂಪನಿಗಳ ಪ್ರಾಯೋಜಕತ್ವದ ಹಂಗಿಗೆ ಬೀಳುವುದು ತರವೇ ? ದುಬಾರಿ ಪ್ರತಿನಿಧಿ ಶುಲ್ಕವನ್ನು ಕೊಟ್ಟು ಬಯಸಿದವರೆಲ್ಲರೂ ಭಾಗವಹಿಸಲು ಸಾಧ್ಯವಾಗುವುದೇ…? ಮುಂತಾದವುಗಳೇ ಆ ಚಚರ್ೆಯ ಕೆಲವು ಪ್ರಮುಖ ಅಂಶಗಳು.
ಈ ಸಮಾವೇಶದಲ್ಲಿ ಇಂತಹ ಪ್ರಶ್ನೆಗಳನ್ನು ಎತ್ತಲಾಯಿತಾದರೂ ನಂತರದಲ್ಲಿ ಈ ಸಮಾವೇಶ ಯಾವುದೇ ಮತ್ತೊಂದು ಸಾಹಿತ್ಯಿಕ ಕಾರ್ಯಕ್ರಮಕ್ಕೆ ಪ್ರತಿಯಾಗಿ ಅಲ್ಲ, ಅದು ಒಂದು ನೆಪವಷ್ಟೆ ಎಂದು ಸಂಘಟಕರ ಸ್ಪಷ್ಟೀಕರಣ ಪ್ರಕಟಗೊಂಡಿತು. ಮತ್ತು ಮುಂದೆ ಹುಟ್ಟು ಹಾಕಬೇಕೆಂದಿರುವ ಸಾಹಿತ್ಯಿಕ ಚಳುವಳಿ ಬಂಡಾಯ, ದಲಿತ ಮುಂತಾದ ಸಾಹಿತ್ಯಿಕ-ಸಾಂಸ್ಕೃತಿಕ ಚಳುವಳಿಗಳಿಗೆ ಬದಲಿಯಾಗಲಿ ಅಥವಾ ಪಯರ್ಾಯವಾಗಲಿ ಅಲ್ಲ… ಆಯಾ ಸಂದರ್ಭದಲ್ಲಿ ಈ ಚಳುವಳಿಗಳು ನೀಡಿರುವ ಕೊಡುಗೆಗಳನ್ನು ಗುರುತಿಸಿ ಅದರ ಆಶಯವನ್ನು ಮುಂದೊಯ್ಯುವ ಹೊಸ ಚಳುವಳಿ ಕಟ್ಟಬೇಕಿದೆ ಎಂದು ಸಮಾವೇಶದ ಆಶಯದ ಕುರಿತು ತಿಳಿಸಲಾಯಿತು.
ಜನ ಸಾಹಿತ್ಯ ಸಮಾವೇಶದಲ್ಲಿ ಚಚರ್ಿತವಾದ ಪ್ರಶ್ನೆಗಳು, ಮಂಡಿತವಾದ ವಿಚಾರಗಳು ಹಾಗೂ `ಸಾಹಿತ್ಯ ಸಂಭ್ರಮ’ ದಂತೆಯೇ `ಜನ ಸಾಹಿತ್ಯ ಸಮಾವೇಶ’ವೂ ಕೆಲವೊಂದು ಉತ್ತರ ಬೇಡುವ ಪ್ರಶ್ನೆಗಳನ್ನು ಚಚರ್ೆಗಳನ್ನು ಹುಟ್ಟು ಹಾಕಿದೆ ಎಂದರೆ ತಪ್ಪಾಗಲಾರದು. ಸಮಾವೇಶದ ನಾನಾಗೋಷ್ಠಿಗಳಲ್ಲಿ ಪಾಲ್ಗೊಂಡ ಹಲವು ಸಾಹಿತಿಗಳು, ಚಿಂತಕರು ಪ್ರಸ್ತುತ ಸಂದರ್ಭದಲ್ಲಿ ರಾಜ್ಯದಲ್ಲಿ ಚಳುವಳಿಗಳೇ ಇಲ್ಲ. ಚಳುವಳಿಗಳೆಲ್ಲ ನಿಜರ್ೀವವಾಗಿ ಹೋಗಿವೆ…ಎಂಬ ಅಭಿಪ್ರಾಯವನ್ನು ಮಂಡಿಸಿದರು. ಹೊಸ ಚಳುವಳಿಯ ಸಾಧ್ಯತೆಯನ್ನು ಕುರಿತ ಗೋಷ್ಠಿಯಲ್ಲಿ ಚಚರ್ೆಗಳು ಈ ಛಾಯೆಯಲ್ಲೇ ಇದ್ದವು. ಜಾಗತೀಕರಣ, ಕೋಮುವಾದ, ಜಾತೀಯತೆ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ದ ಸಮಸ್ಯೆಯ ತೀವ್ರತೆ-ಅಗಾಧತೆಗೆ ತಕ್ಕಂತೆ ಯಾವ ಪ್ರಮಾಣದಲ್ಲಿ ಚಳುವಳಿ ನಡೆಯಬೇಕಿತ್ತೋ ಆ ಪ್ರಮಾಣದಲ್ಲಿ ನಡೆದಿಲ್ಲ ಎಂದರೆ ಆ ಮಾತಿನ ಹಿಂದಿನ ಆಶಯವನ್ನು ಒಪ್ಪಬಹುದು. ಆದರೆ ನಡೆದಿರುವ, ನಡೆಯುತ್ತಿರುವ ನಾನಾ ಧಾರೆಯ ಜನ ಚಳುವಳಿಗಳನ್ನು ಕಣ್ಣು ಬಿಟ್ಟು ನೋಡದೇ, ಚಳುವಳಿಯ ಜೊತೆಗೆ ಹೆಜ್ಜೆ ಹಾಕದೇ ದೂರ ನಿಂತು ರಾಜ್ಯದಲ್ಲಿ ಚಳುವಳಿಗಳೇ ನಡೆಯುತ್ತಿಲ್ಲ… ಚಳುವಳಿಗಳೆಲ್ಲ ಸತ್ತು ಹೋಗಿವೆ ಎಂಬಂತಹ ಅಭಿಪ್ರಾಯಗಳನ್ನು ಹರಡುವುದು ಜನ ಚಳುವಳಿಯ ಬೆಳವಣಿಗೆಗೆ ಪೂರಕವಾಗಿದೆಯೇ ಎಂದು ಕೇಳಲೇ ಬೇಕಿದೆ. ಚಳುವಳಿಗಳ ನಡುವೆ ಚಚರ್ೆಯಲ್ಲಿ ಅಣ್ಣಾ ಹಜಾರೆಯವರ ಚಳುವಳಿ, ದೆಹಲಿ ಅತ್ಯಾಚಾರದ ವಿರುದ್ದದ ಚಳುವಳಿಗಳು ಇಣುಕಿ ಹೋದವು.
ಮಡೆಸ್ನಾನ-ಮಠ ದೇಗುಲಗಳಲ್ಲಿನ ಪಂಕ್ತಿ ಬೇಧ ತಾರತಮ್ಯಗಳ ವಿರುದ್ದ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಲವು ಹಂತಗಳ ಚಳುವಳಿ ಯಾಕೆ ಯಾರ ಕಣ್ಣಿಗೂ ಬೀಳಲಿಲ್ಲ. ರಾಜ್ಯದಲ್ಲಿ ಲಕ್ಷಾಂತರ ಎಕರೆ ವ್ಯಾಪ್ತಿಯ ಬಗರ್ ಹುಕುಂ ಸಾಗುವಳಿ ಸಕ್ರಮಕ್ಕಾಗಿ, ಸಾಗುವಳಿ ಮಾಡಿದ ಅರಣ್ಯ ಭೂಮಿಗೆ ಹಕ್ಕುಪತ್ರಕ್ಕಾಗಿ ನಡೆದ ಬಡರೈತರ ಬೃಹತ್ ಚಳುವಳಿಗಳು, ಮನೆ-ನಿವೇಶನ ರಹಿತರ ಚಳುವಳಿಗಳು, ಆಹಾರದ ಹಕ್ಕಿಗಾಗಿ-ಜನ ವಿರೋಧಿ ಆಹಾರ ಕಾಯ್ದೆ ವಿರುದ್ದ ಆಹಾರದ ಹಕ್ಕು ಪ್ರತಿಪಾದಿಸಿ ನಡೆದ ಚಳುವಳಿಗಳು ಚಳುವಳಿಗಳೇ ಅಲ್ಲವೇನು ? ಎರಡು ಹೊತ್ತಿನ ಗಂಜಿಗೂ ಸಾಲದ ನಿಕೃಷ್ಟ ವೇತನದಲ್ಲಿ ದುಡಿಯುತ್ತಿರುವ ಅಂಗನವಾಡಿ, ಬಿಸಿಯೂಟ ನೌಕರರು, ಹಮಾಲಿ ಕಾಮರ್ಿಕರು, ಗ್ರಾಮಪಂಚಾಯತ್, ಕಟ್ಟಡ ಕಾಮರ್ಿಕರು ಕನಿಷ್ಟ ಕೂಲಿಗಾಗಿ ಚಳುವಳಿ ನಡೆಸಿ ಲಾಟಿ ಬೂಟುಗಳ ಏಟು ತಿಂದದ್ದನ್ನು ಎಷ್ಟು ಜನ ಈ ಸಾಹಿತಿಗಳು ಕನಿಷ್ಟ ಗಮನಿಸಿದ್ದಾರೆ ?
