ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಗೊಳಿಸಲು ಒತ್ತಾಯಿಸಿ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ನಿಂದ ರಾಜ್ಯದಾದ್ಯಂತ ಜಿಲ್ಲಾ ಸಮಿತಿ ಮತ್ತು ಕಾನೂನು ವಿದ್ಯಾರ್ಥಿಗಳ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಇತ್ತೀಚೆಗೆ L.L.B ಯ ಎರಡನೇ ಮತ್ತು ನಾಲ್ಕನೇ ಹಾಗೂ ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಶುಲ್ಕ ಕಟ್ಟಲು ಆದೇಶ ಮಾಡಿತ್ತು, ಕೊರೋನ ಮತ್ತು ಲಾಕ್ ಡೌನ್ ನಿಂದಾಗಿ ಈ ಸೆಮಿಸ್ಟರ್ ನ ತರಗತಿಗಳು ಮಾರ್ಚ್ ತಿಂಗಳಿನಿಂದ ಇಲ್ಲಿವರೆಗೂ ನಡೆದಿರಲಿಲ್ಲ. ಪಾಠಗಳು ಕೂಡ ಪೂರ್ಣಗೊಂಡಿಲ್ಲ, ಹೀಗಿರುವಾಗ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೇಗೆ ಸಾಧ್ಯ? ಪ್ರಾರಂಭದಿಂದಲೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಒಂದಲ್ಲ ಒಂದು ವಿಷಯದಲ್ಲಿ ವಿದ್ಯಾರ್ಥಿ ವಿರೋಧಿ ನೀತಿಯನ್ನು ಅನುಸರಿಸುತ್ತಾ ಬರುತ್ತಿದೆ, ಈಗ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಂದಾಗಿದೆ ಎಂದು ಎಸ್.ಎಫ್.ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನಾದಂತಹ ಸಂಕಷ್ಟದ ಸಮಯದಲ್ಲೂ ತನ್ನ ಧಮನಕಾರಿ ನೀತಿಯನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿದೆ. ಕೂಡಲೇ ಅದನ್ನು ಕೈ ಬಿಟ್ಟು ವಿದ್ಯಾರ್ಥಿಗಳ ಹಿತ ಕಾಪಾಡಲು ಮುಂದಾಗಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ರಾಜ್ಯದಾದ್ಯಂತ ಜಿಲ್ಲಾ ಸಮಿತಿ ಮತ್ತು ಕಾನೂನು ವಿದ್ಯಾರ್ಥಿಗಳ ಸಂಘಟನೆಯಿಂದ ಮಾನ್ಯ ಉಪ ಕುಲಪತಿಗಳು ಮನವಿ ಪತ್ರವನ್ನು ನೀಡಲಾಗಿದೆ ಎಂದು ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ತಿಳಿಸಿದ್ದಾರೆ.
LLB ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿ ಮುಂದಿನ ತರಗತಿಗೆ ಪ್ರಮೊಟ್ ಮಾಡಬೇಕು, ಕೊವಿಡ್ -19 ವೇಗವಾಗಿ ಹರಡುತ್ತಿರುವ ಕಾಲದಲ್ಲೇ ಕೆಎಸ್ಎಲ್ ಯು UGC ನಿರ್ದೇಶನಗಳನ್ನು ಧಿಕ್ಕರಿಸಿ ಕಾನೂನು ಪ್ರಥಮ, ದ್ವಿತೀಯ ವರ್ಷದ LLB ವಿದ್ಯಾರ್ಥಿಗಳ ಪರಿಕ್ಷೆಗಳನ್ನು ನಡೆಸಲು ಮುಂದಾಗಿರುವ ನಿರ್ಣಯವನ್ನು ಕೈಬಿಡಬೇಕು. ಪರೀಕ್ಷಾ ಶುಲ್ಕ ಕಟ್ಟಿಸಿ ಕೊಳ್ಳಲು ಹೊರಡಿಸಿರುವ ಆದೇಶವನ್ನು ಈ ಕೂಡಲೇ ವಾಪಸ್ ಪಡೆಯಬೇಕು ಮತ್ತು ಕಟ್ಟಿರುವ ಶುಲ್ಕವನ್ನು ವಿದ್ಯಾರ್ಥಿಗಳಿಗೆ ವಾಪಸ್ ನೀಡಬೇಕು. ಕೊವಿಡ್ -19ನ ಲಾಕ್ ಡೌನ್ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ವಿದ್ಯಾರ್ಥಿ, ಪೋಷಕರನ್ನು ಬಲವಂತವಾಗಿ ಅಧಿಕ ಪರೀಕ್ಷಾ ಶುಲ್ಕ ಪಾವತಿಸಲು ಅವಧಿ ನಿಗದಿ ಮಾಡಿ ಇಕ್ಕಟ್ಟಿಗೆ ಸಿಲುಕಿಸಿರುವ ಆದೇಶವನ್ನು ವಾಪಸ್ ಪಡೆದುಕೊಳ್ಳಬೇಕು.
LLB ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರಥಮ ಮೌಲ್ಯ ಮಾಪನದಲ್ಲೇ ಉತ್ತಮ ಫಲಿತಾಂಶಗಳನ್ನು ನೀಡದೆ ಕಡಿಮೆ ಅಂಕಗಳ ಅಂತರದಲ್ಲಿ ವಿಷಯಗಳನ್ನು ಅನುತ್ತೀರ್ಣಗೊಳಿಸಿ ನಂತರ ಮರುಮೌಲ್ಯಮಾಪನ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಮೇಲೆ ದುಬಾರಿ ಶುಲ್ಕಗಳ ಹೊರೆ ವಿಧಿಸಿ ಕೋಟ್ಯಾಂತರ ರೂಪಾಯಿ ಹಣ ದರೋಡೆ ಮಾಡುತ್ತಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿಯನ್ನು ನಿಲ್ಲಿಸಬೇಕು. ಮರು ಮೌಲ್ಯ ಮಾಪನದಲ್ಲಿ ಪಾಸ್ಸಾದ ವಿದ್ಯಾರ್ಥಿಗಳಿಗೆ ಕಟ್ಟಿದ ಪೂರ್ಣ ಶುಲ್ಕವನ್ನು ಮರು ಪಾವತಿ ಮಾಡಬೇಕು, ಬಾಕಿ ಇರುವ ವಿದ್ಯಾರ್ಥಿ ವೇತನ ನೀಡಲು ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕೆಂದು ಎಸ್.ಎಫ್.ಐ ಒತ್ತಾಯಿಸಿದೆ.