- ಕೋವಿಡ್ ಸೋಂಕಿತಗೊಂಡು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ರಘುವಂಶ್ ಪ್ರಸಾದ್
ನವದೆಹಲಿ: ಮೊನ್ನೆಮೊನ್ನೆಯಷ್ಟೇ ಲಾಲೂ ಪ್ರಸಾದ್ ಜೊತೆಗಿನ ಸುದೀರ್ಘ ಸ್ನೇಹ ಕಡಿದುಕೊಂಡು ಆರ್ಜೆಡಿ ಪಕ್ಷದಿಂದ ಹೊರಬಂದಿದ್ದ ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್ ಇಂದು ಇಹಲೋಕ ತ್ಯಜಿಸಿದ್ದಾರೆ. ಕೋವಿಡ್ ಸೋಂಕಿತಗೊಂಡು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ವಾರದ ಹಿಂದೆ ರಘುವಂಶ್ ಪ್ರಸಾದ್ ಅವರು ಕೋವಿಡ್ ಸೋಂಕಿತಗೊಂಡು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿ ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಇವತ್ತು ಅವರು ರೋಗಕ್ಕೆ ಬಲಿಯಾಗಿಹೋಗಿದ್ದಾರೆ.
ರಘುವಂಶ್ ಪ್ರಸಾದ್ ಸಿಂಗ್ ಅವರು ಇದೇ ಗುರುವಾರದಂದು ಆರ್ಜೆಡಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಮೂಲಕ ಮೂರು ದಶಕಗಳ ಲಾಲೂ ಸ್ನೇಹಕ್ಕೆ ಅವರು ತಿಲಾಂಜಲಿ ಹಾಡಿದ್ದರು. ಆ ನಂತರ ಶುಕ್ರವಾರ ಅವರು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದು ಜೆಡಿಯು ಸೇರ್ಪಡೆಗೊಳ್ಳುವ ವದಂತಿಗೆ ಎಡೆ ಮಾಡಿಕೊಟ್ಟಿದ್ದರು. ಇಷ್ಟೆಲ್ಲಾ ಕ್ಷಿಪ್ರ ಬೆಳವಣಿಗೆಯ ಜೊತೆಗೆ ಅವರ ಸಾವಿನ ಸುದ್ದಿ ಕೂಡ ಕ್ಷಿಪ್ರವಾಗಿ ಎರಗಿದೆ.
1946 ಜೂನ್ 6ರಂದು ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಜನಿಸಿದ ರಘುವಂಶ್ ಪ್ರಸಾದ್ ಅವರು ಗಣಿತದಲ್ಲಿ ಪಿಎಚ್ಡಿ ಮಾಡಿದರು. 1973ರಲ್ಲಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದ ಮೂಲಕ ರಾಜಕಾರಣಕ್ಕೆ ಅಡಿ ಇಟ್ಟರು. 1977ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಪದಾರ್ಪಣೆಯಲ್ಲೇ ಮಂತ್ರಿಯಾಗಿದ್ದರು. ಮುಂದಿನ ವರ್ಷಗಳಲ್ಲಿ ಅವರು ಆರ್ಜೆಡಿ ಸೇರಿ ಅವರ ಮತ್ತು ಲಾಲೂ ಸ್ನೇಹದ ಯುಗ ನಿರ್ಮಾಣವಾಯಿತು. ಎಂಥ ಕಷ್ಟಕಾಲದಲ್ಲೂ ಲಾಲೂ ಮತ್ತು ರಘುವಂಶ್ ಸ್ನೇಹ ಮುರಿದುಬೀಳಲಿಲ್ಲ. ಆದರೆ, ಇತ್ತೀಚೆಗೆ ರಘುವಂಶ್ ಪ್ರಸಾದ್ ಅವರ ಬದ್ಧವೈರಿ ಎನಿಸಿದ ರಾಮ್ ಸಿಂಗ್ ಎಂಬಾತ ಆರ್ಜೆಡಿ ಸೇರಿದ ಸುದ್ದಿ ಬಂದ ಬಳಿಕ ಲಾಲೂ-ರಘುವಂಶ್ ಸ್ನೇಹದಲ್ಲಿ ಬಿರುಕು ಮೂಡಿತ್ತು. ರಾಮ ಸಿಂಗ್ ಕಾರಣಕ್ಕೆ ರಘುವಂಶ್ ಆರ್ಜೆಡಿಯನ್ನೇ ಬಿಡಲು ನಿರ್ಧರಿಸಿದರು ಎಂದು ಹೇಳಲಾಗುತ್ತಿದೆ.
ರಘುವಂಶ್ ಪ್ರಸಾದ್ ಸಿಂಗ್ ಅವರು ಮೂರು ಬಾರಿ ಕೇಂದ್ರ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಮನಮೋಹನ್ ಸಿಂಗ್ ನೇತೃತ್ವದ ಮೊದಲ ಯುಪಿಎ ಸರ್ಕಾರದ ಅವಧಿಯಲ್ಲಿ ರೂಪುಗೊಂಡಿದ್ದ ಮನ್ರೇಗಾ (MNREGA) ಯೋಜನೆಯ ಜಾರಿಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಗ್ರಾಮೀಣ ಭಾಗದ ಜನರಿಗೆ ಕೆಲಸ ಒದಗಿಸುವ ನರೇಗಾ ರೂಪುರೇಷೆ ರಚಿಸಿ ಅದನ್ನು ಅನುಷ್ಠಾನಕ್ಕೆ ತಂದ ಕೀರ್ತಿ ರಘುವಂಶ್ ಪ್ರಸಾದ್ಗೆ ಸಿಗುತ್ತದೆ. ಸಚಿವ ಸ್ಥಾನದ ಜೊತೆಗೆ ಸಂಸದರಾಗಿ ಆರು ಅವಧಿಯಲ್ಲಿ ಅವರು ಅನೇಕ ಸಂಸದೀಯ ಮಂಡಳಿಗಳ ಸದಸ್ಯರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದರು.