ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿದ್ದು, ಡಿಸೆಂಬರ್ 21ರಂದು ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗುರುವಾರ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಲು ತೀರ್ಮಾನವಾಗಿದೆ.
ಸ್ಥಾನಗಳ ಲೆಕ್ಕಾಚಾರದಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮಪವಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವುದು ನಿಚ್ಚಳವಾಗಿದೆ. ಆಡಳಿತರೂಢ ಬಿಜೆಪಿ 39, ವಿರೋಧ ಪಕ್ಷ ಕಾಂಗ್ರೆಸ್ 26, ಜೆಡಿಎಸ್ 08 ಹಾಗೂ ಇನ್ನೂ ಪಕ್ಷೇತರ 1 ಸ್ಥಾನಗಳನ್ನು ಹೊಂದಿದೆ. ಒಟ್ಟು 75 ಸ್ಥಾನಗಳನ್ನು ಒಳಗೊಂಡಿರು ವಿಧಾನ ಪರಿಷತ್ ಸಭಾಪತಿಯಾಗಲು 38 ಮತಗಳ ಬೇಕಾಗಿವೆ.
26 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್, ಒಂದು ಪಕ್ಷೇತರ ಹಾಗೂ ಜೆಡಿಎಸ್ನ 08 ಸದಸ್ಯರ ಬೆಂಬಲದೊಂದಿಗೆ ವಿಧಾನ ಪರಿಷತ್ ಸಭಾಪತಿ ಚುನಾವಣೆ ಅಖಾಡಕ್ಕಿಳಿಯು ಸಾಧ್ಯತೆಗಳಿವೆ. ಬಹುತೇಕ ಪರಿಷತ್ ಸಭಾಪತಿ ಸ್ಥಾನ ಬಿಜೆಪಿ ಪಾಲಾಗುವ ಸಾಧ್ಯತೆಗಳು ಹೆಚ್ಚಿದ್ದು, ಕಾಂಗ್ರೆಸ್ ಗೆಲುವು ಕಷ್ಟಸಾಧ್ಯ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸಭಾಪತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ ಎಂಬುದು ಇನ್ನೂ ಖಚಿತವಾಗಿದೆ.
ಬಿಜೆಪಿ ಪಕ್ಷದಿಂದ ಮಾಜಿ ಸಭಾಪತಿ ಹಾಗೂ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ಕುರುಬ ಸಮುದಾಯ ರಘುನಾಥ್ ರಾವ್ ಮಲ್ಕಾಪುರೆ ಅವರನ್ನೇ ಸಭಾಪತಿ ಹುದ್ದೆಯಲ್ಲಿ ಮುಂದುವರಿಸಬೇಕೆಂದು ಆಗ್ರಹ ಕೇಳಿ ಬರುತ್ತಿದೆ.