ದ್ವಿಮುಖ ದಾಳಿ ಆರಂಭವಾಗಿದೆ

ಈ ಸರಕಾರದಿಂದ ಹೊಮ್ಮುತ್ತಿರುವ ಆರಂಭದ ಸಂಕೇತಗಳು ಒಂದೆಡೆಯಲ್ಲಿ ಪ್ರಧಾನ ಹಿಂದುತ್ವ ಅಜೆಂಡಾ ವಿವಿಧ ಮಂತ್ರಿಗಳ ಹೇಳಿಕೆಗಳಲ್ಲ್ಲಿ  ಬಿಂಬಿತವಾಗುತ್ತಿರುವಾಗಲೇ, ಇನ್ನೊಂದೆಡೆಯಲ್ಲಿ ಅದೇ ಅಜೆಂಡಾ ದೇಶದ ವಿವಿಧ ಭಾಗಗಳಲ್ಲಿ ಕೋಮುವಾದಿ ಧ್ರುವೀಕರಣದ ಹೊಲಸು ಪ್ರದರ್ಶನಗಳ ಸ್ವರೂಪದಲ್ಲೂ ತಲೆ ಎತ್ತುತ್ತಿರುವುದನ್ನು ತೋರಿಸುತ್ತದೆ. ಮತ್ತೊಂದೆಡೆಯಲ್ಲಿ ಮತ್ತಷ್ಟು ಉದಾರೀಕರಣದ ಆರ್ಥಿಕ ಸುಧಾರಣೆಗಳ ಜಾರಿಯೊಂದಿಗೆ ಜನತೆಯ ಮೇಲೆ ಮತ್ತಷ್ಟು ಹೊರೆಗಳ ಹೇರಿಕೆಯ ಸಂಕೇತಗಳೂ ಬರುತ್ತಿವೆ. ಇಂತಹ ದ್ವಿಮುಖ ದಾಳಿಗಳನ್ನು ಎದುರಿಸಲು ಸಿದ್ಧರಾಗಬೇಕಾಗಿದೆ, ಮುಂದೆ ಇನ್ನೂ ಬಲಿಷ್ಟ ಹೋರಾಟಗಳಿಗೆ ಸಿದ್ಧತೆ ನಡೆಸಬೇಕಾಗಿದೆ. 

– ಸೀತಾರಾಮ್ ಯೆಚೂರಿ

swearing-in2

     ಆರೆಸ್ಸೆಸ್/ಬಿಜೆಪಿಯದ್ದು ಸೀಳು ನಾಲಗೆ ಎಂಬುದು ಸಾಬೀತಾಗಿರುವ ಸಂಗತಿ. ‘ದ್ವಂದ್ವ ಮಾತು’ಗಳ ಈ ತಂತ್ರವನ್ನು ಅದು ಕರಗತ ಮಾಡಿಕೊಂಡಿದೆ, ಅದನ್ನು ತನ್ನ ದ್ವಂದ್ವ ಅಜೆಂಡಾವನ್ನು ಅನುಸರಿಸಲು ಚೆನ್ನಾಗಿ ಬಳಸಿಕೊಳ್ಳುತ್ತಿದೆ. ಒಂದು, ಆರೆಸ್ಸೆಸ್ನ ಮೂಲ ಅಜೆಂಡಾವನ್ನು, ಅಂದರೆ, ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಅಜೆಂಡಾವನ್ನು ಅನುಸರಿಸುವುದು, ಅದೇ ವೇಳೆಗೆ, ಸಾರ್ವಜನಿಕ ತೋರಿಕೆಗೆ ಮತ್ತೊಂದು ಅಜೆಂಡಾವನ್ನು ಅನುಸರಿಸುವುದು.

