– ಅಲಹಾಬಾದ್ ಹೈಕೋರ್ಟ್ ನಿಂದ ಜಾಮೀನು
– ಅಲಿಘಡ ಮುಸ್ಲಿಂ ವಿವಿಯಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ
ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಡಾ.ಕಫೀಲ್ ಖಾನ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಷರತ್ತು ಬದ್ಧ ಜಾಮೀನು ನೀಡಿದೆ.
ಅಲಿಗಢ ಮುಸ್ಲಿಂ ಯೂನಿವರ್ಸಿಟಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆಸಲಾದ ಪ್ರತಿಭಟನೆ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಿದ್ದರೆಂಬ ಆರೋಪದ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಡಾ.ಕಫೀಲ್ ಖಾನ್ ಬಿಡುಗಡೆಗೆ ಸಂಬಂಧಿಸಿದಂತೆ 15 ದಿನಗಳಲ್ಲಿ ಇತ್ಯರ್ಥಗೊಳಿಸುವಂತೆ ಸುಪ್ರೀಂ ಕೋರ್ಟ್ ಹೈಕೋರ್ಟ್ ಗೆ ಆದೇಶಿಸಿತ್ತು.
2019ರ ಡಿಸೆಂಬರ್ 12ರಂದು ಸಿಎಎ ವಿರುದ್ಧ ನಡೆದಿದ್ದ ಪ್ರತಿಭಟನೆ ವೇಳೆ ಕಫೀಲ್ ಖಾನ್ ಭಾಷಣ ಮಾಡಿದ್ದರು.2020ರ ಫೆಬ್ರುವರಿ 14ರಂದು ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಜನವರಿಯಲ್ಲಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಮುಂಬೈನಲ್ಲಿ ಖಾನ್ ಅವರನ್ನು ಬಂಧಿಸಿತ್ತು.