ಬೆಂಗಳೂರು:’ಕೋರೊನಾ, ಬ್ಲಾಕ್ ಫಂಗಸ್ ಭೀತಿ ನಡುವೆ ಆದಾಯ ಇಲ್ಲದೆ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದು, ಈ ಸಮಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಈಶ್ವರ್ ಖಂಡ್ರೆ ಅವರು, ‘ಬಿಜೆಪಿ ನಾಯಕತ್ವ ಬದಲಾವಣೆ ನಾಟಕ ಮಾಡುತ್ತಿದ್ದು, ಇವರಿಗೆ ಸ್ವಲ್ಪವೂ ಮಾನವೀಯತೆ ಇಲ್ಲವಾಗಿದೆ. ತಮ್ಮ ವೈಫಲ್ಯ ಮರೆಮಾಚಲು ಈ ನಾಟಕ ಮಾಡುತ್ತಿದ್ದು, ಇದು ಲಜ್ಜೆ ಗೆಟ್ಟ ಸರ್ಕಾರ’ ಎಂದು ಹರಿಹಾಯ್ದರು.
‘ಬಿಜೆಪಿ ಅವರು ರೈತರಿಗೆ ಮರಣ ಶಾಸನ ಕಾನೂನು ತರುತ್ತಿದ್ದಾರೆ. ಕೋರೊನಾ ಹಾಗೂ ಸರ್ಕಾರದ ಮೋಸದಿಂದ ಜನ ರೋಸಿಹೋಗಿದ್ದಾರೆ. 15 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ರೈತರು ಫಸಲ್ ಭೀಮಾ ಕಂತು ಕಟ್ಟಿದ್ದರೂ ವಿಮೆ ಹಣ ಸಿಕ್ಕಿಲ್ಲ. ಖಾಸಗಿ ಕಂಪನಿಗಳಿಗೆ ಲಾಭ ಮಾಡಲು ಈ ರೀತಿ ಮಾಡಲಾಗುತ್ತಿದೆ’ ಎಂದು ಖಂಡ್ರೆ ಅವರು ಟೀಕಿಸಿದರು.
ಸರ್ಕಾರ ಕೂಡಲೇ ಮುಂಗಾರು, ಹಿಂಗಾರು ಹಂಗಾಮಿನ ವಿಮೆ ಬಿಡುಗಡೆ ಮಾಡಬೇಕು. ರೈತರಿಗೆ ಬಿತ್ತನೆ ಬೀಜ ನೀಡಬೇಕು. ನಮ್ಮ ಸರ್ಕಾರ ಇದ್ದಾಗ ಬಿತ್ತನೆ ಬೀಜ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಅವಧಿಯಲ್ಲಿ ಬಿತ್ತನೆ ಬೀಜ ಹಂಚಿಕೆಯಲ್ಲಿ ಸಮಸ್ಯೆಯಾಗಿದೆ. ಸೋಯಾಬೀನ್ ಬೀಜದ ಬೆಲೆ ದುಪ್ಪಟ್ಟಾಗಿದೆ. ಸರ್ಕಾರ ಕಂಪನಿಗಳು, ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ’ ಎಂದು ದೂರಿದರು.
ವಿಜಯೇಂದ್ರ ಹಸ್ತಕ್ಷೇಪ: ನೀರಾವರಿ ಇಲಾಖೆಯಲ್ಲಿ ಸಿ.ಎಂ ಪುತ್ರ ವಿಜಯೇಂದ್ರ ಅವರ ಹಸ್ತಕ್ಷೇಪ ವಿಚಾರವಾಗಿ ಮಾತನಾಡಿದ ಅವರು, ‘ಸರ್ಕಾರದ ಎಲ್ಲ ಇಲಾಖೆಯಲ್ಲಿ ಹಾಡಹಗಲೇ ದರೋಡೆ ನಡೀತಿದೆ. ಈ ವಿಚಾರವಾಗಿ ಕಾನೂನು ರೀತಿಯ ತನಿಖೆ ಆಗ್ಬೇಕು. ಮಂತ್ರಿಗಳೇ ಆಗಿರಲಿ ಯಾರೇ ಆಗಿರಲಿ ತನಿಖೆ ನಡೆಯಬೇಕು’ ಎಂದರು.
‘ಕಾಂಗ್ರೆಸ್ ನಾಯಕರು ಐಕ್ಯತೆಯಿಂದಿದ್ದೇವೆ. ಅಧಿಕಾರ ದಾಹಕ್ಕಾಗಿ ಸರ್ಕಾರದಲ್ಲಿ ನಾಟಕ ನಡೀತಿದೆ. ಬಿಜೆಪಿ ಸರ್ಕಾರವೇ ಇರಬಾರದು, ವಿಸರ್ಜನೆ ಮಾಡಬೇಕು. ರಾಜ್ಯದಲ್ಲೂ ಸಾಕಷ್ಟು ರಾಜಕೀಯ ಬದಲಾವಣೆ ಆಗಲಿದೆ. ಕಾಂಗ್ರೆಸ್ ಈಗಾಗ್ಲೇ ಮಾದರಿ ಸರ್ಕಾರವನ್ನ ನೀಡಿದೆ. ಜನ ಮತ್ತೆ ಕಾಂಗ್ರೆಸ್ ಗೆ ಅವಕಾಶ ನೀಡಬೇಕು’ ಎಂದು ಖಂಡ್ರೆ ಅವರು ತಿಳಿಸಿದ್ದಾರೆ.