ಚುನಾವಣಾ ಪ್ರಚಾರದಲ್ಲಿಯೂ ಆರೆಸ್ಸೆಸ್/ಬಿಜೆಪಿ ಇದೇ ದ್ವಂದ್ವ ಅಜೆಂಡಾವನ್ನು ಅನುಸರಿಸಿರುವ ಬಗ್ಗೆ ಈ ಹಿಂದೆ ಈ ಅಂಕಣದಲ್ಲಿ ಪರಿಶೀಲಿಸಿದ್ದೇವೆ. ನರೇಂದ್ರ ಮೋದಿಯವರನ್ನು ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದ್ದೇ ಕೋಮುವಾದಿ ಧ್ರುವೀಕರಣ ನಡೆಸಲು ಸಾಕಷ್ಟಾಯಿತು. ಏಕೆಂದರೆ ಅವರೀಗಲೂ 2002ರ ಕೋಮುವಾದಿ ಹತ್ಯಾಕಾಂಡದ ‘ಪ್ರತೀಕ’ವಾಗಿದ್ದಾರೆ. ಇನ್ನೊಂದೆಡೆಯಲ್ಲಿ ‘ಅಭಿವೃದ್ಧಿ’ ಪ್ರಶ್ನೆಗಳ ಮೇಲೆ ಬಹಿರಂಗ ಪ್ರವಚನಗಳಲ್ಲಿ ‘ಗುಜರಾತ ಮಾದರಿ’ ಮತ್ತು ‘ಉತ್ತಮ ಆಳ್ವಿಕೆ’ಯನ್ನು ಮುಂದಿಟ್ಟದ್ದು ಕೋಮುವಾದವನ್ನು ಬಿಟ್ಟು ಬೇರೆ ಪ್ರಶ್ನೆಗಳ ಹೆಸರಿನಲ್ಲಿ ಮತದಾರರ ಬೆಂಬಲ ಗಿಟ್ಟಿಸಲಿಕ್ಕಾಗಿ. ಇಂತಹ ದ್ವಂದ್ವ ಕಾರ್ಯತಂತ್ರವನ್ನು ಪರಿಣಾಮಕಾರಿಯಾಗಿ ಅನುಸರಿಸಿ ಆರೆಸ್ಸೆಸ್/ಬಿಜೆಪಿಗೆ ಚುನಾವಣಾ ಲಾಭಗಳನ್ನು ಗಿಟ್ಟಿಸುವುದು ಸಾಧ್ಯವಾಗಿದೆ. ಆದರೂ, ನರೇಂದ್ರ ಮೋದಿ ಸರಕಾರದ ಪ್ರಮಾಣ ವಚನ ಸ್ವೀಕಾರದ ಮೊದಲು ಮತ್ತು ನಂತರ ನಿಜವಾದ ಅಜೆಂಡಾದ ಮುಖ ಅನಾವರಣಗೊಳ್ಳಲಾರಂಭಿಸಿದೆ.

   ಇಂದ್ರೇಶ ಕುಮಾರ್, ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯ ಮತ್ತು ಹಿಂದುತ್ವ ಸಂಘಟನೆಗಳು ಪ್ರಾಯೋಜಿಸಿದ ಭಯೋತ್ಪಾದಕ ದಾಳಿಗಳ ಹಲವು ಘಟನೆಗಳಲ್ಲಿ ಆಪಾದಿತರಾಗಿರುವ ಪ್ರಮುಖರಲ್ಲಿ ಒಬ್ಬ, ಸಿಬಿಐ, ಎನ್ಐಎ ಮತ್ತು ಎಟಿಎಸ್ ವಿಚಾರಣೆ ನಡೆಸುತ್ತಿರುವ ಎಲ್ಲ ಕೇಸುಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಈ ಕೇಸುಗಳಲ್ಲಿ ಹಲವಾರು ಹಿಂದುತ್ವ ಸಂಘಟನೆಗಳ ಮುಖಂಡರನ್ನು ಬಂಧಿಸಲಾಗಿದೆ. “ಚುನಾವಣಾ ಫಲಿತಾಂಶಗಳು ಎರಡನೇ ಸ್ವಾತಂತ್ರ್ಯವಾಗಿ ಬಂದಿದೆ” ಎಂದು ಅವರು ಒಂದು ರಾಷ್ಟ್ರೀಯ ದೈನಿಕ(ದಿ ಇಂಡಿಯನ್ ಎಕ್ಸ್ಪ್ರೆಸ್, ಮೇ24, 2014)ದಲ್ಲಿ ಪ್ರಕಟವಾಗಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಹೊಸ ಮಂತ್ರಿಗಳ ಹೇಳಿಕೆಗಳು

