ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ವಿಧಾನ ಸೌಧ ಚಲೋ ನಡೆಸಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ಧ ಪ್ರತಿಭಟನೆಕಾರರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಫ್ರಡಂ ಪಾರ್ಕ್ ವರೆಗೆ ಮೆರವಣಿಗೆ ನಡೆಸಿದರು. ಕೇಂದ್ರ ರಾಜ್ಯ ಸರಕಾರಗಳ ವಿರುದ್ಧ ಘೊಷಣೆಗಳನ್ನು ಮೊಳಗಿಸಿದರು.
ಪ್ರೀಡಂಪಾರ್ಕನಲ್ಲಿ ವಿಧಾನಸೌಧ ಚಲೋ ಸಮಾವೇಶ ನಡೆಸಿದ ಪ್ರತಿಭಟನೆಕಾರರು ಬರೋಬ್ಬರಿ ಐದು ಗಂಟೆಗಳ ಕಾಲ ಕೃಷಿಕಾಯ್ದೆ ಹಾಗೂ ಕಾರ್ಮಿಕ ಸಂಹಿತೆಗಳ ಅಪಾಯಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ಚರ್ಚಿಸಿದರು. ಇದೇ ವೇಳೆ ಕೃಷಿ ಕಾಯ್ದೆಯ ಅಪಾಯಗಳನ್ನು ವಿವರಿಸಿವ ಮೂರು ಮಹತ್ವದ ಪುಸ್ತಕಗಳು ಬಿಡುಗಡೆಯಾದವು. ಕರ್ನಾಟಕ ಪ್ರಾಂತ ರೈತ ಸಂಘಟನೆ ಪ್ರಕಟಿಸಿರುವ, ʼರೈತ ಸಂಕುಲ ನಾಶ ಮಾಡುವ ಕೃಷಿ ಕಾಯ್ದೆಗಳುʼ, ಪ್ರಾಂತ ರೈತ ಸಂಘದ ರಾಜ್ಯ ಮುಖಂಡ ನವೀನ್ ಕುಮಾರ್ ಬರೆದಿರುವ, ಕ್ರೀಯಾ ಮಾಧ್ಯಮ ಪ್ರಕಟಿಸಿರುವ ದೆಹಲಿ ಹೋರಾಟದ ಕುರಿತಾದ ಪುಸ್ತಕ ʼಕದನ ಕಣʼ ಗೌರಿ ಮೀಡಿಯಾ ಪ್ರಕಟಿಸಿರುವ ʼನಿರಂಕುಶ ಪ್ರಭುತ್ವʼ ಮತ್ತು ʼರೈತ ಹೋರಾಟʼ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಪ್ರತಿಭಟನಾ ಜಾಗಕ್ಕೆ ಕೃಷಿ ಸಚಿವ ಬಿ.ಸಿ ಪಾಟೀಲ್ ಆಗಮಿಸಿ ಮನವಿಯನ್ನು ಸ್ವೀಕರಿಸಿದರು. ಬಿಸಿ ಪಾಟೀಲ್ ವೇದಿಕೆ ಏರುತ್ತಿದ್ದಂತೆ ರೈತರನ್ನು ಅವಮಾನಿಸಿದ ಬಿಸಿ ಪಾಟೀಲ್ ಗೆ ಧಿಕ್ಕಾರ ಎಂದು ಪ್ರತಿಭಟನೆಕಾರರು ಘೋಷಣೆಗಳನ್ನು ಕೂಗಿದರು.
ಕೃಷಿ ಸಚಿವ ಬಿ.ಸಿ ಪಾಟೀಲ್ ಮನವಿಯನ್ನು ಸ್ವೀಕರಿಸಿ, ಬೇಡಿಕೆಗಳ ಕುರಿತು ಸಿಎಂ ಯಡಿಯೂರಪ್ಪ ಅವರ ಜೊತೆ ಮಾತನಾಡಿ ಬೇಡಿಕೆಗಳನ್ನು ಈಡೇಡಿಸುವ ನಿಟ್ಟಿನಲ್ಲಿ ಗಮನ ನೀಡಲಾಗುವುದು ಎಂದು ಭರವಸೆ ನೀಡಿದರು. ಕೃಷಿ ಕಾಯ್ದೆಗಳನ್ನು ರದ್ದುಮಾಡಿ ಎಂದು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಹೇಳುವಂತಾಗಬೇಕು ಎಂದು ಆಗ್ರಹ ಮಾಡಿದ ಘಟನೆ ನಡೆಯಿತು.
ವಿಧಾನ ಸೌಧ ಚಲೋ ಹೋರಾಟದಲ್ಲಿ ಭಾಗಿಯಾಗಿದ್ಧ ರೈತ ರಾಷ್ಟ್ರ ನಾಯಕ ಯುದ್ಧವೀರ ಸಿಂಗ್ ಮಾತನಾಡಿ, ಈ ಆಂದೋಲನ ಸುದೀರ್ಘ ಆಂದೂಲನ, ನಮ್ಮ ಬೇಡಿಕೆಗಳನ್ನೂ ಸರ್ಕಾರ ಈಡೇರಿಸುವರೆಗೂ ಈ ಹೋರಾಟ ನಿಲ್ಲುವುದಿಲ್ಲ. ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟದಂತೆ ಬೆಂಗಳೂರಿನಲ್ಲೂ ಪ್ರತಿಭಟನೆ ನಿರಂತರವಾಗಿ ನಡೆಯಬೇಕು, ವಿಧಾನಸೌಧವನ್ನು ಸುತ್ತುವರೆಯಬೇಕು ಎಂದು ಯುದ್ಧವೀರ ಸಿಂಗ್ ಕೇಂದ್ರ ರಾಜ್ಯ ಸರಕಾರಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
‘ಶ್ರೀರಾಮ ಯಾರಪ್ಪನ ಸ್ವತ್ತೂ ಅಲ್ಲ. ರೈತರು, ಕಾರ್ಮಿಕರ ಕಣ ಕಣದಲ್ಲಿ, ಅವರ ದುಡಿಮೆಯಲ್ಲಿ ರಾಮ ಇದ್ದಾನೆ. ರಾಮನನ್ನು ಹುಡುಕಿಕೊಂಡು ಮಂದಿರಗಳಿಗೆ ಹೋಗುವ ಅಗತ್ಯವಿಲ್ಲ ‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೊಸ ನಾಟಕ ಶುರು ಮಾಡಿದೆ. ಒಂದು ಮುಷ್ಟಿ ಅಕ್ಕಿ ಕೊಡಿ ಎಂದು ಕೇಳುತ್ತಿದ್ದಾರೆ. ಅಕ್ಕಿಯನ್ನು ಧರ್ಮಕ್ಕೂ, ಧರ್ಮವನ್ನು ಮತಕ್ಕೂ ಜೋಡಣೆ ಮಾಡಲಾಗುತ್ತಿದೆ. ಒಂದು ಮುಷ್ಟಿ ಅಕ್ಕಿ ಕೊಡಲು ನಾವು ಸಿದ್ಧರಿದ್ದೇವೆ, ಆ ಅಕ್ಕಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾನೂನು ರೂಪಿಸಿ ಎಂದು ಯುದ್ಧವೀರ ಸಿಂಗ್ ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ್ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ್ ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಕಾರ್ಪೋರೇಟ್ ಗುಲಾಮರಾಗಿ ಕೆಲಸ ಮಾಡುತ್ತಿದೆ. ರೈತರ ಕುಟುಂಬದ ಸರಾಸರಿ ಆದಾಯ ಕಡಿಯಾಗಿದೆ, ರೈತರ ತಲಾ ಆದಾಯ ಕಡಿಮೆ ಆದರೆ, ಕೂಲಿಕಾರರರು, ದಲಿತರು, ಕಾರ್ಮಿಕರು, ಮಹಿಳೆಯರು ಸಾಕಷ್ಟು ಸಂಕಷ್ಟಗಳನ್ನು ಎದುರಿಸಲಿದ್ದಾರೆ, ಹಾಗಾಗಿ ಈ ದೇಶದ ತಲಾ ಆದಾಯವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಭಾಗಿವಿಸಿದ್ದ ರಾಷ್ಟ್ರ ರೈತ ನಾಯಕ ರಾಕೇಶ್ ಟಿಕಾಯತ್ ಮಾತನಾಡಿ, ರೈತರು ಬೆಳದ ಆಹಾರ ಗೋಡಾನಿಗೆ ಸೇರಿತ್ತಿವೆ, ಕನಿಷ್ಠ ಬೆಂಬಲ ಬೆಲೆ ಪ್ರಸ್ಥಾಪ ಬರುತ್ತಿಲ್ಲ. ಇದರ ಹಿಂದೆ ಖಾಸಗೀ ಕಂಪನಿಗಳು ದೊಡ್ಡ ಪ್ರಭಾವ ಇದೆ. ಬಿಜೆಪಿ ಆಡಳಿತ ಬಂದನಂತರ ಸಂಕಷ್ಟಗಳು ಹೆಚ್ಚಾಗಿವೆ. ಹಾಗಾಗಿ ದೆಹಲಿಯಲ್ಲಿ ರೈತರು ಹೋರಾಟವನ್ನು ಮುಂದುವರೆಸುತ್ತಾರೆ ನೀವು ಇದಕ್ಕೆ ಕೈ ಜೋಡಿಸಬೇಕು ಎಂದು ಪ್ರತಿಭಟನಾಕಾರರಿಗೆ ಕರೆ ನೀಡಿದರು.
ಸರ್ಕಾರ ಎಪಿಎಂಸಿಗಳನ್ನು ಮುಚ್ಚಲು ಕಾನೂನು ತಂದಿರುವ ಕಾರಣ ರೈತರು ತಾವು ಬೆಳೆದ ಫಸಲನ್ನು ವಿಧಾನಸೌಧಕ್ಕೆ ತಂದು ಮಾರಾಟ ಮಾಡಿ’ ಎಂದು ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾದ ಅಧ್ಯಕ್ಷ ರಾಕೇಶ್ ಟಿಕಾಯತ್ ರೈತರಿಗೆ ಕರೆ ನೀಡಿದರು. ‘ಪೊಲೀಸರು ನಿಮ್ಮನ್ನು ತಡೆದರೆ ಕೇಂದ್ರ ಸರ್ಕಾರದ ಹೊಸ ಕಾಯ್ದೆ ಪ್ರಕಾರ ಕೃಷಿ ಉತ್ಪನ್ನಗಳನ್ನು ಎಪಿಎಂಸಿಯಲ್ಲೇ ಮಾರಾಟ ಮಾಡಬೇಕೆಂದಿಲ್ಲ. ಎಲ್ಲಿ ಬೇಕಿದ್ದರೂ ಮಾರಾಟ ಮಾಡಬಹುದು ಎಂದು ಉತ್ತರವನ್ನು ನೀಡಿ, ಅದಕ್ಕೂ ಒಪ್ಪದಿದ್ದರೆ ಅಲ್ಲೇ ಕುಳಿತು ಮಾರಾಟ ಮಾಡಿ, ಇಲ್ಲವೇ ಪೊಲೀಸ್ ಠಾಣೆಗಳನ್ನೇ ಮಾರುಕಟ್ಟೆಗಳನ್ನಾಗಿ ಮಾಡಿಕೊಳ್ಳಿ. ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಬ್ಬು ಮತ್ತು ಭತ್ತ ಮಾರಾಟ ಮಾಡುವ ಹೋರಾಟ ಆರಂಭಿಸಲಾಗಿದೆ’ ಎಂದು ಉದಾಹರಣೆ ಸಮೇತ ವಿವರಿಸಿದರು. ‘ಕರ್ನಾಟಕದ ರೈತರು ದೆಹಲಿಗೆ ಬರಲು ಆಗದಿದ್ದರೆ ಬೆಂಗಳೂರಿನಲ್ಲೇ ಹೊಸದಾಗಿ ಕಿಸಾನ್ ಮೋರ್ಚಾ ಆರಂಭಿಸಲಾಗುವುದು. ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ಬೀದಿಗೆ ಬನ್ನಿ. ಪೊಲೀಸರ ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗುವುದನ್ನು ಕಲಿಯಬೇಕು’ ಎಂದು ಪ್ರತಿಭಟನಾಕಾರರಿಗೆ ಕರೆ ನೀಡಿದರು.
