ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಂದೇ ಕುಟುಂಬದ ಮೂವರು ಸೇರಿ 5 ಮಂದಿ ಮೃತಪಟ್ಟ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.
ಚಿಂತಾಮಣಿ ತಾಲೂಕಿನ ದಂಡುಪಾಳ್ಯ ಗೇಟ್ ಬಳಿ ಕಾರು ಹಾಗೂ ಟಿಟಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಮಗ ಶ್ರೀಕಾಂತ್, ತಂದೆ ಶ್ರೀನಿವಾಸಲು ಹಾಗೂ ತಾಯಿ ಪುಷ್ಪ ಮೃತಪಟ್ಟಿದ್ದರೆ, ಟಿಟಿಯಲ್ಲಿದ್ದ 12 ಮಂದಿಯೂ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಟಿಟಿ ವಾಹನ ಆಂಧಪ್ರದೇಶದ ಬಾಯಿಕೊಂಡದಿಂದ ಚಿಂತಾಮಣಿ ಕಡೆಗೆ ಬರುತ್ತಿತ್ತು. ಅಪಘಾತಕ್ಕೀಡಾದ ಕಾರು ಬೆಂಗಳೂರಿನಿಂದ ಕಡಪ ಹೈವೇ ರಸ್ತೆ ಮುಖಾಂತರ ಆಂಧ್ರಪ್ರದೇಶದ ಕಡೆಗೆ ಹೋಗುತ್ತಿತ್ತು. ಎರಡು ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿವೆ. ಕಾರಿನಲ್ಲಿದ್ದವರು ಮೂಲತಃ ಆಂಧ್ರದವರಾದರೂ ಬೆಂಗಳೂರಿನಲ್ಲಿ ನೆಲಸಿದ್ದರು. ಬುಧವಾರ ಸಂಬಂಧಿಕರ ಮದುವೆಗೆ ಅಂತ ಆಂಧ್ರದ ಕಡೆಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ಪಲ್ಟಿಯಾಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಬಳಿ ಈ ಘಟನೆ ಸಂಭವಿಸಿದ್ದು, ಉತ್ತರಪ್ರದೇಶದ ಖಾನಪುರ ಮೂಲದ ಸೂರಜ್ (27) ಹಾಗೂ ಕಮಲ್ (26) ಮೃತಪಟ್ಟಿದ್ದಾರೆ.
ಗಂಭೀರವಾಗಿ ಗಾಯಗೊಂಡ ಜೈಸಿಂಗ್, ಯು ಜೈಸಿಂಗ್ ಅವರನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ ಇಬ್ಬರಿಗೆ ಹಿಂದೂಪೂರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
6 ಮಂದಿ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಹಿಂದೂಪುರ ಬಳಿಯ ಕೈಗಾರಿಕಾ ಪ್ರದೇಶ ಶ್ಯಾಮ್ ಪೈರಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿಕೊಂಡು ಗೌರಿಬಿದನೂರು ಮಾರ್ಗವಾಗಿ ಇನ್ನೋವಾ ಕಾರಿನಲ್ಲಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರು ಚಾಲಕನ ಅತಿ ವೇಗವೇ ಘಟನೆಗೆ ಕಾರಣ ಎಂದು ಹೇಳಲಾಗಿದ್ದು, ಗೌರಿಬಿದನೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.