- ಎಸ್ಡಿಪಿಐ, ಪಿಎಫ್‌ಐ ನಿಷೇಧಕ್ಕೆ ಪೊಲೀಸ್ ಇಲಾಖೆಯಿಂದ ಮಾಹಿತಿ ಕೋರಿದ ಸರ್ಕಾರ
ಬೆಂಗಳೂರು: ಡಿ.ಜಿ.ಹಳ್ಳಿ ಗಲಭೆಯ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳನ್ನು(ಎಸ್‌ಡಿಪಿಐ, ಪಿಎಫ್‌ಐ) ನಿಷೇಧಿಸುವ ಸಂಬಂಧ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಸಾಕ್ಷ್ಯ ಮತ್ತು ಮಾಹಿತಿ ಕೇಳಲಾಗಿದ್ದು, ಅದರ ಆಧಾರದ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತ್ರೃತ ಚರ್ಚೆ ನಡೆದಿದೆ. ಆದರೆ, ಸಭೆಯಲ್ಲಿ ಯಾವುದೇ ನಿರ್ದಿಷ್ಟ ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು.
ಎಸ್ ಡಿಪಿಐ ನಿಷೇಧಕ್ಕೆ ಕಾನೂನಾತ್ಮಕ ಮಾರ್ಗಗಳ ಕುರಿತಾಗಿ ಪರಿಶೀಲನೆ ನಡೆಸಿ ಸರ್ಕಾರ ಮುಂದಿನ ಕ್ರಮ ಜರಗಿಸಲಾಗುತ್ತದೆ. ಕಾನೂನಿನ ಪ್ರಕಾರ ಏನು ಮಾಡಬೇಕೆಂಬ ಕುರಿತಾಗಿ ಚರ್ಚೆ ನಡೆದಿದ್ದು, ಸಂಘಟನೆಯ ನಿಷೇಧಕ್ಕೆ ನಮ್ಮ ಬಳಿ ಸಮರ್ಪಕವಾಗಿರುವ ಪರಾವೆ ಇಲ್ಲದೇ ಇರುವುದರಿಂದ ಸದ್ಯ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಈ ಕುರಿತಾಗಿ ಪೊಲೀಸ್ ಇಲಾಖೆಯಿಂದ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಇಲಾಖೆಯ ವರದಿ ಬಂದ ಬಳಿಕವಷ್ಟೇ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇವೆ. ಎಸ್‌ಡಿಪಿಐ ರಾಜಕೀಯ ಪಕ್ಷವಾಗಿದ್ದು ನಿಷೇಧ ಮಾಡಲು ಕಾನೂನಾತ್ಮಕ ಸಾಧ್ಯಾಸಾಧ್ಯತೆಗಳ ಕುರಿತಾಗಿ ಪರಿಶೀಲನೆ ನಡೆಸಿ ಅಗತ್ಯ ಬಿದ್ದರೆ ಕಾನೂನಿನ ತಿದ್ದುಪಡಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.
ಇದನ್ನೂ ಓದಿ: SDPI ನಿಷೇಧಕ್ಕೆ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಒತ್ತಡ
ಸಂಘಟನೆಗಳ ನಿಷೇಧ ಮತ್ತು ಗಲಭೆಕೋರರಿಂದ ದಂಡವನ್ನು ವಸೂಲಿ ಮಾಡುವ ಸಂಬಂಧ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಲು ಸಿದ್ಧರಿದ್ದೇವೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರೆ, ದಂಡ ವಸೂಲಿ ಮಾಡುವ ಬಗ್ಗೆ 1981 ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು. ಕ್ಲೇಮ್ ಕಮಿಷನರ್ ನೇಮಕ ಆದ ಬಳಿಕ ಅವರಿಗೆ ಕಾಯ್ದೆಯನ್ನು ಒದಗಿಸಲಾಗುವುದು. ಈ ಸಂಬಂಧ ಉತ್ತರ ಪ್ರದೇಶ ರಾಜ್ಯದಲ್ಲಿ ಉತ್ತಮ ಕಾಯ್ದೆಯೊಂದನ್ನು ರೂಪಿಸಿದ್ದಾರೆ. ಅದನ್ನೂ ಅಧ್ಯಯನ ನಡೆಸಿ ಅಗತ್ಯವಿದ್ದರೆ, ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದರು.
ಗಲಭೆಯಲ್ಲಿ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡಲು ಗಲಭೆಕೋರರಿಂದಲೇ ದಂಡ ವಸೂಲಿ ಮಾಡಲಾಗುವುದು. ಗಲಭೆಯಲ್ಲಿ ನೇರವಾಗಿ ಭಾಗಿಯಾದರು ಮತ್ತು ಹಿಂದೆ ನಿಂತು ಪ್ರಚೋದಿಸಿದರಿಂದಲೂ ವಸೂಲಿ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಇನ್ನು ಒಂದು ವಾರದೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.
ಹೋರಾಟಗಳ ಸಂದರ್ಭದಲ್ಲಿ ದಾಖಲಾಗಿದ್ದ64 ಕ್ರಿಮಿನಲ್ ಕೇಸ್‌ಗಳು ರದ್ದು
ಇದೇ ವೇಳೆ ವಿವಿಧ ಹೋರಾಟಗಳ ಸಂದರ್ಭದಲ್ಲಿ ದಾಖಲಾಗಿದ್ದ 64 ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದು ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಹೋರಾಟ, ರಾಜಕೀಯ, ಧಾರ್ಮಿಕ ಸಂಘರ್ಷದ ಹೋರಾಟದಲ್ಲಿ ದಾಖಲಾಗಿದ್ದ ಒಟ್ಟು 64 ಕ್ರಿಮಿನಲ್ ಪ್ರಕರಣಗಳನ್ನು ಸರ್ಕಾರ ಕೈಬಿಡಲು ನಿರ್ಧರಿಸಿದೆ. ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣ, ಬೆಳಗಾವಿ ನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಗಲಭೆ ಪ್ರಕರಣವೂ ಇದರಲ್ಲಿ ಒಳಗೊಂಡಿದೆ ಎಂದು ಮಾಧುಸ್ವಾಮಿ ತಿಳಿಸಿದ್ದಾರೆ.