ದುಬೈ: ತೀವ್ರ ಕುತೂಹಲ ಕೆರಳಿಸಿದ್ದ ಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದ ಆಸ್ಟ್ರೇಲಿಯಾ, ಚೊಚ್ಚಲ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಭಾನುವಾರ ನಡೆದ 7ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಾಯಕ ಕೇನ್ ವಿಲಿಯಮ್ಸ್ ನ್ ಅವರ ಅರ್ಧಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ ಸವಾಲಿನ 172 ರನ್ ಗಳಿಸಿತು.
ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಡೇವಿಡ್ ವಾರ್ನರ್ ಹಾಗೂ ಮಿಶೆಲ್ ಮಾರ್ಶ್ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಸುಲಭವಾಗಿ ಗೆಲುವು ಕಂಡಿತು. ಇನ್ನೂ 7 ಎಸೆತಗಳು ಬಾಕಿಯಿರುವಂತೆಯೇ ಆಸ್ಟ್ರೇಲಿಯಾ 8 ವಿಕೆಟ್ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ ನೀಡಿದ ಅದ್ಭುತ ಇನ್ನಿಂಗ್ಸ್ನ ಕಾರಣದಿಂದಾಗಿ ಸವಾಲಿನ ಗುರಿ ನೀಡಲು ಸಾಧ್ಯವಾಯಿತು. ಉತ್ತಮ ಆರಂಭ ಪಡೆಯುವಲ್ಲಿ ನ್ಯೂಜಿಲೆಂಡ್ ತಂಡ ವಿಫಲವಾದರು ಕೂಡ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಮಾರ್ಟಿನ್ ಗಪ್ಟಿಲ್ 2ನೇ ವಿಕೆಟ್ಗೆ 48 ರನ್ಗಳ ಜೊತೆಯಾಟವನ್ನು ನೀಡಿದರು. ಮಾರ್ಟಿನ್ ಗಪ್ಟಿಲ್ 28 ರನ್ಗಳಿಗೆ ತಮ್ಮ ವಿಕೆಟ್ ಕಳೆದುಕೊಂಡರು. ಮತ್ತೊಂದೆಡೆ ನಾಯಕ ಕೇನ್ ವಿಲಿಯಮ್ಸನ್ ಅಬ್ಬರದಾಟ ಮುಂದುವರಿದಿತ್ತು. ಮೂರನೇ ವಿಕೆಟ್ಗೆ ಗ್ಲೆನ್ ಫಿಲಿಪ್ಸ್ ಜೊತೆಗೆ ಸೇರಿಕೊಂಡು 68 ರನ್ಗಳ ಜೊತೆಯಾವನ್ನು ಕೇನ್ ವಿಲಿಯಮ್ಸನ್ ನೀಡಿದರು. 18 ಎಸೆತಗಳಲ್ಲಿ 18 ರನ್ಗಳಿಸಿದ ಫಿಲಿಪ್ಸ್ ಬಳಿಕ ಹ್ಯಾಜಲ್ವುಡ್ಗೆ ವಿಕೆಟ್ ಒಪ್ಪಿಸಿದರು.
ನ್ಯೂಜಿಲೆಂಡ್ ತಂಡ ನೀಡಿದ 173 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಆರೋನ್ ಫಿಂಚ್ ವಿಕೆಟ್ ಕಬಳಿಸುವ ಮೂಲಕ ಆರಂಭದಲ್ಲಿಯೇ ಆಘಾತ ನೀಡಿತ್ತು ಕಿವೀಡ್ ಪಡೆ. ಆದರೆ ಬಳಿಕ ನ್ಯೂಜಿಲೆಂಡ್ ತಂಡಕ್ಕೆ ಹೇಳಿಕೊಳ್ಳಯುವಂತಾ ಯಶಸ್ಸು ದೊರೆಯಲೇ ಇಲ್ಲ. ಎರಡನೇ ವಿಕೆಟ್ಗೆ ಡೇವಿಡ್ ವಾರ್ನರ್ ಹಾಗೂ ಮಿಶೆಲ್ ಮಾರ್ಶ್ 92 ರನ್ಗಳ ಜೊತೆಯಾಟವನ್ನು ನೀಡಿದರು. 38 ಎಸೆತಗಳ್ನನು ಎದುರಿಸಿದ ಡೇವಿಡ್ ವಾರ್ನರ್ 53 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಆಸ್ಟ್ರೇಲಿಯಾ ತಂಡದ ಪರವಾಗಿ ಮತ್ತೊಂದು ಅದ್ಭುತವಾದ ಇನ್ನಿಂಗ್ಸ್ ನೀಡಿದರು.
ಈ ಜೋಡಿ ಬೇರ್ಪಟ್ಟ ನಂತರ ಶಾನ್ ಮಾರ್ಶ್ಗೆ ಮ್ಯಾಕ್ಸ್ವೆಲ್ ಸಾಥ್ ನೀಡಿದರು. ನ್ಯೂಜಿಲೆಂಡ್ ದಾಳಿಯನ್ನು ಸಮರ್ಥವಚಾಗಿ ಎದುರಿಸಿದ ಈ ದಾಂಡಿಗರು ಕಿವೀಸ್ಗೆ ಮತ್ತೆ ಯಾವುದೇ ಅವಕಾಶವಿಲ್ಲದಂತೆ ಪ್ರದರ್ಶನ ನೀಡಿದರು. 50 ಎಸೆತಗಳ್ನನು ಎದುರಿಸಿದ ಶಾನ್ ಮಾರ್ಶ್ 77 ರನ್ ಬಾರಿಸಿ ಅಜೇಯವಾಗುಳಿದರೆ ಮ್ಯಾಕ್ಸ್ವೆಲ್ 28 ರನ್ಗಳಿಸಿ ಅಜೇಯವಾಗಿ ಉಳಿದರು. ಈ ಮೂಲಕ ಆಸ್ಟ್ರೇಲಿಯಾ 8 ವಿಕೆಟ್ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.