ಬೆಂಗಳೂರು: ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ಹಾಗೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರದ್ದುಪಡಿಸಲು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಡಿಹೆಚ್ಎಸ್ ಹಾಗೂ ಇತರೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಈ ವೇಳೆ ಮಾತನಾಡಿದ DHS ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ, ದಲಿತ ಭೂಮಿ ಕಿತ್ತುಕೊಳ್ಳುವ ಭೂ ಸುಧಾರಣಾ ತಿದ್ದುಪಡಿ ಕಾಯಿದೆ ವಾಪಸ್ಸಾಗಬೇಕು. ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಕಾಯಿದೆಯನ್ನು ಕಠಿಣವಾಗಿ ಜಾರಿಮಾಡಬೇಕು. ಜಿಲ್ಲೆಗೊಂದು ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಪ್ರತಿ ಕುಟುಂಬಕ್ಕೆ 5ಎಕರೆ ಭೂಮಿ ನೀಡಬೇಕು. ಪ್ರತಿ ಕುಟುಂಬಕ್ಕೆ ಕೊವಿಡ್ ಪರಿಹಾರವಾಗಿ 7500 ರೂ.ನೀಡಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಾಲಾತಿ ಜಾರಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ನಡೆದ ಹೋರಾಟದಲ್ಲಿ DHS ರಾಜ್ಯ ಸಮಿತಿ ಸದಸ್ಯರಾದ ಎನ್.ರಾಜಣ್ಣ, ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಅಧ್ಯಕ್ಷ ಮೋಹನ್ ರಾಜ್, ಸಿಐಟಿಯು ಮುಖಂಡರಾದ ಪ್ರತಾಪ್ ಸಿಂಹ, ರಾಜ್ಯ ಸಮಿತಿ ಸದಸ್ಯೆ ವನಜ, DHS ಜಿಲ್ಲಾ ಮುಖಂಡರಾದ ಮಹಾದೇವ ಕುಮಾರ್ ಭಾಗವಹಿಸಿದ್ದರು.
ಇದೇ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಸನ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಕಲಬುರ್ಗಿ, ದಾವಣಗೆರೆ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆದಿವೆ.