ಚುನಾವಣಾ ಬಾಂಡು ಯೋಜನೆ ಖಂಡಿತವಾಗಿಯೂ ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಅತ್ಯಂತ ಅಪಾಯಕಾರಿ ಕ್ರಮ. ಅದನ್ನು ಎಷ್ಟು ಬೇಗ ರದ್ದು ಮಾಡಲಾಗುತ್ತೋ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಅಷ್ಟು ಒಳ್ಳೆಯದು. ಇಂತಹ ನ್ಯಾಯಾಂಗ ‘ನುಣಿಚಿಕೆ’ ಆಳುವ ಪಕ್ಷಕ್ಕೆ ಇಂತಹ ಒಂದು ತಪ್ಪು ಮತ್ತು ಹಾನಿಕಾರಕ ಯೋಜನೆಯನ್ನು ಬಳಸಿಕೊಂಡು ಪಾರಾಗಲು ಬಿಟ್ಟಿದೆ.
ಚುನಾವಣಾ ಬಾಂಡುಗಳ ವಿಷಮಯ ಸ್ವರೂಪದ ಬಗ್ಗೆ ಇನ್ನೇನು ಪುರಾವೆ ಬೇಕು? ಭಾರತೀಯ ರಿಝರ್ವ್ ಬ್ಯಾಂಕ್(ಆರ್‌ಬಿಐ) ಮತ್ತು ಚುನಾವಣಾ ಆಯೋಗ ಎರಡೂ ಈ ಪ್ರಸ್ತಾವಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದವು.
ಹಫ್ಫಿಂಗ್‌ಟನ್ ಪೋಸ್ಟ್ ಈ ಕುರಿತು ವರದಿಗಳನ್ನು ಪ್ರಕಟಿಸಿದೆ. ಇವು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯ ಅಡಿಯಲ್ಲಿ ಪಡೆದ ಮಾಹಿತಿಗಳು. ಇವುಗಳ ಪ್ರಕಾರ ಆರ್‌ಬಿಐ ಮತ್ತು ಚುನಾವಣಾ ಆಯೋಗ ಬಲವಾದ ಆಕ್ಷೇಪಗಳನ್ನು ಎತ್ತಿದ್ದವು, ಆದರೆ ಸರಕಾರ ಇವನ್ನು ಸಂಪೂರ್ಣವಾಗಿ ತಿರಸ್ಕರಿಸಿತಷ್ಟೇ ಅಲ್ಲ, ಚುನಾವಣಾ ಆಯೋಗದ ಟಿಪ್ಪಣಿಯ ಬಗ್ಗೆ ಸಂಸತ್ತಿನಲ್ಲಿ ಸುಳ್ಳು ಹೇಳಿತು ಕೂಡ. ಚುನಾವಣಾ ಬಾಂಡುಗಳನ್ನು ಆರಂಭಿಸಲು ವಿವಿಧ ಕಾಯ್ದೆಗಳ ತಿದ್ದುಪಡಿಗಳಿಗೆ ಚುನಾವಣಾ ಆಯೋಗದ ಆಕ್ಷೇಪಗಳು ಈಗಾಗಲೇ ತಿಳಿದಿರುವ ಸಂಗತಿ. ಆದರೆ ಆರ್‌ಬಿಐ ಕೂಡ ಈ ಯೋಜನೆಯ ವಿರುದ್ಧ ಬಹಳ ತೂಕದ ತರ್ಕಗಳನ್ನು ಮುಂದಿಟ್ಟಿತ್ತು ಎಂಬುದು ಈಗಷ್ಟೇ ಮೊದಲ ಬಾರಿಗೆ ತಿಳಿದು ಬಂದಿದೆ.
ಆರ್‌ಬಿಐ ಜನವರಿ ೩೦, ೨೦೧೭ರಂದು ಹಣಕಾಸು ಮಂತ್ರಾಲಯಕ್ಕೆ ಬರೆದ ಪತ್ರದಲ್ಲಿ ಚುನಾವಣಾ ಬಾಂಡುಗಳು ಮತ್ತು ಇದಕ್ಕಾಗಿ ಆರ್‌ಬಿಐ ಕಾಯ್ದೆಗೆ ತಿದ್ದುಪಡಿ ಕಪ್ಪು ಹಣವನ್ನು ಬಿಳಿ ಮಾಡುವುದನ್ನು ಪ್ರೋತ್ಸಾಹಿಸಿ ಕೆಟ್ಟ ಪೂರ್ವನಿದರ್ಶನವಾಗುತ್ತದೆ ಎಂದಿತ್ತು. ಬೇರರ್ ಬಾಂಡುಗಳ ಬಳಕೆಯನ್ನು ತಿರಸ್ಕರಿಸುತ್ತ, ಇವುಗಳಲ್ಲಿ ಪಾರದರ್ಶಕತೆ ಇಲ್ಲ, ಅಂತಿಮವಾಗಿ ಮತ್ತು ವಾಸ್ತವವಾಗಿ ರಾಜಕೀಯ ಪಕ್ಷಗಳಿಗೆ ಯಾರು ದೇಣಿಗೆ ನೀಡುತ್ತಿದ್ದಾರೆ ಎಂದು ತಿಳಿಯುವುದೇ ಇಲ್ಲ ಎಂದಿತ್ತು. ಸರಕಾರ ಪ್ರತಿಕ್ರಿಯೆಯನ್ನು ಕೇಳಿದ ಮರುದಿನವೇ ಆರ್‌ಬಿಐ ತನ್ನ ಟಿಪ್ಪಣಿಯನ್ನು ಕಳಿಸಿದ್ದರೂ ಆಗಿನ ರೆವಿನ್ಯೂ ಕಾರ್ಯದರ್ಶಿ ಹಸ್‌ಮುಖ್ ಆದಿಯ ಆರ್‌ಬಿಐಗೆ ಬೇರರ್ ಬಾಂಡಿನ ಪರಿಕಲ್ಪನೆಯೇ ಅರ್ಥವಾಗಿರುವಂತೆ ಕಾಣಿಸುತ್ತಿಲ್ಲ ಎಂದು ಟಿಪ್ಪಣಿ ಮಾಡಿರುವುದು ದಾಖಲಾಗಿದೆ. ಆರ್‌ಬಿಐ ಸಲಹೆ ಬಹಳ ತಡವಾಗಿ ಬಂತು, ಆ ವೇಳೆಗೆ ಹಣಕಾಸು ಮಸೂದೆ ಮುದ್ರಿತಗೊಂಡಿತ್ತು ಎಂದೂ ಅವರು ಹೇಳಿದ್ದರು. ಆರ್‌ಬಿಐನ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ ರೀತಿಯೇ ಸರಕಾರ ಈ ಪ್ರಸ್ತಾವವನ್ನು ಕಾರ್ಯರೂಪಕ್ಕೆ ತರಲು ಆಗಲೇ ನಿರ್ಧರಿಸಿತ್ತು, ಆರ್‌ಬಿಐ ಅಭಿಪ್ರಾಯಗಳನ್ನು ಕೇಳಿದ್ದು ಕೇವಲ ಒಂದು ಸೋಗು ಎಂಬುದನ್ನು ತೋರಿಸುತ್ತದೆ.
ಚುನಾವಣಾ ಆಯೋಗ ಕಾನೂನು ಮತ್ತು ನ್ಯಾಯ ಮಂತ್ರಾಲಯಕ್ಕೆ ಬರೆದ ಪತ್ರದಲ್ಲಿ ಚುನಾವಣಾ ಬಾಂಡುಗಳು ರಾಜಕೀಯ ಪಕ್ಷಗಳಿಗೆ ವಿದೇಶಿ ಮೂಲಗಳಿಂದ ಕಾನೂನುಬಾಹಿರ ವಂತಿಗೆಗಳನ್ನು ಮುಚ್ಚಿಡಲು ನೆರವಾಗುತ್ತವೆ ಎಂದಿತ್ತು. ಕಾರ್ಪೊರೇಟ್‌ಗಳು ಸತತವಾಗಿ ಮೂರು ವರ್ಷಗಳ ಸರಾಸರಿ ಲಾಭದ ೭.೫%ದ ವರೆಗೆ ವಂತಿಗೆ ನೀಡಬಹುದು ಎಂದು ಕಂಪನಿ ಕಾನೂನು ಕಾಯ್ದೆಯಲ್ಲಿ ಇದ್ದ ಅಂಶವನ್ನು ತೆಗೆಯಲು ತರಬೇಕೆಂದಿದ್ದ ತಿದ್ದುಪಡಿಯ ಫಲಿತಾಂಶವಾಗಿ ಕಪ್ಪು ಹಣವನ್ನು ರಾಜಕೀಯ ಪಕ್ಷಗಳಿಗೆ ವರ್ಗಾಯಿಸಲು ಚಿಪ್ಪು ಕಂಪನಿಗಳು ಹುಟ್ಟಿಕೊಳ್ಳುತ್ತವೆ ಎಂದು ಎಚ್ಚರಿಸಿತ್ತು.
ಚುನಾವಣಾ ಬಾಂಡುಗಳ ಮೂಲಕ ವಿದೇಶಿ ಕಂಪನಿಗಳು ರಾಜಕೀಯ ಪಕ್ಷಗಳಿಗೆ ಹಣ ಒದಗಿಸುವುದು ಸಾಧ್ಯವಾಗುತ್ತದೆ ಎಂದು ಆರ್‌ಬಿಐ ಮತ್ತು ಚುನಾವಣಾ ಆಯೋಗ ಎರಡೂ ಎಚ್ಚರಿಸಿರುವುದು ಗಮನಾರ್ಹ.
ಹಣಕಾಸು ರಾಜ್ಯಮಂತ್ರಿ ಪಿ ರಾಧಾಕೃಷ್ಣನ್ ಚುನಾವಣಾ ಆಯೋಗದಿಂದ ಸರಕಾರಕ್ಕೆ ಚುನಾವಣಾ ಬಾಂಡುಗಳ ಬಗ್ಗೆ ಟಿಪ್ಪಣಿ ಬಂದಿಲ್ಲ ಎಂದು ಸಂಸತ್ತಿನಲ್ಲಿ ಒಂದು ಸುಳ್ಳು ಉತ್ತರ ನೀಡಿದರು ಎಂಬುದನ್ನು ಆರ್‌ಟಿಐ ಮೂಲಕ ದೊರೆತಿರುವ ದಸ್ತಾವೇಜುಗಳು ತೋರಿಸುತ್ತವೆ. ನಿಜಸಂಗತಿಯೆಂದರೆ ಚುನಾವಣಾ ಆಯೋಗ ಈ ವಿಷಯದಲ್ಲಿ ತನ್ನ ವಿವರವಾದ ಅಭಿಪ್ರಾಯಗಳನ್ನು ಕೊಡಲು ಒಂದು ಪತ್ರವನ್ನು ಕಳಿಸಿತ್ತು. ಮಂತ್ರಿಗಳ ತಪ್ಪು ಹೇಳಿಕೆಯಿಂದ ಹಿಂದಕ್ಕೆ ಸರಿಯಲು ಮತ್ತು ತಪ್ಪಿಸಿಕೊಳ್ಲಲು ಹಣಕಾಸು ಮಂತ್ರಾಲಯದ ಅಧಿಕಾರಿಗಳು ದಾರಿಗಳನ್ನು ಹುಡುಕಬೇಕಾಗಿ ಬಂದಿತ್ತು.
2017ರ ಹಣಕಾಸು ಮಸೂದೆಯನ್ನು ಚುನಾವಣಾ ಬಾಂಡುಗಳಿಗೆ ಅವಕಾಶ ಕಲ್ಪಿಸಲು ಆರ್‌ಬಿಐ ಕಾಯ್ದೆ, ಜನತಾ ಪ್ರಾತಿನಿಧ್ಯ ಕಾಯ್ದೆ, ಮತ್ತು ಕಂಪನಿ ಕಾಯ್ದೆಗೆ ವಿವಿಧ ತಿದ್ದುಪಡಿಗಳನ್ನು ಒಳಗೊಂಡು ಪಾಸು ಮಾಡಿಸಿಕೊಳ್ಳಲಾಯಿತು. ವಿವಿಧ ಕಾಯ್ದೆಗಳ ತಿದ್ದುಪಡಿಗಳನ್ನು ಹಣಕಾಸು ಮಸೂದೆಗೆ ಲಗತ್ತಿಸಿದ್ದರಿಂದಾಗಿ, ಇವಕ್ಕೆ ಹಣ ಮಸೂದೆಯ ವೇಷ ತೊಡಿಸಿ ರಾಜ್ಯಸಭೆಯ ಮಂಜೂರಾತಿ ಅಗತ್ಯವಿಲ್ಲದಂತೆ ಮಾಡಿ ತಪ್ಪಿಸಿಕೊಳ್ಳಲಾಯಿತು.
ಸರಕಾರ ಚುನಾವಣಾ ಬಾಂಡುಗಳ ಯೋಜನೆಯನ್ನು ಆಳುವ ಪಕ್ಷದ ಹಿತದೃಷ್ಟಿಯಿಂದ ಜಾರಿಗೊಳಿಸಲು ನಿಯಮಗಳನ್ನು ಬದಿಗೊತ್ತುವುದನ್ನು ಮತ್ತು ಕಾನೂನುಬಾಹಿರ ವಿಧಾನಗಳನ್ನು ಬಳಸುವುದನ್ನು ಮುಂದುವರೆಸಿತು. ಹಫ್ಫಿಂಗ್ಟನ್ ಪೋಸ್ಟ್ ಬಯಲಿಗೆಳೆದಿರುವ ಸಂಗತಿ, ಜನವರಿ ೨, ೨೦೧೮ರಂದು ಚುನಾವಣಾ ಬಾಂಡುಗಳಿಗೆ ಅಧಿಸೂಚಿಸಿದ್ದ ನಿಯಮಗಳನ್ನು ಹೇಗೆ ಪ್ರಧಾನ ಮಂತ್ರಿಗಳ ಕಚೇರಿಯಿಂದ ಬಂದ ನಿರ್ದೇಶನಗಳ ಅಡಿಯಲ್ಲಿ ಉಲ್ಲಂಘಿಸಲಾಯಿತು ಎಂಬುದನ್ನು ತೋರಿಸುತ್ತದೆ. ಚುನಾವಣಾ ಬಾಂಡುಗಳನ್ನು ಒಂದು ವರ್ಷದಲ್ಲಿ ಹತ್ತು ದಿನಗಳ ಅವಧಿಯ ನಾಲ್ಕು ಕಂತುಗಳಲ್ಲಿ ನೀಡಬಹುದು ಎಂದು ನಿಯಮಗಳು ಹೇಳುತ್ತವೆ. ಅಂದರೆ ಜನವರಿ, ಎಪ್ರಿಲ್, ಜುಲೈ ಮತ್ತು ಅಕ್ಟೋಬರಿನಲ್ಲಿ. ಒಂದು ಸಾರ್ವತ್ರಿಕ ಚುನಾವಣೆಗಳು ನಡೆಯುವ ವರ್ಷದಲ್ಲಿ ಒಂದು ಹೆಚ್ಚಿನ ೩೦ದಿನಗಳ ಅವಧಿಯನ್ನು ಒದಗಿಸಬಹುದು. ಆದರೆ, ವಿಧಾನಸಭಾ ಚುನಾವಣೆಗಳಿಗೆ ಹಣ ಎತ್ತಲು ಮಾರ್ಚ್ ಮತ್ತು ಮೇ ೨೦೧೮ರಲ್ಲಿ ಚುನಾವಣಾ ಬಾಂಡುಗಳನ್ನು ನೀಡುವಂತೆ ಆದೇಶಿಸಲಾಯಿತು. ಬಹುಶಃ ಕರ್ನಾಟಕ ವಿಧಾನಸಭೆ ಚುನಾವಣೆಗಳಿಗಾಗಿ ಇದನ್ನು ಮಾಡಿರಬಹುದು.
