ಬೆಳಗಾವಿ : ಬೆಳಗಾವಿ ತಾಲೂಕಿನ ಮಚ್ಚೆಯ ನೆಹರು ನಗರದಲ್ಲಿ ವ್ಯಕ್ತಿಯೊಬ್ಬರು ಪೊಲೀಸರು ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ, ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪತ್ರವೊಂದನ್ನು ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕ್ಯಾಂಪ್ ಠಾಣೆಯ ಪಿಎಸ್‌ಐ ಹಾಗೂ ರಮೇಶ್ ಜಾರಕಿಹೊಳಿ ಅವರ ಆಪ್ತ, ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ವಿರುದ್ಧ ಕಿರುಕುಳದ ಆರೋಪ ಹೊರಸಿರುವ 28 ವರ್ಷದ ಸಾವಿಯೋ ಪಿಳೈ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕ್ಯಾಂಪ್ ಠಾಣಾ ವ್ಯಾಪ್ತಿಯ ಮಹಿಳೆಯೋರ್ವಳ ಜೊತೆ ಸಾವಿಯೋ ಪಿಳೈ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಇಬ್ಬರ ಮಧ್ಯೆ ಮನಸ್ತಾಪವಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಹಾಗೂ ಕ್ಯಾಂಪ್ ಪಿಎಸ್‌ಐ ಸೇರಿ 1.50 ಲಕ್ಷ ಹಣ ಪಡೆದಿದ್ದರು ಎನ್ನಲಾಗಿದೆ. ಇನ್ನೂ ಹೆಚ್ಚಿನ ಹಣ ನೀಡುವಂತೆ ಕಿರುಕುಳ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಾವಿಗೆ ಶರಣಾಗುತ್ತಿದ್ದೇನೆ ಎಂದು ಸಾವಿಯೋ ಪಿಳೈ ಪತ್ರದಲ್ಲಿ ಉಲ್ಲೇಖಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.