ಕಟ್ಟಡ ನಿರ್ಮಾಣ ಕಾರ್ಮಿಕರು ಕಲ್ಯಾಣ ಮಂಡಳಿಗೆ ತಮಗೆ ಸಿಗಬೇಕಾದ ಸೌಲಭ್ಯಗಳಿಗಾಗಿ ಅರ್ಜಿ ಹಾಕಿಕೊಂಡು 2 ವರ್ಷವಾದರೂ ಹಣ ಜಮಾ ಆಗದೇ ತೀವ್ರ ಸಂಕಷ್ಟದಲ್ಲಿದ್ದಾರೆ. ಕಾರ್ಮಿಕ ಇಲಾಖೆ ಮತ್ತು ಕಲ್ಯಾಣ ಮಂಡಳಿಯ ತನ್ನಲ್ಲಿ ಸಾವಿರಾರು ಕೋಟಿ ಹಣ ಜಮಾವಿದ್ದರು ಬಡ ಕಾರ್ಮಿಕರಿಗೆ ಶೈಕ್ಷಣಿಕ ಧನ ಸಹಾಯ, ಮದುವೆ, ವೈದ್ಯಕೀಯ, ಮರಣಕ್ಕೆ ಸಂಬಂಧಿಸಿದ ಸೌಲಭ್ಯಗಳಿಗೆ ಹಣ ಜಮಾ ಮಾಡುತ್ತಿಲ್ಲ. ನಮ್ಮ ಜನಪ್ರತಿನಿಧಿಗಳು ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಕೂಡಲೇ ಅರ್ಜಿ ಹಾಕಿಕೊಂಡ ಸಾವಿರಾರು ಕಾರ್ಮಿಕರಿಗೆ ಹಣ ಮಂಜೂರಿಯಾಗಬೇಕು. ಇಲ್ಲದಿದ್ದರೆ ನವೆಂಬರ 24 ರಿಂದ ಬೆಂಗಳೂರಿನ ಕಾರ್ಮಿಕ ಕಲ್ಯಾಣ ಮಂಡಳಿ ಕಛೇರಿ ಎದುರು ಅನಿರ್ಧಿಷ್ಟ ಹೋರಾಟ ಪ್ರಾರಂಭಿಸುವದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನವಂಬರ 15 ರಂದು ಕುಮಟಾದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿ.ಐ.ಟಿ.ಯು.ನ 2ನೇ ಜಿಲ್ಲಾ ಸಮ್ಮೇಳನ ನಡೆಯಿತು. ಕಟ್ಟಡ ಕಾರ್ಮಿಕರ ಫೇಡರೇಶನ್‍ನ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿಯವರು ಉದ್ಘಾಟಿಸಿದರುವೇದಿಕೆ ಮೇಲೆ ಉಪಸ್ಥಿತರಿದ್ದ ಸಿ.ಐ.ಟಿ.ಯು. ಜಿಲ್ಲಾಧ್ಯಕ್ಷರಾದ ಹರೀಶ ನಾಯ್ಕ, ರಾಜ್ಯ ಸಮಿತಿ ಸದಸ್ಯ ಶಾಂತಾರಾಮ ನಾಯಕ ಮಾತನಾಡಿದರು. ಸಮ್ಮೇಳನಕ್ಕೆ ಶುಭಕೋರಿ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯರಾದ ಸುಧಾ ಭಟ್, ಬಿಸಿಯೂಟ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾ ನಾಯ್ಕ ಮಾತನಾಡಿದರು
ಸಮ್ಮೇಳನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಜಿಲ್ಲಾಧ್ಯಕ್ಷರಾದ ತಿಲಕ ಗೌಡ ಮಾತನಾಡಿ, ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಐಕ್ಯತೆಯಿಂದ ಚಳುವಳಿ ನಡೆಸಲು ಕರೆ ನೀಡಿದರು. ಪ್ರಾರಂಭದಲ್ಲಿ ಗಂಗಾಧರ ಅಂಬಿಗ ಸ್ವಾಗತಿಸಿದರು. ಕೊನೆಯಲ್ಲಿ ಸಾಲ್ವೋದರ ಫರ್ನಾಂಡಿಸ್ ವಂದಿಸಿದರು.
ಸಮ್ಮೇಳನದ ಪ್ರತಿನಿಧಿ ಅಧಿವೇಶನದಲ್ಲಿ ನೂತನ ಜಿಲ್ಲಾ ಸಮಿತಿ ಆಯ್ಕೆ ಮಾಡಲಾಯಿತು. ಸಮಿತಿ ಅಧ್ಯಕ್ಷರಾಗಿ ಶಾಂತಾರಾಮ ನಾಯಕ ಅಂಕೋಲಾ, ಪ್ರಧಾನ ಕಾರ್ಯದರ್ಶಿಯಾಗಿ ತಿಲಕ ಗೌಡ ಹೊನ್ನಾವರ, ಖಜಾಂಜಿಯಾಗಿ ಸಾಲ್ವೋದರ ಫರ್ನಾಂಡಿಸ ಕುಮಟಾ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಹರೀಶ ನಾಯ್ಕ ದಾಂಡೇಲಿ, ಸುಭಾಶ ಕೊಪ್ಪಿಕರ ಭಟ್ಕಳ, ಸಹಕಾರ್ಯದರ್ಶಿಯಾಗಿ ಮೀನಾ ಗೌಡಹೊನ್ನಾವರ, ರಾಜು ಗೌಡ ಅಂಕೋಲಾ ಆಯ್ಕೆಯಾದರು. ಸಮಿತಿ ಸದಸ್ಯರುಗಳಾಗಿ ನಾಗೇಶ ಗೌಡ, ನಾಗಪ್ಪ ನಾಯ್ಕ, ಬೊಮ್ಮಯ್ಯ ನಾಯ್ಕ, ನಾರಾಯಣ ದಡ್ಡಿ, ಜಯಶ್ರೀ ಹಿರೇಕರ, ಹನುಮಂತ ಸಿಂದೂಗಿ, ತಿಮ್ಮಪ್ಪ ಗೌಡ, ಮಂಜುನಾಥ ಗೌಡ, ಗಂಗಾಧರ ಅಂಬಿಗ, ಶಾಂತಾ ವೇಳಿಪ, ರೇಣುಕಾ ಮತ್ತು ಜ್ಯೋತಿ ಆಯ್ಕೆಯಾದರು.