ಫೆಬ್ರುವರಿ ೨೦೧೮ರಲ್ಲಿ ಚುನಾವಣಾ ಬಾಂಡುಗಳ ಯೋಜನೆ ಕಾರ್ಯನಿರ್ವಹಿಸಲಾರಂಭಿಸಿ ಅಕ್ಟೋಬರ್ ೨೦೧೯ರ ವರೆಗೆ ಒಟ್ಟು ೬೦೧೮ ಕೋಟಿ ರೂ.ಗಳ ಮೌಲ್ಯದ ಚುನಾವಣಾ ಬಾಂಡುಗಳನ್ನು ನೀಡಲಾಗಿದೆ. ರಾಜಕೀಯ ಪಕ್ಷಗಳು ತಮ್ಮ ಹಣಕಾಸು ಹೇಳಿಕೆಗಳನ್ನು ಸಲ್ಲಿಸಿರುವ ಚುನಾವಣಾ ಬಾಂಡುಗಳ ಮೊದಲ ಕಂತಿನಲ್ಲಿ ೯೫% ದಷ್ಟು ಮೊತ್ತ ಬಿಜೆಪಿಗೆ ಹೋಗಿದೆ ಎಂದು ತಿಳಿದು ಬಂತು. ಬಾಂಡುಗಳ ಮೂಲಕ ಬರುವ ಹಣದಲ್ಲಿ ೯೦ಶೇ.ದಷ್ಟು ಬಿಜೆಪಿ ಪಕ್ಷವೇ ಪಡೆಯುವುದು ಮುಂದುವರೆದಂತೆ ಕಾಣುತ್ತದೆ. ಮೋದಿ ಸರಕಾರ ಮೋಸದಲ್ಲಿ ನಿಧಿ ನೀಡಿಕೆ ಮತ್ತು ಕಪ್ಪು ಹಣವನ್ನು ಬಿಳಿ ಮಾಡುವುದಕ್ಕೆ ಅನುಕೂಲ ಕಲ್ಪಿಸಿಕೊಡುವ ಬದಲಾವಣೆಗಳನ್ನು ಕಾನೂನಿನಲ್ಲಿ ಮಾಡುವ ಮೂಲಕ ಹೇಗಾದರೂ ಮುಂದೊತ್ತುವ ದೃಢ ನಿರ್ಧಾರ ಮಾಡಿದ್ದೇಕೆ ಎಂಬುದಕ್ಕೆ ಇದು ವಿವರಣೆ ಕೊಡುತ್ತದೆ.
ಈ ಯೋಜನೆಯ ವಿರುದ್ಧ ಸುಪ್ರಿಂ ಕೋರ್ಟಿನಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ, ಸಿಪಿಐ(ಎಂ)ನ ಅರ್ಜಿಯೂ ಇದೆ. ಲೋಕಸಭಾ ಚುನಾವಣೆಗಳ ಮೊದಲು ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಗೊಗೊಯ್ ನೇತೃತ್ವದ ಪೀಠ ಈ ಅರ್ಜಿಗಳ ಮೇಲಿನ ತರ್ಕಗಳನ್ನು ಆಲಿಸಿತು. ಆಳುವ ಪಕ್ಷ ಅನಾಮಧೇಯವಾಗಿ ಹಣ ಸಂಗ್ರಹಿಸಲು ಮತ್ತು ಒಂದು ಸಲ್ಲದ ಪ್ರಯೋಜನವನ್ನು ಪಡೆಯಲು ಚುನಾವಣಾ ಬಾಂಡುಗಳನ್ನು ಬಳಸುವ ಪ್ರಶ್ನೆ ಒಂದು ತುರ್ತಿನ ವಿಷಯ. ಆದರೆ ತರ್ಕಗಳನ್ನು ಆಲಿಸಿದ ನಂತರ ನ್ಯಾಯಾಲಯ ಮೇ ೩೦ರ ಒಳಗೆ, ಅಂದರೆ ಚುನಾವಣೆಗಳು ಮುಗಿದ ನಂತರ ಒಂದು ಸೀಲಾದ ಲಕೋಟೆಯಲ್ಲಿ ರಾಜಕೀಯ ಪಕ್ಷಗಳು ಬಾಂಡುಗಳ ಮೂಲಕ ಪಡೆದ ಹಣದ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎನ್ನಲಾಯಿತು. ಅಮೇಲೆ ಈ ವಿಷಯದಲ್ಲಿ ಏನೂ ನಡೆದಿಲ್ಲ.
ಇಂತಹ ನ್ಯಾಯಾಂಗ ‘ನುಣಿಚಿಕೆ’ ಒಂದು ತಪ್ಪು ಮತ್ತು ಹಾನಿಕಾರಕ ಯೋಜನೆಯನ್ನು ಬಳಸಿಕೊಂಡು ಪಾರಾಗಲು ಬಿಟ್ಟಿತು. ಚುನಾವಣಾ ಬಾಂಡು ಯೋಜನೆ ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಅತ್ಯಂತ ಅಪಾಯಕಾರಿ ಕ್ರಮ ಎಂದು ಖಂಡಿತಾ ವಾದಿಸಬಹುದು. ಅದನ್ನು ಎಷ್ಟು ಬೇಗ ರದ್ದು ಮಾಡಲಾಗುತ್ತೋ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಅಷ್ಟು ಒಳ್ಳೆಯದು.