ತಪ್ಪು ಮಾಹಿತಿ ನಂಬಿ ಟ್ವೀಟ್: ವಿಷಾದಿಸಿ ಟ್ವೀಟ್ ಹಿಂಪಡೆದ ಸಿಬಲ್

  •  ಟ್ವೀಟ್ ಹಿಂಪಡೆದ ಸಿಬಲ್,   ಆ ರೀತಿ ಮಾತನಾಡಿಲ್ಲ: ಗುಲಾಮ್ ನಬಿ ಆಜಾದ್ ಯೂ ಟರ್ನ್

ನವದೆಹಲಿ: ನಾಯಕತ್ವ ಬದಲಾವಣೆ ವಿಚಾರದ ಸಂಬಂಧ ಸುದ್ದಿಯಾಗಬೇಕಿದ್ದ ಕಾಂಗ್ರೆಸ್​​ ಕಾರ್ಯಕಾರಿ ಸಮಿತಿ ಸಭೆ ಬೇರೆಯದೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಗೂ ಮುನ್ನ ಕಾಂಗ್ರೆಸ್ಸಿನ ಹಿರಿಯ ನಾಯಕರು ಬರೆದಿದ್ದ ಪತ್ರದ ವಿಷಯದ ಬದಲು ಬರೆದ ಸಮಯದ ಬಗ್ಗೆ ಚರ್ಚೆ ನಡೆದು ವಿಷಯಾಂತರವಾಗಿತ್ತು. ಈ ಸಭೆಯಲ್ಲಿ ಪತ್ರ ಬರೆದ ನಾಯಕರು ಬಿಜೆಪಿ ನಂಟಿರುವವರು ಎಂದು ರಾಹುಲ್ ಗಾಂಧಿ ಆಡಿದ್ದಾರೆ ಎನ್ನಲಾದ ಮಾತಿಗೆ ಹಿರಿಯ ನಾಯಕರಾದ ಕಪಿಲ್ ಸಿಬಲ್ ಮತ್ತು ಗುಲಾಂ ನಬಿ ಆಜಾದ್ ಸಿಡಿಮಿಡಿಗೊಂಡಿದ್ದರು. ಬಿಜೆಪಿ ನಂಟು ಸಾಬೀತಾದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದರೆ ಕಪಿಲ್ ಸಿಬಲ್ ಈ ಬಗ್ಗೆ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಈಗ  ಟ್ವೀಟ್ ಅನ್ನು ಸಿಬಲ್ ಹಿಂಪಡೆದಿದ್ಧಾರೆ.

ಟ್ವೀಟ್ ಹಿಂಪಡೆದ ಸಿಬಲ್

Was informed by Rahul Gandhi personally that he never said what was attributed to him .

I therefore withdraw my tweet .

Kapil Sibal @KapilSibal 1:47 PM · Aug 24, 2020

ಈ ಮುನ್ನ ಕಾಂಗ್ರೆಸ್​ ಪಕ್ಷ ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಸೋನಿಯಾ ಗಾಂಧಿಯ ನಾಯಕತ್ವದ ಬಗ್ಗೆ ಅಪಸ್ವರವೆತ್ತಿ ಪತ್ರ ಬರೆದವರು ಬಿಜೆಪಿ ಏಜೆಂಟ್​ಗಳು ಎಂದು ಇಂದಿನ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ ಎನ್ನಲಾಗಿತ್ತು. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಟ್ವೀಟ್​​ ಮಾಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಕಳೆದ 30 ವರ್ಷದಲ್ಲಿ ನಾನು ಒಂದೇ ಒಂದು ದಿನವೂ ಬಿಜೆಪಿ ಪರವಾಗಿ ಯಾವುದೇ ವಿಚಾರದಲ್ಲೂ ಹೇಳಿಕೆ ನೀಡಿಲ್ಲ. ಆದರೂ ಈ ರೀತಿಯ ಆರೋಪ ಕೇಳಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ನಾವು ಬಿಜೆಪಿಯೊಂದಿಗೆ ಕೈಜೋಡಿಸಿ, ಪಕ್ಷದ ವಿರುದ್ಧ ತಂತ್ರ ರೂಪಿಸಿದ್ದೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ರಾಜಸ್ಥಾನ ಹೈಕೋರ್ಟ್​ನಲ್ಲಿ ವಾದ ಮಂಡಿಸಿ ಜಯ ಗಳಿಸಿದ್ದೇನೆ. ಮಣಿಪುರದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್​ ಪರವಾಗಿ ವಾದ ಮಂಡಿಸಿದ್ದೆ. ಕಳೆದ 30 ವರ್ಷದ ರಾಜಕೀಯದಲ್ಲಿ ಎಂದಿಗೂ ಬಿಜೆಪಿ ಪರವಾಗಿ ಹೇಳಿಕೆ ನೀಡಿಲ್ಲ. ಆದರೂ ನಾವು ಬಿಜೆಪಿ ಜೊತೆ ಕೈಜೋಡಿಸಿದ್ದೇವೆ! ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಭಿನ್ನಮತೀಯರಿಗೆ ಬಿಜೆಪಿ ನಂಟಿದೆ ಎಂದ ರಾಹುಲ್ ಗಾಂಧಿ: ಕಪಿಲ್ ಸಿಬಲ್, ಗುಲಾಂನಬಿ ಆಜಾದ್ ಅಸಮಾಧಾನ 

