- ಅಸ್ಸಾಂನಲ್ಲಿ ಬಂಧಿತರಾಗಿದ್ದ ಜೆಎನ್‍ಯು ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್ ಇಮಾಮ್
ನವದೆಹಲಿ: ಸಿಎಎ ವಿರೋಧಿ ಹೋರಾಟದ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿದ ಮತ್ತು ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ಅಸ್ಸಾಂನಲ್ಲಿ ಬಂಧನಕ್ಕೊಳಗಾಗಿರುವ ಜೆಎನ್ಯು ಸಂಶೋಧನಾ ವಿದ್ಯಾರ್ಥಿ ಶಾರ್ಜಿಲ್ ಇಮಾಮ್‌ರನ್ನು ದೆಹಲಿ ಪೊಲೀಸ್ ವಿಶೇಷ ವಿಭಾಗವು ಮಂಗಳವಾರ ಮತ್ತೆ ಬಂಧಿಸಿದೆ.
ಅಸ್ಸಾಂನಿಂದ ದೆಹಲಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಅಲ್ಲದೆ, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆಯ ಕಾಯ್ದೆಯ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಹಿಂದೆ, ಜನವರಿ 28ರಂದು ಸಿಎಎ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಶಾರ್ಜೀಲ್ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿದ್ದ ಪೊಲೀಸರು, ಬಿಹಾರದ ಜಹಾನಾಬಾದ್‌ನಲ್ಲಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಪ್ರಸ್ತುತ, ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಶಾರ್ಜೀಲ್ ಆರೋಪಿಯಾಗಿದ್ದು, ಅಸ್ಸಾಂ ಪೊಲೀಸರು UAPA ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೇಶದ ಹಲವಾರು ಸ್ಥಳಗಳಲ್ಲಿ ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಸಂಶೋಧನಾ ವಿದ್ಯಾರ್ಥಿಯಾದ ಶಾರ್ಜೀಲ್ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ದೆಹಲಿ ಪೊಲೀಸರು ಜುಲೈ 25 ರಂದು ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಸೆಕ್ಷನ್ 124 ಎ (ದೇಶದ್ರೋಹ), 153 (ಎ) (ದ್ವೇಷವನ್ನು ಹರಡುವುದು), 153 (ದ್ವೇಷವನ್ನು ಉತ್ತೇಜಿಸುವುದು, ವಿವಿಧ ಸಮುದಾಯಗಳ ನಡುವೆ ದ್ವೇಷ ಹರಡುವುದು), 505 (ವದಂತಿಗಳನ್ನು ಹರಡುವುದು) ಸೇರಿದಂತೆ ಐಪಿಸಿ ಅಡಿಯಲ್ಲಿ 600 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಹೀಗಾಗಿ ನ್ಯಾಯಾಲಯದ ಎದುರು ಇಂದು ಹಾಜರಾದ ಶಾರ್ಜೀಲ್ ಇಮಾಮ್ ಅವರ ವಕೀಲರು “ಈ ಪ್ರಕರಣದಲ್ಲಿ ಮತ್ತಷ್ಟು ಹೆಚ್ಚಿನ ಬೆಳವಣಿಗೆಗಳು ಸಂಭವಿಸಿವೆ. ನಾವು ನ್ಯಾಯಾಲಯದ ಕಡತಗಳನ್ನು ಪರಿಶೀಲಿಸಬೇಕಾಗಿದೆ. ಆದರೆ, ಲಾಕ್‌ಡೌನ್ ಕಾರಣಗಳಿಂದಾಗಿ ನಾವು ಈ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಹೆಚ್ಚಿನ ಸಮಯವನ್ನು ನೀಡಬೇಕು” ಎಂದು ಮನವಿ ಮಾಡಿದ್ದಾರೆ. ಹೀಗಾಗಿ ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿ ಆದೇಶಿಸಿದೆ.
ಐಐಟಿ ಮುಂಬೈನ ಹಳೆಯ ವಿದ್ಯಾರ್ಥಿ, ಮಾಜಿ ಜನತಾದಳ (ಯುನೈಟೆಡ್) ನಾಯಕರಾಗಿದ್ದ ದಿವಂಗತ ಅಕ್ಬರ್ ಇಮಾಮ್ ಅವರ ಪುತ್ರನಾದ ಶಾರ್ಜೀಲ್ 2017 ರಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಜೆಎನ್‌ಯುನ ಆಧುನಿಕ ಇತಿಹಾಸ ವಿಭಾಗಕ್ಕೆ ಸೇರಿದ್ದರು.