ದಸರಾ ಮೇಲೆ ಕೊರೊನಾ ಕರಿನೆರಳು

  • ಕೇಂದ್ರದ ಮಾರ್ಗಸೂಚಿ ಮೇಲೆ ನಿರ್ಧಾರ  ಅದ್ಧೂರಿ ಬದಲು ಸರಳ ಸಾಂಪ್ರದಾಯಿಕ ದಸರಾ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ ಅದ್ಧೂರಿಯಾಗಿ ನಡೆಯುವುದು ಅನುಮಾನವಾಗಿದೆ.

ಆಗಸ್ಟ್ ಬಂತೆಂದರೆ ವಿಶ್ವವಿಖ್ಯಾತ ಮೈಸೂರು ದಸರಾ ಬಗ್ಗೆ ಚರ್ಚೆ ಆರಂಭವಾಗಿ, ಮೈಸೂರು ಅರಮನೆ ಅಂಗಳಕ್ಕೆ ಆನೆಗಳು ಹೆಜ್ಜೆ ಇಡಬೇಕಿತ್ತು. ಆದ್ರೆ ಈ ಬಾರಿ ಕೊರೋನಾದಿಂದಾಗಿ ಮೈಸೂರು ದಸರಾ ಆಚರಣೆ ಬಗ್ಗೆ  ಒಂದೇ ಒಂದು ಚರ್ಚೆಯೂ ಆರಂಭವಾಗಿಲ್ಲ. ದಸರಾ ನಡೆಯುವ ಮೈಸೂರು ಜಿಲ್ಲೆಯ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಮುದಾಯಕ್ಕೆ ಹರಡುವ ಭೀತಿ ಇರುವುದರಿಂದ ನಾಡಹಬ್ಬ ಅದ್ಧೂರಿಯಾಗಿ ನಡೆಸುವ ಬದಲು ಸರಳವಾಗಿ ಸಾಂಪ್ರದಾಯಿಕವಾಗಿ ನಡೆಯುವ ಸಾಧ್ಯತೆ ಇದೆ.

ದಸರಾ ನಡೆಯಲು ಇನ್ನು 70 ದಿನಗಳು ಮಾತ್ರ ಬಾಕಿ ಇವೆ. ಮುಖ್ಯವಾಗಿ ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯಲು 4 ತಿಂಗಳ ಮುಂಚೆಯೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಬೇಕಿತ್ತು.

ಈ ಸಮಯಕ್ಕೆ ಹೈಪವರ್ ಕಮಿಟಿ ಮೀಟಿಂಗ್ ನಡೆಯಬೇಕಿತ್ತು. ಜೊತೆಗೆ ಈ ಬಾರಿಯ ದಸರಾಗೆ ಎಷ್ಟು ಅನುದಾನ ಬೇಕು ಅನ್ನೋ ಬಗ್ಗೆ ಆರ್ಥಿಕವಾಗಿ ಅನುಮತಿ ಪಡೆಯಬೇಕಿತ್ತು.  ಆದರೆ ಇದುವರೆಗೂ ಆ ಯಾವುದೇ ಸಿದ್ಧತೆಗಳು ಆರಂಭವಾಗಿಲ್ಲ. ಈ ಬಗ್ಗೆ ಸ್ವತಃ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳೇ ಈ ಬಾರಿ ದಸರಾದ ಬಗ್ಗೆ ಪೂರ್ವ ಸಿದ್ಧತಾ ಸಭೆ ನಡೆದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಈ ಬಾರಿ ದಸರಾ ಅದ್ಧೂರಿ ಬದಲಿಗೆ ಸಾಂಪ್ರದಾಯಿಕವಾಗಿ ಮಾತ್ರ ನಡೆಯಲಿದೆ.

 

  ಮೈಸೂರು ದಸರಾ ಬಗ್ಗೆ ಚಿಂತನೆ ನಡೆಸಿಲ್ಲ

ಎಸ್.ಟಿ.ಸೋಮಶೇಖರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು

ಮೈಸೂರು ದಸರಾ ನಡೆಯುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಈಗ ಮೈಸೂರಿನಲ್ಲೂ ಕೊರೊನಾ ಸೋಂಕು ಹರಡುವಿಕೆ ಮತ್ತು ಕೋವಿಡ್ ಸಾವು ಹೆಚ್ಚಾಗಿದೆ. ಕೊರೊನಾ ನಿಯಂತ್ರಣ ಹಾಗೂ ಅತಿವೃಷ್ಟಿ ಪರಿಸ್ಥಿತಿ ಬಗ್ಗೆಯೇ ಹೆಚ್ಚು ಚರ್ಚೆ ನಡೆಸಿದ್ದೇವೆ. ಮೊದಲು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದು ಹೇಳಿದರು.

ಬಾರಿಯ  ಮೈಸೂರು ದಸರಾ ಮಹೋತ್ಸವದ ಆಚರಣೆ ಹಾಗೂ ತಲಕಾಡು ಪಂಚಲಿಂಗ ದರ್ಶನದ ಬಗ್ಗೆ ಇದುವರೆಗೂ ಚರ್ಚೆಯಾಗಿಲ್ಲ. ಸಿಎಂ ಆಸ್ಪತ್ರೆಯಲ್ಲಿದ್ದ ಹಿನ್ನೆಲೆಯಲ್ಲಿ ಅವರ ಗಮನಕ್ಕೂ ತಂದಿಲ್ಲ.  ಆಗಸ್ಟ್ 20 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಬಗ್ಗೆ  ಪ್ರಸ್ತಾಪಿಸುತ್ತೇನೆ. ಕಬಿನಿ ಮತ್ತು ಕೆಆರ್ಎಸ್ಗೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಅವರೇ ಮೈಸೂರಿಗೆ ಬರಲಿದ್ದಾರೆ. ಆಗ ಅವರೇ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಎಸ್.ಟಿ.ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವರು

ಗಜ ಪಯಣ ಅನುಮಾನ

ಪ್ರತಿ ವರ್ಷವೂ ದಸರಾದಲ್ಲಿ ಪಾಲ್ಗೊಳ್ಳುವ 15 ಆನೆಗಳನ್ನು 3 ತಿಂಗಳ ಮೊದಲೇ ವಿವಿಧ ಕಾಡಿನ ಶಿಬಿರಕ್ಕೆ ಹೋಗಿ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಆಯ್ಕೆ ಮಾಡಬೇಕಿತ್ತು. ಆಗಸ್ಟ್ ತಿಂಗಳಿನಲ್ಲಿ ಈ ಆನೆಗಳನ್ನು ಮೈಸೂರು ಅರಮನೆಗೆ ಕರೆ ತರುವ ಗಜಪಯಣ ನಡೆಯಬೇಕಿತ್ತು. ಆದರೆ ಆಗಸ್ಟ್ ಅರ್ಧ ಮುಗಿದರೂ ಅಂತಹ ಯಾವ ಸಿದ್ಧತೆಗಳೂ ನಡೆದಿಲ್ಲ.

ಈ ಬಗ್ಗೆ ಡಿಸಿಎಫ್ ಅಲೆಕ್ಸಾಂಡರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ದಸರಾಗೆ ಆನೆಗಳ ಆಯ್ಕೆ, ಗಜಪಯಣ ಮತ್ತಿತರ ಸಂಬಂಧಿಸಿದ ಕಾರ್ಯಗಳನ್ನು ನಡೆಸಲು ಸರ್ಕಾರದಿಂದ ಯಾವುದೇ ನಿರ್ದೇಶನ ಇನ್ನೂ ಬಂದಿಲ್ಲ. ಆದ್ದರಿಂದ ಆನೆಗಳ ಆಯ್ಕೆ ಗಜಪಯಣ ಇವುಗಳ ಬಗ್ಗೆ ಇಲ್ಲಿಯವರೆಗೆ ಯಾವುದೇ ಸಿದ್ಧತೆ ನಡೆಸಿಲ್ಲ ಎಂದು ಹೇಳಿದ್ದಾರೆ.

ಕೇಂದ್ರದ ಮಾರ್ಗಸೂಚಿ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ

ಈ ಬಾರಿ ದಸರಾ ಆಚರಣೆಗಾಗಿ ಕೇಂದ್ರದ ಮಾರ್ಗಸೂಚಿಗೆ ಕಾಯಲಾಗುತ್ತಿದೆ ಎಂಬ ಮಾಹಿತಿ ಇದೆ. ದಸರಾ ಆಖ್ಟೋಬರ್‍ಗೆ ನಡೆಯಲಿದ್ದು, ಸೆಪ್ಟಂಬರ್ ಮತ್ತು ಆಕ್ಟೋಬರ್ ಮೊದಲ ವಾರದಲ್ಲಿ ಕೇಂದ್ರವು ಕೊರೊನಾ ಮಾರ್ಗಸೂಚಿ ಹೊರಡಿಸುತ್ತದೆ. ಕೇಂದ್ರ ಸರ್ಕಾರ ಈವರೆಗೆ ಚಿತ್ರಮಂದಿರ, ಸಭೆ ಸಮಾರಂಭ, ವೇದಿಕೆ ಕಾರ್ಯಕ್ರಮಗಳಿಗೆ ಇನ್ನೂ ಅನುಮತಿ ನೀಡಿಲ್ಲ. ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಂದು ಹಂತದ ಅನ್ಲಾಕ್ ವ್ಯವಸ್ಥೆ ಜಾರಿ ಮಾಡಲಿದೆ. ಈ ವೇಳೆ ಅನ್ಲಾಕ್ ಮಾರ್ಗಸೂಚಿಯಲ್ಲಿ ಕೊರೋನಾ ನಿಯಮಗಳು ಮತ್ತಷ್ಟು ಸಡಿಲಗೊಳ್ಳಲಿರುವ ಸಾಧ್ಯತೆ ಇದೆ. ಶಾಲಾ ಕಾಲೇಜು, ಸಭೆ ಸಮಾರಂಭ, ಚಿತ್ರಮಂದಿರ ಹಾಗೂ ಇತರೆ ಜನಸಂದಣಿ ಪ್ರದೇಶಗಳ ಮೇಲೆ ಇರುವ ನಿಷೇಧ ತೆರವಾಗುವ ನಿರೀಕ್ಷೆ ಇದೆ. ಅಲ್ಲದೆ ವಿದೇಶಗಳಲ್ಲಿ ಕೊರೋನಾ ವ್ಯಾಕ್ಸಿನ್ ಸಹ ಸಿಕ್ಕಿರುವುದರಿಂದ ದಸರಾ ವೇಳೆಗೆ ದೇಶದಲ್ಲೂ ವ್ಯಾಕ್ಸಿನ್ ಬಳಕೆಗೆ ಸಿಗುವ ವಿಶ್ವಾಸ ಇದೆ. ಇದೆ ಕಾರಣದಿಂದ ದಸರಾ ಆಚರಣೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗೆ ಕಾಯುತ್ತಿರುವ ರಾಜ್ಯ ಸರ್ಕಾರ ಮೈಸೂರು ಜಿಲ್ಲಾಡಳಿತದಿಂದಲೂ ವರದಿ ಪಡೆದಿದೆ. ಇದೆ ಕಾರಣಕ್ಕೆ ದಸರಾ ಬಗ್ಗೆ ವಿಳಂಬವಾಗಿದೆ ಎನ್ನಲಾಗುತ್ತಿದೆ.

ದಸರಾ ಹೈಪವರ್ ಕಮಿಟಿಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರು. ವಿಧಾನ ಸೌಧದಲ್ಲಿ ಪ್ರತಿ ವರ್ಷ ದಸರಾದ ಮೂರು ತಿಂಗಳ ಮುನ್ನವೇ ನಡೆಸುವ ಹೈಪವರ್ ಕಮಿಟಿ ಮೀಟಿಂಗ್ ಈ ಬಾರಿ ನಡೆಸಿಲ್ಲ.   ದಸರಾ ಅನುದಾನ, ಕಾರ್ಯಕ್ರಮ ವಿವರ, ಆನೆಗಳ ಆಯ್ಕೆ ಬಗ್ಗೆ ಅಲ್ಲದೇ ಪ್ರಮುಖ ನಿರ್ಧಾರವಾದ ದಸರಾ ಉದ್ಘಾಟಕರ ಆಯ್ಕೆಯೂ ಹೈಪವರ್ ಕಮಿಟಿಯಲ್ಲೇ ಆಗುವುದು ಹೈಪವರ್ ಕಮಿಟಿ ಮೀಟಿಂಗ್ ನಂತರವೇ ದಸರಾದ ರೂಪುರೇಷೆಗಳು ಸಿದ್ಧವಾಗಲಿದೆ. ಹಾಗಾಗಿ ಕೇಂದ್ರ ಹೊರಡಿಸುವ ಮಾರ್ಗಸೂಚಿಗಳನ್ನು ನೋಡಿಕೊಂಡು ಹೈಪವರ್ ಕಮಿಟಿ ಮೀಟಿಂಗ್ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

Donate Janashakthi Media

Leave a Reply

Your email address will not be published. Required fields are marked *