ಸ್ಪಿನ್ನರ್ ಜೆಫ್ರಿ ವಂಡರ್ಸೆ ಮಾರಕ ದಾಳಿ ನೆರವಿನಿಂದ ಭಾರತ ತಂಡವನ್ನು 32 ರನ್ ಗಳ ಭಾರೀ ಅಂತರದಿಂದ ಮಣಿಸಿದ ಶ್ರೀಲಂಕಾ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.
ಕೊಲಂಬೊದಲ್ಲಿ ಭಾನುವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 9 ವಿಕೆಟ್ ಗೆ 240 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ ತಂಡ 42.2 ಓವರ್ ಗಳಲ್ಲಿ 208 ರನ್ ಗೆ ಆಲೌಟಾಯಿತು. ಸರಣಿ ಸೋಲಿನಿಂದ ಪಾರಾಗಬೇಕಾದರೆ ಭಾರತ ಮೂರನೇ ಹಾಗೂ ಅಂತಿಮ ಪಂದ್ಯದಲ್ಲೇ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್ ಗೆ 97 ರನ್ ಜೊತೆಯಾಟ ನಿಭಾಯಿಸಿ ಭರ್ಜರಿ ಆರಂಭ ನೀಡಿದರು. ಈ ಹಂತದಲ್ಲಿ ದಾಳಿಗೆ ಇಳಿದ ಸ್ಪಿನ್ನರ್ ಜೆಫ್ರಿ ವಂಡರ್ಸೆ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ನಾಟಕೀಯ ಕುಸಿತ ಕಂಡಿತು.
ರೋಹಿತ್ ಶರ್ಮ 44 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 64 ರನ್ ಸಿಡಿಸಿ ಸತತ ಎರಡನೇ ಅರ್ಧಶತಕ ಗಳಿಸಿದರೆ, ಶುಭಮನ್ ಗಿಲ್ 44 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 35 ರನ್ ಬಾರಿಸಿದರು. ವಿರಾಟ್ ಕೊಹ್ಲಿ, (14) ಮತ್ತೊಮ್ಮೆ ವಿಫಲರಾದರೆ, ಶಿವಂ ದುಬೆ (0) ಮತ್ತು ಕೆಎಲ್ ರಾಹುಲ್ (0) ಮತ್ತು ಶ್ರೇಯಸ್ ಅಯ್ಯರ್ (7) ನಿರಾಸೆ ಮೂಡಿಸಿದರು.
ಭಾರತ ತಂಡ ಕೇವಲ 93 ರನ್ ಗಳ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡಿತು. ಇದರಲ್ಲಿ ಜೆಫ್ರಿ 7 ಓವರ್ ಗಳಲ್ಲಿ 6 ವಿಕೆಟ್ ಕಿತ್ತು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಕೊನೆಯಲ್ಲಿ ಚರಿತ್ ಅಸ್ಲಂಕಾ 3 ವಿಕೆಟ್ ಕಿತ್ತು ಗಮನ ಸೆಳೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಬ್ಯಾಟ್ಸ್ ಮನ್ ಗಳು ನಿಯಮಿತವಾಗಿ ವಿಕೆಟ್ ಕಳೆದುಕೊಂಡರೂ ದಿಟ್ಟ ಹೋರಾಟದ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
ಶ್ರೀಲಂಕಾ ಪರ ಅವಿಷ್ಕಾ ಫೆರ್ನಾಂಡೊ (40), ಕುಶಾಲ್ ಮೆಂಡಿಸ್ (30), ಕಮಿಂಡು ಮೆಂಡಿಸ್ (40), ದುನೀತ್ ವೆಲ್ಲಾಲಗೆ (39) ಮತ್ತು ನಾಯಕ ಚರತ್ ಅಸ್ಲಾಂಕಾ (25) ತಂಡವನ್ನು 250ರ ಗಡಿ ಸಮೀಪ ಕೊಂಡೊಯ್ದರು. ಭಾರತದ ಪರ ವಾಷಿಂಗ್ಟನ್ ಸುಂದರ್ 3, ಕುಲದೀಪ್ ಯಾದವ್ 2 ವಿಕೆಟ್ ಪಡೆದು ಸಮಾಧಾನಪಟ್ಟುಕೊಂಡರು.