ಬೆಂಗಳೂರು : ಬಿಬಿಎಂಪಿ ಕಸ ಸಂಗ್ರಹಣೆಗೆ ಮಾಸಿಕ ಶುಲ್ಕ ವಿಧಿಸುತ್ತಿರುವುದನ್ನು ಹಾಗೂ ವಿವಿಧ ಜನವಿರೋಧಿ ನೀತಿಗಳನ್ನು ಖಂಡಿಸಿ ಬೆಂಗಳೂರು ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಪ್ರತಿಭಟನೆ ನಡೆಸಿದವು.
ಕೋರೊನಾ ವೈರಾಣುವಿನಿಂದಾಗಿ ಈಗಾಗಲೇ ಜನ ಸಂಕಷ್ಟದಲ್ಲಿದ್ದಾರೆ, ರಾಜ್ಯ ಸರ್ಕಾರ ಕಸದ ನಿರ್ವಹಣೆಗಾಗಿ ಪ್ರತಿ ಮನೆಗೆ ಮಾಸಿಕ ಶುಲ್ಕ ವಿಧಿಸಿರುವುದು ಸರಿಯಾದ ಕ್ರಮವಲ್ಲ. ಈಗಾಗಲೇ ಕಸದ ನಿರ್ವಹಣೆಗಾಗಿ ಮೀಸಲಿಟ್ಟಿರುವ ಹಣದಿಂದಲೇ ಕಸ ನಿರ್ವಹಣೆ ಸೇರಿದಂತೆ ವಿವಿಧ ರೀತಿಯ ನಿರ್ವಹಣೆ ನಿಭಾಯಿಸಬಹುದು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಬಿಜೆಪಿ ಆಡಳಿತದಲ್ಲಿ ಜನಸಾಮಾನ್ಯರ ಮೇಲೆ ವಿವಿಧ ರೀತಿಯಲ್ಲಿ ತೆರೆಗೆ ಹೆಚ್ಚಿಸಿದ್ದು, ಶ್ರೀಮಂತರಿಗೆ ತೆರಿಗೆ ವಿನಾಯಿತಿ ನೀಡುವುದು ಬಿಜೆಪಿಯ ಉದ್ದೇಶ ಎಂದು ಆರೋಪಿಸಿದೆ.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಮಾಜಿ ಸಚಿವರುಗಳಾದ ದಿನೇಶ್ ಗುಂಡೂರಾವ್, ರಾಮಲಿಂಗಾ ರೆಡ್ಡಿ, ವಿಧಾನ ಪರಿಷತ್ ಸದಸ್ಯರುಗಳಾದ ಬಿ.ಕೆ ಹರಿಪ್ರಸಾದ್, ನಾರಾಯಣಸ್ವಾಮಿ, ಶಾಸಕಾದ ರಿಜ್ವಾನ್ ಅರ್ಷದ್, ಜಿಲ್ಲಾಧ್ಯಕ್ಷರುಗಳು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.