     ಜಿತೇಂದ್ರ ಸಿಂಗ್ ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಈ ಸರಕಾರ ಭಾರತೀಯ ಸಂವಿಧಾನದ 370 ನೇ ಕಲಮನ್ನು ಮುಂದುವರೆಸುವ ಬಗ್ಗೆ ಒಂದು ಪರಾಮರ್ಶೆಗೆ ತೆರೆದಿದೆ ಎಂದು ಸಾರಿದರು. ನಮ್ಮ ದೇಶದ ವಿಭಜನೆ ಮತ್ತು ಸ್ವಾತಂತ್ರ್ಯದ ವೇಳೆಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಭಾರತೀಯ ಸಂಘಕ್ಕೆ ಸೇರ್ಪಡೆಯಾದದ್ದು ಈ ಕಲಮಿನ ಆಧಾರದಲ್ಲೇ ಎಂಬುದನ್ನು ನಮ್ಮ ಓದುಗರು ನೆನಪಿಸಿಕೊಳ್ಳಬಹುದು. ಕಲಮು 370ನ್ನು ತೆಗೆದು ಹಾಕುವ ಪ್ರಕ್ರಿಯೆ/ ಚರ್ಚೆ ಆರಂಭವಾಗಿದೆ ಎಂಬ ಈ ನಿಸ್ಸಂದಿಗ್ಧ ಹೇಳಿಕೆಯನ್ನು ಸಹಜವಾಗಿಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಆಳುವ ಪಕ್ಷ ಮತ್ತು ಪ್ರತಿಪಕ್ಷ ತೀವ್ರವಾಗಿ ಖಂಡಿಸಿವೆ.
ಸಂವಿಧಾನದ ಕಲಮು 370ನ್ನು ಕಿತ್ತು ಹಾಕುವುದು ಈ ಚುನಾವಣೆಗಳ ಸಮಯದಲ್ಲಿ ಆರೆಸ್ಸೆ/ಬಿಜೆಪಿಯ ‘ನಿಜ ಅಜೆಂಡಾ’ ಆಗಿತ್ತು. ವಾಜಪೇಯಿ ಸರಕಾರದ ಅವಧಿಯಲ್ಲಿ ಬಹುಮತ ಇಲ್ಲದ್ದರಿಂದ ಇದನ್ನು ಮಾಡಲಾಗಲಿಲ್ಲ ಎಂದು ಅವರು ಹೇಳಿಕೊಂಡರು. ಬಿಜೆಪಿ ಪ್ರಣಾಳಿಕೆ ತಾನು “ಈ ಕಲಮಿನ ರದ್ದತಿಗೆ ಬದ್ಧವಾಗಿಯೇ ಉಳಿದಿದ್ದೇನೆ” ಎಂದಿತ್ತು. ಆರೆಸ್ಸೆಸ್/ಬಿಜೆಪಿ ಹಿಂದಿನಿಂದಲೂ, ಅಯೋಧ್ಯೆಯಲ್ಲಿ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ಕಟ್ಟುವುದು, ಸಮಾನ ನಾಗರಿಕ ಸಂಹಿತೆಯನ್ನು ಹೇರುವುದು ಮತ್ತು ಕಲಮು 370ರ ರದ್ದತಿ ತನ್ನ ಮೂಲ ಹಿಂದುತ್ವ ಅಜೆಂಡಾದ ಪ್ರಶ್ನೆಗಳು ಎಂದು ಹೇಳುತ್ತಲೇ ಬಂದಿದೆ.
