ಸ್ಟಾಪ್ ಲಾಗ್ ಗೇಟ್ ನಾಳೆಗೆ ದುರಸ್ಥಿ ಮಾಡಿ, ನಾನೇ 50 ಸಾವಿರ ರೂ. ಕೊಡುತ್ತೇನೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ತುಂಗಾಭದ್ರ ಜಲಾಶಯದ ಸಿಬ್ಬಂದಿಗೆ ಹುರಿದುಂಬಿಸಿದ್ದಾರೆ.
ತುಂಗಭದ್ರಾ ಜಲಾಶಯ ಸ್ಟಾಪ್ಲಾಗ್ ಗೇಟ್ ಅಳವಡಿಸುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಮೀರ್ ಅಹ್ಮದ್ ಸಿಬ್ಬಂದಿ ಜೊತೆ ಮಾತನಾಡಿ ಧೈರ್ಯ ತುಂಬಿದರು.
ಧೈರ್ಯ ಕಳೆದುಕೊಳ್ಳದೇ ಕೆಲಸ ಮಾಡಿ. ನಾಳೆ ಗೇಟ್ ಕೂಡಿಸಿ ಕಾರ್ಯ ಯಶಸ್ವಿ ಮಾಡಿ. ನನ್ನ ಕಡೆಯಿಂದ ಪ್ರತಿ ಕಾರ್ಮಿಕನಿಗೆ 50 ಸಾವಿರ ರೂ. ಕೊಡುತ್ತೇನೆ ಎಂದು ಕನ್ನಯ್ಯ ಮತ್ತು ತಂಡದ ಸದಸ್ಯರಿಗೆ ಅವರು ಹೇಳಿದರು.
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ 5 ದಿನಗಳಾಗಿದೆ. ಅದರ ಜಾಗದಲ್ಲಿ ಗುರುವಾರ ತಾತ್ಕಾಲಿಕ ಗೇಟ್ ಕೂರಿಸುವ ಪ್ರಯತ್ನ ಫಲ ಕೊಡಲಿಲ್ಲ. ಗೇಟ್ ಎಲಿಮೆಂಟ್ನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಶುಕ್ರವಾರ ಮತ್ತೊಮ್ಮೆ ಪ್ರಯತ್ನ ನಡೆಸಲಾಗುತ್ತದೆ. ಮೊದಲ ಎಲಿಮೆಂಟ್ ಅಳವಡಿಕೆ ಯಶಸ್ವಿಯಾದಲ್ಲಿ 25 ಟಿಎಂಸಿ ನೀರು ಜಲಾಶಯದಿಂದ ಹೊರಹೋಗುವುದನ್ನು ತಪ್ಪಿಸಿದಂತಾಗುತ್ತದೆ. ಮೊನ್ನೆಯವರೆಗೂ 25 ಸಾವಿರ ಕ್ಯೂಸೆಕ್ಗಿಂತ ಕಡಿಮೆ ಇದ್ದ ಒಳಹರಿವು ನಿನ್ನೆಯಿಂದ 35 ಸಾವಿರ ಕ್ಯೂಸೆಕ್ಗೆ ಹೆಚ್ಚಿದೆ. ಇದರಿಂದ ಸಿಬ್ಬಂದಿಗೆ ಗೇಟ್ ದುರಸ್ಥಿ ಕಾರ್ಯಕ್ಕೆ ಅಡ್ಡಿಯುಂಟಾಗುತ್ತಿದೆ.