ಎರಡೂ ರಾಜ್ಯಗಳ ಸಹಮತದೊಂದಿಗೆ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ತಮಿಳುನಾಡಿನ ತಿರುಚನಾಪಳ್ಳಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ತಮಿಳರು ಸೇರಿದಂತೆ 1.4 ಕೋಟಿ ಜನರು ಕುಡಿಯುವ ನೀರಿಗೆ ಸಮಸ್ಯೆ ಎದುರಿಸುತ್ತಿರುವ ಸತ್ಯ ಎಲ್ಲರಿಗೂ ಗೊತ್ತಿದೆ ಎಂದರು.
ಕರ್ನಾಟಕ ಮತ್ತು ತಮಿಳುನಾಡು ನಡುವೆ ದಶಕಗಳಿಂದ ಇರುವ ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತ ವಾಸ್ತವ ಸತ್ಯವನ್ನು ಮರೆ ಮಾಚಲು ಯಾರಿಂದಲೂ ಸಾಧ್ಯವಿಲ್ಲ. ಪ್ರಧಾನಿ ಮೋದಿ ಆಗಲಿ, ತಮಿಳುನಾಡಿ ನಿಯಮಗಳಾಗಲಿ ಅಥವಾ ಅಧಿಕಾರದಲ್ಲಿರುವ ಯಾವುದೇ ಪಕ್ಷಕ್ಕಾಗಲಿ ಸತ್ಯವನ್ನು ಮರೆಮಾಚಲು ಸಾದ್ಯವಿಲ್ಲ ಎಂದು ಅವರು ಹೇಳಿದರು.
ವಾಸ್ತವದ ಅರಿವು ಹಾಗೂ ಸಮಸ್ಯೆಗಳ ಬಗ್ಗೆ ಅರಿವಾದ ನಂತರ ಎರಡೂ ರಾಜ್ಯಗಳು ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಸಮಯ ಬರಲಿದೆ. ಕಾವೇರಿ ನದಿ ನೀರು ಪ್ರಾಧಿಕಾರ ಬೆಂಗಳೂರಿನ ಜನತೆಗೆ ಕುಡಿಯಲು ಬೇಕಾದ ನೀರಿನ ಹಂಚಿಕೆ ಬಗ್ಗೆ ತೀರ್ಮಾನಿಸದೇ ಇರುವುದರಿಂದ ಜನರು ನೀರಿಗಾಗಿ ಪರದಾಡುವಂತಾಗಿದೆ ಎಂದು ಅವರು ಹೇಳಿದರು.