ನವದೆಹಲಿ: ರಾಷ್ಟ್ರೀಯ ಮಟ್ಟದಲ್ಲಿ ನೋಂದಾಯಿತ ಜನನ ಮತ್ತು ಮರಣಗಳ ದತ್ತಾಂಶ ಸಂಚಯವನ್ನು (ಡೇಟಾಬೇಸ್) ಕೇಂದ್ರ ಸರಕಾರವು ನಿರ್ವಹಿಸಲು ಅನುವು ಮಾಡಿಕೊಡಲಿಕ್ಕಾಗಿ ಕಾನೂನಿಗೆ ಪ್ರಸ್ತಾವಿತ ತಿದ್ದುಪಡಿಯು ಕೇಂದ್ರೀಕರಣದ ಒಂದು ಅನಗತ್ಯ ಹೆಜ್ಜೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯೂರೋ ಹೇಳಿದೆ.
ಸದ್ಯ, ಜನನ ಮತ್ತು ಮರಣಗಳ ನೋಂದಣಿ ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿದೆ.
ದತ್ತಸಂಚಯವನ್ನು ನಿರ್ವಹಿಸಲು ಕೇಂದ್ರಕ್ಕೆ ಅವಕಾಶ ಕಲ್ಪಿಸಲು ‘ಜನನ ಮತ್ತು ಮರಣಗಳ ನೋಂದಣಿ ಕಾಯಿದೆ-1969’ ಗೆ ಪ್ರಸ್ತಾಪಿಸಲಾಗಿರುವ ತಿದ್ದುಪಡಿಯು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್.ಪಿ.ಆರ್.-NPR) ಅನ್ನು ಸಮಕಾಲಿಕಗೊಳಿಸಲು ಅನುವು ಮಾಡಿ ಕೊಡಲಿಕ್ಕಾಗಿ, ಮತ್ತು ಇದು ಮುಂದೆ ಸಿದ್ಧಪಡಿಸಬೇಕೆಂದಿರುವ ‘ನಾಗರಿಕರ ರಾಷ್ಟ್ರೀಯ ದಾಖಲೆ’(ಎನ್.ಆರ್.ಸಿ.- NRC)ಗೆ ಆಧಾರವಾಗಿದೆ. ಈ ಎನ್‌ಪಿಆರ್-ಎನ್‌ಆರ್‌ಸಿ, ಪೌರತ್ವ ತಿದ್ದುಪಡಿ ಕಾಯ್ದೆಯ ಜೊತೆಗೆ, ಕೆಲವರನ್ನು ಹೊರತುಪಡಿಸುವ ಮತ್ತು ವಿಭಜನಕಾರಿಯಾದ ಹೆಜ್ಜೆಯಾಗಲಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ನೆನಪಿಸಿದೆ.
ಈ ದತ್ತಾಂಶ ಸಂಚಯದ ಕೇಂದ್ರೀಕರಣವು ಈಗಾಗಲೇ ಜಾರಿಯಲ್ಲಿರುವ ಕಣ್ಗಾವಲು ಆಳ್ವಿಕೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದಿರುವ ಪೊಲಿಟ್ ಬ್ಯುರೊ, ಜನನ ಮತ್ತು ಮರಣಗಳ ನೋಂದಣಿಯನ್ನು ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಿದೆ.