ಮಡಿಕೇರಿ: ʻಕಾಂಗ್ರೆಸ್ ಪಕ್ಷದ ವತಿಯಿಂದ ನೆನ್ನೆ ನಡೆದ ಪ್ರತಿಭಟನೆ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭಾಗವಹಿಸದಿರುವುದು ಪಕ್ಷದಲ್ಲಿ ಗೊಂದಲ ಅಥವಾ ಮುನಿಸಿಲ್ಲʼ ಎಂದು ಶಾಸಕ ಯತೀಂದ್ರ ಹೇಳಿದರು.
ಮಡಿಕೇರಿಯಲ್ಲಿ ನಡೆಯುತ್ತಿರುವ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹೇಳಿಕೆ ನೀಡಿದ ಶಾಸಕ ಯತೀಂದ್ರ ʻಕಾಂಗ್ರೆಸ್ ಪಕ್ಷದ ನಾಯಕರು ಅವರವರ ಕೆಲಸದ ಒತ್ತಡದಲ್ಲಿದ್ದರು ಹೀಗಾಗಿ ಇಬ್ಬರು ಭಾಗವಹಿಸಲಾಗಿಲ್ಲ. ಆದರೆ ಇದನ್ನೇ ಬಣ ರಾಜಕೀಯ ಅಂತ ಬಿಂಬಿಸೋದು ಬೇಡ, ಕಾಂಗ್ರೆಸ್ ನವರು ನಾವೆಲ್ಲರೂ ಒಗ್ಗಟ್ಟಾಗಿದ್ದು ಕೆಲಸ ಮಾಡುತ್ತೇವೆʼ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಶಾಸಕ ಯತೀಂದ್ರ ʻನಮ್ಮ ಗುರಿ ಇರುವುದು ಒಂದೇ ಆಗಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು. ಎಂದರು.
ಜೆಡಿಎಸ್ ಪಕ್ಷದ ನಾಯಕ ಜಿ ಟಿ ದೇವೇಗೌಡ ಕಾಂಗ್ರೆಸ್ ಸೇರುತ್ತಿರುವ ವಿಚಾರದ ಬಗ್ಗೆ ಕೇಳಿದಾಗ ʻರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳಲ್ಲ, ಜನತಾ ಪರಿವಾರ ಇರುವಾಗಿನಿಂದಲೂ ಜಿ ಟಿ ದೇವೇಗೌಡ ಮತ್ತು ನಮ್ಮ ತಂದೆ ಒಟ್ಟಿಗೆ ಇದ್ದರು. ಈಗಲೂ ಅವರಿಬ್ಬರೂ ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರಿದ್ದಾರೆ. ಅವರು ಕಾಂಗ್ರೆಸಿಗೆ ಬರುವುದಕ್ಕೆ ನಿರ್ಧರಿಸಿದ್ದಾರೆ. ಈ ಕುರಿತು ಪಕ್ಷದ ನಾಯಕರು ನಿರ್ಧರಿಸುತ್ತಾರೆ ಎಂದು ಹೇಳಿದರು.