ಕಾರವಾರ: ಕಾಮಿಡಿ ಕಿಲಾಡಿ ಖ್ಯಾತಿಯ ಚಂದ್ರಶೇಖರ್ ಸಿದ್ಧಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮನಳ್ಳಿಯ ಸಿದ್ದಿ ಜನಾಂಗಕ್ಕೆ ಸೇರಿದ್ದ ಚಂದ್ರಶೇಖರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು
ಕಾಮಿಡಿ ಕಿಲಾಡಿ ಶೋ ಮೂಲಕ ಜನರನ್ನು ನಕ್ಕು ನಲಿಸಿದ್ದ ಯಲ್ಲಾಪುರ ತಾಲ್ಲೂಕಿನ ಚಿಮ್ಮಳ್ಳಿ ಗ್ರಾಮದ ಚಂದ್ರಶೇಖರ ಸಿದ್ದಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಉತ್ತಮ ಯೋಗಪಟು ಆಗಿದ್ದ ಚಂದ್ರಶೇಖರ್ ನಿನಾಸಂನಲ್ಲಿ ನಾಟಕ ತರಬೇತಿ ಪಡೆದುಕೊಂಡಿದ್ದನು. ಬಳಿಕ ಖಾಸಗಿ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಶೋನಲ್ಲಿ ಕೆಲ ಕಾಲ ಕಾಣಿಸಿಕೊಂಡಿದ್ದ ಈತ ಜನರನ್ನು ರಂಜಿಸಿ ಗಮನ ಸೆಳೆದಿದ್ದ. ಕೆಲ ಧಾರವಾಹಿಗಳಲ್ಲಿಯೂ ಸಹಪಾತ್ರ ನಿರ್ವಹಿಸಿದ್ದ. ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನ ಸಹ ಹೊಂದಿದ್ದ ಚಂದ್ರಶೇಖರ್ ಬಳಿಕ ಅವಕಾಶಗಳು ಸಿಗದೆ ಊರಿನ ಕಡೆ ಆಗಮಿಸಿದ್ದ ಈತ ಕೂಲಿ ಮಾಡಿಕೊಂಡಿದ್ದ ಎನ್ನಲಾಗಿದೆ.
ಚಂದ್ರಶೇಖರ್ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಮನಳ್ಳಿಯ ಸಿದ್ದಿ ಜನಾಂಗದ ಯುವಕ, ಈತ ಕಬ್ಬಿಗೆ ಗ್ರಾಮಕ್ಕೆ ಪತ್ನಿಯೊಂದಿಗೆ ಕೆಲಸಕ್ಕೆಂದು ಹೋಗಿ ಅಲ್ಲೇ ಉಳಿದುಕೊಂಡಿದ್ದ. ಶನಿವಾರ ಮಧ್ಯಾಹ್ನ 2 ಗಂಟೆಗೆ ತನ್ನ ಮಗನೊಂದಿಗೆ ಶಾಲೆ ಬಿಟ್ಟು ಮನೆಗೆ ಬಂದಿದ್ದ. ಈತ ಬಳಿಕ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೋದವನು ಮರಳಿ ಬಂದಿರಲಿಲ್ಲ.
ಆತನ ಪತ್ನಿ ಹುಡುಕಾಡಿದಾಗ ಮರವೊಂದಕ್ಕೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕಳೆದ 2-3 ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಚಂದ್ರಶೇಖರ್ ಸಿದ್ದಿಗೆ ಕಾರವಾರದ ಕ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ಆತನ ತಾಯಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