ದುಡಿಯುವ ಜನರು ಬದುಕನ್ನು ಉತ್ತಮಪಡಿಸಿಕೊಳ್ಳಲು ಹೋರಾಟ ನಡೆಸಿದರೆ ಅವು ಚಳುವಳಿಯೇ ಅಲ್ಲವೇನು ? ಇವೆಲ್ಲಾ `ಜನಪರ ಚಳುವಳಿ’ ಎಂಬ `ಕವರೇಜ್ ಏರಿಯಾ’ದಿಂದ ಹೊರಗಿರುವ ಚಟುವಟಿಕೆಯಾ ? ಜನಪರ ಚಳುವಳಿ ಅಂದರೆ ಮತ್ತೇನು ? ದೆಹಲಿಯಲ್ಲಿ ಹತ್ತು ಲಕ್ಷ ದುಡಿಯುವ ಜನ ಒಂದೆಡೆ ಸೇರಿ ಆಳುವ ಸಕರ್ಾರಕ್ಕೆ `ಛೀ’ ಅಂದರೂ ಲೆಕ್ಕಕ್ಕಿಲ್ಲ. ಬ್ರೇಕಿಂಗ್ ನ್ಯೂಸು ಬಿಡಿ, ಮುಖಪುಟ ಬೇಡವೇ ಬೇಡ.. ಒಳಪುಟದ ಮೂಲೆಯಲ್ಲೂ ಮೂರು ಸಾಲಿಗೆ ಜಾಗವಿಲ್ಲ.. ಮಧ್ಯಮ ವರ್ಗದ ಜನರು ಎದ್ದು ಬಂದದ್ದು ಮಾತ್ರವೇ ಚಳುವಳಿ. ಅದೇ ಸ್ಫೋಟಕ ಸುದ್ದಿ, ಹೆಡ್ ಲೈನು. ಹಗಲು ರಾತ್ರಿ ಅದಕ್ಕೆ ಬಣ್ಣ ಬಳಿ… ಎಂಬುದು ಆಳುವ ವರ್ಗಗಳ ತೆವಲುಗಳೇ ತಿಕ್ಕಲುಗಳೇ ದೇಶದ ನೂರ ಮೂವತ್ತು ಕೋಟಿ ಜನರ ಹಿತಾಸಕ್ತಿ ಎಂದು ತಾವೂ ನಂಬಿ ಹಾಗೇ ಬಿಂಬಿಸುವುದು ನಮ್ಮ ಕಾಪರ್ೋರೇಟ್ ಮಾಧ್ಯಮದ ಧೋರಣೆ. ಅದೇ ರೀತಿ ಮಧ್ಯಮ ವರ್ಗ ಮಾಡಿದ್ದನ್ನು ಮಾತ್ರ ಕಾಣುವ ಜಾಣ ಕುರುಡು ನಮ್ಮ ಸಾಹಿತಿ, ಬರಹಗಾರರ ಮೆದುಳಿನಲ್ಲಿ ಎಲ್ಲೆಲ್ಲಿ ಅಡಗಿ ಕುಂತಿದೆ ಎಂಬ ವಿಷಯಗಳ ಬಗೆಗೆ ಈ ಗೋಷ್ಠಿಗಳಲ್ಲಿ ವಸ್ತುನಿಷ್ಟ ಆತ್ಮ ಶೋಧ ಒಂದು ಎದ್ದು ಕಾಣುವ ಅಂಶವಾಗಬೇಕಿತ್ತು. ವರ್ತಮಾನದ ತವಕ ತಲ್ಲಣಗಳ ಕುರಿತ ಚಚರ್ೆಯಲ್ಲಿ ನಮ್ಮ ನಾಡಿನ ಕೋಟ್ಯಾಂತರ ಜನರ ಬದುಕನ್ನೇ ಬದಲಿಸ ಬಲ್ಲಂತಹ ಒಂದು ಜ್ವಲಂತ ಪ್ರಶ್ನೆಯಾದ ಭೂ ಸುಧಾರಣೆಯ ಪ್ರಶ್ನೆಯೇ ಮಾಯ !!. ನಾಗೇಶ ಹೆಗಡೆಯವರೇನೋ ಜನಪರ ಕಾಳಜಿಯ ಬರಹಗಾರರೇ. ಅನುಮಾನವಿಲ್ಲ. ಆದರೆ ಅವರು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಂಡಿಸಿದ ವಿಚಾರಗಳಲ್ಲಿ ಹಲವಾರು, ಜನರನ್ನು ಅನವಶ್ಯಕವಾಗಿ ಭೀತಿಗೊಳಿಸುವ ಅತಿರೇಕ ಅಂದರೆ ತಪ್ಪೇನಿಲ್ಲ. ಅಂತಹ ಧೋರಣೆಯನ್ನು ಇತರರು ಹಲವರು ವ್ಯಕ್ತ ಮಾಡಿದರು. ದು. ಸರಸ್ವತಿಯವರು ಪೌರ ಕಾಮರ್ಿಕರ ಪ್ರಶ್ನೆಯಾಗಿ ಪ್ರಸ್ತಾಪ ಮಾಡಿದ್ದು ಬಿಟ್ಟರೆ ಅಸಂಘಟಿತ ಕಾಮರ್ಿಕರ ಕನಿಷ್ಟ ಕೂಲಿಯ ಪ್ರಶ್ನೆ ಎಲ್ಲಿಯೂ ಚಚರ್ೆಗೆ ಬರಲಿಲ್ಲ. ತಿಂಗಳಿಗೆ ಕನಿಷ್ಟ ಹತ್ತು ಸಾವಿರ ಕನಿಷ್ಟ ಕೂಲಿ ನೀಡಬೇಕೆಂದು ರಾಜ್ಯದಲ್ಲಿ ಇತ್ತೀಚಿನ ಅವಧಿಯಲ್ಲಿ ನಡೆದ ಚಳುವಳಿಗಳೆಷ್ಟು. ?
ಮೊನ್ನೆ ಮೊನ್ನೆ ಫೆಬ್ರವರಿ 20-21 ರಂದು ನಡೆದ ಎರಡು ದಿನಗಳ ಅಖಿಲ ಭಾರತ ಮುಷ್ಕರವೂ ಈ ಸಾಹಿತಿ ಚಿಂತಕರ ಗಮನ ಸೆಳೆಯಲಿಲ್ಲ ಎಂದರೆ ನಮ್ಮ ನಾಡಿನ ಕಾಪರ್ೋರೇಟ್ ಮಾಧ್ಯಮಗಳಿಗೆ ಬಡಿದಿರುವ ಜಾಹಿರಾತು ದಾಹದ ಗರ, ಟಿಆರ್ಪಿ ಗರದ ಬಗೆಗೆ ಮಾತನಾಡಲು ಸಾಹಿತಿಗಳಾದವರಿಗೆ ಯಾವ ನೈತಿಕ ಹಕ್ಕಿದೆ ಎಂಬ ಪ್ರಶ್ನೆ ಏಳುವುದಿಲ್ಲವೇ ? ಸಮಾವೇಶದ ಸಂದರ್ಭದಲ್ಲಿ ತೋರಿಸಲಾದ ಕೆಸರಿ ಹರವು ಅವರ ಗುಂಡ್ಯಾ ಯೋಜನೆಯ ಕುರಿತ `ಡಾಕ್ಯುಮೆಂಟರಿ’ ಸಿನಿಮಾಕ್ಕಿಂತ ಮುಖ್ಯವಾದ ಬೇರೆ ಡಾಕ್ಯುಮೆಂಟರಿ ಸಿನಿಮಾ ಯಾವುದು ಸಿಗಲಿಲ್ಲವೇ ? ಒಂದು `ಅಣೆ ಕಟ್ಟೆ’ ಕಟ್ಟಬಾರದು ಎಂಬುದೇ ಒಂದು ಪ್ರಗತಿಪರ ಸಿದ್ದಾಂತ ಆಗುತ್ತದೆಯಾ ? ಈ ಡಾಕ್ಯುಮೆಂಟರಿಯಲ್ಲಿ ಅಣೆಕಟ್ಟೆ ಬೇಡ ಎಂಬ ಅಂಶವನ್ನು ಒಪ್ಪಿಕೊಂಡು ಯೋಚಿಸಿದರೂ ಅರಣ್ಯ ಅಂಚಿನಲ್ಲಿ, ಅರಣ್ಯದ ನಡುವೆ ಅಲ್ಲಲ್ಲಿ ಸಾಗುವಳಿ ಮಾಡಿಕೊಂಡು ಬದುಕುತ್ತಿರುವ ಬಡ ರೈತರಿಗೆ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟು ಬಿಡಬೇಕೆಂದು ಹೇಳಿರುವ `ಬುದ್ದಿವಾದ’, ಇಂಥದ್ದೊಂದು ಪ್ರಶ್ನೆ ಆ ರೈತರ ಬದುಕಿನಲ್ಲಿ ಸೃಷ್ಟಿಸಬಹುದಾದ ತವಕ-ತಲ್ಲಣಗಳು ಯಾಕೆ ಈ ಸಾಹಿತಿಗಳನ್ನು ಕಾಡಲಿಲ್ಲವೋ ಅರ್ಥವಾಗಲಿಲ್ಲ. ಪ್ರಾಣಿಗಳು, ಜೀವ ಸಂಕುಲ ಬದುಕ ಬೇಕು, ಉಳಿಯ ಬೇಕು ಸರಿ. ಮನುಷ್ಯರು ?
ಇತ್ತೀಚೆಗೆ ನಿಧನರಾದ ಆಫ್ರಿಕಾ ಖಂಡದ ನೈಜೀರಿಯಾ ದೇಶದ ಸಾಹಿತಿ ಚಿನುವಾ ಅಚಿಬೆ ಅವರಿಗೆ ಸಮಾವೇಶ ಶ್ರದ್ದಾಂಜಲಿ ಸಲ್ಲಿಸಿದ್ದು ಸರಿ. ದುಷ್ಟ ಅಮೆರಿಕದ ಸಂಚುಗಳನ್ನು ಸೋಲಿಸಿ, ಜಾಗತೀಕರಣ ನೀತಿಗಳನ್ನು ಹಿಮ್ಮೆಟ್ಟಿಸಿ ದೇಶದ ಅಗಾಧ ತೈಲ ಸಂಪನ್ಮೂಲದಿಂದ ಬರುವ ಆದಾಯವನ್ನು ಜನರಿಗೆ ಶಿಕ್ಷಣ, ಆರೋಗ್ಯ ಸೌಕರ್ಯ, ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು ಹರಿಸಿದ, ಲಕ್ಷಾಂತರ ಎಕರೆ ಭೂಮಿಯನ್ನು ಕಾಪರ್ೋರೇಟ್ ಕಂಪನಿಗಳಿಂದ ಕಿತ್ತುಕೊಂಡು ಬಡರೈತರಿಗೆ ಹಂಚಿದ, ಉದಾರೀಕರಣ ನೀತಿಗಳಿಗೆ ಪಯರ್ಾಯ ನೀತಿಗಳನ್ನು ಸಾಧಿಸಿ ತೋರಿಸಿದ ವೆನೆಜುವೆಲಾದ ನೇತಾರ ಚವೇಸ್ಗೆ ಯಾಕೆ ಸಮಾವೇಶ ಶ್ರದ್ದಾಂಜಲಿ ಸಲ್ಲಿಸಲಿಲ್ಲ ಎಂಬ ಪ್ರಶ್ನೆ ಸಹ ಉತ್ತರವನ್ನು ಬಯಸುತ್ತದೆ. ಬಹುತೇಕ ಡಾ. ಸಿದ್ದನಗೌಡ ಪಾಟೀಲರನ್ನು ಬಿಟ್ಟರೆ ಯಾರಿಗೂ ಚವೇಸ್ ಎಂಬ `ಕ್ರಾಂತಿಕಾರಿ’ ನೆನಪಾಗದೇ ಹೋದರು ಎಂದರೆ ಅದಕ್ಕೆ ಏನು ಹೇಳುವುದು ? ಚವೇಸ್ ಚುನಾವಣೆಯ ಮೂಲಕ ಗೆದ್ದು ಬಂದ ಮನುಷ್ಯ ಅಂತ ಮಡಿವಂತಿಕೆಯಾ ? ಚಳುವಳಿಗಳ ಮುಂದಿನ ದಾರಿಯನ್ನು ಹುಡುಕುವ ಚಚರ್ೆಯಲ್ಲಿ ಬಿ.ಎಂ. ಪುಟ್ಟಯ್ಯನವರು ತೆಲಂಗಾಣದ ಚರಿತ್ರೆಯನ್ನು, ಆ ಚಳುವಳಿಯ ಧೀಮಂತಿಕೆಯನ್ನು ನೆನಪಿಸಿಕೊಂಡರು. ಭಾರತ ದೇಶದ ಜನಚಳುವಳಿಗಳ ಒಂದು ಭವ್ಯ ಇತಿಹಾಸವಾದ ಚಾರಿತ್ರಿಕ ತೆಲಂಗಾಣ’ದ ವೀರ ಚಳುವಳಿಯಿಂದ ಸ್ಫೂತರ್ಿಯನ್ನು ಖಂಡಿತ ಪಡೆಯಬಹುದು. ಹಾಗೆಯೇ ಅದರಿಂದ ಹಲವಾರು ತರನಾದ ಪಾಠಗಳನ್ನೂ ಕಲಿಯಬಹುದು. ಯಾವ ವಿಷಯದಲ್ಲಿ ಯಾವ ಪಾಠವನ್ನು ಕಲಿಯುವೆವು ಎಂಬುದು ಬಹಳ ಮುಖ್ಯ ಪ್ರಶ್ನೆ. 21 ನೇ ಶತಮಾನದ ಎರಡನೇ ದಶಕದಲ್ಲಿ ನಿಂತಿರುವ ನಾವು ನಮ್ಮ ಚಳುವಳಿ ನಡೆಯ ದಿಕ್ಕು ದೆಸೆಗಳನ್ನು ಇನ್ನೂ ಹೆಚ್ಚು ಖಚಿತ ಮಾಡಿಕೊಳ್ಳಬೇಕಾಗುತ್ತದೆ.
ರಾಜ್ಯದ ಪ್ರಗತಿಪರವಾದ ಎಲ್ಲ ಧಾರೆಗಳ ಸಾಹಿತ್ಯಿಕ-ಸಾಂಸ್ಕೃತಿಕ ಚಳುವಳಿಯನ್ನು ಒಳಗೊಂಡು, ಎಲ್ಲ ಧಾರೆಯ ಜನಚಳುವಳಿಗಳನ್ನು ಹತ್ತಿರಕ್ಕೆ ಸೆಳೆದುಕೊಂಡು ಕ್ರಿಯಾ ಶೀಲತೆಗೆ ಒಂದು ಸ್ಪಷ್ಟ ತಾತ್ವಿಕ ಆ ನೆಲೆಗಟ್ಟನ್ನು, ಗಟ್ಟಿ ಪ್ರಣಾಳಿಕೆಯನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕನರ್ಾಟಕ ಜನ ಸಾಹಿತ್ಯ ವೇದಿಕೆ ಇಡುವ ಹೆಜ್ಜೆಗಳು ಅದರ ಭವಿಷ್ಯವನ್ನು ನಿರ್ಧರಿಸುತ್ತವೆ.
0