– ದಂಡ ಕಟ್ಟದಿದ್ದಲ್ಲಿ ಸಾಮಾಜಿಕ ಬಹಿಷ್ಕಾರದ ಎಚ್ಚರಿಕೆ
ಚಾಮರಾಜನಗರ: ದಲಿತ ಸಮುದಾಯದ ಪರ ಸಾಕ್ಷಿ ಹೇಳಿದ್ದಕ್ಕೆ ಗ್ರಾಮಸ್ಥರು ಬಿಲ್ ಕಲೆಕ್ಟರ್ ಗೆ ಮೂರು ಲಕ್ಷ ರೂಪಾಯಿ ದಂಡ ವಿಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆ ಯಳಂದೂರು ತಾಲುಕು ಗುಂಬಳ್ಳಿಯಲ್ಲಿ ನಡೆದಿದೆ.
ಒಂದು ವಾರದೊಳಗೆ ದಂಡದ ಅರ್ಧದಷ್ಟು ಹಣವನ್ನು ಪಾವತಿಸಬೇಕು. ಇಲ್ಲದಿದ್ದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಗುಂಬಳ್ಳಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಗುಂಬಳ್ಳಿ ಗ್ರಾಮದ ಅರುಣಮಾರಮ್ಮ ದೇವಾಲಯದ ಮೇಲಿನ ಹಕ್ಕು ಬಾಧ್ಯತೆ ವಿಚಾರವಾಗಿ ಜುಲೈ 27 ರಂದು ಎರಡು ಸಮುದಾಯಗಳ ನಡುವೆ ನಡುವೆ ಗಲಾಟೆ ಘರ್ಷಣೆ ನಡೆದಿತ್ತು. ಯಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎರಡೂ ಸಮುದಾಯದ ಮುಖಂಡರನ್ನು ಬಂಧಿಸಿದ್ದರು.
ಕೆಲದಿನಗಳ ನಂತರ ಇವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಆದರೆ ಮುಸುಕಿನ ಗುದ್ದಾಟ ಮುಂದುವರಿದಿತ್ತು. ಈ ಹಿನ್ನಲೆಯಲ್ಲಿ ಅಕ್ಟೋಬರ್ 20 ರಂದು ಕೊಳ್ಳೇಗಾಲ ಉಪವಿಭಾಗಾಧಿಕಾರಿ ಹಾಗೂ ತಾಲೂಕು ಮಟ್ಟದ ಅಧಿಕಾರಗಳ ಸಮಕ್ಷಮದಲ್ಲಿ ಶಾಂತಿ ಸಭೆ ನಡೆಸಲಾಗಿತ್ತು.
ಈ ಸಭೆಯಲ್ಲಿ ಅರುಣಮಾರಮ್ಮ ದೇವಾಲಯಕ್ಕೆ ಸಂಬಂಧಿಸಿದಂತೆ ಎರಡೂ ಸಮುದಾಯದವರಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ಗ್ರಾಮಪಂಚಾಯ್ತಿ ಪಿಡಿಓ, ಬಿಲ್ ಕಲೆಕ್ಟರ್ ಅವರಿಂದಲು ಸಹ ಹೇಳಿಕೆ ಪಡೆಯಲಾಗಿತ್ತು. ಈ ವೇಳೆ ಗುಂಬಳ್ಳಿ ಗ್ರಾಮದವರೇ ಆದ ಬಿಲ್ ಕಲೆಕ್ಟರ್ ಕೃಷ್ಣನಾಯಕ ಹೇಳಿಕೆ ನೀಡಿ, ಅರುಣಮಾರಮ್ಮ ದೇವಾಲಯದಲ್ಲಿ ಹಿಂದಿನಿಂದಲೂ ದಲಿತರೆ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ದಲಿತರ ಪರ ಸಾಕ್ಷಿ ಹೇಳಿದ್ದರು.
ಇದರಿಂದ ಕುಪಿತಗೊಂಡ ಕೃಷ್ಣನಾಯಕ ಸಮುದಾಯದವರು ನವೆಂಬರ್ 16 ರಂದು ಗ್ರಾಮದಲ್ಲಿ ನ್ಯಾಯಪಂಚಾಯ್ತಿ ನಡೆಸಿ ಈಗಾಗಲೇ ಗಲಾಟೆ ಘರ್ಷಣೆ ನಡೆದು ನಾವು ಕೋರ್ಟು ಕಚೇರಿ ಅಲೆಯುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಪರ ಹೇಳಿಕೆ ನೀಡದೆ ದಲಿತ ಪರ ಹೇಳಿಕೆ ನೀಡಿರುವುದು ತಪ್ಪು ಎಂದು ತೀರ್ಮಾನಿಸಿ ಕೃಷ್ಣನಾಯಕನಿಗೆ ಮೂರು ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಆದರೆ ದಂಡ ಕಟ್ಟಲು ಕೃಷ್ಣನಾಯಕ ನಿರಾಕರಿಸಿದ್ದಾರೆ.
ಈ ಬಗ್ಗೆ ನವೆಂಬರ್ 5 ರಂದು ಮತ್ತೆ ನ್ಯಾಯಪಂಚಾಯ್ತಿ ನಡೆಸಿದ ಗ್ರಾಮಸ್ಥರು ಕೃಷ್ಣನಾಯಕನ ತಂದೆ ರಂಗಣ್ಣನಾಯಕನನ್ನು ಕರೆಸಿ ದಂಡ ಕಟ್ಟುವಂತೆ ಮತ್ತೆ ಒತ್ತಾಯ ಮಾಡಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ನಮ್ಮ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಕೃಷ್ಣನಾಯಕ ಆರೋಪಿಸಿದ್ದಾರೆ.
ಕುಲಸ್ಥರು ವಿಧಿಸಿರುವ ಮೂರು ಲಕ್ಷ ರೂಪಾಯಿ ದಂಡವನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಈ ದಂಡವನ್ನು ರದ್ದುಪಡಿಸಿ ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಕೃಷ್ಣನಾಯಕ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.