ಕಾಂಗ್ರೆಸ್ ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷಗಳು ಸೀಟು ಹಂಚಿಕೆ ಸಂಧಾನ ಯಶಸ್ವಿಯಾಗಿದ್ದು ಎರಡೂ ಪಕ್ಷಗಳು ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಜೊತೆಗೂಡಿ ಸ್ಪರ್ಧಿಸಲಿವೆ.
ಸೋಮವಾರ ನಡೆದ ಸೀಟು ಹಂಚಿಕೆಯಾಗಿದ್ದು, ನ್ಯಾಷನಲ್ ಕಾಂಗ್ರೆಸ್ ಪಕ್ಷ 51 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 32 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉಳಿದ 5 ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳು ಸೌಹಾರ್ದ ರೀತಿಯಲ್ಲಿ ಸ್ಪರ್ಧಿಸಲು ಸಮ್ಮತಿ ಸೂಚಿಸಿವೆ.
ತಲಾ 2 ಕ್ಷೇತ್ರಗಳಲ್ಲಿ ಸಿಪಿಎಂ ಮತ್ತು ಪ್ಯಾಂಥರ್ಸ್ ಪಕ್ಷಗಳು ಸ್ಪರ್ಧಿಸಲಿವೆ. 5 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಎರಡೂ ಕಡೆ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಸೌಹಾರ್ದ ಮತ್ತು ಶಿಸ್ತಿನಿಂದ ಚುನಾವಣೆ ಎದುರಿಸಲಿದ್ದೇವೆ ಎಂದು ಜಮ್ಮು ಕಾಶ್ಮೀರ ವಿಭಾಗದ ಕಾಂಗ್ರೆಸ್ ಮುಖ್ಯಸ್ಥ ತಾರಿಕ್ ಅಹ್ಮದ್ ಖುರ್ರಾ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ವಿಧಾನಸಭೆಯ 90 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಆಗಿದೆ. ಸೋಮವಾರ ಬಿಜೆಪಿ ಸಾಕಷ್ಟು ಗೊಂದಲದ ನಂತರ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, 15 ಅಭ್ಯರ್ಥಿಗಳನ್ನು ಘೋಷಿಸಿದೆ.