– ಮೋದಿ ಮತ್ತು ಬಿಜೆಪಿಯ ನಿಜವಾದ ಮುಖ, ತಂತ್ರ ಮತ್ತು ಮಂತ್ರ: ಯೆಚುರಿ
ದಿಲ್ಲಿ ಪೋಲೀಸ್ ದಿಲ್ಲಿ ಗಲಭೆಗಳನ್ನು ಕುರಿತಂತೆ ಹಾಕಿರುವ ಪೂರಕ ಆರೋಪ ಪತ್ರದಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸ್ವರಾಜ್ಯ ಅಭಿಯಾನದ ಮುಖ್ಯಸ್ಥರಾದ ಯೋಗೇಂದ್ರ ಯಾದವ್, ಪ್ರಖ್ಯಾತ ಅರ್ಥಶಾಸ್ತ್ರಜ್ಞೆ ಪ್ರೊ. ಜಯತಿ ಘೋಷ್, ದಿಲ್ಲಿ ವಿಶ್ವವಿದ್ಯಾಲಯದ ಪ್ರೊ. ಅಪೂರ್ವಾನಂದ ಮತ್ತು ಪ್ರಖ್ಯಾತ ಡಾಕ್ಯುಮೆಂಟರಿ ತಯಾರಕ ರಾಹುಲ್ ರಾಯ್ ಅವರನ್ನು ಸಹ-ಪಿತೂರಿಗಾರರೆಂದು ಹೆಸರಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸುತ್ತ ಸೀತಾರಾಮ್ ಯೆಚುರಿ ಇದು ಮೋದಿ ಮತ್ತು ಬಿಜೆಪಿಯ ನಿಜವಾದ “ನಡೆ, ಚಾರಿತ್ರ್ಯ, ಮುಖ” (ಚಾಲ್, ಚರಿತ್ರ್, ಚೆಹರಾ)ವನ್ನು ಬಯಲಿಗೆ ತಂದಿದೆ ಎಂದು ವರ್ಣಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಗಲಭೆ: ಆರೋಪ ಪಟ್ಟಿಯಲ್ಲಿ ಸೀತಾರಾಂ ಯೆಚೂರಿ, ಯೋಗೇಂದ್ರ ಯಾದವ್
ದಿಲ್ಲಿ ಪೊಲೀಸ್ ಬಿಜೆಪಿ ಕೇಂದ್ರ ಸರಕಾರ ಮತ್ತು ಗೃಹ ಮಂತ್ರಾಲಯದ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಅದರ ನ್ಯಾಯಬಾಹಿರ, ಕಾನೂನುಬಾಹಿರ ಕ್ರಿಯೆಗಳು ಬಿಜೆಪಿ ಮುಖಂಡತ್ವದ ರಾಜಕೀಯದ ನೇರ ಫಲಿತಾಂಶಗಳು. ಅವರಿಗೆ ಮುಖ್ಯಧಾರೆಯ ರಾಜಕೀಯ ಪಕ್ಷಗಳ ನ್ಯಾಯಪೂರ್ಣ, ಶಾಂತಿಯುತ ಪ್ರತಿಭಟನೆಗಳೆಂದರೆ ಭಯ. ಆದ್ದರಿಂದ ಪ್ರತಿಪಕ್ಷಗಳ ಮೇಲೆ ಗುರಿಯಿಡಲು ಪ್ರಭುತ್ವ ಶಕ್ತಿಯ ದುರುಪಯೋಗ ಮಾಡುತ್ತಿದ್ದಾರೆ ಎಂದು ಯೆಚುರಿ ಟೀಕಿಸಿದ್ದಾರೆ.
ಬಿಜೆಪಿ ಸರಕಾರಕ್ಕೆ ಪ್ರಶ್ನೆಗಳೆಂದರೆ ಭಯ, ಅದು ಸಂಸತ್ತಿನಲ್ಲಿ ಇರಬಹುದು, ಅಥವ ಮಾಹಿತಿ ಹಕ್ಕು ಕಾಯ್ದೆ(ಆರ್.ಟಿ.ಐ.)ಯ ಮೂಲಕ ಮಾಧ್ಯಮಗಳಲ್ಲಿರಬಹುದು. ಪ್ರಧಾನ ಮಂತ್ರಿಗಳಿಗೆ ಪತ್ರಿಕಾ ಗೋಷ್ಠಿ ನಡೆಸಲಾಗಲೀ, ತನ್ನ ಖಾಸಗಿ ನಿಧಿಯ ಬಗ್ಗೆ ಆರ್.ಟಿ.ಐ. ಪ್ರಶ್ನೆಗಳಿಗೆ ಉತ್ತರಿಸಲಾಗಲೀ ಅಥವ ತನ್ನ ಪದವಿ ಪ್ರಮಾಣ ಪತ್ರವನ್ನಾಗಲೀ ತೋರಿಸಲು ಸಾಧ್ಯವಿಲ್ಲ. ಇಂತಹ ಪ್ರಭುತ್ವ ಶಕ್ತಿಯ ನಗ್ನ ದುರುಪಯೋಗದಿಂದ ರಾಜಕೀಯ ವಿರೋಧದ ಬಾಯಿ ಮುಚ್ಚಿಸಬಹುದು ಎಂದು ಅವರು ಯೋಚಿಸಿದಂತಿದೆ. ನಾವು ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದ್ದೇವೆ, ಇದನ್ನೂ ಸೋಲಿಸುತ್ತೇವೆ ಎಂದು ಯೆಚುರಿ ಎಚ್ಚರಿಸಿದ್ದಾರೆ.
ಬಿಜೆಪಿಯ ಕಾನೂನುಬಾಹಿರ ಬೆದರಿಕೆಗಳು ಸಿಎ.ಎ. ಯಂತಹ ತಾರತಮ್ಯದ ಕಾನೂನುಗಳನ್ನು ಜನರು ವಿರೋಧಿಸದಂತೆ ತಡೆಯಲಾರವು. ಭಾರತೀಯರು, ಅವರ ಜಾತಿ, ಮತ, ಬಣ್ಣ, ಪಂಥ, ಪ್ರದೇಶ, ಲಿಂಗ ಮತ್ತು ರಾಜಕೀಯ ಸಂಯೋಜನೆಗಳು ಏನೇ ಇರಲಿ, ಎಲ್ಲರೂ ಸಮಾನರು ಎಂದು ಎತ್ತಿ ಹಿಡಿಯುವುದು ನಮ್ಮ ಹಕ್ಕು ಮಾತ್ರವೇ ಅಲ್ಲ, ನಮ್ಮ ಕರ್ತವ್ಯ ಕೂಡ. ನಾವು ಅದನ್ನು ಖಂಡಿತವಾಗಿಯೂ ಚಲಾಯಿಸುತ್ತೇವೆ.
ದಿಲ್ಲಿಯಲ್ಲಿ 56 ಜನಗಳ ಸಾವಿಗೆ ಕಾರಣವಾದ ಹಿಂಸಾಚಾರವನ್ನು ಪ್ರಚೋದಿಸಿದವರ ದ್ವೇಷ ಭಾಷಣದ ವೀಡಿಯೋಗಳು ಎಲ್ಲರ ಮುಂದಿವೆ. ಜೆಎನ್‍ಯು ನಲ್ಲಿ ಹಿಂಸಾಚಾರೀ ಮಂದೆಗಳಿಗೆ ನೇತೃತ್ವ ನೀಡಿದವರ ವಿಡಿಯೋ ಕೂಡ. ಬಿಜೆಪಿ ಸರಕಾರ ಮತ್ತು ಅದರ ಅಡಿಯಲ್ಲಿರುವ ದಿಲ್ಲಿ ಪೋಲೀಸ್ ಅವನ್ನು ನೋಡಲಾರರು, ಏಕೆಂದರೆ ಅವರು ಪ್ರಜಾಪ್ರಭುತ್ವವನ್ನು ನಾಶಮಾಡಲು ಕಟಿಬದ್ಧರಾಗಿದ್ದಾರೆ, ಯಾವುದೇ ರೀತಿಯಲ್ಲಾದರೂ ವಿರೋಧವನ್ನು ಮೆಟ್ಟಿ ಹಾಕುವ ಆದೇಶಕ್ಕೆ ಒಳಗಾಗಿದ್ದಾರೆ.
ಇದೀಗ ಮೋದಿ ಮತ್ತು ಬಿಜೆಪಿಯ ನಿಜವಾದ ಮುಖ, ತಂತ್ರ ಮತ್ತು ಮಂತ್ರ. ಅದರ ವಿರುದ್ಧ ಪ್ರತಿಭಟನೆಗಳು ನಡೆಯುತ್ತವೆ ಎಂದು ಸೀತಾರಾಮ್ ಯೆಚುರಿ ಹೇಳಿದ್ದಾರೆ.