ಅದೇ ರೀತಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿಯ ಬಗ್ಗೆಯೂ ಮೋದಿ ಸಂಪುಟದ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿಗಳ ಟಿಪ್ಪಣಿಗಳು ಬಂದಿವೆ. ಸಾಮಾಜಿಕ ನ್ಯಾಯದ ಮಂತ್ರಿ ಥವರ್ಚಂದ್ ಗೆಹ್ಲೊಟ್ ಬಿಜೆಪಿ ಸರಕಾರ ಅಲ್ಪಸಂಖ್ಯಾತರಿಗೆ 4.5ಶೇ. ಉಪಕೋಟಾಕ್ಕೆ ವಿರುದ್ಧವಾಗಿದೆ, ಏಕೆಂದರೆ ಅದು ಧರ್ಮವನ್ನು ಆಧರಿಸಿದ ಮೀಸಲಾತಿಯಾಗಿದ್ದು ‘ಸಂವಿಧಾನಬಾಹಿರ’ ಎಂದು ಮಾಧ್ಯಮಗಳಿಗೆ ಹೇಳಿದರು. ಅಲ್ಪಸಂಖ್ಯಾತ ವ್ಯವಹಾರಗಳ ಮಂತ್ರಿ ನಜ್ಮಾ ಹೆಪ್ತುಲ್ಲಾ ಕೂಡ ತಾನು ಅಲ್ಪಸಂಖ್ಯಾತರಿಗೆ ಮೀಸಲಾತಿಗೆ ವಿರುದ್ಧವಾಗಿದ್ದೇನೆ, ಏಕೆಂದರೆ ಕೋಟಾಗಳು ‘ಸ್ಪರ್ಧೆಯ ಉತ್ಸಾಹ’ವನ್ನು ಸಾಯಿಸುತ್ತದೆ ಎಂದಿದ್ದಾರೆ.

ಕ್ರೂರ ಹೋಲಿಕೆ

    ಅಲ್ಪಸಂಖ್ಯಾತ ವ್ಯವಹಾರಗಳ ಮಂತ್ರಿಗಳು ಇನ್ನೂ ಮುಂದೆ ಹೋಗಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ, ಏಕೆಂದರೆ ಅವರ ಸಂಖ್ಯೆ ಬಹಳ ದೊಡ್ಡದಿದೆ, ಬದಲಿಗೆ, ಪಾರ್ಸಿಗಳ ಜನಸಂಖ್ಯೆ ಇಳಿಮುಖವಾಗುತ್ತಿರುವುದರಿಂದ ಅವರು ಈ ‘ಹಣೆಪಟ್ಟಿ’ಗೆ ಅರ್ಹರು ಎಂದು ಹೇಳಿದ್ದಾರೆ. ಅವರು ಮುಸ್ಲಿಮರ ಕಲ್ಯಾಣದಲ್ಲಿ ಈ ಇಲಾಖೆಯ ಪಾತ್ರವನ್ನು ಗೌಣಗೊಳಿಸಿ ಮತ್ತು ಹಿಂದಿನ ಯುಪಿಎ ಸರಕಾರದ ಧೋರಣೆಗಳನ್ನು ತಿರಸ್ಕರಿಸಿ ಈ ಇಲಾಖೆಯನ್ನು ಪುನರ್ರೂಪಿಸುವ ದೃಢನಿರ್ಧಾರ ಮಾಡಿರುವಂತಿದೆ. “ಮುಸ್ಲಿಮರು ಅಲ್ಪಸಂಖ್ಯಾತರಲ್ಲ. ಪಾರ್ಸಿಗಳು ಹೌದು. ಅವರ ಸಂಖ್ಯೆ ಕಡಿಮೆಯಾಗದಂತೆ ಹೇಗೆ ಅವರಿಗೆ ನೆರವಾಗಬಹುದು ಎಂದು ನೋಡಬೇಕಾಗಿದೆ” ಎಂದು ಅವರು ಮಾಧ್ಯಮ ವ್ಯಕ್ತಿಗಳಿಗೆ ಹೇಳಿರುವದಾಗಿ ಮೇ 28ರ ಟೈಂಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮುಸ್ಲಿಂ ಅಲ್ಪಸಂಖ್ಯಾತರ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ ಕುರಿತ ನ್ಯಾಯಮೂರ್ತಿ ಸಾಚರ್ ಸಮಿತಿಯ ವರದಿ ಅವರ ಜೀವನ ಪರಿಸ್ಥಿತಿಗಳು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಜನರ ಪರಿಸ್ಥಿತಿಗಳಿಗಿಂತಲೂ ಕೆಳಗೆ ಇದೆ ಎಂದು ಹಲವು ಪರಿಮಾಣಗಳ ಆಧಾರದಲ್ಲಿ ತೋರಿಸಿ ಕೊಟ್ಟಿತು ಎಂಬುದನ್ನು ಓದುಗರು ಇಲ್ಲಿ ನೆನಪಿಸಿಕೊಳ್ಳಬಹುದು. ಅದರ ನಂತರ ಯುಪಿಎ ಸರಕಾರ ಈ ಪರಿಸ್ಥಿತಿಯನ್ನು ಉತ್ತಮ ಪಡಿಸಲು ಕ್ರಮಗಳನ್ನು ಸೂಚಿಸಲಿಕ್ಕೆಂದು ನ್ಯಾಯಮೂರ್ತಿ ರಂಗನಾಥ ಮಿಶ್ರ ಆಯೋಗವನ್ನು ನೇಮಿಸಿತು. ಅದು 27ಶೇ. ಒಬಿಸಿ ಮೀಸಲಾತಿಯಲ್ಲಿ ಒಬಿಸಿ ಪಟ್ಟಿಯ ಭಾಗವಾಗಿ ಸೇರಿಸಿ ಒಂದು ಕೋಟಾವನ್ನು ರಚಿಸಬೇಕು ಎಂದು ಶಿಫಾರಸು ಮಾಡಿತು. ಈ ಮೇರೆಗೆ ಯುಪಿಎ ಸರಕಾರ ಡಿಸೆಂಬರ್ 2011ರಲ್ಲಿ 4.5ಶೇ.ದ ಉಪಕೋಟಾವನ್ನು ಪ್ರತ್ಯೇಕಿಸಿ ಕೊಟ್ಟಿತು.
ಪಶ್ಚಿಮ ಬಂಗಾಲದ ಈ ಹಿಂದಿನ ಎಡರಂಗ ಸರಕಾರ ನ್ಯಾಯಮೂರ್ತಿ ರಂಗನಾಥ ಮಿಶ್ರ ಆಯೋಗದ ವರದಿಯ ಆಧಾರದಲ್ಲಿಯೇ ವಿವಿಧ ಮುಸ್ಲಿಂ ಗುಂಪುಗಳನ್ನು ರಾಜ್ಯದ ಒಬಿಸಿ ಪಟ್ಟಿಯಲ್ಲಿ ವಿಧಗಳಾಗಿ ಸೇರಿಸಿ, ಇಂತಹ ಗುಂಪುಗಳಿಗೆ ಒಬಿಸಿ ಕೋಟಾದೊಳಗೆ 10ಶೇ. ಮೀಸಲಾತಿಯನ್ನು ಕೊಟ್ಟಿತು. ಇದು ಆಗಿನ ಕೇಂದ್ರ ಸರಕಾರ ಈ ಕುರಿತು ನಿರ್ಧಾರ ಕೈಗೊಳ್ಳುವ ಎಷ್ಟೋ ಮೊದಲು.
ಮುಸ್ಲಿಮರಿಗೆ ಅಲ್ಪಸಂಖ್ಯಾತರಾಗಿ ಗಮನವನ್ನು ಎಂದೂ ಅವರ ಸಂಖ್ಯೆಯ ಆಧಾರದಲ್ಲಿ ಕೊಟ್ಟಿರಲಿಲ್ಲ, ಬದಲಿಗೆ, ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನವನ್ನು ಆಧರಿಸಿ ನೀಡಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಹೊಸ ಮಂತ್ರಿಗಳಿಗೆ ಹೇಳಬೇಕಾಗಿದೆ. ಈ ಪರಿಮಾಣಗಳ ಆಧಾರದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ಮತ್ತು ಪಾರ್ಸಿಗಳು ಮಂತಾದ ಇತರ ಅಲ್ಪಸಂಖ್ಯಾತರ ನಡುವೆ ಹೋಲಿಕೆ ಮಾಡುವುದು ಬಹಳ ಕ್ರೂರತನವಾಗುತ್ತದೆ.

ಧ್ರುವೀಕರಣದ ಹೊಲಸು ರೂಪ

   ಹೀಗೆ ಪ್ರಧಾನ ಹಿಂದುತ್ವ ಅಜೆಂಡಾ ಸರಕಾರದ ಧೋರಣೆಗಳ ವಿಷಯಗಳಲ್ಲಿ ಈ ರೀತಿ ಬಿಂಬಿತವಾಗುತ್ತಿರುವಾಗಲೇ, ಅದು ದೇಶದ ವಿವಿಧ ಭಾಗಗಳಲ್ಲಿ ಕೋಮುವಾದಿ ಧ್ರುವೀಕರಣದ ತೀಕ್ಷ್ಣಗೊಳ್ಳುವ ಹೊಲಸು ರೂಪದಲ್ಲೂ ತಲೆ ಎತ್ತುತ್ತಿರುವುದು ಗಂಭೀರ ಆತಂಕದ ಸಂಗತಿ. ಮಾಧ್ಯಮಗಳ ವರದಿಗಳ ಪ್ರಕಾರ ದಿಲ್ಲಿಯಲ್ಲಿ ಮೋದಿ ಸರಕಾರದ ಪ್ರಮಾಣ ವಚನ ಸ್ವೀಕಾರದ ಹಿಂದಿನ ದಿನ, ಭಾನುವಾರ, ಮಂಗಳೂರಿನಲ್ಲಿ ವಿವಿಧ ಹಿಂದುತ್ವ ಸಂಘಟನೆಗಳು ಮತ್ತು ಗುಂಪುಗಳು ಅಂದರೆ ನಮಾಜಿಗೆ ಕರೆ ನೀಡುವ ಅಝಾನ್ ಮೇಲೆ ನಿಷೇಧ ಹೇರಬೇಕು ಎಂದು ಆಗ್ರಹಿಸಿ ಮತಪ್ರದರ್ಶನ ನಡೆಸಿದವು. ಕರ್ನಾಟಕದ ವಿವಿಧ ಭಾಗಗಳಲ್ಲಿ ಈ ಚುನಾವಣೆಗಳ ಫಲಿತಾಂಶಗಳ ನಂತರ ಕೋಮು ಸೆಳೆತಗಳು ಗಂಭೀರಗೊಂಡಿವೆ( TwoCircles.net,  ಮೇ 27, 2014).
ನವದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದಾಗ ಬಿಜಾಪುರದಲ್ಲಿ ಬಿಜೆಪಿಯ ಸಂಭ್ರಮಾಚರಣೆಯ ಮೆರವಣಿಗೆ ನಗರದ ಕೇಂದ್ರಭಾಗದಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಪೂರ್ಣಪ್ರಮಾಣದ ಕೋಮುಗಲಭೆಯಾಗಿ ಮಾರ್ಪಟ್ಟಿತು. ಇದರಿಂದ ಮಾರುಕಟ್ಟೆ ಸೂರೆಗೊಂಡು ಕನಿಷ್ಟ 15 ಮಂದಿಗೆ ಗಾಯಗಳಾದವು. ಸ್ಥಳೀಯ ಟೆಲಿವಿಶನ್ ವಾಹಿನಿಗಳು ಈ ಗಲಭೆಯ ವಿಡಿಯೊ ಚಿತ್ರಗಳನ್ನು ಪ್ರಸಾರ ಮಾಡಿವೆ.
ದಿಲ್ಲಿಯಲ್ಲಿ ಪ್ರಮಾಣ ವಚನದ ಹಿಂದಿನ ದಿನ ಗುಜರಾತಿನ ರಾಜಧಾನಿ ಅಹಮದಾಬಾದಿನ ಗೊಂಪ್ತಿಪುರ ಪ್ರದೇಶದಲ್ಲಿ ಹಿಂದು ಮತ್ತು ಮುಸ್ಲಿಂ ಗುಂಪುಗಳ ನಡುವೆ ತಿಕ್ಕಾಟಗಳು ನಡೆದವು, ಪೋಲೀಸರು ಆಶ್ರುವಾಯು ಪ್ರಯೋಗಿಸಿದರು. ಎರಡು ಸಮುದಾಯಗಳ ನಡುವಿನ ಒಂದು ಸಣ್ಣ ಜಗಳ ಈ ತಿಕ್ಕಾಟಗಳಿಗೆ ಕಾರಣವಾಗಿ ಕೆಲವು ಅಂಗಡಿಗಳು, ಒಂದು ಮಿನಿ ಬಸ್ ಮತ್ತು ಕೆಲವು ದ್ವಿಚಕ್ರ ವಾಹನಗಳನ್ನು ಸುಟ್ಟು ಹಾಕಲಾಯಿತು (ಡಿಎನ್ಎ ಪತ್ರಿಕೆಯಲ್ಲಿ ಎಎಫ್ಪಿ ವರದಿ, ಮೇ27, 2014).
ಆರ್ಥಿಕ ಧೋರಣೆಗಳ ರಂಗದಲ್ಲಿ ನವ-ಉದಾರವಾದಿ ಸುಧಾರಣೆಗಳ ಅಜೆಂಡಾವನ್ನು ಮುಂದುವರೆಸಲು ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಹೊಸ ರಕ್ಷಣಾ ಮಂತ್ರಿಗಳು ರಕ್ಷಣಾ ಉತ್ಪಾದನೆಯಲ್ಲಿ ಎಫ್ಡಿಐ ಮೇಲೆ ಮಿತಿಯನ್ನು ಈಗಿರುವ 26ಶೇ. ಕ್ಕಿಂತ ಮೇಲಕ್ಕೆ ಏರಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ರಕ್ಷಣಾ ಉತ್ಪಾದನೆಯ ರಂಗಕ್ಕೆ ಎಫ್ಡಿಐ ಪ್ರವೇಶಿಲು ಬಿಡಬಾರದು ಎಂಬ ವಿರೋಧವನ್ನು ಬದಿಗೊತ್ತಿ ಎಫ್ಡಿಐ ಗೆ ಮೊದಲು ಅವಕಾಶ ಕೊಟ್ಟದ್ದು ಬಿಜೆಪಿ ನೇತೃತ್ವದ ವಾಜಪೇಯಿ ಸರಕಾರ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.
ಈ ಸರಕಾರದಿಂದ ಹೊಮ್ಮುತ್ತಿರುವ ಆರಂಭದ ಸಂಕೇತಗಳು ಈ ಅಂಕಣದಲ್ಲಿ ಚುನಾವಣಾ ಪ್ರಚಾರದ ವೇಳೆಯಲ್ಲಿ ವ್ಯಕ್ತಪಡಿಸಿದ ಭೀತಿಗಳನ್ನು ಮತ್ತೊಮ್ಮೆ ದೃಢಪಡಿಸುವಂತೆ ಕಾಣುತ್ತದೆ- ಅಂದರೆ, ಒಂದೆಡೆ ಕೋಮುವಾದಿ ಧ್ರುವೀಕರಣ ತೀಕ್ಷ್ಣಗೊಳ್ಳುತ್ತಿರುವುದು, ಮತ್ತು ಇನ್ನೊಂದೆಡೆ ಮತ್ತಷ್ಟು ಉದಾರೀಕರಣದ ಆರ್ಥಿಕ ಸುಧಾರಣೆಗಳ ಜಾರಿಯೊಂದಿಗೆ ಜನತೆಯ ಮೇಲೆ ಮತ್ತಷ್ಟು ಹೊರೆಗಳ ಹೇರಿಕೆ. ಇಂತಹ ದ್ವಿಮುಖ ದಾಳಿಗಳನ್ನು ಎದುರಿಸಲು ನಾವು ಸಿದ್ಧರಾಗಬೇಕಷ್ಟೇ ಅಲ್ಲ, ನಮ್ಮ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ರಕ್ಷಿಸಿಕೊಳ್ಳಲು ಹಾಗೂ ನಮ್ಮ ಜನತೆಯ ಬದುಕಿನ ಗುಣಮಟ್ಟವನ್ನು ಉತ್ತಮಗೊಳಿಸಲು ಭವಿಷ್ಯದಲ್ಲಿ ಬಲಿಷ್ಟ ಹೋರಾಟಗಳಿಗೆ ಸಿದ್ಧತೆಗಳನ್ನು ನಡೆಸಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *