ಮೈಸೂರು: ಚಾಮುಂಡಿ ಬೆಟ್ಟಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದು, ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಪುತ್ರ ಜಿ.ಟಿ.ಹರೀಶ್ ಗೌಡ ಅವರೊಟ್ಟಿಗೆ ಕಾಣಿಸಿಕೊಂಡು ರಾಜಕೀಯ ಅಚ್ಚರಿಗೆ ಕಾರಣವಾಗಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಜಾತ್ಯತೀತ ಜನತಾದಳ(ಜೆಡಿಎಸ್) ಶಾಸಕರಾಗಿರುವ ಜಿ.ಟಿ.ದೇವೇಗೌಡ ಜೆಡಿಎಸ್ ನಲ್ಲೇ ಉಳಿಯಲಿದ್ದಾರೆಂದು ಕೆ.ಟಿ.ಶ್ರೀಕಂಠೇಗೌಡ ಮೊನ್ನೆಯಷ್ಟೇ ಹೇಳಿಕೆ ನೀಡಿದ್ದರು. ಮೂರು ದಿನಗಳ ಹಿಂದೆಯಷ್ಟೇ ಜಾತ್ಯತೀತ ಜನತಾದಳದ ಶಾಸಕಿ ಅನಿತಾ ಕುಮಾರಸ್ವಾಮಿ ಸಹ ಜಿ ಟಿ ದೇವೇಗೌಡ ಯವರ ಪತ್ನಿ ಭೇಟಿ ಮಾಡಿದ್ದರು. ಇದಾದ ಬಳಿಕ ಈಗ ನಿಖಿಲ್ ಕುಮಾರಸ್ವಾಮಿ ಹಾಗೂ ಹರೀಶ್ ಗೌಡ ಭೇಟಿ ತೀವ್ರ ಕೂತೂಹಲ ಹುಟ್ಟಿಸಿದೆ.
ಈ ಕುರಿತು ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ ನನ್ನ ಹೊಸ ಚಿತ್ರದ ಅರ್ಶಿವಾದ ಪಡೆಯಲು ಬಂದಿದ್ದೇನೆ. ರಾಜ್ಯದ ಜನಕ್ಕೆ ಒಳಿತು ಮಾಡಲಿ ಅಂತಾ ಬೇಡಿಕೊಂಡಿದ್ದೇನೆ. ಯಾವುದೇ ರೀತಿಯ ರಾಜಕೀಯ ಮಾಡಲು ಬಂದಿಲ್ಲ ಎಂದರು.
ನನ್ನ ಹಾಗೂ ಹರೀಶ್ ಗೌಡರ ಸ್ನೇಹ ದೊಡ್ಡದು. ರಾಜಕೀಯ ಹೊರೆತಾಗಿ ನಮ್ಮ ಸ್ನೇಹ ಇದೆ. ಸಂಘಟನೆ ವಿಚಾರದಲ್ಲಿ ಎಲ್ಲವೂ ಸರಿ ಹೋಗುತ್ತೆ. ಮುಂದಿನ ದಿನಗಳಲ್ಲಿ ಬದಲಾವಣೆಗಳು ಇವೆ. ಎಲ್ಲ ಸಮಸ್ಯೆಗಳು ಸರಿ ಹೋಗುತ್ತೆ ಎಂದು ಮಾರ್ಮಿಕವಾಗಿ ನುಡಿದರು.
ಈ ಕುರಿತು ಅಪೆಕ್ಸ್ ಬ್ಯಾಂಕ್ ರಾಜ್ಯ ಉಪಾಧ್ಯಕ್ಷ ಜಿ.ಡಿ. ಹರೀಶ್ ಗೌಡ ಮಾತನಾಡಿ, ಈ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ನಾನು ಮತ್ತು ನಿಖಿಲ್ ಸ್ನೇಹಿತರಾಗಿದ್ದೇವೆ. ಮೈಸೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತೇನೆ. ಇದರಲ್ಲಿ ಯವುದೇ ರಾಜಕೀಯ ಇಲ್ಲ. ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದಷ್ಟೇ ಹೇಳಿದರು. ನಿಖಿಲ್ ಮತ್ತು ಹರೀಶ್‌ನೊಂದಿಗೆ ಸಿ.ಎಸ್.ಪುಟ್ಟರಾಜು ಪುತ್ರ ಶಿವರಾಜ್ ಸಾಥ್ ನೀಡಿದ್ದು, ಮುಂದಿನ ದಿನಗಳಲ್ಲಿ ಈ ಭೇಟಿಗಳು ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.