ಕನ್ನಡ ವಿಶ್ವ ವಿದ್ಯಾಲಯಕ್ಕೆ ಅನುದಾನ ಕೊರತೆ : ಆರ್ಥಿಕ ಮುಗ್ಗಟ್ಟಿನತ್ತ ಹಂಪಿ ವಿವಿ

ಆರ್ಥಿಕ ಮುಗ್ಗಟ್ಟನ್ನು  ಎದುರಿಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರಕಾರ ಅನುದಾನ ನೀಡಬೇಕು ಎಂಬ ಹೋರಾಟಗಳು ಆರಂಭಗೊಂಡಿವೆ. ಸಂಶೋಧನೆಯನ್ನೆ ಮುಖ್ಯ ಉದ್ದೇಶವಾನ್ನಿಗಿಸಿಕೊಂಡು  ಹುಟ್ಟಿಕೊಂಡ  ಹಂಪಿ ಕನ್ನಡ ವಿಶ್ವವಿದ್ಯಾಲಯ ಆರ್ಥಿಕ ಮುಗ್ಗಟ್ಟು ಎದುರಿಸುವ ಸ್ಥಿತಿ ನಿರ್ಮಾಣ ಮಾಡಿದ್ದು ಯಾರು? ಇದೇ ಕಾರಣಕ್ಕಾಗಿ ಅಲ್ಲಿನ ವಿದ್ಯಾರ್ಥಿಗಳಿಗೆ ಫೆಲೊಶಿಪ್ ಸಿಗುತ್ತಿಲ್ಲವಾ? ಗುತ್ತಿಗೆ ಆಧಾರದಲ್ಲಿ ನೇಮಕವಾದ ಉಪನ್ಯಾಸಕರ ವೇತನಕ್ಕೂ ಕತ್ತರಿ ಬಿದ್ದಿದೆಯಾ? ಕನ್ನಡ ವಿಶ್ವವಿದ್ಯಾಲ ನಿರ್ಲಕ್ಷಕ್ಕೆ ಕಾರಣಗಳೇನು? ಈ ಎಲ್ಲಾ ಪ್ರಶ್ನಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಒಳಪಟ್ಟಿವೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಸ್ಥಿತಿ ಶೋಚನೀಯವಾಗಿದೆ. ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಂದ ಸಂಶೋಧನೆ, ಬೋಧನೆ ಹೆಚ್ಚು ಕಡಿಮೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿಯೇ ನ್ಯಾಕ್ ಗುಣಮಟ್ಟದಲ್ಲಿ ಎ+ ಇದ್ದ ಶ್ರೇಣಿ ಈಗ ಬಿ ಶ್ರೇಣಿಗೆ ಇಳಿದಿದೆ. ವಿಶ್ವವಿದ್ಯಾಲಯದ ಕುಲತಿಗಳಾದ ಪ್ರೊ.ಸ.ಚಿ.ರಮೇಶ್ ರಾಜ್ಯ ಸರ್ಕಾರದಿಂದ ಅನುದಾನಗಳನ್ನು ತರಲು ವಿಫಲರಾಗಿದ್ದಾರೆ. ಬಿ ಶ್ರೇಣಿಗೆ ಇಳಿದ ಪರಿಣಾಮವಾಗಿ ಯುಜಿಸಿಯಿಂದ ಬರುವ ಅನುದಾನಗಳೂ ನಿಂತುಹೋಗಿದೆ. ಕುಲಪತಿಗಳು, ಕುಲಸಚಿವರೇ ಅಸಹಾಯಕತೆ ಪ್ರದರ್ಶಿಸುತ್ತಿರುವುದರಿಂದ ಅರಾಜಕ ವ್ಯವಸ್ಥೆ ಸೃಷ್ಟಿಯಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಎರಡು ವರ್ಷಗಳಿಂದ ವಿಶ್ವವಿದ್ಯಾಲಯದ ಅಭಿವೃದ್ಧಿಯ ಅನುದಾನದಲ್ಲೂ ಸರ್ಕಾರ ಭಾರಿ ಕಡಿತ ಮಾಡುತ್ತ ಬಂದಿದೆ.  ಅದಕ್ಕೆ ರಾಜ್ಯ ಸರಕಾರ ಕೊಟ್ಟಿರುವ ಕಾರಣ ಏನು ಅಂದರೆ,  ರಾಜ್ಯದಲ್ಲಿ ಸತತ ಎರಡು ವರ್ಷ ನೆರೆಯಿಂದ  ಅಪಾರ ನಷ್ಟ ಉಂಟಾಗಿದೆ. ಈ ವರ್ಷ ಕೋವಿಡ್‌ ಲಾಕ್‌ಡೌನ್‌ನಿಂದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ಕಾರಣಗಳನ್ನು ಕೊಟ್ಟು ಸರ್ಕಾರ ಅನುದಾನಕ್ಕೆ ಕತ್ತರಿ ಹಾಕಿದೆ. ವಿಶ್ವವಿದ್ಯಾಲಯಕ್ಕೆ ಪ್ರತಿವರ್ಷ ಸರಾಸರಿ ರೂ 5 ಕೋಟಿ ಅಭಿವೃದ್ಧಿ ಅನುದಾನ ಬರುತ್ತದೆ. ಆದರೆ, ಅದು ಅಲ್ಲಿನ ಸಿಬ್ಬಂದಿಯ ವೇತನ ಪಾವತಿಗಷ್ಟೇ ಸೀಮಿತವಾಗಿದೆ. ಅನ್ಯ ಕಾರ್ಯಕ್ರಮ, ಯೋಜನೆ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕನ್ನಡ ವಿಶ್ವ ವಿದ್ಯಾಲಯದಲ್ಲಿ 121 ಜನ ತಾತ್ಕಾಲಿಕ ನೌಕರರಿದ್ದಾರೆ. ಅವರನ್ನು ಕ್ರೋಡಿಕೃತ, ಅತಿಥಿ ಉಪನ್ಯಾಸಕರು, ಸ್ವಚ್ಚತಾ ಸಿಬ್ಬಂದಿ ಎಂದು ವಿಂಗಡಿಸಲಾಗಿದೆ. ಇವರಿಗೆ ಒಂದು ತಿಂಗಳಿಗೆ 25 ಲಕ್ಷ ರೂ ವೇತನವಾಗುತ್ತದೆ. ಅಂದರೆ ವರ್ಷಕ್ಕೆ ಮೂರು ಕೋಟಿ  ಸಂಬಳಕ್ಕಾಗಿಯೇ ಹಣ ಬೇಕಾಗಿದೆ. 8 ತಿಂಗಳಿಂದ ವೇತನ ಇಲ್ಲದೆ ನೌಕರರು ಪರದಾಡುತ್ತಿದ್ದಾರೆ. 

