ಬೆಂಗಳೂರು : ಕರೋನಾ ಕಾಲದಲ್ಲಿ ಸಂಕಷ್ಟಕ್ಕೆ ಈಡಾಗಿರುವ ಕರಕುಶಲಕರ್ಮಿಗಳ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಇಂತಹ ಪ್ರದರ್ಶನ ಮತ್ತು ಮಾರಾಟ ಮೇಳಗಳ ಅಗತ್ಯತೆ ಹೆಚ್ಚಾಗಿದೆ ಎಂದು ಖ್ಯಾತ ನಟಿ ರೇಖಾದಾಸ್ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇಂದಿನಿಂದ ಡಿಸೆಂಬರ್ 6 ರ ವರೆಗೆ ಆಯೋಜಿಸಲಾಗಿರುವ ಕ್ರಿಸ್ಮಸ್ ಮತ್ತು ವಿಂಟರ್ ಶಾಪಿಂಗ್ ಫೆಸ್ಟಿವಲ್ ಆರ್ಟಿಸನ್ಸ್ ಬಜಾರ್ ಗೆ ಚಾಲನೆ ನೀಡಿ ಮಾತನಾಡಿದ ಅವರು ಕರೋನಾ ಮಹಾಮಾರಿ ಬಹಳಷ್ಟು ಜನರ ಜೀವನೋಪಾಯದ ಮಾರ್ಗಗಳನ್ನೇ ಹಾಳು ಮಾಡಿದೆ. ಅದರಲ್ಲೂ ಇಂತಹ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕರಕುಶುಲಕರ್ಮಿಗಳ ಜೀವನೋಪಾಯವೂ ಕೂಡಾ ದುಸ್ತರವಾಗಿದೆ. ಆರ್ಟಿಸನ್ಸ್ ಬಜಾರ್ ನಂತಹ ಮೇಳಗಳ ಅಗತ್ಯತೆ ಹೆಚ್ಚಾಗಿದೆ ಎಂದರು.
ನಟ ಟೆನ್ನಿಸ್ ಕೃಷ್ಣ ಮಾತನಾಡಿ, ಕರ್ನಾಟಕ ಚಿತ್ರಕಲಾ ಪರಿಷತ್ತು ಕಲಾವಿದರಿಗೆ ಮತ್ತು ಕರಕುಶಲಕರ್ಮಿಗಳಿಗೆ ಉತ್ತಮ ವೇದಿಕೆಯನ್ನು ಮೊದಲಿನಿಂದಲೂ ನಿರ್ಮಿಸುತ್ತಾ ಬಂದಿದೆ. ದೇಶದ ಮೂಲೆ ಮೂಲೆಗಳಿಂದ ಬಂದಿರುವ ಕರಕುಶಲಕರ್ಮಿಗಳ ಕೈಚಳಕವನೋಡುವುದು ಬಹಳ ಆಹ್ಲಾದಕರ. ಇಲ್ಲಿ ವಸ್ತುಗಳನ್ನು ಕೊಳ್ಳುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕ್ರಿಸ್ಮಸ್ ಹಾಗೂ ಚಳಿಗಾಲದ ಉತ್ಪನ್ನಗಳನ್ನು ಖರೀದಿಸಲು ಅಲ್ಲದೆ, ದೇಶದ ಮೂಲೆ ಮೂಲೆಗಳಿಂದ ಆಗಮಿಸಲಿರುವ ಕಲಾವಿದರ ಕೈಚಳಕದ ಕಲಾಕೃತಿಗಳನ್ನು ನೋಡುವ ಮತ್ತು ಕೊಂಡುಕೊಳ್ಳುವ ಉತ್ತಮ ಅವಕಾಶವನ್ನು ಗ್ರಾಂಡ್ ಫ್ಲಿಯಾ ಮಾರ್ಕೇಟ್ ಹಾಗೂ ಚಿತ್ತಾರ ನಿಮ್ಮ ಮುಂದೆ ಇಡುತ್ತಿದೆ. ಇದೇ ನವಂಬರ್ 27 ರಿಂದ ಡಿಸೆಂಬರ್ 6, 2020 ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಆರ್ಟಿಸನ್ಸ್ ಬಜಾರ್ ನ್ನು ಆಯೋಜಿಸಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಅಪ್ಪಾಜಯ್ಯ ತಿಳಿಸಿದರು.