– ಅಕ್ಟೋಬರ್ 2ರಿಂದ ಬಿಜೆಪಿ ರಾಜಕೀಯ ಮುಖಂಡರ ಸಾಮಾಜಿಕ ಬಹಿಷ್ಕಾರ
– ಹಲವು ರಾಜ್ಯಗಳಲ್ಲಿ ಸರದಿ ಉಪವಾಸ ಮುಷ್ಕರಗಳು
– ಅಕ್ಟೋಬರ್ 14ರಂದು “ಎಂಎಸ್‍ಪಿ ಅಧಿಕಾರ ದಿನಾಚರಣೆ” -ಎಐಕೆಎಸ್‍ಸಿಸಿ ಕರೆ
ಕೃಷಿ ಸುಧಾರಣೆಗಳ ಹೆಸರಿನಲ್ಲಿ ತಂದಿರುವ ತಿದ್ದುಪಡಿಗಳ ವಿರುದ್ಧ ಪ್ರತಿರೋಧವನ್ನು ತೀವ್ರಗೊಳಿಸಲು ರೈತರ 250ಕ್ಕೂ ಹೆಚ್ಚು ಸಂಘಟನೆಗಳು ನಿರ್ಧರಿಸಿವೆ. ಮೋದಿ ಸರಕಾರ ಈ ರೈತ-ವಿರೋಧಿ ಆಕ್ರಮಣಗಳನ್ನು ಹಿಂತೆಗೆದುಕೊಳ್ಳುವ ವರೆಗೆ ಈ ಪ್ರತಿರೋಧ ನಿಲ್ಲುವುದಿಲ್ಲ ಎಂದು ಅವರು ನಿರ್ಧರಿಸಿದ್ದಾರೆ.
ಸೆಪ್ಟಂಬರ್ 29ರಂದು ಒಂದು ಪ್ರತಿಕಾಗೋಷ್ಠಿಯಲ್ಲಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ(ಎಐಕೆಎಸ್‍ಸಿಸಿ) ಈ ಕುರಿತ ಒಂದು ಪ್ರತಿರೋಧ ಕಾರ್ಯಾಚರಣೆ ಯೋಜನೆಯನ್ನು ಪ್ರಕಟಿಸಿದೆ. ಈ ಕಾರ್ಯಾಚರಣೆಯ ಕೊನೆಯಲ್ಲಿ ನವಂಬರ್ 26 ಮತ್ತು 27ರಂದು ‘ದಿಲ್ಲಿ ಚಲೋ’ ನಡೆಸಲಾಗುವುದು ಎಂದು ಅದು ಹೇಳಿದೆ.
ಅಕ್ಟೋಬರ್ 2ರಂದು, ಗಾಂಧಿ ಜಯಂತಿಯ ದಿನದಂದು ಬಿಜೆಪಿಯ ರಾಜಕೀಯ ಮುಖಂಡರ ಮತ್ತು ಜತೆಗೆ ಇದುವರೆಗೆ ಈ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಿರದ ರಾಜಕೀಯ ಪಕ್ಷಗಳ ಮುಖಂಡರ ಸಾಮಾಜಿಕ ಬಹಿಷ್ಕಾರದ ಪ್ರತಿಜ್ಞೆಯನ್ನು ದೇಶಾದ್ಯಂತ ರೈತರು ಕೈಗೊಳ್ಳಲಿದ್ದಾರೆ. ಅಂದು ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಸರದಿ ಉಪವಾಸ ಸತ್ಯಾಗ್ರಹವೂ ನಡೆಯಲಿದೆ.
ಪಂಜಾಬಿನಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ರೈಲ್ ರೋಕೋವನ್ನು ಮುಂದುವರೆಸಿದೆ. ಅಕ್ಟೋಬರ್ 1ರಿಂದ ಇತರ ಸಂಘಟನೆಗಳೂ ಇದರಲ್ಲಿ ಸೇರಿಕೊಳ್ಳುತ್ತವೆ ಎನ್ನಲಾಗಿದೆ.
ಹರ್ಯಾಣದಲ್ಲಿ ಬಿಜೆಪಿಯೊಂದಿಗೆ ಸರಕಾರದಲ್ಲಿರುವ ಜೆಜೆಪಿಯ ಮೇಲೆ ರೈತರ ಒತ್ತಡ ಅಕಾಲಿದಳದ ಮಂತ್ರಿಗಳ ರಾಜೀನಾಮೆಯ ನಂತರ ಇನ್ನಷ್ಟು ಬಲ ಪಡೆದುಕೊಂಡಿದೆ. ಅಕ್ಟೋಬರ್ 6ರಂದು ಜೆಜೆಪಿಯ ಮುಖಂಡ ಮತ್ತು ರಾಜ್ಯದ ಉಪಮುಖ್ಯಮಂತ್ರಿ ದುಷ್ಯಂತ ಚೌತಾಲ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅವರ ನಿವಾಸದ ಘೇರಾವೊಗೆ ಕರೆ ನೀಡಲಾಗಿದೆ.
ಅಕ್ಟೋಬರ್ 14ರಂದು “ಎಂಎಸ್‍ಪಿ ಅಧಿಕಾರ್ ದಿವಸ್’ ಆಚರಿಸಿ ಮೋದಿ ಸರಕಾರ ಈ ಕುರಿತು ಹರಡುತ್ತಿರುವ ಸುಳ್ಳುಗಳನ್ನು ಬಯಲು ಮಾಡಲು ನಿರ್ಧರಿಸಲಾಗಿದೆ.
ಮೋದಿ ಸರಕಾರ ರೈತರ ಪ್ರತಿಭಟನೆಗಳಿಗೆ ಕಿವಿಗೊಡದಿರುವುದನ್ನು ಮುಂದುವರೆಸಿದರೆ ನವಂಬರ್ 26-27ರಂದು ದೇಶದ ಎಲ್ಲೆಡೆಗಳಿಂದ ರೈತರು ‘ದಿಲ್ಲಿ ಚಲೋ’ ನಡೆಸಿ ದೇಶದ ರಾಜಧಾನಿಯಲ್ಲಿ ರಾಷ್ಟ್ರೀಯ ಪ್ರತಿಭಟನೆ ನಡೆಸುತ್ತಾರೆ ಎಂದು ಎಐಕೆಎಸ್‍ಸಿಸಿ ಎಚ್ಚರಿಸಿದೆ.