ರಣದೀಪ್ ಸುರ್ಜೇವಾಲಾ ಅವರ ಟ್ವೀಟ್

ಹೀಗೆ ಕಪಿಲ್ ಸಿಬಲ್​ ಮಾಡಿದ್ದ ಟ್ವೀಟ್​​ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್​ನ ಮುಖ್ಯ ವಕ್ತಾರ ರಣದೀಪ್​ ಸುರ್ಜೇವಾಲಾ ಅವರು, ಕಪಿಲ್​ ಸಿಬಲ್​​ ಟ್ವೀಟ್​​​ಗೆ ಪ್ರತಿಕ್ರಿಯೆ ನೀಡಿದರು. ಮಾಧ್ಯಮದ ಸುಳ್ಳು ಸುದ್ದಿಯನ್ನು ನಂಬಬೇಡಿ. ರಾಹುಲ್​​ ಗಾಂಧಿಯವರು ಆ ರೀತಿಯಾದ ಯಾವುದೇ ಹೇಳಿಕೆ ನೀಡಿಲ್ಲ. ನಾವು ನಾವೇ ಪರಸ್ಪರ ಕಿತ್ತಾಡುವ ಬದಲು ಇಡೀ ಕಾಂಗ್ರೆಸ್​ ಜತೆ ಕೈಜೋಡಿಸಿ ಮೋದಿ ಆಡಳಿತದ ವಿರುದ್ಧ ಹೋರಾಡೋಣ ಎಂದಿದ್ದರು.

ಇದರ ಬೆನ್ನಲ್ಲೇ ಟ್ವೀಟ್​ ಮಾಡಿದ ಕಪಿಲ್​​ ಸಿಬಲ್, ತನ್ನ ಹಳೆಯ ರಾಹುಲ್​​ ವಿರುದ್ಧದ ಟ್ವೀಟ್​ ಮಾಡಿರುವುದಾಗಿ ಬರೆದಿದ್ದರು. ರಾಹುಲ್​​ ಗಾಂಧಿಯವರೇ ನನಗೆ  ವೈಯಕ್ತಿಕವಾಗಿ ಹೀಗೆ ಮಾತಾಡಿಲ್ಲ ಎಂದು ಹೇಳಿದ್ಧಾರೆ. ಹೀಗಾಗಿ ನನ್ನ ಟ್ವೀಟ್​​ ಹಿಂಪಡೆಯುತ್ತಿದ್ದೇನೆ ಎಂದು ಬಹಿರಂಗ ಮನವಿ ಮಾಡಿದ್ದಾರೆ.

ರಾಹುಲ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿ ಪಕ್ಷಕ್ಕೆ ರಾಜೀನಾಮೆಗೂ ಸಿದ್ಧ ಎಂದು ಹೇಳಿದ್ದ ಗುಲಾಮ್ ನಬಿ ಆಜಾದ್ ಯೂ ಟರ್ನ್ ಹೊಡೆದಿದ್ದಾರೆ. ರಾಹುಲ್ ಗಾಂಧಿ ‘ಆ ರೀತಿ ಮಾತನಾಡಿಲ್ಲ’ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಿಲ್ಲ ಎಂದು  ಗುಲಾಮ್ ನಬಿ ಆಜಾದ್ ಸ್ಪಷ್ಟೀಕರಣ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *