ಕೊವಿಡ್ ಪರಿಹಾರದಲ್ಲಿ ಜಿಪುಣತನ ಬೇಡ-ಅದಕ್ಕೆ ಆರ್ಥಿಕ ಆಧಾರವೂ ಇಲ್ಲ

ಪ್ರೊ. ಪ್ರಭಾತ್ ಪಟ್ನಾಯಕ್

ಒಟ್ಟು ವೆಚ್ಚ ನಮ್ಮ ಜಿಡಿಪಿಯ ೧ಶೇ.ದಷ್ಟೂ ಇಲ್ಲ. ಮತ್ತು, ಇದರಲ್ಲಿ ಬಹುಪಾಲು ಈಗಾಗಲೇ ಜಾರಿಯಲ್ಲಿರುವ ಸ್ಕೀಮುಗಳ ಹೊಸ ಅವತಾರಗಳಷ್ಟೇ.ಮೋದಿ ಸರಕಾರದ ಈ ಜಿಪುಣತನ ಆರ್ಥಿಕ ದೃಷ್ಟಿಯಿಂದಲೂ ಸಂಪೂರ್ಣವಾಗಿ ಅನಾವಶ್ಯಕ. ಹಣದುಬ್ಬರದ ಚಿಂತೆ ಬೇಕಾಗಿಲ್ಲ, ಬಂಡವಾಳದ ಪಲಾಯನದ ಭೀತಿಯೂ ಬೇಕಾಗಿಲ್ಲ. ಸಾರ್ವಜನಿಕ ವೆಚ್ಚಗಳನ್ನು ಗಣನೀಯವಾಗಿ ಹೆಚ್ಚಿಸಬೇಕು, ಮಹಾಮಾರಿಯಿಂದಾಗಿ ಬೀಳುವ ಹೊರೆಯ ಬಹುಭಾಗವನ್ನು ರಾಜ್ಯ ಸರಕಾರಗಳು ಹೊರಬೇಕಾಗಿರುವುದರಿಂದ, ಅವುಗಳಿಗೆ ಸಂಪನ್ಮೂಲಗಳನ್ನು ಲಭ್ಯಗೊಳಿಸಬೇಕು.

ದೇಶದ ಮೇಲೆ ಹೇರಿರುವ ದಿಗ್ಬಂಧನ ಒಂದು ಅಳತೆ ಮೀರಿದ ಪ್ರತಿಕ್ರಿಯೆ ಎಂದು ತರ್ಕಿಸಬಹುದು. ಸೋಂಕು ತಗಲಿರಬಹುದಾದವರ ಹೆಚ್ಚು ವ್ಯಾಪಕವಾದ ತಪಾಸಣೆ, ಸಾಮಾಜಿಕ ದೂರ ಕಾಯ್ದುಕೊಳ್ಳುವುದು, ವಯಸ್ಸಾದವರ ಸ್ವಯಂ-ಕ್ವಾರಂಟೈನ್, ಸೂಕ್ಷ್ಮ ಪ್ರದೇಶಗಳ ಆಯ್ದ ಲಾಕ್‌ಡೌನ್(ಚೀನಾದ ಸರಕಾರ ವುಹಾನ್‌ನಲ್ಲಿ ಮಾಡಿದಂತೆ) ಸಾಕಾಗುತ್ತಿತ್ತೇನೋ. ಈ ಬಗ್ಗೆ ವಾದ-ವಿವಾದ ನಡೆಸಬಹುದು, ಆದರೆ ವಾಸ್ತವಿಕವಾಗಿ ಹಾಕಿದ ಲಾಕ್‌ಡೌನ್ ತೀರಾ ವಿಚಾರಹೀನವಾಗಿತ್ತು ಎಂಬುದರ ಬಗ್ಗೆ ವಿವಾದ ಇರಲು ಸಾಧ್ಯವಿಲ್ಲ.

ಈ ದಿಗ್ಬಂಧನದೊಂದಿಗೇ ಅದರಿಂದಾಗಿ ಅಗತ್ಯವಾಗಿದ್ದ ಶಮನ ಕ್ರಮಗಳನ್ನೂ ಪ್ರಕಟಿಸಬೇಕಾಗಿತ್ತು. ಇದರಿಂದ ನಂತರ ಸಂಭವಿಸಿದ ಸಾಮೂಹಿಕ ನಿರ್ಗಮನವನ್ನು ತಡೆಯಬಹುದಾಗಿತ್ತು. ಏಕೆಂದರೆ ಇದು ಸರಕಾರ ಸುಪ್ರಿಂ ಕೋರ್ಟಿನ ಸಮ್ಮುಖ ಹೇಳಿಕೊಂಡಂತೆ ಸುಳ್ಳು ಸುದ್ದಿ ಹುಟ್ಟಿಸಿದ್ದ ಭೀತಿಯಿಂದ ಸಂಭವಿಸಿದ್ದಲ್ಲ, ಬದಲಿಗೆ ತೀರಾ ಹತಾಶೆಯಿಂದ ನಡೆದದ್ದು. ಲಾಕ್‌ಡೌನ್ ಜಾರಿಗೆ ಬಂದ ಪೂರ್ಣ ೩೬ ಗಂಟೆಗಳ ನಂತರ ಹಣಕಾಸು ಮಂತ್ರಿಗಳು ಕೆಲವು ಕ್ರಮಗಳನ್ನು ಪ್ರಕಟಿಸಿದರು. ಆದರೆ ಅವು ಪುಟ್ಟ ಹೆಜ್ಜೆಗಳಷ್ಟೇ.

ನಿಜಕ್ಕೂ ಭಾರತ ಹೇರಿದ ಕ್ರಮ ಎಷ್ಟೊಂದು ಕರಾಳವಾಗಿತ್ತು ಎಂಬುದರಲ್ಲಷ್ಟೇ ಅಲ್ಲ, ಅದರಿಂದ ಬಾಧಿತರಾದ ದುಡಿಯುವ ಜನಗಳ ಬಗ್ಗೆ ಎಷ್ಟೊಂದು ನಿರ್ಲಕ್ಷ್ಯದ ಪ್ರದರ್ಶನ ನಡೆಯಿತು ಎಂಬುದರಲ್ಲಿಯೂ ಅದು ಎಲ್ಲ ದೇಶಗಳನ್ನೂ ಮೀರಿಸಿದೆ.

 ಉದಾಹರಣೆಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಲಾಕ್‌ಡೌನಿನಿಂದ ನಿರುದ್ಯೋಗ ಸೌಲಭ್ಯ ಪಡೆಯಬಹುದಾಗಿದ್ದವರಲ್ಲಿ ಅದನ್ನು ಪಡೆಯಲು ಅರ್ಜಿ ಹಾಕಿದವರ ಸಂಖ್ಯೆ ಕೆಲವೇ ದಿನಗಳಲ್ಲಿ ೨.೮ ಲಕ್ಷದಿಂದ ೬೬ ಲಕ್ಷಕ್ಕೇರಿತು. ಸರಕಾರ ಈ ಬಿಕ್ಕಟ್ಟನ್ನು ಎದುರಿಸಲು ಮಂಜೂರು ಮಾಡಿದ ಕ್ರಮಗಳ ಒಟ್ಟು ವೆಚ್ಚ ಆ ದೇಶದ ಜಿಡಿಪಿಯ ೧೦ಶೇ.ದಷ್ಟು. ತದ್ವಿರುದ್ಧವಾಗಿ ನಮ್ಮ ಹಣಕಾಸು ಮಂತ್ರಿಗಳ ಪ್ಯಾಕೇಜಿನ ಒಟ್ಟು ವೆಚ್ಚ ನಮ್ಮ ಜಿಡಿಪಿಯ ೧ಶೇ.ದಷ್ಟೂ ಇಲ್ಲ. ಮತ್ತು, ಇದರಲ್ಲಿ ಬಹುಪಾಲು ಈಗಾಗಲೇ ಜಾರಿಯಲ್ಲಿರುವ ಸ್ಕೀಮುಗಳ ಹೊಸ ಅವತಾರಗಳಷ್ಟೇ. ನಿಜವಾದ ಹೊಸ ವೆಚ್ಚ ಈ ಪ್ಯಾಕೇಜಿಗೆ ಇಟ್ಟ ೧.೭ಲಕ್ಷ ಕೋಟಿ ರೂ.ಗಳಲ್ಲಿ ಅರ್ಧಕ್ಕಿಂತ ತುಸು ಹೆಚ್ಚಷ್ಟೇ.

ಅಲ್ಲದೆ, ಈ ಕ್ರಮಗಳಲ್ಲಿ ಯಾವುದೂ ವಲಸೆ ಕಾರ್ಮಿಕರಿಗೆ ನೆರವಾಗುವಂತದ್ದಲ್ಲ, ಇವುಗಳಲ್ಲಿ ದೊಡ್ಡದಾದ ಆಹಾರಧಾನ್ಯಗಳ ರೇಶನ್ ಕೂಡ. ಏಕೆಂದರೆ ಅವರಲ್ಲಿ ಹೆಚ್ಚಿನವರ ರೇಶನ್ ಕಾರ್ಡ್‌ಗಳು ಅವರ ಊರುಗಳಲ್ಲಿ ಇರಬಹುದು, ಅವರು ಕೆಲಸ ಮಾಡುವ ಸ್ಥಳಗಳಲ್ಲಿ ಅಲ್ಲ. ಈ ಎಲ್ಲದರ ಬಗ್ಗೆ ಬಹಳಷ್ಟು ಬರೆಯಲಾಗಿದೆ, ಅವನ್ನೆಲ್ಲ ಇಲ್ಲಿ ನಾನು ಮತ್ತೆ ಹೇಳಬೇಕಾಗಿಲ್ಲ.

ಮಾಡಬೇಕಾದ್ದೇನು?

ಈ ಜಿಪುಣತನ ಆರ್ಥಿಕ ದೃಷ್ಟಿಯಿಂದಲೂ ಸಂಪೂರ್ಣವಾಗಿ ಅನಾವಶ್ಯಕವಾಗಿತ್ತು ಎಂದು ನಾನಿಲ್ಲಿ ತರ್ಕಿಸ ಬಯಸುತ್ತೇನೆ. ಬಹಳಷ್ಟು ಆರ್ಥಿಕ ತಜ್ಞರು ಮತ್ತು ನಾಗರಿಕ ಸಮಾಜದ ಕಾರ್ಯಕರ್ತರು, ಕೆಳಗಿನ ೮೦ಶೇ. ಕುಟುಂಬಗಳಿಗೆ ಈ ಬಿಕ್ಕಟ್ಟನ್ನು ಎದುರಿಸಲು ಹೆಚ್ಚುವರಿ ಆಹಾರಧಾನ್ಯಗಳ ರೇಶನ್‌ನೊಂದಿಗೆ ಇನ್ನೂ ಕೆಲವು ಸರಕುಗಳನ್ನು ಸೇರಿಸುವುದಲ್ಲದೆ, ಎರಡು ತಿಂಗಳ ವರೆಗೆ ಮಾಸಿಕ ೭೦೦೦ ರೂ. ನಗದು ವರ್ಗಾವಣೆ ಮಾಡಬೇಕು ಎಂದು ಸೂಚಿಸಿದ್ದರು. ಈ ನಗದು ವರ್ಗಾವಣೆಗೇ ತಗಲುವ ವೆಚ್ಚ ೩.೬೬ಲಕ್ಷ ಕೋಟಿ ರೂ. ಆಗುತ್ತಿತ್ತು. ಇದು ಹಣಕಾಸು ಮಂತ್ರಿಗಳ ಕ್ರಮಗಳಲ್ಲಿ ಹೇಳಿದ ನಗದು ವರ್ಗಾವಣೆಯ ವೆಚ್ಚದ ಹತ್ತು ಪಟ್ಟಿಗಿಂತಲೂ ಹೆಚ್ಚು. ನಾಗರಿಕ ಸಮಾಜದ ಸಂಘಟನೆಗಳು ಸೂಚಿಸಿದ ಪ್ರಮಾಣದಲ್ಲಿ ನೆರವು ಅಗತ್ಯವಾಗಿದೆ. ಇವನ್ನು ಒದಗಿಸುವಲ್ಲಿ  ಸಾಗಾಣಿಕೆಯ ಸಮಸ್ಯೆಗಳು ಬರುತ್ತವೆ ನಿಜ, ಆದರೆ ಹಣಕಾಸು ಸಮಸ್ಯೆಗಳು ಬರುವುದಿಲ್ಲ.

ಇವಕ್ಕೆಲ್ಲ ಸದ್ಯಕ್ಕೆ ಒಂದು ವಿತ್ತೀಯ ಕೊರತೆ ಕ್ರಮದ ಮೂಲಕ ಹಣ ಒದಗಿಸಿದರೂ ಅದರಿಂದ ಆಗುವ ಹೆಚ್ಚಿನ ವಿತ್ತೀಯ ಕೊರತೆಯಿಂದ ಆಗಬಾರದ ಆರ್ಥಿಕ ದುಷ್ಪರಿಣಾಮಗಳೇನೂ ಆಗುವುದಿಲ್ಲ. ಈ ಪರಿಣಾಮಗಳು ಎರಡು ರೀತಿಗಳಲ್ಲಿ ವ್ಯಕ್ತಗೊಳ್ಳಬಹುದು: ಒಂದು, ಹಣದುಬ್ಬರದ ಮೂಲಕ. ಮತ್ತು ಇನ್ನೊಂದು ಪಾವತಿ ಬಾಕಿ ಕೊರತೆಯ ಸಮಸ್ಯೆಯನ್ನು ಉಂಟು ಮಾಡುವ ಮೂಲಕ. ಇವೆರಡನ್ನೂ ನೋಡೋಣ.

ಹಣದುಬ್ಬರದ ಆತಂಕ ಬೇಕಿಲ್ಲ

ಆವಶ್ಯಕ ಸರಕುಗಳ ಪೂರೈಕೆಗಳು ಸಮೃದ್ಧವಾಗಿರುವ ವರೆಗೆ ಮತ್ತು ಇವನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಬಹುಪಾಲು ಜನಗಳಿಗೆ ಲಭ್ಯಗೊಳಿಸಿ, ಆಮೂಲಕ ಅವರನ್ನು ಹಣದುಬ್ಬರದ ಪರಿಣಾಮಗಳು ತಟ್ಟದಂತೆ ಮಾಡಬಹುದು. ಆಗ ಹಣದುಬ್ಬರ ಎಂಬುದು ಒಂದು ಆತಂಕದ ಸಂಗತಿಯಾಗುವುದಿಲ್ಲ. ಭಾರತದಲ್ಲಿ ಈಗ ಅಂತಹ ಸನ್ನಿವೇಶ ಇದೆ.

ಅತ್ಯಂತ ಆವಶ್ಯಕವಾದ ಆಹಾರಧಾನ್ಯಗಳ ಪೂರೈಕೆ ವಿಪುಲವಾಗಿದೆ. ಸದ್ಯ ಸರಕಾರದ ಬಳಿ ೫.೮ ಕೋಟಿ ಟನ್ ಆಹಾರಧಾನ್ಯಗಳ ದಾಸ್ತಾನು ಇದೆ. ಇದರಲ್ಲಿ ೨.೧ ಕೋಟಿ ಟನ್‌ಗಿಂತ ಹೆಚ್ಚೇನೂ ಕಾಪು ದಾಸ್ತಾನು ಮತ್ತು ಸದ್ಯದ ಬಳಕೆಗೆ ಬೇಕಾಗಿಲ್ಲ. ಅಂದರೆ ೩.೭ ಕೋಟಿ ಟನ್ ಹೆಚ್ಚುವರಿ ಆಹಾರಧಾನ್ಯಗಳು ಲಭ್ಯವಿದ್ದು ಅವನ್ನು ಹೆಚ್ಚಿನ ರೇಶನ್ ಆಗಿ ವಿತರಿಸಲು, ಅಥವ ಹಣದುಬ್ಬರದ ವಿರುದ್ಧ ತಡೆಯಾಗಿ ಬಳಸಿಕೊಳ್ಳಬಹುದು.

ಹಿಂಗಾರು ಬೆಳೆ ಉತ್ತಮವಾಗಿರುತ್ತದೆ, ಅದನ್ನು ಸುರಕ್ಷಿತವಾಗಿ ಕಟಾವು ಮಾಡಬೇಕಷ್ಟೇ ಎಂದು ಹೇಳಲಾಗಿದೆ. ಇದು ಸರಕಾರದ ಆಹಾರಧಾನ್ಯಗಳ ದಾಸ್ತಾನನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೂಲಿಕಾರರ ಕೊರತೆ ಕಟಾವಿಗೆ ತಡೆಯಾಗಿದೆ ಎಂಬ ಕೆಲವು ವರದಿಗಳಿವೆ. ಇದೊಂದು ತಾತ್ಕಾಲಿಕ ಸಮಸ್ಯೆ, ಲಾಕ್‌ಡೌನ್ ಸಡಿಲಗೊಂಡಂತೆ ಇಲ್ಲವಾಗುತ್ತದೆ. ; ಆದರೂ ಅಗತ್ಯವಿದ್ದರೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ ಕೆಲಸವನ್ನು ಕೂಲಿಕಾರರ ಕೊರತೆಯಿರುವ ಕ್ಷೇತ್ರಗಳಲ್ಲಿ ಕಟಾವು ಕೆಲಸಗಳನ್ನು ಒಳಗೊಳ್ಳುವಂತೆ ವಿಸ್ತರಿಸಬಹುದು.

 ಅದೇ ರೀತಿಯಲ್ಲಿ ಇತರ ಆವಶ್ಯಕ ಸರಕುಗಳಲ್ಲಿ ತಯಾರಿಸಲ್ಪಡುವ ಸಾಮಾನುಗಳ ಪೂರೈಕೆಯನ್ನು ಹೆಚ್ಚಿಸಬಹುದು; ಬೇಡಿಕೆಯಿಲ್ಲದ್ದರಿಂದ ಉತ್ಪಾದನೆಗೆ ಇರುವ ತೊಡಕು ಈ ರೀತಿಯ ಹೆಚ್ಚಿನ ಬೇಡಿಕೆಯಿಂದ ನಿವಾರಣೆಯಾಗುತ್ತದೆ, ವಿಶೇಷ ಸಂದರ್ಭಗಳಲ್ಲಿ ಆಮದಿನ ಮೂಲಕವೂ ಇದನ್ನು ಮಾಡಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ವಿತ್ತೀಯ ಕೊರತೆ ಹೆಚ್ಚುವುದರಿಂದ ಹಣದುಬ್ಬರ ಚಿಂತೆಯ ವಿಷಯವಾಗಬಹುದು ಎಂದು ಯೋಚಿಸುವುದಕ್ಕೆ ಕಾರಣವಿಲ್ಲ.

ಇಲ್ಲಿ ಇನ್ನೊಂದು ಹೆಚ್ಚುವರಿ ಅಂಶ ಇದೆ. ಒಂದು ವಿತ್ತೀಯ ಕೊರತೆಯಿಂದ ಪಡೆದ ಹಣದಿಂದ ಆಗುವ ಬೇಡಿಕೆಯಲ್ಲಿನ ಆರಂಭಿಕ ಹೆಚ್ಚಳದಿಂದ ಹೆಚ್ಚುವ ಒಟ್ಟು ಬೇಡಿಕೆ ಆರಂಭಿಕ ಬೇಡಿಕೆಯ ಹೆಚ್ಚಳದ ಒಂದು ಗುಣಕವಾಗಿರುತ್ತದೆ. ಇದು ಲಾಕ್‌ಡೌನ್ ತೆಗೆದರೂ ಸಾಮಾಜಿಕ ದೂರೀಕರಣ ಮತ್ತು ಸಾಮಾಜಿಕ ಚಟುವಟಿಕೆಗಳ ಮೇಲೆ ನಿರ್ಬಂಧಗಳು ಮುಂದುವರೆಯಬಹುದಾದ್ದರಿಂದ ಸಾಮಾನ್ಯವಾಗಿ ಇರುವುದರ‍್ಕಿಂತ ಕಡಿಮೆಯಿರುತ್ತದೆ. ಬೇಡಿಕೆಗಳ ಮೇಲೆ ನಿರ್ಬಂಧಗಳು ಮುಂದುವರೆಯುವುದರಿಂದಾಗಿ ಜನಗಳು ಸಾಮಾನ್ಯವಾಗಿ ಇರಬಹುದಾದಕ್ಕಿಂತ ಹೆಚ್ಚಿನ ಮಟ್ಟದ ವರೆಗೆ ಖರೀದಿ ಶಕ್ತಿಯನ್ನು ಉಳಿಸಿಕೊಳ್ಳುತ್ತಾರೆ. ಇದು ತಂತಾನೇ ಒಂದು ಹಣದುಬ್ಬರ-ವಿರೋಧಿ ಅಂಶವಾಗುತ್ತದೆ.

ನಿಜ, ಕೆಲವು ಅಷ್ಟೇನೂ ಆವಶ್ಯಕವಲ್ಲದ ಸರಕುಗಳ ಅಭಾವಗಳು ಉಂಟಾಗ ಬಹುದು. ಇದರಿಂದಾಗಿ ಕಳ್ಳ ದಾಸ್ತಾನುಗಳೂ ಉಂಟಾಗಬಹುದು. ಆದರೆ ಈ ಅಭಾವಗಳು ಮಹಾಮಾರಿಯಿಂದ ಉಂಟಾಗಿರುವುದರಿಂದ ತಾತ್ಕಾಲಿವಾಗಿರಬಹುದು, ಬಹಳ ದಿನ ಉಳಿಯಲಾರವು, ಇದು ಕಳ್ಳ ದಾಸ್ತಾನಿಗೆ ತೊಡಕಾಗುತ್ತದೆ.

ನಿಜ, ಹಣದುಬ್ಬರದ ನಿರೀಕ್ಷೆಗಳು ಬಲವಾಗಿದ್ದರೆ,ಮತ್ತು ಸತತವಾಗಿ ಕಂಡು ಬಂದರೆ, ಆಗ ರೇಷನ್ ಇಲ್ಲದ ಸರಕುಗಳ ಬೆಲೆಗಳು ಸಟ್ಟಾಕೋರತನದ ಕಾರಣದಿಂದಾಗಿ ತೀವ್ರವಾಗಿ ಏರಬಹುದು. ಆದರೆ ಸರಕಾರ ಇಂತಹ ನಿರೀಕ್ಷೆಗಳನ್ನು ತಡೆಯಲು, ಪಟ್ರೋ-ಉತ್ಪನ್ನಗಳ ಬೆಲೆಗಳನ್ನು ವಿಶ್ವ ತೈಲ ಬೆಲೆಗಳ ಕುಸಿತದ ಪ್ರಯೋಜನ ಪಡೆದು ಇಳಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಬಹುದು. ಆದ್ದರಿಂದ ಹೆಚ್ಚಿನ ವಿತ್ತೀಯ ಕೊರತೆ ಹಣದುಬ್ಬರವನ್ನು ಉಂಟು ಮಾಡಬಹುದು ಎಂಬ ಚಿಂತೆ ಬೇಕಿಲ್ಲ.

ಬಂಡವಾಳದ ಪಲಾಯನದ ಭೀತಿಯೋ? ಜನಕ್ಕಿಂತ ಹಣಕಾಸು ಮುಖ್ಯ ಎಂಬ ಪ್ರವೃತ್ತಿಯೋ?

ಇನ್ನು, ಪಾವತಿ ಬಾಕಿಯ ರಂಗದಲ್ಲಿ ಇರುವ ಚಿಂತೆಯೆಂದರೆ, ವಿತ್ತೀಯ ಕೊರತೆಯನ್ನು ಹೆಚ್ಚಿಸಿದರೆ ಅದರಿಂದ ಹೆದರಿಕೊಂಡು ಹೂಡಿಕೆದಾರರು ಬಂಡವಾಳ ದೇಶದಿಂದ ಹೊರ ಹಾರುವಂತೆ ಮಾಡಬಹುದು ಎಂಬುದು. ಬಂಡವಾಳದ ಹೊರ ಹಾರಾಟ, ರೂಪಾಯಿ ಬೆಲೆ ಬೀಳುತ್ತಿರುವುದರಿಂದ ಸ್ವಲ್ಪ ಮಟ್ಟಿಗೆ ಆಗಲೇ ನಡೆಯುತ್ತಿದೆ. ಈ ಹೊರ ಹಾರಾಟ ನಮ್ಮ ವಿತ್ತೀಯ ಕೊರತೆಯಿಂದಾಗಿ ಅಲ್ಲ, ಬದಲಾಗಿ ಹಣಕಾಸು ಮಾರುಕಟ್ಟೆಗಳಲ್ಲಿ ಭೀತಿ ಆವರಿಸಿದಾಗಲೆಲ್ಲ ಡಾಲರುಗಳತ್ತ ಧಾವಿಸುವ ಪ್ರವೃತ್ತಿಇದೆ. ಇದು ಈ ಇಂತಹ ಭೀತಿಗೆ ಕಾರಣ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲೇ ಇದ್ದರೂ  ಸಂಭವಿಸುತ್ತದೆ.

ಆದರೆ ಭಾರತ ಸುಮಾರು ಅರ್ಧ ಟ್ರಿಲಿಯನ್ ಡಾಲರುಗಳ ವಿದೇಶಿ ವಿನಿಮಯ ಮೀಸಲು ಹೊಂದಿದೆ. ಒಂದು ಹಂತದ ವರೆಗೆ ರೂಪಾಯಿಯಿಂದ ಡಾಲರಿಗೆ ಹಾರಾಟವನ್ನು ತಡೆಯಲು ಇದನ್ನು ಬಳಸಬಹುದು. ಆದರೂ ಬಂಡವಾಳದ ಹಾರಾಟ ಮುಂದುವರೆದರೆ, ಮಹಾಮಾರಿಯ ಸಂದರ್ಭದಲ್ಲಿ ಬಂಡವಾಳ ಹೊರ ಹರಿವಿನ ಮೇಲೆ ಭಾರತ ನ್ಯಾಯಬದ್ಧವಾಗಿಯೇ ನಿರ್ಬಂಧಗಳನ್ನು ಹೇರಲು ಕಾರಣವಿರುತ್ತದೆ.

ನಾವೀಗ ಗಡಿಯಾಚೆ- ಈಚೆಗೆ ಜನಗಳ ಚಲನೆಯನ್ನು ನಿಷೇಧಿಸಿರುವ, ಆದರೆ ಹಣಕಾಸು ಗಡಿಯಾಚೆ-ಈಚೆಗೆ ಮುಕ್ತವಾಗಿ ಚಲಿಸುವ ಒಂದು ವಿಲಕ್ಷಣ ಸನ್ನಿವೇಶದಲ್ಲಿ ಇದ್ದೇವೆ. ಮಹಾಮಾರಿ ಮತ್ತು ಅದು ಉಂಟು ಮಾಡಿದ ಲಾಕ್‌ಡೌನ್‌ನಿಂದ ಜನಗಳಿಗೆ ಆಗಿರುವ ಸಂಕಟಗಳನ್ನು ಸರಕಾರದ ವೆಚ್ಚಗಳನ್ನು ಹೆಚ್ಚಿಸುವ ಮೂಲಕ ಶಮನಗೊಳಿಸಲು ಹೋದರೆ  ವಿತ್ತೀಯ ಕೊರತೆ ಹೆಚ್ಚುತ್ತದೆ. ಇದು ಬಂಡವಾಳ ಹೊರಗೆ ಹರಿದು ಹೋಗುವಂತೆ ಮಾಡಬಹುದು ಎಂಬ ಭೀತಿಯಿಂದಾಗಿ ಇದಕ್ಕೆ  ಹಿಂದೇಟು ಹೊಡೆದರೆ, ಅದು ಜನಗಳಿಗಿಂತ ಹಣಕಾಸಿಗೆ ಹೆಚ್ಚಿನ ಸ್ಥಾನ ಕೊಡುವ ಪ್ರವೃತ್ತಿಯ ಪರಾಕಾಷ್ಠೆ ಎಂದೇ ಹೇಳಬೇಕಾಗುತ್ತದೆ.

ಇದಕ್ಕೆ ಅವಕಾಶ ಕೊಡಬಾರದು. ಕೇಂದ್ರ ಸರಕಾರ ತನ್ನ ವಿತ್ತೀಯ ಕೊರತೆಯ ಬಗ್ಗೆ ಚಿಂತಿಸಬಾರದು, ಈ ಮಹಾಮಾರಿಯಿಂದಾಗಿ ಆಗುವ ಹೆಚ್ಚಿನ ವೆಚ್ಚದ ಹೊರೆಯ ಬಹುಭಾಗವನ್ನು ರಾಜ್ಯ ಸರಕಾರಗಳು ಹೊರಬೇಕಾಗಿರುವುದರಿಂದ, ಕೇಂದ್ರ ಅವುಗಳಿಗೆ ಸಂಪನ್ಮೂಲಗಳನ್ನು ಲಭ್ಯಗೊಳಿಸಬೇಕು, ಅವುಗಳ ಸಾಲಗಳನ್ನು ಎತ್ತಲು ಇರುವ ಮಿತಿಗಳನ್ನು ಏರಿಸಬೇಕು, ಬಹುಶಃ ಸಾರ್ವತ್ರಿಕವಾಗಿ ಅದನ್ನು ದ್ವಿಗುಣಗೊಳಿಸಬೇಕು, ಜತೆಗೆ ಅವುಗಳಿಗೆ ಮಾಡಬಹುದಾದ ಹಣಕಾಸು ವರ್ಗಾವಣೆಗಳ ಮೊತ್ತಗಳನ್ನು ಕುರಿತಂತೆ ಮಾತುಕತೆಗಳನ್ನು ನಡೆಸಬೇಕು.

ಅನು: ಕೆ.ವಿ.

Donate Janashakthi Media

Leave a Reply

Your email address will not be published. Required fields are marked *