- ನಿವೇಶನ ಸಂಬಂಧ ವಿವಾದ
- ಜನಪ್ರತಿನಿಧಿಗಳ ಮೌನಕ್ಕೆ ಖಂಡನೆ
ಕೋಲಾರ : ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತಲ್ಲಿದ್ದು ಕಳೆದ ವಾರ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೂದಿಗಾಳ್ ಗ್ರಾಮದ ದಲಿತ ಯುವಕ ಮೇಲ್ಜಾತಿಯ ಯುವಕರ ಸಮನಾಗಿ ಕುಳಿತರು ಎಂಬ ಕಾರಣಕ್ಕೆ ದಲಿತ ಯುವಕನ ಹತ್ಯೆ ಮಾಡಿದ ಪ್ರಕರಣ ಇನ್ನೂ ಮಾಸಿಲ್ಲ. ಇದರ ನಡುವೆಯೇ ಮತ್ತೊಂದು ದಲಿತ ದೌರ್ಜನ್ಯ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಕಸಿರೆಡ್ಡಿ ಗಾಂಡ್ಲಹಳ್ಳಿ ಗ್ರಾಮದಲ್ಲಿ ಕಳೆದ ಶನಿವಾರ ದಲಿತ ಸಮುದಾಯಕ್ಕೆ ಸೇರಿದ (ಮಾದಿಗ) ಶಿವರಾಮಪ್ಪ ಮತ್ತು ಕುಟುಂಬದವರು ಮೇಲೆ ದೌರ್ಜನ್ಯ ನಡೆಸಿದ್ದಾಗಿ ವರದಿಯಾಗಿದೆ.
ಶಿವರಾಮಪ್ಪ ತಮ್ಮ ಜಮೀನಿನಲ್ಲಿ ಕಲ್ಲು ಚಪ್ಪಡಿಗಳನ್ನು ನೆಟ್ಟು ಕಾಂಪೌಂಡ್ ನಿರ್ಮಿಸುತ್ತಿರುವ ಸಂದರ್ಭದಲ್ಲಿ ಮಂಜುನಾಥ ರೆಡ್ಡಿ ಮತ್ತು ಚಂದ್ರಾರೆಡ್ಡಿ ಎಂಬುವರು ವಿನಾಕಾರಣ ಶಿವರಾಮಪ್ಪನೊಂದಿಗೆ ಜಗಳಕ್ಕಿಳಿದು ಮಾರಣಾಂತಿಕ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ.
ಶಿವರಾಮಪ್ಪನ ಸಹೋದರರು ಕೆಜಿಎಫ್ ನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಈ ಕುರಿತು ದೂರು ನೀಡಲು ಪೋಲಿಸ್ ಠಾಣೆಗೆ ಹೋದಾಗ ಅಲ್ಲಿನ ಸಬ್ ಇನ್ಸ್ಪೆಕ್ಟರ್ ಮುನಿಯಪ್ಪ ಬೇಜವಾಬ್ದಾರಿಯಿಂದ ವರ್ತಿಸಿ ದೂರು ನೀಡಲು ಹೋದವರ ಮೇಲೆಯೇ ಕೇಸ್ ಹಾಕುವುದಾಗಿ ಹೆದರಿಸಿ ಕಳುಹಿಸಿದ್ದು ಕನಿಷ್ಠ ಆಸ್ಪತ್ರೆಗೆ ಹೋಗಿ ಹಲ್ಲೆಗೊಳಗಾದ ಶಿವರಾಮಪ್ಪನ ಹೇಳಿಕೆಯನ್ನು ಕೂಡ ಪಡೆದುಕೊಂಡಿಲ್ಲ.
ಈ ಎಲ್ಲ ಬೆಳವಣಿಗೆಗಳ ನಂತರ ದಲಿತ ಸಂಘಟನೆಗಳ ಮುಖಂಡರು ಸ್ಟೇಶನ್ ಗೆ ಭೇಟಿ ನೀಡಿ ಉನ್ನತ ಪೋಲಿಸ್ ಅಧಿಕಾರಿಗಳೊಂದಿಗೆ ಮಾತನಾಡಿದಾಗ ಒತ್ತಡಕ್ಕೆ ಮಣಿದು ಸಬ್ ಇನ್ಸ್ಪೆಕ್ಟರ್ ಮುನಿಯಪ್ಪ ಆಸ್ಪತ್ರೆಗೆ ಹೋಗಿ ಶಿವರಾಮಪ್ಪನ ಹೇಳಿಕೆ ಪಡೆದು ರಾತ್ರಿ 10 ಗಂಟೆಗೆ ದೂರು ದಾಖಲಿಸಿಕೊಂಡಿದ್ದಾರೆ.
ದೂರು ದಾಖಲಿಸಿಕೊಂಡು ಒಂದು ವಾರವಾದರೂ ಇದುವರೆಗೂ ಪೋಲಿಸರು ಯಾವೋಬ್ಬ ಆರೋಪಿಯನ್ನೂ ಬಂಧಿಸದೆ ಮೃದು ಧೋರಣೆ ಅನುಸುತ್ತಿದ್ದಾರೆ. ಅಲ್ಲದೇ ಕೇಂದ್ರ ವಲಯದ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಅವರು ಕೆಜಿಎಫ್ ಗೆ ಭೇಟಿ ನೀಡಿದಾಗಲೂ ದಲಿತರ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸುವ ಕುರಿತು ತುಟಿ ಬಿಚ್ಚಲಿಲ್ಲ. ಒಟ್ಟಿನಲ್ಲಿ ಪೋಲಿಸರು ಆರೋಪಿಗಳ ಪರವಾಗಿ ನಿಂತ್ತಿರುವುದು ಸ್ಪಷ್ಟವಾಗಿದೆ ಎಂದು ದಲಿತ ಹಕ್ಕುಗಳ ಸಮಿತಿ ಆರೋಪ ಮಾಡಿದೆ.
ಕೋಲಾರ ಲೋಕಸಭಾ ಮತ್ತು ಕೆಜಿಎಫ್ ವಿಧಾನ ಸಭಾ ಕ್ಷೇತ್ರ ಎರಡೂ ಸಹ ಮೀಸಲು ಕ್ಷೇತ್ರಗಳಾಗಿದ್ದು ಮೀಸಲಾತಿಯಿಂದ ಗೆದ್ದು ಸಂಸದರಾಗಿರುವ ಬಿಜೆಪಿಯ ಎಸ್. ಮುನಿಸ್ವಾಮಿ ಮತ್ತು ಶಾಸಕರಾಗಿರುವ ಕಾಂಗ್ರೆಸ್ ನ ರೂಪಕಲಾ ಶಶಿಧರ್ ಅವರು ದೌರ್ಜನ್ಯ ನಡೆದ ಗ್ರಾಮಕ್ಕೆ ಭೇಟಿ ನೀಡಿ, ದಲಿತ ಕುಟುಂಬಕ್ಕೆ ಧೈರ್ಯ ತುಂಬುವ ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸದೆ ಜಾಣ ಕುರುಡು ಮತ್ತು ಕಿವುಡರಾಗಿದ್ದಾರೆ.
ಕೂಡಲೇ ಪೋಲಿಸರು ಆರೋಪಿಗಳನ್ನು ಬಂಧಿಸಬೇಕು ಮತ್ತು ದೂರು ದಾಖಲಿಸಲು ವಿಳಂಬ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿರುವ ಸಬ್ ಇನ್ಸ್ಪೆಕ್ಟರ್ ಮುನಿಯಪ್ಪ ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು, ಇಲ್ಲವಾದರೆ ಮುಂದಿನ ಸೆಪ್ಟೆಂಬರ್ 7 ಸೋಮವಾರ ಕೆಜಿಎಫ್ ಎಸ್ ಪಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ದಲಿತ ಹಕ್ಕುಗಳ ಸಮಿತಿ ರಾಜ್ಯಸಮಿತಿ ಸದಸ್ಯ ವಿ.ಅಂಬರೀಶ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.