ಡಿಸೆಂಬರ್ 8 : ಭಾರತ್ ಬಂದ್ ಯಶಸ್ವಿಗೊಳಿಸಲು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮನವಿ

ದೆಹಲಿ : ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ  ಡಿಸೆಂಬರ್ 8 ರ ‘ಭಾರತ್ ಬಂದ್’ ಚಳುವಳಿಯನ್ನು ಸ್ವಯಂ ಪ್ರೇರಿತರಾಗಿ ಯಶಸ್ವಿಗೊಳಿಸಲು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ, ಕರ್ನಾಟಕ ಘಟಕದ ಮನವಿ ಮಾಡಿಕೊಂಡಿದೆ.

ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಕಾರ್ಪೋರೇಟ್ ಪರ ಕಾಯ್ದೆಗಳನ್ನು ಮತ್ತು ವಿದ್ಯುತ್ ಮಸೂದೆಯನ್ನು ಹಿಂಪಡೆಯಬೇಕೆಂಬ ಬೇಡಿಕೆಯನ್ನು ಮುಂದಿಟ್ಟು, ದೆಹಲಿಯಲ್ಲಿ ಶಾಂತಿಯುತ ಹೋರಾಟ ನಡೆಸುತ್ತಿರುವ ಅನ್ನದಾತ ರೈತರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿಸಿದ ಕೇಂದ್ರ ಸರ್ಕಾರದ ನಡೆಯನ್ನು ಬಲವಾಗಿ ಖಂಡಿಸುತ್ತಾ, ದೇಶದ ರೈತರ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಇದೇ ಡಿಸೆಂಬರ್ 8, 2020 ರಂದು ಕರೆ ನೀಡಲಾದ ‘ಭಾರತ್ ಬಂದ್’ ಚಳುವಳಿಯನ್ನು ಸ್ವಯಂ ಪ್ರೇರಿತರಾಗಿ ಯಶಸ್ವಿಗೊಳಿಸಬೇಕೆಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮನವಿ ಮಾಡುತ್ತದೆ.

ಅಂದು ವರ್ತಕರು, ಹೋಟೆಲ್ ಮಾಲಿಕರು, ಕಾರ್ಖಾನೆಗಳು, ಸಂಘ ಸಂಸ್ಥೆಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ತಮ್ಮ ವ್ಯವಹಾರವನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಸಹಕರಿಸಬೇಕೆಂದು ವಿನಂತಿಸುತ್ತೇವೆ. ಕೆಎಸ್‌ಆರ್‌ಟಿಸಿ ಬಸ್ಸ್‌ಗಳನ್ನು ಕೇವಲ 6 ಗಂಟೆಗಳ ಕಾಲ ಬಂದ್ ಮಾಡಿ ಸಹಕರಿಸಬೇಕೆಂದೂ ಹಾಗೆಯೇ ಆಟೋ ಚಾಲಕರು, ಖಾಸಗಿ ವಾಹನಗಳು ಸಹ ಬೆಳಿಗ್ಗೆ 06 ರಿಂದ ಮಧ್ಯಾಹ್ನ 12 ರ ವರೆಗೆ ರಸ್ತೆಗೆ ಇಳಿಸಬಾರದು ಎಂದು ಅದು ಕಳಕಳಿಯ ವಿನಂತಿಯನ್ನು ಮಾಡಿಕೊಂಡಿದೆ.

ಇದೊಂದು ದೇಶಪ್ರೇಮಿ ಹೋರಾಟವಾಗಿದೆ. ಕೃಷಿ ರಂಗವನ್ನು ಲಾಭಕೋರ ಕಾರ್ಪೋರೇಟ್ ಕಂಪನಿಗಳ ವಶಕ್ಕೆ ಹೋಗುವುದನ್ನು ತಡೆಯುವುದು ಎಲ್ಲ ದೇಶಪ್ರೇಮಿಗಳ ಕರ್ತವ್ಯವಾಗಿದೆ. ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಕೈಬಿಡಲು ಮುಂದಾಗುತ್ತಿಲ್ಲ. ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಸಂಸತ್ತಿನಲ್ಲಿ ಮುಕ್ತವಾದ ಚರ್ಚೆ ಮಾಡದೆ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಲು ಡಿಸೆಂಬರ್ 8, 2020 ರ ‘ಬಂದ್’ ನ್ನೂ ಕರ್ನಾಟಕದಾದ್ಯಂತ ಯಶಸ್ವಿಗೊಳಿಸಬೇಕೆಂದು ಮನವಿ ಮಾಡುತ್ತಿದೆ.

Donate Janashakthi Media

Leave a Reply

Your email address will not be published. Required fields are marked *