ಕೊರೋನೋತ್ತರ ಭಾರತ ಹೇಗಿರಬಹುದು?

ಬಹುತೇಕರು ಸಮಗ್ರ ಬದಲಾವಣೆಯನ್ನು ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕಲ್ಪಿಸಿಕೊಳ್ಳುತ್ತಿದ್ದಾರೆ. ಇವರ ವಾದ ಸರಣಿ ಇಂತಿದೆ. ಕೊರೋನ ಮುನ್ನವೇ ನಮ್ಮ ಅರ್ಥ ವ್ಯವಸ್ಥೆ ಕುಂಟುತ್ತಾ ಸಾಗುತ್ತಿತ್ತು. ಕೊರೋನ ನಂತರ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದ ಆರ್ಥಿಕ ಪ್ರಗತಿ ದರ ಮೈನಸ್ ಆಗುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿಯೇ ಇಲ್ಲವಾದರೆ ತೆರಿಗೆ ಸಂಗ್ರಹ ಕ್ಷೀಣಿಸುತ್ತದೆ. ಇದರಿಂದ ಶಿಕ್ಷಣ, ಆರೋಗ್ಯ, ಭದ್ರತೆ, ಉದ್ಯೋಗ ಇತ್ಯಾದಿ ಜವಾಬ್ದಾರಿಗಳನ್ನು ನಿರ್ವಹಿಸುವುದು ಸರಕಾರಕ್ಕೆ ಕಷ್ಟವಾಗುತ್ತದೆ. ಸರಕಾರದ ವೈಫಲ್ಯ ಎಲ್ಲ ಕ್ಷೇತ್ರಗಳಲ್ಲೂ ಎದ್ದು ಕಾಣಲು ಆರಂಭವಾಗುತ್ತದೆ. ಈಗಾಗಲೇ ನಿರುದ್ಯೋಗ ಹೆಚ್ಚಿರುವ ಸಂದರ್ಭದಲ್ಲಿ ಸರಕಾರದ ವೈಫಲ್ಯ ದೊಡ್ಡಪ್ರಮಾಣದ ಅರಾಜಕತೆಯನ್ನು ಸೃಷ್ಟಿಸಬಹುದು. ಇವೆಲ್ಲವೂ ಬದಲೀ ರಾಜಕೀಯ ಧ್ರುವೀಕರಣಕ್ಕೆ ಎಡೆಮಾಡಿಕೊಡಬಹುದು ಎನ್ನುವ ಊಹೆ ಇದೆ. ಆರ್ಥಿಕ ಕುಸಿತದಿಂದ ರಾಜಕೀಯ ಧ್ರುವೀಕರಣದ ವಾದವನ್ನು ಎರಡು ಮೂರು ನೆಲೆಯಲ್ಲಿ ಒಪ್ಪಲು ಸಾಧ್ಯವಿಲ್ಲ.

ಪ್ರೊ. ಎಂ. ಚಂದ್ರ ಪೂಜಾರಿ

ಕೊರೋನ ಸಮಸ್ಯೆ ಅಂತ್ಯಗೊಂಡ ನಂತರ ಏನು? ಎನ್ನುವ ಚರ್ಚೆ ನಡೆಯುತ್ತಿದೆ.ಬಹುತೇಕ ಚರ್ಚೆಗಳು ಆರ್ಥಿಕ ಕುಸಿತವನ್ನು, ರಾಜಕೀಯ ಬದಲಾವಣೆಗಳನ್ನು, ಸಾಮಾಜಿಕ ಹಾಗು ಸಾಂಸ್ಕೃತಿಕ ಪರಿವರ್ತನೆಗಳನ್ನು ನಿರೀಕ್ಷಿಸುತ್ತಿವೆ. ಮುಂದಿನ ದಿನಗಳಲ್ಲಿ ನಮ್ಮ ಖಾಸಗಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಮೇಲ್ಪದರದ ಬದಲಾವಣೆಗಳನ್ನು ಮಾತ್ರ ಕಾಣಲು ಸಾಧ್ಯ. ನಮ್ಮ ಸಮಾಜ, ಅರ್ಥ, ರಾಜಕೀಯ ಹಾಗು ಸಾಂಸ್ಕೃತಿಕ ಬದುಕುಗಳನ್ನು ಬುಡಮೇಲು ಮಾಡುವ ಪರಿವರ್ತನೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ವಾದ. ಏಕೆಂದರೆ ಕೊರೋನದ ಸಮಸ್ಯೆಗೆ ಒಂದು ಅಂತ್ಯವಿಲ್ಲ. ಕನಿಷ್ಠ ಮೂರು ಅಂತ್ಯಗಳಿರುವ ಸಾಧ್ಯತೆ ಇದೆ. ಒಂದು, ಲಾಕ್‌ಡೌನ್‌ನ ಅಂತ್ಯ ಅಥವಾ ಕೊರೋನದ ಅಟ್ಟಹಾಸದ ಅಂತ್ಯ. ಎರಡು, ಕೊರೋನದೊಂದಿಗೆ ಬದುಕುವ ಅನಿವರ‍್ಯ ದಿನಗಳು ಮತ್ತು ಮೂರು, ಕೊರೋನದ ಅಂತ್ಯ ಅಥವಾ ಲಸಿಕೆ ಬಂದ ನಂತರದ ದಿನಗಳು. ಈ ಮೂರು ಹಂತಗಳು ಕೊರೋನ ಸೃಷ್ಟಿಸುವ ಅತಂತ್ರತೆಗಳನ್ನು ಪಳಗಿಸಲು ಸರಕಾರಕ್ಕೆ ಸಾಕಷ್ಟು ಅವಕಾಶ ಕಲ್ಪಿಸುತ್ತವೆ.

ಲಾಕ್‌ಡೌನ್ ಹಂತ

ಮಾರ್ಚ್ 15ರಿಂದ ಲಾಕ್‌ಡೌನ್ ದಿನಗಳು ಅಥವಾ ಕೊರೋನ ಅಟ್ಟಹಾಸದ ದಿನಗಳು ಆರಂಭವಾಗಿವೆ. ಇದು ಬೇರೆ ಬೇರೆ ರೂಪದಲ್ಲಿ ಅಂದರೆ ರೆಡ್‌ಜೋನ್, ಯಲ್ಲೋ ಜೋನ್ ಮತ್ತು ಗ್ರೀನ್ ಜೋನ್ ರೂಪದಲ್ಲಿ ಇನ್ನೂ ಮೂರು ನಾಲ್ಕು ತಿಂಗಳು ಮುಂದುವರಿಯುವ ಸಾಧ್ಯತೆ ಇದೆ. ಕೊರೋನ ಅಟ್ಟಹಾಸವನ್ನು ಜನರ ಪ್ರಜ್ಞೆಯ ಭಾಗ ಮಾಡಿದ್ದು ಸರಕಾರ ಮತ್ತು ಮಾಧ್ಯಮಗಳು. ಹಾಗಾಗಿ ಸರಕಾರ ತೀರ್ಮಾನಿಸಿದ ದಿನದಂದು ಕೊರೋನದ ಅಟ್ಟಹಾಸ ನಿಲ್ಲುತ್ತದೆ. ಅಂದರೆ ಸೋಂಕಿತರು, ಸತ್ತುವರು, ಗುಣಮುಖ ಆದವರ ಸಂಖ್ಯೆಯನ್ನು ಸರಕಾರ ಸಾರ್ವಜನಿಕಗೊಳಿಸುವುದು ಮತ್ತು ಅವನ್ನು ಕ್ರಿಕೆಟ್ ಸ್ಕೋರ್ ತರಹಮಾಧ್ಯಮಗಳು ಬಿತ್ತರಿಸುವುದು ನಿಂತ ನಂತರ ಕೊರೋನದ ಅಟ್ಟಹಾಸ ನಿಲ್ಲುತ್ತದೆ. ಆದರೆ ಸರಕಾರ ಕೂಡಒಮ್ಮಿಂದೊಮ್ಮೆಲೆ ನಿಲ್ಲಿಸಲು ಸಾಧ್ಯವಾಗುವುದಿಲ್ಲ.ಸೋಂಕಿತರ ಸಂಖ್ಯೆ ಇಳಿಮುಖವಾಗುವುದನ್ನು ನೋಡಿಕೊಂಡು ನಿಧಾನವಾಗಿ ನಿಲ್ಲಿಸಬೇಕಾಗುತ್ತದೆ. ಆ ಪ್ರಯತ್ನ ಈಗಾಗಲೇ ಆರಂಭವಾಗಿದೆ. ಕೊರೋನ ಸೋಂಕೇ ಇಲ್ಲದ ಜಿಲ್ಲೆಗಳನ್ನುಗುರುತಿಸುವುದು, ಸಮುದಾಯಕ್ಕೆ ಹರಡಿಲ್ಲವೆಂದು ದೃಢ ಪಡಿಸುವುದು, ಗ್ರಾಮೀಣ ಪ್ರದೇಶ ಕೊರೋನ ಸಮಸ್ಯೆಯಿಂದ ಹೊರಗಿದೆಯೆಂದು ಹೇಳುವುದು, ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವ ದಿನಗಳು ಹೆಚ್ಚಾಗುತ್ತಿದೆಯೆಂದು ಹೇಳುವುದು ಅಂದರೆ ಮೊದಲು ಮೂರು ದಿನಗಳಲ್ಲಿ ಸೋಂಕಿತರ ಸಂಖ್ಯೆ 100 ಇದ್ದದ್ದು 200 ಆಗುತ್ತಿತ್ತು ಕ್ರಮೇಣ ದ್ವಿಗುಣಗೊಳ್ಳಲು 7 ದಿನ ಅಥವಾ 10 ದಿನ ಬೇಕಾಗುತ್ತದೆಯೆಂದು ಹೇಳುವುದು ಇವೆಲ್ಲ ನಡೆದಿದೆ. ಇದೇ ವಿಧಾನದಲ್ಲಿ ಕೊರೊನ ಸೋಂಕಿತರ, ಸತ್ತವರ ಸಂಖ್ಯೆ ಇಳಿಮುಖವಾಗುವುದನ್ನು ಮುಂದಿನ ದಿನಗಳಲ್ಲಿ ನೋಡಲಿದ್ದೇವೆ. ಕೊರೋನ ಅಟ್ಟಹಾಸವನ್ನು ಸರಕಾರ ಹತೋಟಿಗೆ ತಂದಿದೆ ಎನ್ನುವ ಚಿತ್ರಣ ಲಭ್ಯವಾದ ದಿನ ಲಾಕ್‌ಡೌನ್ ಸಂಪೂರ್ಣ ತೆರವುಗೊಳ್ಳುತ್ತದೆ. ಹೆಚ್ಚುಕಡಿಮೆ ಮೂರು ನಾಲ್ಕು ತಿಂಗಳುಕೊರೋನ ಅಟ್ಟಹಾಸದ ದಿನಗಳ ಚಿತ್ರಣ ಇರಬಹುದು.

ಅತ್ಯಂತ ನಾಟಕೀಯ ಬದಲಾವಣೆಗಳನ್ನು ನೋಡಲು ಸಾಧ್ಯವಾಗುವುದು ಕೊರೋನ ಅಟ್ಟಹಾಸ ದಿನಗಳಲ್ಲೇ. ಇದನ್ನು ನಾನು ನಾಟಕೀಯ ಎನ್ನುವುದು ಏಕೆಂದರೆ ಇವು ಯಾವುವು ಹಿಂದೆ ಇರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ. ನಾಟಕೀಯತೆಯನ್ನು ಮೇಲ್‌ಸ್ತರದಿಂದ ಆರಂಭಿಸುವುದಾದರೆ ಕ್ಷಮೆಯೇ ಕೇಳದ ಪ್ರಧಾನಿಯವರು ಲಾಕ್‌ಡೌನ್ ವಿಧಿಸಿ ಜನರನ್ನು ಸಂಕಷ್ಟಕ್ಕೆ ದೂಡಿದ್ದಕ್ಕೆ ಸಾರ್ವಜನಿಕ ಕ್ಷಮೆ ಕೋರಿದ್ದು ಮೊದಲ ಸ್ಥಾನದಲ್ಲಿದೆ. ಕೆಲಸಕ್ಕೆ ಬಾರದಿದ್ದರೂ ಖಾಸಗಿ ವಲಯದಲ್ಲಿ ದುಡಿಯುವ ಅಸಂಘಟಿತ ಕಾರ್ಮಿಕರಿಗೆ ಸಂಬಳ ಕೊಡಲು, ರೇಶನ್ ಕಾರ್ಡ್ ಇಲ್ಲದಿದ್ದರೂ ರೇಶನ್ ಕೊಡಲು, ಮಂದಿರ, ಮಸೀದಿ, ಚರ್ಚ್ಗಳನ್ನು ಮುಚ್ಚಲು, ಎಂಪಿ, ಎಂಎಲ್‌ಎಗಳ ಸಂಬಳವನ್ನು ಕಡಿತ ಮಾಡಲು ಆದೇಶ ಮಾಡಿದ್ದು ಇವೆಲ್ಲವೂ ಊಹಿಸಲು ಅಸಾಧ್ಯ ಕ್ರಮಗಳು. ಹಲವು ಶ್ರೀಮಂತರು ಕೊರೋನ ಪರಿಹಾರಕ್ಕೆ ಕೋಟಿಗಟ್ಟಲೆ ಹಣ ನೀಡಿದ್ದು ಕೂಡ ಅಪರೂಪ ಕ್ರಮ. ಇವೆಲ್ಲ ಮೇಲ್‌ಸ್ತರದಲ್ಲಿ ಕಂಡ ಬದಲಾವಣೆಗಳ ಕೆಲವು ಸ್ಯಾಂಪಲ್‌ಗಳು.

ಹಲವು ತಿಂಗಳು ಲಾಕ್‌ಡೌನ್ ಆದರೂ ಸುಧಾರಿಸಿಕೊಳ್ಳುವಷ್ಟು ಶಕ್ತಿಯುಳ್ಳವರುಮಧ್ಯಮ ವರ್ಗದವರು. ತಮ್ಮ ನೆಮ್ಮದಿ ಬದುಕು, ಆರೋಗ್ಯ, ಶುಚಿತ್ವ ಮತ್ತು ನೆರೆಯವರ ನೆಮ್ಮದಿ ಬದುಕು, ಆರೋಗ್ಯ, ಶುಚಿತ್ವಗಳ ನಡುವೆ ಸಂಬಂಧ ಇದೆಯೆಂದು ಆಲೊಚಿಸಿದವರಲ್ಲ ಇವರು. ಆದರೆ ತಮ್ಮ ನೆಮ್ಮದಿ ನೆರೆಯವರ ನೆಮ್ಮದಿಯಲ್ಲಿದೆ ಎನ್ನುವ ಪಾಠವನ್ನು ಕೊರೊನ ಮಾಡುತ್ತಿದೆ. ಇವರು ಕೂಡ ಸಾಕಷ್ಟು ಔದರ‍್ಯ ಪ್ರದರ್ಶನ ಮಾಡಿದ್ದಾರೆ. ದೇಣಿಗೆ ನೀಡಿದ್ದಾರೆ, ರೇಶನ್ ಹಂಚಿದ್ದಾರೆ, ಅಸಹಾಯಕರಿಗೆ ಊಟ ನೀಡಿದ್ದಾರೆ, ಶುಚಿತ್ವದ ಬಗ್ಗೆ ಪಾಠ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಮಾನಸಿಕವಾಗಿ ಬಳಲಿದ್ದಾರೆ. ತಾನು, ತನ್ನ ಕುಟುಂಬದ ನೆಮ್ಮದಿ ಬದುಕು ತನ್ನ ದುಡಿಮೆಯಲ್ಲಿ ಅಡಗಿದೆ ಎಂದು ನಂಬಿದವರು ಇವರು. ಇದೇ ಕಾರಣದಿಂದಕೈತೊಳೆಯುವ, ಸ್ನಾನ ಮಾಡುವ, ತ್ಯಾಜ್ಯ ನಿರ್ವಹಣೆ ಇತ್ಯಾದಿ ಖಾಸಗಿ ಶುಚಿತ್ವವನ್ನು ಹೆಚ್ಚಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದನ್ನು ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ನೆರೆಯವರು ಕೆಮ್ಮಿದರೆ, ಉಗುಳಿದರೆ, ಸೀನಿದರೆ ಆತಂಕ ಪಡುತ್ತಾರೆ. ಪೋಲಿಸರಿಗೆ, ಆಸ್ಪತ್ರೆಗೆ ಫೋನ್ ಮಾಡುತ್ತಾರೆ.

ಮೂಲಸೌಕರ್ಯಗಳ ಕೊರತೆಯನ್ನು ಅನುಭವಿಸುತ್ತಲೇ ಬಂದವರು ತಳಸ್ತರದ ಜನರು. ಹಾಗೆಂದು ಇವರಲ್ಲಿ ಬಹುತೇಕರು ತಮ್ಮ ಮಾನಸಮ್ಮಾನವನ್ನು ಬಲಿಕೊಟ್ಟು ಬದುಕಿದವರಲ್ಲ. ಅಂದರೆ ಕೊರತೆ ಇದೆಯೆಂದು ಮತ್ತೊಬ್ಬರಲ್ಲಿ ಭಿಕ್ಷೆ ಬೇಡುವವರಲ್ಲ; ಸಣ್ಣಪುಟ್ಟ ವ್ಯಾಪಾರ, ಉದ್ದಿಮೆ, ಉದ್ಯೋಗ ಮಾಡಿ ಜೀವನ ಮಾಡುವವರು. ಲಾಕ್‌ಡೌನ್ ಇವರಲ್ಲಿ ಬಹುತೇಕರ ಜೀವನೋಪಾಯದ ಎಲ್ಲ ದಾರಿಗಳನ್ನು ಮುಚ್ಚಿದೆ. ಇದರಿಂದಾಗಿ ಇವರಲ್ಲಿ ಕೆಲವರು ಸರಕಾರ ಅಥವಾ ಸರಕಾರೇತರ ಸಂಸ್ಥೆಗಳು ನೀಡುವ ಊಟದ ಪ್ಯಾಕ್‌ಗಳನ್ನು ಅವಲಂಬಿಸುವ ಸ್ಥಿತಿ ನಿರ್ಮಾಣ ಆಗಿದೆ. ಇದಕ್ಕಾಗಿ ಬೀದಿಬದಿಯಲ್ಲಿ ಕ್ಯೂ ನಿಲ್ಲಬೇಕು. ದುಡಿದು ಉಣ್ಣುವವರು ಬೀದಿಬದಿಯಲ್ಲಿ ನೂರಾರು ಜನರೊಂದಿಗೆ ಒಂದು ತುತ್ತು ಅನ್ನಕ್ಕಾಗಿ ಕ್ಯೂ ನಿಲ್ಲುವುದು ಹಿಂಸೆಯ ಸಂಗತಿ. ಇವರ ಮಾನಸಿಕ ತೊಳಲಾಟವನ್ನು ಅನುಭವಿಸಿದವರು ಮಾತ್ರ ಹೇಳಲು ಸಾಧ್ಯ. ಇರ‍್ಯಾರು ಕಾನೂನು ಮುರಿಯವವರಲ್ಲ, ಪೋಲಿಸರನ್ನು ಎದುರಿಸುವವರಲ್ಲ. ಬದುಕಿ ಉಳಿಯಲು ಇವರು ಬೀದಿಗೆ ಬರುವುದು ಅನಿವರ‍್ಯ. ಇವರ ಈ ನಡೆ ಜೀವನಪೂರ್ತಿ ಪಥ್ಯದಲ್ಲಿರುವವರನ್ನು ದೇಶಕ್ಕಾಗಿ ಪಥ್ಯ ಮಾಡಲು ರೆಡಿ ಇಲ್ಲದವರ ಸ್ಥಾನದಲ್ಲಿ ನಿಲ್ಲಿಸುತ್ತಿದೆ.

ರಡನೇ ಸ್ಟೇಜ್

ಲಾಕ್‌ಡೌನ್ ಮುಕ್ತಾಯಗೊಂಡು ಕೊರೋನ ರೋಗಕ್ಕೆ ಲಸಿಕೆ ಬರುವ ಮಧ್ಯದ ಅವಧಿಯನ್ನು ಕೊರೋನ ಅಂತ್ಯದ ಎರಡನೇ ಸ್ಟೇಜ್ ಎನ್ನಬಹುದು. ರೋಗ ಪರಿಹಾರ ಲಸಿಕೆಯ ಹುಡುಕಾಟ ಭರದಿಂದ ಸಾಗಿದೆ. ಕೆಲವರ ಪ್ರಕಾರ ಈ ಡಿಸೆಂಬರ್ ವೇಳೆಗೆ ಲಸಿಕೆ ಬಳಕೆಗೆ ಬರಬಹುದು. ಇನ್ನು ಕೆಲವರ ಪ್ರಕಾರ ಲಸಿಕೆ ಸಿದ್ದಗೊಳ್ಳಲು ಕನಿಷ್ಠ ಇನ್ನೂ ಒಂದು ವರ್ಷ ಕಾಯಬೇಕಾಗಿದೆ. ಒಂದು ವರ್ಷದ ನಂತರ ಲಸಿಕೆ ಬಂದರೂ ಅದನ್ನು ಎಲ್ಲರಿಗೂ ನೀಡಿ ರೋಗ ನಿರೋಧಕ ಶಕ್ತಿರೂಪುಗೊಳ್ಳಲು ಕನಿಷ್ಠ ಎರಡು ಮೂರು ವರ್ಷಗಳು ಬೇಕು. ಇದು ಅತ್ಯಂತ ಕ್ರೂಶಿಯಲ್ ಅವಧಿ. ಈ ಅವಧಿಯಲ್ಲಿ ಕೊರೊನ ರೋಗದ ಏರಿಳಿಕೆಯ ನೆಲೆಯಲ್ಲಿ ಒಂದೆರಡು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಒಂದು, ಮನೆಯಿಂದಲೇ ಕೆಲಸ ಮಾಡುವ ಪ್ರಾಕ್ಟೀಸ್ ಹೆಚ್ಚಾಗಬಹುದು. ಆದರೆ ಇದು ಮಾಹಿತಿ ತಂತ್ರಜ್ಞಾನ ಬಳಕೆಯಿಂದ ಪೂರ್ಣಗೊಳಿಸಲು ಸಾಧ್ಯವಾಗುವ ಕೆಲವು ಕೆಲಸಗಳಿಗೆ ಮಾತ್ರ ಸೀಮಿತ. ಇನ್ನುಳಿದ ಕೆಲಸಗಳಿಗೆ ಜನರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಅನಿವರ‍್ಯ. ಇಂತಹ ಸಂದರ್ಭದಲ್ಲಿ ಮಧ್ಯಮ ವರ್ಗದ ಜನರು ಲಾಕ್‌ಡೌನ್ ಸಂದರ್ಭದ ಆರೋಗ್ಯ ಸಂಬಂಧಿ ಜಾಗ್ರತೆಯನ್ನು ಪಾಲಿಸಲು ಪ್ರಯತ್ನಿಸಬಹುದು. ಇವರ ಪ್ರಯತ್ನ ಇವರ ಮನೆ ಮತ್ತು ಇವರು ಕೆಲಸ ಮಾಡುವ ಸ್ಥಳಗಳಲ್ಲಿ ಮಾತ್ರ ನಡೆಯಬಹುದು.

ಸಾರ್ವಜನಿಕ ಸ್ಥಳಗಳಲ್ಲಿ ಅಸಂಘಟಿತ ವಲಯ ಮತ್ತು ಅಸಂಘಟಿತ ಕಾರ್ಮಿಕರು ಹೆಚ್ಚಿದ್ದಾರೆ. ಸರಕಾರ ಇವರಿಗೆ ಸಂಬಳ, ಉದ್ಯೋಗ, ಸಾಮಾಜಿಕ ಭದ್ರತೆಗಳನ್ನು ಕೊರೋನ-ಪೂರ್ವದಲ್ಲೂ ನೀಡಿಲ್ಲ. ಈ ಅವಧಿಯಲ್ಲೂ ನೀಡುವ ಗ್ಯಾರಂಟಿ ಇಲ್ಲ. ಈ ಎಲ್ಲ ಭದ್ರತೆಗಳಿಲ್ಲದೆ ಅವರ ಊಟ, ವಸತಿ, ಆರೋಗ್ಯ, ಕುಡಿಯುವ ನೀರು ಇತ್ಯಾದಿ ಮೂಲಸೌಕರ್ಯಗಳು ಸುಧಾರಿಸಲು ಸಾಧ್ಯವಿಲ್ಲ. ಹಾಗೆಂದು ರೋಗಕ್ಕೆ ಹೆದರಿ ಮನೆಯಲ್ಲಿರಲು ಸಾಧ್ಯವಿಲ್ಲ. ದುಡಿಯಲು ಹೊರಗೆ ಹೋಗಲೇ ಬೇಕು. ಇದರಿಂದಕೊರೋನಕ್ಕೆ ಬಲಿಯಾಗುವವರಲ್ಲಿ ಇವರ ಸಂಖ್ಯೆ ಹೆಚ್ಚಾಗಬಹುದು. ಇವರ ಸಾವನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆಯೆಂದು ಮಾಧ್ಯಮಗಳು ಬಿಂಬಿಸುವ ಸಾಧ್ಯತೆ ಇಲ್ಲ. ಏಕೆಂದರೆ ಸರಕಾರದ ಧೋರಣೆಯನ್ನು ಬಿಂಬಿಸಲು ಸರಕಾರಿ ಚ್ಯಾನಲ್‌ಗಳ ಜೊತೆ ಖಾಸಗಿ ಚ್ಯಾನಲ್‌ಗಳು ಸ್ಪರ್ಧಿಸುತ್ತಿವೆ. ಇಂತಹ ಸಂದರ್ಭದಲ್ಲಿ ಲಾಕ್‌ಡೌನ್ ನಂತರದ ಕೊರೋನ ಸೋಂಕು ಮತ್ತು ಸಾವಿನ ಸಂಖ್ಯೆಯನ್ನು ವಸ್ತುನಿಷ್ಠವಾಗಿ ಬಿಂಬಿಸುವ ಮಾಧ್ಯಮಗಳನ್ನು ಹುಡುಕುವುದು ಕಷ್ಟ. ಲಾಕ್‌ಡೌನ್ ನಂತರವೂ ಕೊರೋನದಿಂದ ಸತ್ತವರ ಸಂಖ್ಯೆ ಏರಿದರೆ ಸರಕಾರದ ಲಾಕ್‌ಡೌನ್ ನೀತಿಯೇ ತಪ್ಪು ಎಂದು ಸರಕಾರ ವೈಫಲ್ಯವನ್ನು ಬಿಂಬಿಸಿದಂತಾಗುತ್ತದೆ. ಇದನ್ನು ಸರಕಾರ ಇಷ್ಟಪಡುವುದಿಲ್ಲ.

ಜನ

ಲಸಿಕೆ ಬಂದು ಕೊರೋನ ಗುಣಪಡಿಸಬಹುದಾದ ಖಾಯಿಲೆ ಎಂದಾದ ಮೇಲೆ ಆಯ್ಯಪ್ಪನ ಭಕ್ತರ ಸ್ಥಿತಿ ನಿರ್ಮಾಣವಾಗಬಹುದು. ಕುಡಿತ, ಸಿಗರೇಟ್ ಮತ್ತು ಇತರ ಚಟ ಇರುವ ಕೆಲವರು ಇವುಗಳಿಂದ ಮುಕ್ತಿ ಪಡೆಯಲು ಆಯ್ಯಪ್ಪನ ಮಾಲೆ ಧರಿಸಿ ಕೆಲವು ದಿನ ಶಿಸ್ತಲ್ಲಿರುತ್ತಾರೆ. ಅಯ್ಯಪ್ಪನ ದರ್ಶನ ಮಾಡಿ ಬಂದ ನಂತರ ಇವರಲ್ಲಿ ಕೆಲವರು ಚಟ ಬಿಡುವ ಸಾಧ್ಯತೆ ಇದೆ. ಆದರೆ ಹಲವರು ಮುಂದುವರಿಸಿದ ಉದಾಹರಣೆಗಳಿವೆ. ಇದೇ ರೀತಿ ಕೊರೋನ ಪಳಗಿಸಬಹುದಾದ ಖಾಯಿಲೆ ಆದ ನಂತರ ಅದಕ್ಕೆ ಭಯ ಪಡುವ ಸಾಧ್ಯತೆ ಇಲ್ಲ. ದುಡ್ಡು, ಆಸ್ತಿಪಾಸ್ತಿಯ ನಶ್ವರತೆ, ಮನುಷ್ಯತ್ವದ ಪ್ರಾಮುಖ್ಯತೆ, ದೇವರ ಅನುಪಯುಕ್ತತತೆ, ಅನುಭೋಗ ಸಂಸ್ಕೃತಿಯ ದೋಷಗಳು, ಆರೋಗ್ಯ ಕ್ಷೇತ್ರದಲ್ಲಿ ದುಡಿಯುವವರೇ ದೇವರು, ಪೋಲಿಸರ ಮನುಷ್ಯತ್ವ, ಜಾತಿ, ಧರ್ಮ, ಲಿಂಗ ತಾರತಮ್ಯಗಳ ಅಪಹಾಸ್ಯ ಇವೆಲ್ಲ ಕೊರೋನ ಅಟ್ಟಹಾಸ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚಲಾವಣೆಯಲ್ಲಿದ್ದ ಸಂಗತಿಗಳು. ಇವೆಲ್ಲವೂ ಸ್ಮಶಾನ ವೈರಾಗ್ಯದ ಲಕ್ಷಣಗಳು. ಇವು ಯಾವುವು ಕೂಡ ಬದಲಾಗುವ ಸಂಗತಿಗಳಲ್ಲ. ಅಂದರೆ ಹಿಂದಿನಂತೆ ಆಸ್ತಿಪಾಸ್ತಿ, ದೇವರು, ಜಾತಿ, ಧರ್ಮ, ಲಿಂಗ ತಾರತಮ್ಯಗಳು ಮುಖ್ಯವಾಗಲಿವೆ. ಸಮಾನತೆ, ಮನುಷ್ಯತ್ವ ಇತ್ಯಾದಿಗಳು ಹಿಂದಿನ ಬೆಂಚಲ್ಲೇ ಇರಲಿವೆ. ಅನುಭೋಗ ಸಂಸ್ಕೃತಿಯನ್ನು ಬೆಳೆಸಿರುವುದು ಮಾರುಕಟ್ಟೆ ನಿರ್ದೇಶಿತ ಅಭಿವೃದ್ಧಿ. ಇಲ್ಲಿ ಖರೀದಿಸುವ ಶಕ್ತಿ ಮತ್ತು ಅನುಭೋಗದ ನಡುವೆ ಸಂಬಂಧ ಇದೆ. ಕೊರೋನ ನಂತರವೂ ವಿವಿಧ ವರ್ಗಗಳ ಖರೀದಿಸುವ ಶಕ್ತಿಯಲ್ಲಿ ವಿಶೇಷ ಏರುಪೇರಾಗುವುದಿಲ್ಲ. ಇಂದು ಮತ್ತು ಮುಂದು ಕೂಡ ಮೇಲ್‌ಸ್ತರದ ಜನರು ಹೆಚ್ಚು ಅನುಭೋಗಿಸುತ್ತಾರೆ.ತಳಸ್ತರದ ಜನರು ಮೂಲಸೌಕರ್ಯಗಳಿಗೂ ಪರದಾಡುವುದು ತಪ್ಪುವುದಿಲ್ಲ.

ಇಡೀ ಕೊರೋನ ಅಟ್ಟಹಾಸದ ಸಂದರ್ಭದಲ್ಲಿ ಸರಕಾರಿ ಆರೋಗ್ಯ ವ್ಯವಸ್ಥೆ – ವೈದ್ಯರು, ನರ್ಸ್ಗಳು, ಆರೋಗ್ಯ ಸಹಾಯಕರು – ಯುದ್ದೋಪಾದಿಯಲ್ಲಿ ಕೆಲಸ ಮಾಡಿದೆ. ಖಾಸಗಿ ಆರೋಗ್ಯ ಕ್ಷೇತ್ರ ಫೀಲ್ಡ್ಗೆ ಬರಲೇ ಇಲ್ಲ. ಖಾಸಗಿ ಕ್ಲಿನಿಕ್‌ಗಳು, ವೈದ್ಯರು ಕಡ್ಡಾಯವಾಗಿ ಸೇವೆ ನೀಡಬೇಕೆಂದು ಸರಕಾರ ಆದೇಶ ಮಾಡಿದರೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರೇ ಹೆಚ್ಚು. ಕೊರೋನ ಪಳಗಿಸಿದ ನಂತರ ಯಥಾಪ್ರಕಾರ ಖಾಸಗಿ ಆರೊಗ್ಯ ಕ್ಷೇತ್ರ ಮುಂಚೂಣಿಗೆ ಬರಲಿದೆ. ಜಾತಿ, ಧರ್ಮ, ಲಿಂಗ ತಾರತಮ್ಯಗಳು ಕೊರೋನ ಸಂದರ್ಭದಲ್ಲೂ ನಕರಾತ್ಮಕ ರೂಪದಲ್ಲಿ ಚರ್ಚಿಸಲ್ಪಟ್ಟಿವೆ. ಅಂದರೆ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ, ಕಸ ಗುಡಿಸುವ, ಮಕ್ಕಳ ಡೈಪರ್ ಬದಲಾಯಿಸುವ ಸ್ಥಿತಿ ಗಂಡಸಿಗೂ ಬಂತಲ್ಲ ಎನ್ನುವ ಚಿತ್ರಣ. ಕೆಲವರ ಜೀವತಳಿಯಲ್ಲಿಯೇ ಕೋಮು ದ್ವೇಷ ತುಂಬಿದೆ. ಇದನ್ನು ಬದಲಾಯಿಸಲು ಕೊರೋನ ಕೂಡ ವಿಫಲವಾಗಿದೆ. ನಮ್ಮೆಲ್ಲ ಸಮಸ್ಯೆಗೂ ಮುಸ್ಲಿಮರೇ ಕಾರಣ ಎನ್ನುವ ತುತ್ತೂರಿ ಕೊರೋನ ಅಟ್ಟಹಾಸ ಸಂದರ್ಭದಲ್ಲೂ ಬದಲಾಗಿಲ್ಲ. ಬಿಗಿಯಾದ ಕಾನೂನು ಕ್ರಮ ಇಲ್ಲವಾದರೆ ಇವರು ಮುಂದೆಯೂ ಬದಲಾಯಿಸಿಕೊಳ್ಳುವುದಿಲ್ಲ. ಇವೆಲ್ಲ ಮೇಲ್ಪದರದ ಬದಲಾವಣೆಗಳು. ಮುಂದಿನ ಭಾಗದಲ್ಲಿ ನಮ್ಮ ಆರ್ಥಿಕ, ರಾಜಕೀಯ, ಸಮಾಜ, ಸಂಸ್ಕೃತಿಗಳನ್ನು ಬುಡಮೇಲು ಮಾಡುವ ಅಥವಾ ಸಮಗ್ರ ಬದಲಾವಣೆಗಳು ಏಕೆ ಆಗುವುದಿಲ್ಲ ಎನ್ನುವುದನ್ನು ವಿವರಿಸಿದ್ದೇನೆ.
ಸಮಗ್ರ ಬದಲಾವಣೆ ಏಕಾಗುವುದಿಲ್ಲ?

ಬಹುತೇಕರು ಸಮಗ್ರ ಬದಲಾವಣೆಯನ್ನು ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕಲ್ಪಿಸಿಕೊಳ್ಳುತ್ತಿದ್ದಾರೆ. ಇವರ ವಾದ ಸರಣಿ ಇಂತಿದೆ. ಕೊರೋನ ಮುನ್ನವೇ ನಮ್ಮಅರ್ಥ ವ್ಯವಸ್ಥೆ ಕುಂಟುತ್ತಾ ಸಾಗುತ್ತಿತ್ತು. ಕೊರೋನ ನಂತರ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದ ಆರ್ಥಿಕ ಪ್ರಗತಿ ದರ ಮೈನಸ್ ಆಗುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿಯೇ ಇಲ್ಲವಾದರೆ ತೆರಿಗೆ ಸಂಗ್ರಹ ಕ್ಷೀಣಿಸುತ್ತದೆ. ಇದರಿಂದಶಿಕ್ಷಣ, ಆರೋಗ್ಯ, ಭದ್ರತೆ, ಉದ್ಯೋಗ ಇತ್ಯಾದಿ ಜವಾಬ್ದಾರಿಗಳನ್ನು ನಿರ್ವಹಿಸುವುದು ಸರಕಾರಕ್ಕೆ ಕಷ್ಟವಾಗುತ್ತದೆ. ಸರಕಾರದ ವೈಫಲ್ಯ ಎಲ್ಲ ಕ್ಷೇತ್ರಗಳಲ್ಲೂ ಎದ್ದು ಕಾಣಲು ಆರಂಭವಾಗುತ್ತದೆ. ಈಗಾಗಲೇ ನಿರುದ್ಯೋಗ ಹೆಚ್ಚಿರುವ ಸಂದರ್ಭದಲ್ಲಿ ಸರಕಾರದ ವೈಫಲ್ಯ ದೊಡ್ಡಪ್ರಮಾಣದ ಅರಾಜಕತೆಯನ್ನು ಸೃಷ್ಟಿಸಬಹುದು. ಇವೆಲ್ಲವೂ ಬದಲೀ ರಾಜಕೀಯ ಧ್ರುವೀಕರಣಕ್ಕೆ ಎಡೆಮಾಡಿಕೊಡಬಹುದು ಎನ್ನುವ ಊಹೆ ಇದೆ.

ಆರ್ಥಿಕ ಕುಸಿತದಿಂದ ರಾಜಕೀಯ ಧ್ರುವೀಕರಣದ ವಾದವನ್ನು ಎರಡು ಮೂರು ನೆಲೆಯಲ್ಲಿ ಒಪ್ಪಲು ಸಾಧ್ಯವಿಲ್ಲ. ಒಂದು, ಕೊರೋನದಿಂದ ಖಂಡಿತವಾಗಿಯೂ ನಮ್ಮ ಆರ್ಥಿಕ ಪ್ರಗತಿ ಕುಂಠಿತವಾಗಲಿದೆ. ನೋಟು ರದ್ಧತಿ, ಜಿಎಸ್‌ಟಿಗಳಿಂದ ಸಣ್ಣಪುಟ್ಟ ವ್ಯಾಪಾರ ಉದ್ದಿಮೆಗಳು ಕೊರೋನ ಮೊದಲೇ ನೆಲೆಕಚ್ಚಿವೆ. ಕೊರೋನ ಇವನ್ನು ತಲೆ ಎತ್ತದಂತೆ ಮಾಡಿದೆ. ವರ್ಕಿಂಗ್ ಕ್ಯಾಪಿಟಲ್ ಕೊರತೆ, ಬೇಡಿಕೆ ಕೊರತೆ, ಕೆಲಸಗಾರರ ಕೊರತೆಗಳಿಂದ ಇವು ಒಂದೆರಡು ವರ್ಷ ಉಸಿರಾಡುವುದು ಕಷ್ಟ. ಕೃಷಿ ಈಗಾಗಲೇ ಅಗತ್ಯಕ್ಕಿಂತ ಹೆಚ್ಚು ಜನರನ್ನು ಸೇರಿಸಿಕೊಂಡಿತ್ತು. ಒಂದೆರಡು ಜನರು ತೊಡಗಿಸಿಕೊಳ್ಳಬೇಕಾದ ಜಾಗದಲ್ಲಿ ಬೇರೆ ಉದ್ಯೊಗವಿಲ್ಲದೆ ಏಳೆಂಟು ಜನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಪೇಟೆಪಟ್ಟಣಗಳಿಗೆ ವಲಸೆ ಹೋದವರು ಕೊರೋನ ನಂತರ ಊರು ಸೇರುತ್ತಿದ್ದಾರೆ. ಇವರಿಗೆಲ್ಲ ಕೃಷಿ ಅಥವಾ ಗ್ರಾಮೀಣ ಪ್ರದೇಶದಲ್ಲಿರುವ ಕೃಷಿಯೇತರ ಚಟುವಟಿಕೆಗಳೇ ಆಧಾರವಾಗಬೇಕು. ಕೃಷಿ ಮತ್ತು ಕೃಷಿಯೇತರ ಚಟುವಟಿಕೆ ಎರಡೂ ಕೂಡ ಸರಕಾರದಿಂದ ಆದ್ಯತೆ ಪಡೆದಿಲ್ಲ. ಕೊರೋನ ನಂತರವೂ ಆದ್ಯತೆ ಪಡೆಯುವ ಸಾಧ್ಯತೆಗಳು ಕಡಿಮೆ. ಆದರೆ ಇವಕ್ಕೆ ಆದ್ಯತೆ ನೀಡದಿದ್ದರೆ ಪೇಟೆಪಟ್ಟಣದಿಂದ ಹಿಂತಿರುಗಿದ ವಲಸೆ ಕೆಲಸಗಾರರು ತಕ್ಷಣ ನೆಲೆಕಾಣುವುದು ಕಷ್ಟ.ಕೊರೋನ ಅರ್ಬನ್ ಸಮಸ್ಯೆಯಾದರೂ ಇದರ ಪರಿಣಾಮ ಗ್ರಾಮೀಣ ಪ್ರದೇಶದಲ್ಲೂ ಕಾಣಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ ಕೊರೋನದ ನಕರಾತ್ಮಕ ಆರ್ಥಿಕ ಪರಿಣಾಮದ ಮೊದಲ ಬಲಿ ಸಣ್ಣಪುಟ್ಟ ವ್ಯಾಪಾರ, ಉದ್ದಿಮೆಗಳು, ಅಸಂಘಟಿತ ವಲಯದ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು. ನಮ್ಮ ಜನಸಂಖ್ಯೆ ಶೇ.70ರಷ್ಟು ಇವರೇ ಇದ್ದಾರೆ. ಆದರೆ ಇವರೆಲ್ಲ ಜಾತಿ, ಧರ್ಮ, ಭಾಷೆ, ಪ್ರದೇಶ ನೆಲೆಯಲ್ಲಿ ಛಿದ್ರಗೊಂಡಿದ್ದಾರೆ. ಇವರನ್ನು ವರ್ಗದ ನೆಲೆಯಲ್ಲಿ ಒಂದುಗೂಡಿಸುವುದು ಸುಲಭದ ಕೆಲಸವಲ್ಲ.

ಎರಡು, ನಮ್ಮಲ್ಲಿ ಆರ್ಥಿಕ ಕುಸಿತದಿಂದ ಅರಾಜಕತೆ ಸೃಷ್ಟಿಯಾಗುವುದು ಕಷ್ಟ. ಏಕೆಂದರೆ ಹಿಂದಿನಿಂದಲೂ ನಮ್ಮ ಆರ್ಥಿಕ ಪ್ರಗತಿಯ ಹೆಚ್ಚಿನ ಲಾಭವನ್ನು ಪಡೆಯುತ್ತಿರುವವರು ಶ್ರೀಮಂತರು ಮತ್ತು ಮಧ್ಯಮ ವರ್ಗದ ಜನರು. ಏಣಿಯ ಬುಡದಲ್ಲಿರುವವರು ಅತ್ಯಂತ ಕಡಿಮೆ ಸಂಪನ್ಮೂಲದಲ್ಲಿ ಬದುಕುತ್ತಿದ್ದಾರೆ. 2019ರ ಆಕ್ಸ್ಫಾಮ್ ವರದಿ ಪ್ರಕಾರ ಶೇ.10ರಷ್ಟು ಭಾರತೀಯಲ್ಲಿ ನಮ್ಮ ದೇಶದ ಶೇ.77ರಷ್ಟು ಸಂಪತ್ತು ಕ್ರೋಢೀಕರಣಗೊಂಡಿದೆ ಮತ್ತು ಏಣಿಯ ಬುಡದಲ್ಲಿರುವಬಹುತೇಕರು ಶೇ.5ರಷ್ಟು ಸಂಪನ್ಮೂಲದಲ್ಲಿ ಉಸಿರಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ವೇತನಕ್ಕೆ ದುಡಿಯುವನೊಬ್ಬನ ಆದಾಯ ಖಾಸಗಿ ಉದ್ದಿಮೆಗಳ ಉನ್ನತ ಹುದ್ದೆಯಲ್ಲಿರುವನ ಒಂದು ವರ್ಷದ ಆದಾಯಕ್ಕೆ ಸಮವಾಗಬೇಕಾದರೆ 941 ವರ್ಷಗಳು ಬೇಕೆನ್ನುತ್ತದೆ ವರದಿ. ಇಂತಹ ಅಸಮಾನತೆಯನ್ನೂ ಅಭಿವೃದ್ಧಿ ಎಂದು ಮಂಡಿಸುವ ಸಾಕಷ್ಟು ವಿದ್ವಾಂಸರಿದ್ದಾರೆ. ಆರ್ಥಿಕ ಅಸಮಾನತೆ ಮುಖ್ಯ ಚರ್ಚೆಯ ವಸ್ತುವಾಗದಂತೆ ಮಾಧ್ಯಮ ಕೂಡ ನೋಡಿಕೊಂಡಿದೆ. ಅಷ್ಟುಮಾತ್ರವಲ್ಲಆರ್ಥಿಕ ಅಸಮಾನತೆಗಿಂತ ಜಾತಿ, ಧರ್ಮಗಳೇ ಮುಖ್ಯವೆಂದು ಮಾಧ್ಯಮಗಳು ಜನರನ್ನು ಒಪ್ಪಿಸಿವೆ. ಇಂತಹ ಪರಿಸರದಲ್ಲಿ ಆರ್ಥಿಕ ನೆಲೆಯಲ್ಲಿ ಜನರನ್ನು ಸಂಘಟಿಸುವುದು ಹೇಗೆ ಎನ್ನುವ ಪ್ರಶ್ನೆ ಇದೆ.

ಮೂರು, ಅಧಿಕಾರದಲ್ಲಿರುವ ಆರ್ಥಿಕ ನೀತಿಗೂ ಬಹುತೇಕ ವಿರೋಧ ಪಕ್ಷಗಳ ಅರ್ಥಿಕ ನೀತಿಗೂ ವಿಶೇಷ ಭಿನ್ನತೆಯೇ ಇಲ್ಲ. ಇಬ್ಬರೂ ನಿಯೋ ಲಿಬರಲ್ ಆರ್ಥಿಕ ನೀತಿ ಹಾಗು ಲಿಬರಲ್ ಡೆಮಾಕ್ರಸಿಗೆ ಮಹತ್ವ ನೀಡುವವರು. ಅಂದರೆ ಮಾರುಕಟ್ಟೆ ನಿರ್ದೇಶಿತ ಅಭಿವೃದ್ಧಿ ಮತ್ತು ರಾಜಕೀಯ ಸಮಾನತೆ ಮೂಲಕ ಆರ್ಥಿಕ ಸಾಮಾಜಿಕ ಸಮಾನತೆಗೆ ಪ್ರಯತ್ನಿಸುವವರು. ಭಾರತದಲ್ಲಿ ಎಡಪಂಥೀಯ ಪಕ್ಷಗಳು ಮಾತ್ರ ಸೋಶಿಯಲ್ ಡೆಮಾಕ್ರಸಿಗೆ ಮಹತ್ವ ನೀಡುವವರು. ಅಂದರೆ ಆರ್ಥಿಕ, ಸಾಮಾಜಿಕ ಸಮಾನತೆಗೆ ಮಹತ್ವ ನೀಡುವವರು. ಈಗ ತಳಸ್ತರದ ಜನರು ಎದುರಿಸುವ ಸಮಸ್ಯೆಗಳಿಗೆ ಸೋಶಿಯಲ್ ಡೆಮಾಕ್ರಸಿ ಪಾಲಿಸಿಗಳು ಮಾತ್ರ ಪರಿಹಾರ ನೀಡಲು ಸಾಧ್ಯ. ಆದರೆ ನಮ್ಮಲ್ಲಿ ಎಡಪಂಥೀಯ ಪಕ್ಷಗಳ ಬಗ್ಗೆ ಜನರಲ್ಲಿ ಎಷ್ಟು ಹೆದರಿಕೆ ಮೂಡಿಸಿದ್ದಾರೆಂದರೆ ತಳಸ್ತರದ ಜನರು ಅತ್ತ ಸುಳಿಯದಿರುವ ಸ್ಥಿತಿ ಇದೆ. ಕಮ್ಯುನಿಸ್ಟ್ ಅಂದರೆ ಡಿಕ್ಟೇಟರ್‌ಶಿಪ್, ಕಮ್ಯುನಿಸ್ಟ್ ಅಂದರೆ ಸ್ವಾತಂತ್ರö್ಯ ಇಲ್ಲ, ಕಮ್ಯುನಿಸ್ಟ್ ಅಂದರೆ ಧರ್ಮ ವಿರೋಧಿ ಹೀಗೆ ಹಲವು ಚಿತ್ರಣಗಳಿವೆ. ಇವೆಲ್ಲ ರಶ್ಯಾ, ಚೀನಾ ದೇಶದ ಕಮ್ಯುನಿಸ್ಟ್ ಸರಕಾರಗಳನ್ನು ನೋಡಿ ಕೊಡುವ ಚಿತ್ರಣಗಳು. ಕಮ್ಯುನಿಸ್ಟ್ ನೀತಿಗಳು ಡಿಕ್ಟೇಟರ್‌ಶಿಪ್‌ಲ್ಲೇ ಜಾರಿ ಬರಬೇಕಾಗಿಲ್ಲ, ಪ್ರಜಾಪ್ರಭುತ್ವದಲ್ಲೂ ಜಾರಿಗೊಳಿಸಬಹುದು ಎನ್ನುವುದನ್ನು ನಮ್ಮ ದೇಶ ಸಾಧಿಸಿ ತೋರಿಸಿದೆ.

ತ್ರಿಪುರ, ಪಶ್ಚಿಮ ಬಂಗಾಳ, ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರಗಳು ತಳಸ್ತರದ ಜನರ ಹಿತಾಸಕ್ತಿಗಳನ್ನು ರಕ್ಷಿಸುವ ಕೆಲಸ ಮಾಡಿವೆ. ಇವೆಲ್ಲ ಏನೇನೂ ದೋಷ ಇಲ್ಲದ ಆಡಳಿತ ನಡೆಸಿವೆ ಎಂದಲ್ಲ. ಅಲ್ಲೂ ತಪ್ಪುಗಳಾಗಿವೆ. ಅವೇ ಕಾರಣಕ್ಕಾಗಿ ಪಕ್ಷ ಅಧಿಕಾರ ಕಳೆದುಕೊಂಡಿದೆ. ಹಿಂದೆ ಕೇರಳ ಅಭಿವೃದ್ಧಿ ಮಾದರಿ ಬಗ್ಗೆ ಚರ್ಚೆ ನಡೆದಿತ್ತು. ಇವತ್ತು ಕೊರೋನ ಹತೋಟಿ ಸಾಧಿಸಲು ಕೇರಳ ಸರಕಾರ ಹಮ್ಮಿಕೊಂಡ ಕಾರ್ಯಕ್ರಮಗಳು ಕೂಡ ಪ್ರಪಂಚವ್ಯಾಪಿ ಹೆಸರು ಮಾಡಿವೆ. ಆದರೆ ಎಲ್ಲ ಕಡೆ ಕೇರಳದ ಮಾದರಿ ಎಂದು ಚರ್ಚಿಸಲ್ಪಡುತ್ತಿದೆಯೇ ಹೊರತು ಕೇರಳದ ಕಮ್ಯುನಿಸ್ಟ್ ಸರಕಾರದ ಮಾದರಿ ಎಂದು ಚರ್ಚಿಸಲ್ಪಡುವುದಿಲ್ಲ. ನಮ್ಮದೊಂದು ಪ್ರಜಾಪ್ರಭುತ್ವ ರಾಷ್ಟ, ಐದು ವರ್ಷಕ್ಕೊಮ್ಮೆ ಚುನಾವಣೆ ಗೆದ್ದ ಪಕ್ಷ ಮಾತ್ರ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯ. ನಿರ್ದಿಷ್ಟ ಪಕ್ಷದ ಧೋರಣೆಗಳು ಇಷ್ಟವಿಲ್ಲದಿದ್ದರೆ ಮತ್ತೊಂದು ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರದಿಂದ ಇಳಿಸುವ ಅವಕಾಶ ಇದೆ. ಇದೇ ನೀತಿಯನ್ನು ಬಳಸಿಕೊಂಡು ಕಮ್ಯುನಿಸ್ಟರಿಗೂ ಒಂದು ಅವಕಾಶ ನೀಡಬಹುದೆನ್ನುವ ಚರ್ಚೆ ಮಾಧ್ಯಮಗಳಲ್ಲಿ ಇಷ್ಟರವರೆಗೆ ನಡೆದಿಲ್ಲ. ಕೊರೋನದ ನಂತರ ಇಂತಹ ಚರ್ಚೆಗೆ ಮಹತ್ವ ಬರಲೂಬಹುದು.

ನಾನು ಮೇಲೆ ಹೇಳಿರುವ ಎಲ್ಲ ಸಂಗತಿಗಳು ಊಹೆಗಳು. ಈ ಕೆಳಗಿನ ಗ್ರಹಿಕೆಗಳ ನೆಲೆಯಲ್ಲಿ ಊಹೆಗಳನ್ನು ಮಾಡಲಾಗಿದೆ. ಒಂದು, 3-4 ತಿಂಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆ ಇಳಿಮುಖವಾಗಬಹುದು. ಎರಡು, 1 ವರ್ಷದಲ್ಲಿ ಕೊರೋನ ರೋಗ ಗುಣಪಡಿಸುವ ಲಸಿಕೆ ಬರಬಹುದು. ಒಂದು ವೇಳೆ ಗ್ರಹಿಕೆಗಳು ತಪ್ಪಾದರೆ ಊಹೆಗಳು ತಪ್ಪಾಗಬಹುದು.

 

Donate Janashakthi Media

Leave a Reply

Your email address will not be published. Required fields are marked *