ಬೆಂಗಳೂರು: ಕಂದಾಯ ಭವನದಲ್ಲಿ ಅರ್ಜಿಗಳ ವಿಲೇವಾರಿಯನ್ನು ಮಾಡಲು ವಿಳಂಬ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು,ನಗರದ ಕೆ.ಆರ್.ಪುರಂ, ಯಲಹಂಕ, ಅನೇಕಲ್ನ ಕಂದಾಯ ಭವನಗಳಿಗೆ ಮತ್ತು ತಹಸೀಲ್ದಾರ್ ಕಚೇರಿಗೆ ಉಪಲೋಕಾಯುಕ್ತ ನ್ಯಾ. ಫಣೀಂದ್ರ ನೇತೃತ್ವದ ತಂಡ ದಾಳಿಯನ್ನು ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಉಪಲೋಕಾಯುಕ್ತರು ಹಾಗೂ ಪೊಲೀಸರು ಜಂಟಿಯಾಗಿ ದಿಢೀರ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿ ಮಾಡದಿರುವುದು, ಖಾತಾ, ಭೂ ಪರಿವರ್ತನೆ ಮಾಡಲು ಹಣ ಬೇಡಿಕೆ, ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ದೂರುಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಇಬ್ರಾಹಿಂ, ಡೆಪ್ಯುಟಿ ರಿಜಿಸ್ಟರ್, ಸುದೇಶ್ ಪರದೇಶಿ, ಅಡಿಷನಲ್ ರಿಜಿಸ್ಟರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದಾರೆ. ಕಂದಾಯ ಭವನದ ಯಾವ್ಯಾವ ಶಾಖೆಗಳಲ್ಲಿ ಎಷ್ಟು ಕಡತಗಳು ಎಷ್ಟು ತಿಂಗಳಿನಿಂದ ಬಾಕಿ ಇದೆ, ಕಾರಣವೇನು ಎಂಬ ಬಗ್ಗೆ ಮಾಹಿತಿ ಪಡೆದು ವಾಪಾಸಾಗಿದ್ದಾರೆ.