ಗಾಂಧಿ ಕುಟುಂಬದ ಹೊರತಾದವರು ಅಧ್ಯಕ್ಷರಾಗಲಿ: ಪ್ರಿಯಾಂಕಾ ಗಾಂಧಿ

  • ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯನ್ನು ನಾವು ನಮ್ಮ ನಾಯಕ (ಬಾಸ್) ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ:

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಘಾತಕಾರಿ ಸೋಲನುಭವಿಸಿದ ಬಳಿಕ ನಾಯಕತ್ವ ಸಮಸ್ಯೆ ಎದುರಿಸುತ್ತಿರುವ  ಕಾಂಗ್ರೆಸ್ ಪಕ್ಷಕ್ಕೆ (ಎಐಸಿಸಿ)  ಅಧ್ಯಕ್ಷರನ್ನು ಆಯ್ಕೆ ಮಾಡುವುದು ಸವಾಲಾಗಿದೆ.  ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸೋಲನುಭವಿಸಿದ ಬಳಿಕ ರಾಹುಲ್‍ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಸೋನಿಯಾಗಾಂಧಿ ಹಂಗಾಮಿ ಅಧ್ಯಕ್ಷರಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ.

ರಾಹುಲ್‍ ಗಾಂಧಿ ರಾಜೀನಾಮೆ ನೀಡುವ ವೇಳೆ ಗಾಂಧಿ  ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಬಯಕೆ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿಯವರ  ಅಭಿಪ್ರಾಯಕ್ಕೆ ಪ್ರಿಯಾಂಕಾ ಗಾಂಧಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇದರಿಂದ ಕಾಂಗ್ರೆಸ್​ನಲ್ಲೀಗ ಮತ್ತೊಮ್ಮೆ ಪಕ್ಷದ ಉತ್ತರಾಧಿಕಾರಿ ಯಾರೆಂಬ ಬಗ್ಗೆ ಚರ್ಚೆಗಳು ಶುರುವಾಗಿವೆ.

ನಮ್ಮ ಕುಟುಂಬ ಯಾರೊಬ್ಬರೂ ಕಾಂಗ್ರೆಸ್​ ಪಕ್ಷಕ್ಕೆ ಅಧ್ಯಕ್ಷರಾಗುವುದಿಲ್ಲ ಎಂದು ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ. ಅದಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಕಾಂಗ್ರೆಸ್ ಪಕ್ಷ ತನ್ನದೇ ದಾರಿಯಲ್ಲಿ ಸಾಗಬೇಕು. ಅದಕ್ಕೆ ನಮ್ಮ ಕುಟುಂಬಕ್ಕೆ ಸೇರಿರದ ವ್ಯಕ್ತಿ ಅಧ್ಯಕ್ಷರಾಗಬೇಕು ಎಂದು ನನಗೆ ಅನಿಸುತ್ತದೆ ಎಂದು ಕೂಡ ಪ್ರಿಯಾಂಕಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ಗಾಂಧಿ – ಪ್ರಿಯಾಂಕಾ ಗಾಂಧಿ

‘ಇಂಡಿಯಾ ಟುಮಾರೋ: ಭಾರತದ ಮುಂದಿನ ತಲೆಮಾರಿನ ರಾಜಕೀಯ ನಾಯಕರ ಜೊತೆಗಿನ ಮಾತುಕತೆ’ ಎಂಬ ಪುಸ್ತಕಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯನ್ನು ನಾವು ನಮ್ಮ ನಾಯಕ (ಬಾಸ್) ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಒಂದುವೇಳೆ ನಮ್ಮ ಪಕ್ಷದ ಅಧ್ಯಕ್ಷರಾಗುವವರು ‘ನೀನು ಉತ್ತರ ಪ್ರದೇಶದ ಜವಾಬ್ದಾರಿ ತೆಗೆದುಕೊಳ್ಳುವುದು ಬೇಡ, ಅಂಡಮಾನ್ ನಿಕೋಬಾರ್​​ಗೆ ಹೋಗು’ ಎಂದು ಹೇಳಿದರೂ ನಾನು ಅದನ್ನು ಸ್ವೀಕರಿಸಲು ಸಿದ್ಧಳಿದ್ದೇನೆ. ನಮ್ಮ ಪಕ್ಷದ ಅಧ್ಯಕ್ಷರು ಯಾರೇ ಆದರೂ ಅವರ ಆದೇಶವನ್ನು ನಾನು ಖಂಡಿತ ಪಾಲಿಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಸಮಸ್ಯೆಯಿದೆ ಎಂದು ಖುದ್ದು ಕಾಂಗ್ರೆಸ್ ನಾಯಕರೇ ಹಲವು ಬಾರಿ ಅಸಮಾಧಾನ ಹೊರಹಾಕಿದ್ದರು. ಕಳೆದ ತಿಂಗಳು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಸರ್ಕಾರದ ಪತನಕ್ಕೆ ಬಿಜೆಪಿ ತಂತ್ರ ರೂಪಿಸುತ್ತಿದೆ ಎಂದು ಆರೋಪಿಸಿದ್ದರು. ಅದಕ್ಕೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರೇ ತಮಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಆತಂಕ ಶುರುವಾಗಿದೆ. ನಮ್ಮ ಪಕ್ಷದ ನಾಯಕರೆನ್ನಲ್ಲ ಬಿಜೆಪಿಯ ಕುದುರೆ ವ್ಯಾಪಾರದಲ್ಲಿ ಕಳೆದುಕೊಂಡ ಮೇಲಾದರೂ ನಾವು ಎಚ್ಚೆತ್ತುಕೊಳ್ಳುತ್ತೇವಾ? ಎಂದು ಗೊತ್ತಿಲ್ಲ ಎಂದು ಟ್ವಿಟ್ಟರ್​ನಲ್ಲಿ ಟ್ವೀಟ್ ಮಾಡಿದ್ದರು.

ಕೇರಳದ ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರಸ್ತಾಪಿಸಿದ್ದರು. ಒಂದುವೇಳೆ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಒಪ್ಪದೆ ಇದ್ದರೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದು ಒಳ್ಳೆಯದು. ಹಾಗೇ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸ್ಥಾನಗಳಿಗೂ ಪಾರದರ್ಶಕ ಚುನಾವಣೆ ನಡೆದರೆ ಉತ್ತಮ. ಇದರಿಂದ ಯಾರಿಗೂ ಅಸಮಾಧಾನ ಇರುವುದಿಲ್ಲ ಎಂದು ಹೇಳಿದ್ದರು.

ಕಾಂಗ್ರೆಸ್​ನಿಂದ ಅಮಾನತುಗೊಂಡಿರುವ ಸಂಜಯ್ ಝಾ ಇತ್ತೀಚೆಗಷ್ಟೇ ನೂರಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಪಕ್ಷದ ನಾಯಕತ್ವ ಬದಲಾವಣೆಗೆ ಒತ್ತಾಯಿಸಿ ಪತ್ರ ಬರೆದಿದ್ದರು. ಹಾಗೇ, ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು, ಆ ಚುನಾವಣೆ ಪಾರದರ್ಶಕವಾಗಿರಬೇಕು ಎಂದು ಪತ್ರ ಬರೆದಿದ್ದರು ಎಂದು ಟ್ವೀಟ್ ಮೂಲಕ ಹೇಳಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಸಂಜಯ್ ಝಾ ಅವರ ಹೇಳಿಕೆಯನ್ನು ಕಾಂಗ್ರೆಸ್ ಅಲ್ಲಗಳೆದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಪ್ರಿಯಾಂಕಾ ಗಾಂಧಿ ವಾದ್ರಾ ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷರಾದರೆ ಉತ್ತಮ ಎಂದು ಹೇಳಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

Donate Janashakthi Media

Leave a Reply

Your email address will not be published. Required fields are marked *