ಬೆಂಗಳೂರು : ಕೇಂದ್ರ ಸರ್ಕಾರ ಅಂದ್ರೆ ಅತ್ತೆ ಮನೆ ಅನ್ಕೊಂಡಿದ್ದೀರಾ? ಕಾಂಗ್ರೆಸ್ನ ಅತ್ತೆ ಮನೆ ಅಲ್ಲ ಅದು, ಹತ್ತು ಕೆಜಿ ಅಕ್ಕಿ ಘೋಷಣೆ ಮಾಡುವಾಗ ಜ್ಞಾನ ಇರಲಿಲ್ವ? ಕೇಂದ್ರದ ಜೊತೆ ಮಾತುಕತೆ ನಡೆಸಿದ್ರಾ, ಎಷ್ಟು ಕೊಡ್ತೀರ, ಎಷ್ಟು ನಿಗದಿ ಮಾಡಬೇಕು ಅಂತ ಕೇಳಬೇಕಿತ್ತು ಎಂದು ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದುರು.
ಮತಾಂತರ ನಿಷೇಧ ಕಾಯ್ದೆ, ಪಠ್ಯ ಪುಸ್ತಕ ವಿವಾದಸ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಾಜಿ ಸಚಿವ ಆರ್ ಅಶೋಕ್ , ಅಶ್ವತ್ಥ್ ನಾರಾಯಣ್ ಮತ್ತು ಬಿವೈ ವಿಜಯೇಂದ್ರ ಜಂಟಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಮಾಜಿ ಸಚಿವ ಆರ್. ಅಶೋಕ್ ಮುಂದುವರೆದು ಮಾತನಾಡುತ್ತಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಟಿಪ್ಪು ಯುಗ ಆರಂಭಕ್ಕೆ ಅಡಿಗಲ್ಲು ಹಾಕಿರುವ ಭಾವನೆ ಜನರಲ್ಲಿ ಮೂಡಿದೆ. ಮತಾಂತರದ ಬ್ರಾಂಡ್ ಅಂಬಾಸಿಡರ್ ತರ ಕಾಂಗ್ರೆಸ್ ವರ್ತಿಸುತ್ತಿದೆ. 30 ಲಕ್ಷಕ್ಕೂ ಹೆಚ್ಚು ಹಿಂದೂಗಳು ಆಮಿಷಗಳಿಗೆ ಬಲಿಯಾಗಿ ಮತಾಂತರ ಆಗಿದ್ದಾರೆ. ಆದರೆ ಬೇರೆ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರ ಆಗಿಲ್ಲ. ನಾವು ಬಲವಂತದ ಮತಾಂತರ ಆಗಬಾರದು ಎಂದು ಬಿಲ್ ತಂದಿದ್ವಿ. ನೀವು ಯಾರಿಗಾಗಿ ಈ ಬಿಲ್ ವಾಪಾಸ್ ಪಡೆದಿದ್ದೀರಾ? ಬಲವಂತದ ಆಸೆ ಆಮಿಷವೊಡ್ಡಿ ಮತಾಂತರ ಮಾಡಬೇಡಿ ಅಂತ ನಮ್ಮ ಕಾಯ್ದೆಯಲ್ಲಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದುರು.
ಇದನ್ನೂ ಓದಿ : ಮೋದಿ ಅಕ್ಕಿ ಕೊಡದಿದ್ರೇನು? ನೀವೇ ಜೋಳ ರಾಗಿ ಕೊಡಿ – ರೈತ ಸಂಘ ಆಗ್ರಹ
ತಮಗೆ ಮತ ಹಾಕಿದ ಒಂದು ವರ್ಗ ಸಂತೃಪ್ತಿಗೊಳಿಸಲು ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ. ಕಾಂಗ್ರೆಸ್ ವೋಟ್ಗಾಗಿ ಯಾವ ಮಟ್ಟಕ್ಕಾದರೂ ಹೋಗಬಹುದು ಎಂಬ ಭಾವನೆ ಮೂಡಿದೆ. ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎನಿಸುತ್ತಿದೆ. ನಾವು ಅಧಿಕಾರದಲ್ಲಿದ್ದಾಗ ಈ ಕಾಯ್ದೆ ಜಾರಿಗೆ ತಂದಿದ್ದೆವು. ಆಗ ಪಿಎಫ್ಐ ಅಂತಹವರು ಬಿಟ್ಟು ಬೇರೆ ಯಾರೂ ವಿರೋಧ ಮಾಡಿಲ್ಲ. ಕಾಯ್ದೆ ವಾಪಸ್ ಪಡೆಯದಂತೆ ಬಿಜೆಪಿ ಆಗ್ರಹಿಸುತ್ತದೆ ಎಂದು ತಿಳಿಸಿದರು.
ನಾವು ಎಪಿಎಂಸಿ ಕಾಯ್ದೆ ಜಾರಿ ಮಾಡಿರುವುದರಲ್ಲಿ ಏನು ತಪ್ಪಿದೆ. ನಿಮಗೆ ಎಪಿಎಂಸಿಗೆ ಆದಾಯ ಬರುವುದು ಮುಖ್ಯವೋ ರೈತರ ಜೇಬಿಗೆ ಹಣ ಬರೋದು ಮುಖ್ಯವೋ? ಎಪಿಎಂಸಿ ಕಾಯ್ದೆ ವಾಪಸ್ ಪಡೆಯುವ ಹಿಂದೆ ಹುನ್ನಾರ ಇದೆಯಷ್ಟೆ. ನಾವು ತಕ್ಕಡಿಯನ್ನು ರೈತರ ಕೈಗೆ ಕೊಟ್ಟಿದ್ದೆವು. ಕಾಂಗ್ರೆಸ್ ಈಗ ದಳ್ಳಾಳಿಗಳ ರಾಜ್ಯ ಮಾಡಲು ಹೊರಟಿದೆ ಎಂದು ವಿಷಾದಿಸಿದರು.
ಏಕಾಏಕಿ ಶಾಲಾ ಪಠ್ಯ ಪರಿಷ್ಕರಣೆ ಒಳ್ಳೆಯದಲ್ಲ. ಪಠ್ಯ ಪರಿಷ್ಕರಣೆ ಮೂಲಕ ಮಕ್ಕಳಿಗೆ ಕೆಟ್ಟ ಸಂದೇಶ ಕೊಡುತ್ತಿದ್ದಾರೆ. ಏಕಾಏಕಿ ಪಠ್ಯಪುಸ್ತಕ ಪರಿಷ್ಕರಣೆ ಒಳ್ಳೆಯದಲ್ಲ. ಸಮಯ ಇದೆ, ನಿಧಾನವಾಗಿ ಪರಿಷ್ಕರಣೆ ಮಾಡಿ ಎಂದು ಸಲಹೆ ನೀಡಿದರು.
ವಿದ್ಯುತ್ ಬಿಲ್ ಹೇಳುವಂತೆಯೇ ಇಲ್ಲ. 10 ರೂಪಾಯಿ ಕೊಟ್ಟು, 20 ರೂಪಾಯಿ ಕಿತ್ತುಕೊಳ್ಳುತ್ತಿದ್ದಾರೆ. ಅಂದು ಗ್ಯಾರಂಟಿ ಕಾರ್ಡ್ ಮೇಲೆ ಷರತ್ತು ಅನ್ವಯ ಅಂತಾ ಬರೆಯಬೇಕಿತ್ತು ಎಂದು ಇದೇ ವೇಯೆ ಗ್ಯಾರಂಟಿ ಯೋಜನೆಗಳ ಕುರಿತು ವ್ಯಂಗ್ಯವಾಡಿದರು.
ಅನ್ನಭಾಗ್ಯ ಅಕ್ಕಿ ವಿಚಾರ ಸುರ್ಜೇವಾಲಾ ತಮ್ಮನ್ನು ತಾವು ಕರ್ನಾಟಕದ ಕ್ಯಾಬಿನೆಟ್ ಮಿನಿಸ್ಟರ್ ಎಂದು ತಿಳಿದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಅಂದ್ರೆ ಅತ್ತೆ ಮನೆ ಅಂತಾ ತಿಳಿದುಕೊಂಡಿದ್ದೀರಾ? ಕೇಂದ್ರ ಸರ್ಕಾರ ಕಾಂಗ್ರೆಸ್ ಅತ್ತೆ ಮನೆ ಅಲ್ಲ. ನಾಳೆ ಕರ್ನಾಟಕವನ್ನು ಮಾರುತ್ತೇವೆ ಅಂದ್ರೆ ಕೇಂದ್ರ ಸರ್ಕಾರ ಯೆಸ್ ಅನ್ನಬೇಕಾ? ಸಿದ್ದರಾಮಯ್ಯನವರೇ ಅಂದು ಕೇಂದ್ರ ಸರ್ಕಾರ ಕೊಟ್ಟ ಅನ್ನಭಾಗ್ಯ ಅಕ್ಕಿಗೆ ನಿಮ್ಮ ಸೀಲ್ ಹಾಕಿದ್ರಲ್ಲಾ ನಾಚಿಕೆ ಅಗಲ್ವಾ? ಒಂದು ವರ್ಷದಲ್ಲಿ ಈ ಸರ್ಕಾರ ದಿವಾಳಿ ಎದ್ದು ಹೋಗುತ್ತದೆ. ಜನ ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ವಿದ್ಯುತ್ ದರದಲ್ಲಿ ಮೋಸಗಾರರು ಯಾರು ಎಂದು ಜನಕ್ಕೆ ಗೊತ್ತಾಗಬೇಕು ಎಂದರು.