ಗುಜರಾತ್ ವಿಧಾನಸಭೆ ಚುನಾವಣೆ: ಮೊದಲ ಹಂತದಲ್ಲಿ ಶೇ 57ರಷ್ಟು ಮತದಾನ

ಗಾಂಧಿನಗರ : ಗುಜರಾತ್‍ನ 19 ಜಿಲ್ಲೆಯ 89 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ಬಿರುಸಿನಿಂದ ನಡೆದಿದೆ. ಆಡಳಿತಾರೂಢ ಬಿಜೆಪಿಗೆ ಈ ಭಾರಿ ಕಾಂಗ್ರೆಸ್ ಹಾಗು ಆಮ್ ಆದ್ಮಿ ಪಕ್ಷ ಪೈಪೋಟಿ ನಡೆಸಿದ್ದು ಭಾರಿ ಕುತೂಹಲ ಕೆರಳಿಸಿದೆ.

ಇಂದು (ಗುರುವಾರ) ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ 56.88 ರಷ್ಟು ಮತದಾನವಾಗಿದೆ. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆವರೆಗೂ ನಡೆಯಿತು. ಅಲ್ಲಲ್ಲಿ ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ನಡೆಯಿತು ಎಂದು ಪೊಲೀಸರು ಹೇಳಿದ್ದಾರೆ.

2017ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಸಲ ಕಡಿಮೆ ಮತದಾನವಾಗಿದೆ. 2017ರಲ್ಲಿ ಶೇ 68 ರಷ್ಟು ಮತದಾನವಾಗಿತ್ತು.

ಸೌರಾಷ್ಟ್ರ, ಕಛ್, ರಾಜ್ಯದ ದಕ್ಷಿಣ ಭಾಗ ಒಳಗೊಂಡ 19 ಜಿಲ್ಲೆಗಳ 89 ಕ್ಷೇತ್ರಗಳಿಗೆ ಮತದಾನ ನಡೆದಿದೆ. 70 ಮಹಿಳೆಯರು ಸೇರಿ ಒಟ್ಟಾರೆ 788 ಅಭ್ಯರ್ಥಿಗಳು ಕಣದಲ್ಲಿದ್ದರು.

ಬಿಜೆಪಿ, ಕಾಂಗ್ರೆಸ್, ಎಎಪಿ ಸೇರಿದಂತೆ 36 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. 339 ಪಕ್ಷೇತರ ಅಭ್ಯರ್ಥಿಗಳೂ ಸ್ಪರ್ಧೆ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *