ದೆಹಲಿ : ಮಾರ್ಚ್ 26ರಂದು ‘ಭಾರತ್ ಬಂದ್ʼ ಮತ್ತು 28ರಂದು ಕರಾಳ ಕೃಷಿ ಕಾಯ್ದೆಗಳ ‘ಹೋಳಿ ದಹನದ ನಂತರ ದಿಲ್ಲಿ ಗಡಿಗಳಲ್ಲಿ ಪ್ರತಿಭಟಿಸುತ್ತಿರುವ ರೈತರು ಎಪ್ರಿಲ್ 5 ರಂದು “ಎಫ್‌ಸಿಐ (ಭಾರತ ಆಹಾರ ನಿಗಮ) ಬಚಾವೋ” ದಿನಾಚರಣೆ ಮತ್ತು ಎಪ್ರಿಲ್ 14 ರಂದು ʼಸಂವಿಧಾನ ಬಚಾವೋ’ ದಿನಾಚರಣೆ ನಡೆಸಲು ನಿರ್ಧರಿಸಿದ್ದಾರೆ.
ಮಾರ್ಚ್ 31ರರಂದು ಪತ್ರಿಕಾಗೋ಼ಷ್ಠಿ ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಮುಂದುವರೆಯುತ್ತಿರುವ ತಮ್ಮ ಹೋರಾಟದ ಭಾಗವಾಗಿ ಮುಂದಿನ ಎರಡು ತಿಂಗಳ ಪ್ರತಿಭಟನಾ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು.
ಕೃಷಿ ವಲಯವನ್ನು ಕಾರ್ಪೊರೇಟ್‌ಗಳಿಗೆ ವಹಿಸಿ ಕೊಡುವ ಹುನ್ನಾರದ ಭಾಗವಾಗಿ ಭಾರತ ಆಹಾರ ನಿಗಮವನ್ನು ಹಾಳುಗೆಡಹುವ ಪ್ರಯತ್ನದತ್ತ ಗಮನ ಸೆಳೆಯಲು ಎಪ್ರಿಲ್ 5ರಂದು ದೇಶಾದ್ಯಂತ 736 ಜಿಲ್ಲೆಗಳಲ್ಲಿ ಎಫ್ಸಿಐ ಕಚೇರಿಗಳ ಎದುರು ‘ಎಫ್ಸಿಐ ಬಚಾವೋ ದಿವಸ್’ ಆಚರಿಸಲಾಗುವುದು.
ಎಪ್ರಿಲ್ 13 ಪಂಜಾಬಿನಲ್ಲಿ “ಬೈಸಾಖಿ” ಬಹು ದೊಡ್ಡ ಹಬ್ಬ. ಆದಿನ ದಿಲ್ಲಿ ಗಡಿಗಳಲ್ಲಿ ಇದನ್ನು ರೈತರು ಆಚರಿಸಲಿದ್ದಾರೆ. ಅದಕ್ಕೆ ಮೊದಲು ಎಪ್ರಿಲ್ 10ರಂದು ಈ ಗಡಿ ಪ್ರತಿಭಟನಾ ಸ್ಥಳಗಳನ್ನು ಜೋಡಿಸುವ ಕೆಎಂಪಿ ಹೆದ್ದಾರಿಯಲ್ಲಿ 24 ಗಂಟೆಗಳ ರಾಸ್ತಾ ರೋಕೋ ಯೋಜಿಸಲಾಗಿದೆ.
ಎಪ್ರಿಲ್ 14 ಅಂಬೇಡ್ಕರ್ ಜಯಂತಿಯಂದು ಸಂವಿಧಾನ್ ಬಚಾವೋ ದಿವಸ್’ ಆಚರಿಸಲಾಗುವುದು.
ಮೇ ದಿನದಂದು ರೈತರು ಬೀಡು ಬಿಟ್ಟಿರುವ ದಿಲ್ಲಿ ಗಡಿಗಳಲ್ಲಿ ಮೇದಿನಾಚರಣೆ ನಡೆಸಲಾಗುವುದು, ಅದಕ್ಕೆ ಕೇಂದ್ರೀಯ ಕಾರ್ಮಿಕ ಸಂಗಟನೆಗಳನ್ನು ಆಹ್ವಾನಿಸಲಾಗುವುದು. ಈದಿನವನ್ನು ರೈತ-ಕಾರ್ಮಿಕ ಐಕ್ಯತೆಗೆ ಸಮರ್ಪಿಸಲಾಗುವುದು ಎಂದು ಎಸ್.ಕೆ.ಎಂ. ಮುಖಂಡರು ಹೇಳಿದರು.
ಇದನ್ನನುಸರಿಸಿ ಮೇ ತಿಂಗಳ ಮೊದಲ ವಾರದಲ್ಲಿ ರೈತರು ಸಂಸದ್ ಭವನದತ್ತ ಪಾದಯಾತ್ರೆ ನಡೆಸುತ್ತಾರೆ. ಆದಿನ ದೇಶದ ಹಲವೆಡೆಗಳಿಂದ ಬರುವ ರೈತರು ತಮ್ಮ ಟ್ರಾಕ್ಟರ್ ಮುಂತಾದವುಗಳನ್ನು ಗಡಿಗಳಲ್ಲೇ ಬಿಟ್ಟು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಎಸ್.ಕೆ.ಎಂ. ಮುಖಂಡರು ಹೇಳಿದ್ದಾರೆ.
ಇದಕ್ಕೆ ಮೊದಲು ಮಾರ್ಚ್ 28 ಮತ್ತು 29ರಂದು ದಿಲ್ಲಿಯ ಗಡಿಗಳಲ್ಲಿ ಮೂರು ಕರಾಳ ಕೃಷಿ ಕಾಯ್ದೆಗಳ ಪ್ರತಿಗಳ ಸಾಮೂಹಿಕ ದಹನ ನಡೆಸಿ ನಿಜವಾದ ಅರ್ಥದಲ್ಲಿ ಹೋಳಿ ಆಚರಿಸಿರುವುದಾಗಿ ರೈತರು ಹೇಳಿದ್ದಾರೆ.
ದೇಶದ ಇತರೆಡೆಗಳಲ್ಲೂ ರೈತರು ಅಂದು ಈ ರೀತಿಯಲ್ಲಿ ‘ಹೋಲೀ ದಹನ್’ ನಡೆಸಿದ್ದಾರೆ.