ಬಾಕಿ ಉಳಿಸಿಕೊಂಡಿದ್ದ 20 ಕೋಟಿ ರೂ.ವನ್ನು ಮಂತ್ರಿ ಮಾಲ್ ಕೊನೆಗೂ ಬಾಕಿ ಉಳಿಸಿಕೊಂಡಿದ್ದ 20 ಕೋಟಿ ರೂ. ತೆರಿಗೆಯನ್ನು ಪಾವತಿಸಿದೆ.
ಹೌದು, ಕಳೆದ ಕೆಲವು ವರ್ಷಗಳಿಂದ ತೆರಿಗೆ ಪಾವತಿಸದ ಕಾರಣ ಬಿಬಿಎಂಪಿಯಿಂದ ಬಾಗಿಲು ಬಂದ್ ಮಾಡಿಸಿಕೊಂಡು ಮುಜುಗರಕ್ಕೆ ಒಳಗಾಗುತ್ತಿದ್ದ ಮಂತ್ರಿ ಮಾಲ್ ಕೊನೆಗೂ ತೆರಿಗೆ ಪಾವತಿಸಿದೆ. ಕಳೆದ ತಿಂಗಳಷ್ಟೇ ತೆರಿಗೆ ಪಾವತಿಸದ ಕಾರಣ ಒಂದು ವಾರ ಕಾಲ್ ಬಿಬಿಎಂಪಿ ಬೀಗ ಜಡಿದಿತ್ತು.
ಕೆಲವು ವರ್ಷಗಳಿಂದ ಬಿಬಿಎಂಪಿ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿಸುವಂತೆ ಮಂತ್ರಿ ಮಾಲ್ ಗೆ ಬೀಗ ಜಡಿಯುವ ಮೂಲಕ ಎಚ್ಚರಿಕೆ ನೀಡುತ್ತಲೇ ಬಂದಿತ್ತು. ಆದರೆ ಕಷ್ಟ ಬಂದಾಗ ವೆಂಕಟರಮಣ ಎಂಬಂತೆ ಸಮಸ್ಯೆ ಎದುರಾದಾಗ ಅಲ್ಪಸ್ವಲ್ಪ ತೆರಿಗೆ ಮೊತ್ತ ಪಾವತಿಸಿ ಅದೇ ಚಾಳಿ ಮುಂದುವರಿಸಿತ್ತು.
ಪಟ್ಟು ಬಿಡದ ಬಿಬಿಎಂಪಿ ಕೂಡ ಪದೇಪದೇ ಬೀಗ ಜಡಿದು ತೆರಿಗೆ ವಸೂಲು ಮಾಡಲು ಪ್ರಯತ್ನಿಸಿತ್ತು. ಕೊನೆಗೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯ ಜುಲೈ 30ರೊಳಗೆ ಬಾಕಿ ಉಳಿಸಿಕೊಂಡಿರುವ 20 ಕೋಟಿ ರೂ. ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ ಶಾಶ್ವತವಾಗಿ ಮಂತ್ರಿ ಮಾಲ್ ಬಂದ್ ಮಾಡಿಸಲಾಗುತ್ತದೆ ಎಂದು ಗಡುವು ವಿಧಿಸಿತ್ತು.
ನ್ಯಾಯಾಲಯದ ಸೂಚನೆ ಮೇರೆಗೆ ಮಂತ್ರಿ ಮಾಲ್ ಆಡಳಿತ ಮಂಡಳಿ ನಿಗದಿತ ಅವಧಿಯೊಳಗೆ 20 ಕೋಟಿ ರೂ. ಬಾಕಿ ಪಾವತಿಸಿ ಬಿಬಿಎಂಪಿ ಕಾಟದಿಂದ ಮುಕ್ತಗೊಂಡಿದೆ. ಈ ಮೂಲಕ ಸಾರ್ವಜನಿಕರಿಗೆ ಕೂಡ ಕಿರಿಕಿರಿ ತಪ್ಪಿದಂತಾಗಿದೆ.