ಚಿತ್ರನಟ ಚೇತನ್ ರೈತರ ವಿಧಾನಸೌಧ ಚಲೋಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು, ಅನ್ನದಾತರು ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ಮಾಡಿದರೆ ಅವರನ್ನು ಭಯೋತ್ಪಾದಕರು, ಖಲೀಸ್ತಾನಿಗಳು, ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ. ರೈತರು ಅಂಬೇಡ್ಕರ್, ಗಾಂಧಿಯವರ ಹಾದಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ರೈತರ ಮೇಲೆ ಹಿಂಸೆ ಮಾಡುತ್ತಿರುವವರು ಭಯೋತ್ಪಾದಕರು, ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರುವವರು ದೇಶದ್ರೋಹಿಗಳು ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿಯವರು ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ದೆಹಲಿಯಲ್ಲಿ ಚಳಿ ಗಾಳಿ ಎನ್ನದೇ 60-70ರ ವಯಸ್ಸಿನ ಹಿರಿಯರು ಸೇರಿದಂತೆ ಅನೇಕ ಯುವಕರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಅಪಪ್ರಚಾರ ಮಾಡುವುದುರ ಮೂಲಕ, ರೈತ ಹೋರಾಟವನ್ನು ನಿಲ್ಲಿಸುವ ತಂತ್ರವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಈಗಾಗಲೇ 310 ಜನ ರೈತರು ಹುತಾತ್ಮರಾಗಿದ್ದಾರೆ. ಈ ಹೋರಾಟವನ್ನು ಹಳ್ಳಿಗೆ ತಲುಪಿಸೋಣ, ಹೋರಾಟದ ಕಾವನ್ನು ಮತ್ತಷ್ಟು ಹೆಚ್ಚಿಸೋಣ ಎಂದು ಅಭಿಪ್ರಾಯಾವನ್ನು ವ್ಯಕ್ತಪಡಿಸಿದರು.
ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರು ಶೇಖರ್ ಮಾತನಾಡಿ, ಕೃಷಿ ಕಾಯ್ದೆಯನ್ನು ವಿರೋಧಿಸಿ ಭಾರತ ಸೇರಿದಂತೆ, ಕೆನಡಾ, ಲಂಡನ್ ಪಾರ್ಲಿಮೆಂಟಗಳಲ್ಲೂ ಈ ಹೋರಾಟದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೂ ಕೇಂದ್ರ ಸರಕಾರ ಕಾಯ್ದೆಯನ್ನು ರದ್ದು ಪಡಿಸದೆ ಮೊಂಡುತನವನ್ನು ಪ್ರದರ್ಶಿಸಿತ್ತಿದೆ ಎಂದು ಆರೋಪಿಸಿದರು.
ವಿಧಾನ ಸೌಧ ಚಲೋದಲ್ಲಿ ಭಾಗವಹಿಸಿದ್ದ ರೈತ ರಾಷ್ಟ್ರ ನಾಯಕ ದರ್ಶನ್ ಪಾಲ್ ಮಾತನಾಡಿ, ‘ದಕ್ಷಿಣ ಭಾರತಕ್ಕೂ ರೈತರ ಹೋರಾಟವನ್ನು ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಭೆಯನ್ನು ಏಪ್ರಿಲ್ 9ರಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟಿಸಲಿದೆ’ ಕೃಷಿಕಾಯ್ದೆ ರದ್ದಾಗುವರೆಗೂ ಹೋರಾಟ ನಡೆಯಲಿದೆ ಎಂದು ದರ್ಶನ್ ಪಾಲ್ ತಿಳಿಸಿದರು.
ಪ್ರತಿಭಟನೆಯಲ್ಲಿ CITU ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ, ಬಡಗಲಪುರ ನಾಗೇಂದ್ರ, ಸಾಮಾಜಿಕ ಹೋರಾಟಗಾರ ಎಸ್.ಎಸ್. ಹಿರೇಮಠ್, ಕರ್ನಾಟಕ ಜನಶಕ್ತಿಯ ಸಿರಿಮನಿ ನಾಗರಾಜ್, ಕಾರ್ಮಿಕ ಮುಖಂಡರಾದ ಡಾ.ಕೆ.ಪ್ರಕಾಶ್, ಅಪ್ಪಣ, ಶಾಮಣ್ಣ ರೆಡ್ಡಿ, ಶಿವಶಂಕರ್, ಕಾಳಪ್ಪ, ಕೂಲಿಕಾರ ಸಂಘಟನೆಯ ನಿತ್ಯಾನಂದ ಸ್ವಾಮಿ, ಸೇರಿದಂತೆ ಸಾವಿರಾರು ಜನ ವಿಧಾನಸೌಧ ಚಲೋದಲ್ಲಿ ಭಾಗಿಯಾಗಿದ್ದರು.
ಈ ವಿಧಾನಸೌಧ ಚಲೋವನ್ನು ಸಂಘಟಿಸಿದ್ದ ಸಂಯುಕ್ತ ಹೋರಾಟ ಕರ್ನಾಟಕದಲ್ಲಿ ಜೆಸಿಟಿಯು, ಎಲ್ಲಾ ಪ್ರಗತಿಪರ ರೈತ ಸಂಘಟನೆಗಳು, ಪ್ರಗತಿಪರ ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳು, ದಲಿತ ಸಂಘಟನೆಗಳು, ಕೂಲಿಕಾರ ಸಂಘಟನೆ ಸೇರಿದಂತೆ ಅನೇಕ ಜನಪರ ಸಂಘಟನೆಗಳು ವಿಧಾನಸೌಧ ಚಲೋಗೆ ಸಾಥ್ ನೀಡಿದ್ದವು. ಮಾರ್ಚ್ 26 ರಂದು ಕೃಷಿ ಕಾಯ್ದೆ ಹಾಗೂ ಕಾರ್ಮಿಕ ಸಂಹಿತೆ ರದ್ದತಿಗಾಗಿ ಆಗ್ರಹಿಸಿ ಭಾರತ್ ಬಂದ್ ಗೆ ಸಂಯುಕ್ತ ಕಿಸಾನ್ ಮೋರ್ಚಾ ಈಗಾಗಲೆ ಕರೆ ನೀಡಿದೆ. ಕರ್ನಾಟಕದಲ್ಲೂ ಬಂದ್ ನಡೆಸುವಂತೆ ವಿಧಾನಸೌಧ ಚಲೋ ನಿರ್ಣಯವನ್ನು ತೆಗೆದುಕೊಂಡಿದೆ.
ಕೃಷಿಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟನ ದಿನೆ ದಿನೇ ಬಲಗೊಳ್ಳುತ್ತಿದೆ. ಕೇಂದ್ರ ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳದೇ ಹೋದರೆ ಸಾಕಷ್ಟು ಪೆಟನ್ನು ತಿನ್ನಲಿದೆ.