2020–21ನೇ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ರೂ 50 ಲಕ್ಷ ಅಭಿವೃದ್ಧಿ ಅನುದಾನ ಮಂಜೂರು ಆಗಿದೆ. ಈ ಪೈಕಿ ರೂ 12.50 ಲಕ್ಷವಷ್ಟೇ ಬಿಡುಗಡೆಯಾಗಿದೆ. ಒಂದಿಲ್ಲೊಂದು ನೆಪವೊಡ್ಡಿ ಸರ್ಕಾರ ಅನುದಾನ ಕಡಿತ ಮಾಡುತ್ತಿರುವುದರಿಂದ ವಿಶ್ವವಿದ್ಯಾಲಯ ವರ್ಷದಿಂದ ವರ್ಷಕ್ಕೆ ಆರ್ಥಿಕ ಸಮಸ್ಯೆಗೆ ಒಳಗಾಗುತ್ತಿದೆ. ಸರಕಾರದ ಈ ನಡೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಟ್ವೀಟರ್ ಅಭಿಯಾನವನ್ನು ನಡೆಸಿತು. ಅನುದಾನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿತು, ಟ್ವಿಟರ್ ಅಭಿಯಾನಕ್ಕೆ ವ್ಯಾಪಕ ಬೆಂಬಲವ್ಯಕ್ತವಾಗಿತ್ತು.

ಕಳೆದ ಎರಡು ವರ್ಷಗಳಿಂದ ಕನ್ನಡ ವಿಶ್ವ ವಿದ್ಯಾಲಯಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ. ಸಂಶೋಧನಾ ಕಾರ್ಯಗಳು ಸ್ಥಗಿತಗೊಂಡಿವೆ ಅಥವಾ ವೇಗ ಕಳೆದುಕೊಂಡಿವೆ. ದೂರಶಿಕ್ಷಣ ಕೋರ್ಸ್ ಗಳು ಮುಚ್ಚಿಕೊಳ್ಳುತ್ತಿವೆ. ಇದೆಲ್ಲವನ್ನೂ ಸರಿಪಡಿಸಬೇಕಾದ ಆಡಳಿತ ಮಂಡಳಿ ನಿಷ್ಕ್ರಿಯವಾಗಿದೆ. ವಿಶ್ವವಿದ್ಯಾಲಯದಲ್ಲಿ ಇಷ್ಟೆಲ್ಲ ಸಮಸ್ಯೆಗಳು ಇರುವಾಗ, ರಾಜ್ಯ ಸರ್ಕಾರ ವಿಶ್ವವಿದ್ಯಾಲಯಕ್ಕೆ ಅನುದಾನ ಹೆಚ್ಚಿಸಿ ಸಂಸ್ಥೆಯನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಬೇಕಿತ್ತು. ಆದರೆ ಮೊದಲೇ ಕೆಟ್ಟ ಆಡಳಿತ ವ್ಯವಸ್ಥೆಯಿಂದ ನಲುಗಿದ್ದ ವಿಶ್ವವಿದ್ಯಾಲಯಕ್ಕೆ ಅನುದಾನಗಳನ್ನು ನಿಲ್ಲಿಸಿ ಗಾಯದ ಮೇಲೆ ಬರೆ ಎಳೆದಿದೆ.

ಕನ್ನಡ ನಾಡು, ನುಡಿ, ಸಾಹಿತ್ಯ, ಜನಪದ, ಮಹಿಳೆ, ಚರಿತ್ರೆ, ಪುರಾತತ್ತ್ವ, ಬುಡಕಟ್ಟು, ಹಸ್ತಪ್ರತಿ, ಮಾನವಶಾಸ್ತ್ರ, ಸಂಗೀತ.. ಹೀಗೆ ಕನ್ನಡಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಸಂಶೋಧನೆ ನಡೆಸಲು ಇರುವ ವಿಶ್ವವಿದ್ಯಾಲಯ ಇದಾಗಿದೆ, ಕೂಡಲೆ ಬಾಕಿ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಒತ್ತಾಯಿಸಿದ್ದಾರೆ

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ. 99 ರಷ್ಟು ಮಂದಿ ಗ್ರಾಮೀಣ ಬಡ ಕುಟುಂಬಗಳಿಂದ ಬಂದವರು. ಕಳೆದ ಎರಡು ವರ್ಷದಿಂದ ಫೆಲೋಶಿಪ್ ಇಲ್ಲದೆ ಈ ವಿದ್ಯಾರ್ಥಿಗಳು ನರಳುತ್ತಿದ್ದಾರೆ. ಇದು ಕೇವಲ ಕನ್ನಡ ನುಡಿಯ ಪ್ರಶ್ನೆ ಮಾತ್ರವಲ್ಲ. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಕನ್ನಡದ ಮಕ್ಕಳ ಭವಿಷ್ಯದ ಪ್ರಶ್ನೆ ನಮಗೆ ಫೆಲೊಶಿಪ್ ಸಿಗದ ಕಾರಣ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ ಎಂದು ಹಂಪಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಬಸವರಾಜ ಗುಳೇದಾಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅರವಿಂದ ಮಾಲಗತ್ತಿ

ಸರಕಾರ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಅಭಿವೃದ್ಧಿ ಪಡಿಸಬೇಕು, ಸಂಸ್ಕೃತ ವಿ.ವಿ. ತೆರೆಯುವ ಮತ್ತು ಸಂಸ್ಕೃತ ಭಾಷೆಗೆ ಹೆಚ್ಚಿನ ಆಧ್ಯತೆ ನೀಡುವ ಸರಕಾರಕ್ಕೆ, ಕನ್ನಡ ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿರುವುದು ಕಾಣಿಸಲಿಲ್ಲವೆ ಎಂದು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ. ಅರವಿಂದ ಮಾಲಗತ್ತಿ ಪ್ರಶ್ನಿಸಿದ್ದಾರೆ.

ಅನುದಾನದ ನೆಪ ಒಡ್ಡಿ ಕೆಲ ಕೋರ್ಸಗಳನ್ನು ರದ್ದು ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದ ಕೋರ್ಸಗಳನ್ನು ತೆಗೆದು ಹಾಕಿ ಪೂರಕವಲ್ಲದ ಕೋರ್ಸಗಳನ್ನು ತೆರೆಯುತ್ತಿದ್ದಾರೆ ಎಂದು ಹಂಪಿ ವಿ.ವಿ ಸಂಶೋಧನಾ ವಿದ್ಯಾರ್ಥಿ ಸಂಗಮೇಶ ಶಿವಣಗಿ ಆರೋಪಿಸಿದ್ದಾರೆ. 

ಕನ್ನಡ ಅಬಿವೃದ್ಧಿಯನ್ನು ಗುರಿಯಾಗಿಸಿಕೊಂಡು, ಕನ್ನಡ ಸಾಹಿತ್ಯ, ಕಲೆ, ಸಾಂಸ್ಕೃತಿಕ ಕ್ಷೇತ್ರಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವ ಕನ್ನಡ ವಿಶ್ವವಿದ್ಯಾಲಕ್ಕೆ ಸರಕಾರ ಅನುದಾನವನ್ನು ಮಂಜೂರು ಮಾಡಬೇಕಿದೆ. ಮತ್ತು ಸ್ಥಗಿತಗೊಂಡಿರುವ ಕೋರ್ಸ್ಗಳನ್ನು ಆರಂಭಮಾಡಬೇಕು. 21 ತಿಂಗಳಕಾಲ ಬಾಕಿ ಇರುವ ವಿದ್ಯಾರ್ಥಿಗಳ ಫೆಲೊಶಿಪ್ನ್ನು ನೀಡಲು ಮುಂದಾಗಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *